ಉತ್ತರ ಪ್ರದೇಶ: ಅತ್ಯಾಚಾರ ಕೇಸ್ ದಾಖಲಿಸಲು ಬಂದ ಬಾಲಕಿ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸುಮಾರ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಠಾಣಾಧಿಕಾರಿ (ಎಸ್‌ಎಚ್‌ಒ) ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಲ್ವರು ಯುವಕರು ಆಮಿಷವೊಡ್ಡಿ ಅಪ್ರಾಪ್ತೆಯನ್ನು ಏಪ್ರಿಲ್ 22 ರಂದು ಭೋಪಾಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಸಂತ್ರಸ್ಥೆ ಹೇಗಾದರೂ ತಪ್ಪಿಸಿಕೊಂಡು ಆಕೆಯ ಮನೆಗೆ ತಲುಪಿದ್ದಳು. ಬಳಿಕ ದೂರು ದಾಖಲಿಸಲು ಠಾಣೆಗೆ ಹೋಗಿದ್ದಳು. ಅಲ್ಲಿ ಠಾಣೆಯ ಪ್ರಭಾರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾನೆ ಎಂದು ವರದಿಯಾಗಿದೆ. ಮಕ್ಕಳ ಕಲ್ಯಾಣ ಸಮಿತಿಯವರು ಬಾಲಕಿಯನ್ನು ವಿಚಾರಣೆ ನಡೆಸಿದಾಗ, ಆಕೆಯ ನಡೆದಿರುವ ವಿಚಾರ ತಿಳಿಸಿದ್ದಾಳೆ.
ಆರೋಪಿ ಠಾಣಾಧಿಕಾರಿ ವಿರುದ್ಧ ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಲಲಿತ್‌ಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.ಎಸ್‌ಎಚ್‌ಒ ಅನ್ನು ಅಮಾನತು ಮಾಡಲಾಗಿದ್ದು, ಆತನನ್ನು ಕ್ರಿಮಿನಲ್ ಎಂದು ಗುರುತಿಸಲಾಗಿದೆ. ಸದ್ಯ ಆತನ ಬಂಧನಕ್ಕೆ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಎನ್‌ಜಿಒವೊಂದರ ಸಹಾಯದಿಂದ ನನ್ನ ಕಚೇರಿಗೆ ಬಂದ ಬಾಲಕಿಯು ಘಟನೆಯನ್ನು ವಿವರಿಸಿದ್ದಾಳೆ. ಅದಾದ ಬಳಿಕವೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಲಿತ್‌ಪುರದ ಪೊಲೀಸ್ ಮುಖ್ಯಸ್ಥ ನಿಥಿಲ್ ಪಥಾಕ್ ತಿಳಿಸಿದ್ದಾರೆ.