ಬಿಜೆಪಿ ಪಕ್ಷದಲ್ಲಿ ಮತ್ತೆ ಎದುರಾದ ನಾಯಕತ್ವ ಬಿಕ್ಕಟ್ಟು: ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ

ಡೆಹ್ರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ನೆನ್ನೆ ತಡರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉತ್ತರಾಖಂಡ ರಾಜ್ಯದ ಬಿಜೆಪಿ ನಾಯಕತ್ವದಲ್ಲಿ ಬಿಕ್ಕಟ್ಟು ಎದುರಾಗಿದ್ದರಿಂದ ಕಳೆದ ಮಾರ್ಚ್ 10 ರಂದು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ತೀರಥ್‌ ಸಿಂಗ್‌ ರಾವತ್‌ ಅವರು ರಾಜೀನಾಮೆ ನೀಡದ್ದಾರೆ.

ಇದನ್ನು ಓದಿ: ತೀರಥ್‌ ಸಿಂಗ್‌ ರಾವತ್‌ ಉತ್ತರಖಂಡ ನೂತನ ಸಿಎಂ

ತೀರಥ್‌ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ಬಿಜೆಪಿ ಪಕ್ಷದಲ್ಲಿನ ನಾಯಕತ್ವದ ವಿಚಾರದಲ್ಲಿ ಮತ್ತೆ ಮತ್ತೆ ಎದುರಾಗುತ್ತಿದ್ದವು. ಈ ಎಲ್ಲವುಗಳ ನಡುವೆ ನೆನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಅಧ್ಯಕ್ಷರ ಸೂಚನೆಯ ಮೇರೆಗೆ ರಾತ್ರಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ.

ಪ್ರಸಕ್ತ ಲೋಕಸಭಾ ಸದಸ್ಯರಾಗಿರುವ ತೀರಥ್ ಸಿಂಗ್ ರಾವತ್ ಅವರು  ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಸೆಪ್ಟೆಂಬರ್‌ 10ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕು. ಆದರೆ, ಚುನಾವಣಾ ಆಯೋಗವು ರಾಜ್ಯದಲ್ಲಿ ಖಾಲಿ ಉಳಿದಿರುವ ಎರಡು (ಗಂಗೋತ್ರಿ ಮತ್ತು ಹಲ್ದವಾನಿ) ವಿಧಾನಸಭಾ ಕ್ಷೇತ್ರಗಳಿಗೆ ಕೋವಿಡ್‌–19 ನಿಯಮಗಳಿಂದಾಗಿ ಉಪಚುನಾವಣೆ ಮುಂದೂಡುವ ಸಾಧ್ಯತೆಗಳಿವೆ ಅಥವಾ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಚುನಾವಣೆಯಲ್ಲಿಯೇ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳು ಇದೆ. ಈ ಹಿನ್ನೆಲೆಯಲ್ಲಿಯೂ ಮುಖ್ಯಮಂತ್ರಿ ಸ್ಥಾನಕ್ಕೆ ತೀರಥ್‌ ಸಿಂಗ್‌ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಉತ್ತರಾಖಂಡ್‌ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು ಅವರನ್ನು ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ್ದರಿಂದ ತೀರಥ್‌ ಸಿಂಗ್‌ ರಾವತ್‌ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

ಸಂಸತ್ ಸದಸ್ಯರಾಗಿರುವ ತೀರಥ್‌ ಸಿಂಗ್ ರಾವತ್, ಮುಖ್ಯಮಂತ್ರಿಯಾಗಿ ಮುಂದುವರೆಯಲು ಆರು ತಿಂಗಳೊಳಗೆ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಬೇಕು. ಆದರೆ, ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಗೆಲ್ಲುವ ವಿಶ್ವಾಸದಲ್ಲಿ ಪಕ್ಷ ಇಲ್ಲ ಎಂಬ ಅಂಶಗಳು ಇರುವುದು ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಗೆ ಅನಿವಾರ್ಯವಾಗಿದೆ.

ಉತ್ತರಾಖಂಡ ವಿಧಾನಸಭೆ ಅವಧಿ 2022ರ ಮಾರ್ಚ್ ವರೆಗೆ  ಇದೆ. ಚುನಾವಣೆಯನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆ ಮಾಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.

ಇಂದು ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು ಶಾಸಕರಾದ ಸತ್ಪಲ್ ಮಹಾರಾಜ್ ಅಥವಾ ದಾನ್ ಸಿಂಗ್ ರಾವತ್ ಮುಖ್ಯಮಂತ್ರಿ ಯಾಗಬಹುದೆಂಬ ಸಾಧ್ಯತೆಗಳಿವೆ. ಡೆಹ್ರಾಡೂನ್ ನಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಹಾಗೂ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ರೊಂದಿಗೂ ಸಭೆ ನಡೆದ ಬಳಿಕ ಕೇಂದ್ರ ನಾಯಕತ್ವಕ್ಕೆ ವರದಿ ಸಲ್ಲಿಸಿದ ನಂತರ ಹೊಸ ಮುಖ್ಯಮಂತ್ರಿ ಯಾರೆಂಬುದು ಅಂತಿಮಗೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *