ಭಾರತದ ಕುಸ್ತಿ ಫೆಡರೇಶನ್ ಸದಸ್ಯತ್ವ ರದ್ದು ಮಾಡಿದ UWW

ನವದೆಹಲಿ: ತನ್ನ ಚುನಾವಣೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲು ವಿಫಲವಾದ ಕಾರಣಕ್ಕಾಗಿ, ಆಗಸ್ಟ್ 24ರ ಗುರುವಾರದಂದು ತಕ್ಷಣವೇ ಜಾರಿಗೆ ಬರುವಂತೆ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಸದಸ್ಯತ್ವವನ್ನು ಕ್ರೀಡೆಯ ಅಂತರಾಷ್ಟ್ರೀಯ ಆಡಳಿತ ಮಂಡಳಿಯಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಅಮಾನತುಗೊಳಿಸಿದೆ.

ಡಬ್ಲ್ಯುಎಫ್‌ಐನ ಮುಂದಿನ ಆಡಳಿತ ಮಂಡಳಿಯ ಚುನಾವಣೆಯು ಜೂನ್ 2023 ರಲ್ಲಿ ನಡೆಯಬೇಕಿತ್ತು. ಆದಾಗ್ಯೂ, ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಸೇರಿದಂತೆ ಭಾರತೀಯ ಕುಸ್ತಿಪಟುಗಳ ಸರಣಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಅದು ನಡೆಯಲಿಲ್ಲ.

ಇದನ್ನೂ ಓದಿ: ಅನಿಲ ಸೋರಿಕೆ ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾದ 28 ಮಂದಿ

ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಿದ್ದರಿಂದ ಭಾರತೀಯ ಕುಸ್ತಿಪಟುಗಳು ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಅದರ ಬದಲಿಗೆ ‘ತಟಸ್ಥ ಕ್ರೀಡಾಪಟುಗಳಾಗಿ’ ಭಾಗವಹಿಸಬೇಕಾಗುತ್ತದೆ. ಈ ಚಾಂಪಿಯನ್‌ಶಿಪ್‌ ಸ್ಪರ್ಧೆಗಳನ್ನು ಸೆಪ್ಟೆಂಬರ್ ಮೂರನೇ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಇದಕ್ಕೂ ಮೊದಲು, ಈ ವರ್ಷದ ಏಪ್ರಿಲ್‌ನಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) 45 ದಿನಗಳಲ್ಲಿ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕ ಸಮಿತಿಯನ್ನು ನೇಮಿಸಿತ್ತು. ತಾತ್ಕಾಲಿಕ ಸಮಿತಿಯು ಗಡುವಿನೊಳಗೆ ಚುನಾವಣೆ ನಡೆಸಲು ಸಾಧ್ಯವಾಗದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಯುಡಬ್ಲ್ಯುಡಬ್ಲ್ಯು ಆ ಸಮಯದಲ್ಲಿ ಎಚ್ಚರಿಕೆ ನೀಡಿತ್ತು.

ಭಾರತೀಯ ಕುಸ್ತಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತದ ಕುಸ್ತಿ ಒಕ್ಕೂಟದ ವಿರುದ್ಧ ಭಾರತೀಯ ಕ್ರೀಡಾ ಸಚಿವಾಲಯದಲ್ಲಿ ಬಾಕಿ ಉಳಿದಿರುವ ವಿಚಾರಣೆಯಿಂದಾಗಿ ಈ ವರ್ಷದ ಆರಂಭದಲ್ಲಿ, ಹೊಸದಿಲ್ಲಿಯಲ್ಲಿ ನಡೆಯಬೇಕಿದ್ದ 2023ರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ಕಝಾಕಿಸ್ತಾನದ ಅಸ್ತಾನಾಕ್ಕೆ ಸ್ಥಳಾಂತರಿಸಲಾಯಿತು ಎಂದು ಯುಡಬ್ಲ್ಯುಡಬ್ಲ್ಯು ಹೇಳಿದೆ.

ಮೇ ತಿಂಗಳಲ್ಲಿ ದೆಹಲಿ ಪೊಲೀಸರು ಪ್ರತಿಭಟನಾನಿರತ ಭಾರತೀಯ ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿರುವುದನ್ನು ಮತ್ತು ಬಂಧನದಲ್ಲಿರಿಸಿದ್ದನ್ನು ಯುಡಬ್ಲ್ಯುಡಬ್ಲ್ಯು ಖಂಡಿಸಿತ್ತು.

ವಿಡಿಯೊ ನೋಡಿ: ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗೆ ಆಗ್ರಹಿಸಿ ಪಿಐಎಲ್ ಸಲ್ಲಿಕೆಗೆ ನಿರ್ಧಾರ Janashakthi Media

Donate Janashakthi Media

Leave a Reply

Your email address will not be published. Required fields are marked *