ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು 16ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೈನಿತಾಲ್ ಜಿಲ್ಲೆಯ ಮುಕ್ತೇಶ್ವರ ಹಳ್ಳಿಯ ಚೌಕೌಟ ಬಳಿ ನಾಲ್ವರು ಮೃತಪಟ್ಟಿದ್ದು, ರಾಜ್ಯದಾದ್ಯಂತ ಭೂ ಕುಸಿತದಿಂದಾಗಿ ಸೋಮವಾರದವರೆಗೂ ಆರು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. 13 ಜಿಲ್ಲೆಯಾದ್ಯಂತ ರಾಜ್ಯ ವಿಪತ್ತು ನಿರ್ವಹಣಾ ಪಡೆಯ 34 ತಂಡಗಳನ್ನು ರಾಜ್ಯ ಸರ್ಕಾರ ಈಗಾಗಲೇ ನಿಯೋಜಿಸಿದೆ.
ಇದನ್ನು ಓದಿ: ಭಾರೀ ಮಳೆಯಿಂದಾಗಿ ಮೂರು ಮಂದಿ ನಿಧನ-10 ಮಂದಿ ನಾಪತ್ತೆ: 5 ಜಿಲ್ಲೆಗಳು ಗಂಭೀರ ಪರಸ್ಥಿತಿ
ಸತತ 40 ಗಂಟೆಗಳ ಕಾಲ ಸುರಿದ ಮಹಾಮಳೆ ರಸ್ತೆ, ಸೇತುವೆಗಳನ್ನು ಕೊಚ್ಚಿಹಾಕಿದೆ. ಭೂಕುಸಿತ ಉಂಟಾಗಿದ್ದು ಹೆದ್ದಾರಿಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ. ರಸ್ತೆಗಳಲ್ಲಿ ನಿಲ್ಲಿಸಿರುವ ವಾಹನಗಳು ಮಳೆ ನೀರಿನಲ್ಲಿ ಮುಳುಗಿವೆ. ಅಲ್ಲದೆ, ನೂರಾರು ಮಂದಿ ಅತಂತ್ರರಾಗಿದ್ದಾರೆ. ನೈನಿತಾಲ್ ಅಲ್ಲದೆ, ಚಮೋಲಿ, ತೆಹ್ರಿ ಸೇರಿ ಹಲವೆಡೆ ಭಾರೀ ಮಳೆಯಾಗಿದೆ. ಕೋಸಿ, ಗೌಲ, ಮಂದಾಕಿನಿ ನದಿಗಳು ಉಕ್ಕಿ ಹರಿದು ಭಾರೀ ಪ್ರವಾಹ ಸೃಷ್ಟಿಯಾಗಿದೆ.
#UttarakhandRain | All gates of Nanak Sagar Dam in #Uttarakhand's Udham Singh Nagar opened following a rise in the water level due to heavy rainfall in the state.
(ANI) pic.twitter.com/kUvn8rV13h
— NDTV (@ndtv) October 19, 2021
ಜಲಪ್ರಳಯದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿತ ರದ್ದು ಮಾಡಲಾಗಿದೆ. ರಾಮನಗರದ ರೆಸಾರ್ಟ್ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಕೇದಾರನಾಥದಲ್ಲಿ 4,000 ಯಾತ್ರಾರ್ಥಿಗಳು ಮತ್ತು ಬದರಿನಾಥ್ನಲ್ಲಿ 2500 ಯಾತ್ರಾರ್ಥಿಗಳು ಸೇರಿ ಒಟ್ಟು 6500ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆಯಿದೆ. ಚಾರ್ ಧಾಮ್ ಯಾತ್ರಿಕರು ಪ್ರಸ್ತುತ ಇರುವ ಸ್ಥಳದಲ್ಲೇ ಉಳಿಯುವಂತೆ ಪ್ರಕಟಿಸಲಾಗಿದೆ. ವಾತಾವರಣ ಉತ್ತಮಗೊಳ್ಳುವವರೆಗೂ ಪ್ರಯಾಣ ಮುಂದುವರೆಸದಂತೆ ತಿಳಿಸಲಾಗಿದೆ.
