ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಅಲ್ಲಿನ ಸಾರಿಗೆ ಸಚಿವ ಯಶ್ ಪಾಲ್ ಆರ್ಯ ಹಾಗೂ ಅವರ ಪುತ್ರ ಶಾಸಕ ಸಂಜೀವ್ ಇಬ್ಬರೂ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
2022ಕ್ಕೆ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಬಿಜೆಪಿ ಪಕ್ಷದ ಇಬ್ಬರು ಪ್ರಭಾವಿ ನಾಯಕರು ಪಕ್ಷವನ್ನು ತೊರೆದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸಂದರ್ಭದಲ್ಲಿ ಹರೀಶ್ ರಾವತ್, ಕೆಸಿ ವೇಣುಗೋಪಾಲ್, ಸಣ್ದೀಪ್ ಸುರ್ಜೆವಾಲ ಜೊತೆಯಾಗಿದ್ದರು. ಇದಕ್ಕೂ ಮುನ್ನ ಈ ಇಬ್ಬರು ನಾಯಕರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದರು.
ಇದನ್ನು ಓದಿ: ಬಿಜೆಪಿ ಪಕ್ಷದಲ್ಲಿ ಮತ್ತೆ ಎದುರಾದ ನಾಯಕತ್ವ ಬಿಕ್ಕಟ್ಟು: ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ
2007 ರಿಂದ 2014 ಯಶ್ ಪಾಲ್ ಆರ್ಯ ಉತ್ತರಾಖಂಡ್ ನ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಅಷ್ಟೇ ಅಲ್ಲದೇ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್, ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2017ರ ವಿಧಾನಸಭಾ ಚುನಾವಣೆ ವೇಳೆ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಯಶ್ ಪಾಲ್ ಆರ್ಯ ಮುಕ್ತೇಶ್ವರ್ ವಿಧಾನಸಭಾ ಕ್ಷೇತ್ರ ಹಾಗೂ ಸಂಜೀವ್ ಆರ್ಯ ನೈನಿತಾಲ್ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.