ಕೊಡಗು : ಕೊಡಗು ಮೆಡಿಕಲ್ ಕಾಲೇಜಿನ ವೈದ್ಯರು ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದೇ ಒಂದು ಪರ್ಸೆಂಟ್ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಿತ್ಯ 10 ರಿಂದ 12 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆದರೆ ವೈದ್ಯರು ಎಚ್ಚೆತ್ತುಕೊಳ್ಳುತ್ತಿಲ್ಲ, ಎಚ್ಚೆತ್ತುಕೊಳ್ಳದಿದ್ದರೆ ಇನ್ನೂ ಅಪಾಯವಾಗಲಿದೆ ಎಂದು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ವೈದ್ಯರ ಮೇಲೆ ಗರಂ ಆಗಿದ್ದಾರೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಿರುವ ಸಚಿವ ಸೋಮಣ್ಣ ವಿವಿಧ ಕೊವಿಡ್ ಕೇರ್ ಸೆಂಟರ್ ಮತ್ತು ಕೊಡಗು ಕೊವಿಡ್ ಆಸ್ಪತ್ರೆಯನ್ನು ಪರಿಶೀಲಿಸಿದ್ದರು. ಶುಕ್ರವಾರ ಜಿಲ್ಲಾ ಕೊವಿಡ್ ಟಾಕ್ ಫೋರ್ಸ್ ಸಮಿತಿ ಸಭೆ ಕರೆದಿದ್ದಾಗಲೂ ಮೆಡಿಕಲ್ ಕಾಲೇಜಿನ ಡೀನ್ ಅವರನ್ನು ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡಿದ್ದರು.
ಕೊವಿಡ್ ಟಾಸ್ಕ್ ಫೋರ್ಸ್ ಸಮಿತಿ ನೇತೃತ್ವದಲ್ಲಿ ಇಂದು ಮೆಡಿಕಲ್ ಕಾಲೇಜಿನ ವೈದ್ಯರನ್ನು ಸಚಿವ ಸೋಮಣ್ಣ ಸಭೆ ಕರೆದಿದ್ದರು. ಸಭೆಯಲ್ಲಿ ವೈದ್ಯರು, ಮೆಡಿಕಲ್ ಕಾಲೇಜು ಡೀನ್ ಕಾರ್ಯಪ್ಪ, ಸೂಪರಿಡೆಂಟೆಂಟ್ ಲೋಕೇಶ್ ಮತ್ತು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ ಮೆಡಿಕಲ್ ಕಾಲೇಜಿನ ಕೇವಲ ನಾಲ್ಕು ವೈದ್ಯರು ಮಾತ್ರವೇ ಕೊವಿಡ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ವೈದ್ಯರು ಕೆಲಸ ನಿರ್ವಹಿಸಬೇಕು. ಡೀನ್ ಕೂಡ ಕೊವಿಡ್ ವಾರ್ಡ್‍ಗಳಿಗೆ ಪಿಪಿಇ ಕಿಟ್ ಧರಿಸಿ ಒಳಗಿನ ಸಮಸ್ಯೆಗಳನ್ನು ಅರಿತುಕೊಂಡು ಬಗೆಹರಿಸಬೇಕು ಎಂದು ಸೂಚಿಸಿದರು. ಸಚಿವರ ಸಭೆಗೆ ಗೈರಾಗಿದ್ದ ನಾಲ್ಕು ವೈದ್ಯರಿಗೆ ಕೂಡಲೇ ನೊಟೀಸ್ ನೀಡುವಂತೆ ಸಚಿವ ಸೋಮಣ್ಣ ಸೂಚಿಸಿದರು. ಅಲ್ಲದೆ ಜಿಲ್ಲೆಯಲ್ಲಿರುವ ಪ್ರತೀ ಕೊವಿಡ್ ಆಸ್ಪತ್ರೆ ಮತ್ತು ಕೊವಿಡ್ ಕೇರ್ ಗಳಲ್ಲಿ ಸಿಸಿಟಿವಿ ಅಳವಡಿಸಿ ವೈಫೈ ಮೂಲಕ ಎಲ್ಲವನ್ನೂ ಜಿಲ್ಲಾಧಿಕಾರಿಯವರು ಗಮನಿಸಬೇಕು ಎಂದು ಸೂಚಿಸಿದರು.