ಗೌಲಾ ನದಿಯ ಮೇಲೆ ಇನ್ನೇನು ಮುರಿದು ಬೀಳುತ್ತಿದ್ದ ಸೇತುವೆಯನ್ನು ದಾಟಲು ಆಚೆ ಕಡೆಯಿಂದ ಬೈಕ್ನಲ್ಲಿ ಬರುತ್ತಿದ್ದ ಪ್ರಯಾಣಿಕನಿಗೆ ಜನರು ಜೋರಾಗಿ ಕೂಗಿ ಹೇಳುತ್ತಿದ್ದರೂ ಆತನಿಗೆ ಕೇಳಿಸಿಲ್ಲ. ಸೇತುವೆ ದಾಟುತ್ತಿದ್ದ ಯುವಕರಿಬ್ಬರು ಕೊನೆ ಕ್ಷಣದಲ್ಲಿ ಬೈಕನ್ನು ಹಿಂದಕ್ಕೆ ತಿರುಗಿಸಿದರು. ಬಳಿಕ ಸೇತುವೆ ಮುರಿದು ಬಿದ್ದಿತು. ಕೆಲವೇ ಕ್ಷಣಗಳ ಅಂತರದಲ್ಲಿ ಆ ಬೈಕ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ನೈನಿ ಕೆರೆಯ ಸಮೀಪದ ನೈನಿ ದೇವಿ ದೇವಾಲಯ ಮತ್ತು ನೈನಿತಾಲ್ ಮಾಲ್ ರೋಡ್ ಜಲಾವೃತವಾಗಿದೆ. ಭೂಕುಸಿತದಿಂದಾಗಿ ಹಾಸ್ಟೆಲ್ ಕಟ್ಟಡಕ್ಕೆ ಹಾನಿಯಾಗಿದೆ. ನಗರದಿಂದ ಹೊರ ಹೋಗುವ ಎಲ್ಲಾ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ರಾಮನಗರ್-ರಾನಿಖೇತ್ ರಸ್ತೆಯ ಲೆಮನ್ ಟ್ರೀ ರೆಸಾರ್ಟ್ನಲ್ಲಿ ಸುಮಾರು 100 ಜನ ಸಿಲುಕಿದ್ದಾರೆ. ಕೋಸಿ ನದಿಯು ಉಕ್ಕಿ ಹರಿಯುತ್ತಿದ್ದು, ರೆಸಾರ್ಟ್ನೊಳಗೆ ನೀರು ನುಗ್ಗಿದೆ.
ಮಳೆಯಲ್ಲಿ ಕೊಚ್ಚಿ ಹೋಗುವಾಗ ಎರಡು ಬಂಡೆಗಳ ನಡುವೆ ಸಿಲುಕಿದ್ದ ಕಾರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಬದರೀನಾಥ ರಾಷ್ಟ್ರೀಯ ಹೆದ್ದಾರಿಯ ಬಳಿ ಈ ಘಟನೆ ನಡೆದಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡೆ ಮತ್ತು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಮುಖರ್ಜಿ ರಾಣಿ ಖೇಟ್ ಬಳಿ ಪ್ರವಾಹದಲ್ಲಿ ಸಿಲುಕಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ತಲೆದೋರಿಸುವ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎಂಬ ಆಶ್ವಾಸನೆ ನೀಡಿದ್ದೇನೆ. ಮೂರು ಹೆಲಿಕಾಫ್ಟರ್ ಗಳೊಂದಿಗೆ ನೆರವು ನೀಡುವಂತೆ ಭಾರತೀಯ ಸೇನೆಯನ್ನು ಕೇಳಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.