ಲಕ್ನೋ: ಬಿಜೆಪಿ ಪಕ್ಷದ ಓರ್ವ ಶಾಸಕ ಹಾಗೂ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದಿಂದ ಅಮಾನತಾಗಿದ್ದ 6 ಶಾಸಕರು ಇಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಲಕ್ನೋದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಛೇರಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್ ಹರಿಹಾಯ್ದ ಬೆನ್ನಲ್ಲೇ 7 ಶಾಸಕರು ಸಮಾಜವಾದಿ ಪಕ್ಷ(ಎಸ್ಪಿ)ಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನು ಓದಿ: ಸಾಮಾನ್ಯ ಕಾರ್ಮಿಕನಿಗೆ 19 ಕೋಟಿ ರೂ. ಕರೆಂಟ್ ಬಿಲ್-ಯೋಗಿ ಸರ್ಕಾರ ಲೂಟಿ ಹೊಡೆಯುತ್ತಿದೆ: ಪ್ರಿಯಾಂಕಾ ಗಾಂಧಿ
ಬಿಜೆಪಿ ಅಧಿಕಾರದಿಂದ ಜನರು ಎಷ್ಟು ಬೇಸತ್ತು ಹೋಗಿದ್ದಾರೆಂದರೆ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಹೇಳ ಹೆಸರಿಲ್ಲದಂತೆ ಅಳಿಸಿ ಹಾಕಲಿದ್ದಾರೆ. ಹಾಗೇ, ಬಿಜೆಪಿ ಪರಿವಾರ ಸದ್ಯದಲ್ಲೇ ಬಾಗ್ತಾ ಪರಿವಾರ (ಓಡಿಹೋದ ಕುಟುಂಬ)ವಾಗಲಿದೆ ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದರು.
ಸೀತಾಪುರದ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕ ರಾಕೇಶ್ ರಾಥೋಡ್. ಬಿಎಸ್ಪಿಯಿಂದ ಅಮಾನತಾಗಿದ್ದ ಅಸ್ಲಂ ರೈನಿ (ಶ್ರಾವತಿ), ಸುಷ್ಮಾ ಪಟೇಲ್ (ಮದಿಯಾಹೊನ್), ಅಸ್ಲಾಂ ಅಲಿ (ಹಾಪುರ್), ಹಕೀಮ್ ಲಾಲ್ ಬಿಂದ್ (ಹಂಡಿಯಾ), ಮುಜ್ತಾಬಾ ಸಿದ್ದಿಕಿ (ಫೂಲ್‌ಪುರ್) ಮತ್ತು ಹರಗೋವಿಂದ್ ಭಾರ್ಗವ (ಸಿಧೌಲಿ) ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಅವರೆಲ್ಲರೂ ಮುಂಬರುವ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದೇ ಎಂದು ಘೋಷಿಸಿದ್ದಾರೆ.
2020ರ ಅಕ್ಟೋಬರ್‌ನಲ್ಲಿ ರಾಜ್ಯಸಭೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ರಾಮ್‌ಜಿ ಗೌತಮ್ ಅವರನ್ನು ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿದ ಆರು ಮಂದಿ ಬಂಡಾಯ ಶಾಸಕರನ್ನು ಬಿಎಸ್ಪಿ ಪಕ್ಷದ ನಾಯಕಿ ಮಾಯಾವತಿ ಅಮಾನತು ಮಾಡಿದ್ದರು.
ಆ ಎಲ್ಲಾ ಆರು ಮಂದಿ ಶಾಸಕರು ಇಂದು ಎಸ್‌ಪಿಗೆ ಸೇರ್ಪಡೆಗೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದ ಅವರು ಎಸ್‌ಪಿಗೆ ಸೇರ್ಪಡೆಯಾಗುವ ಸುಳಿವು ನೀಡಿದ್ದರು.