- ನಿಗೂಢ ಜ್ವರದಿಂದ ಜನರಲ್ಲಿ ಆತಂಕ – 45 ಮಕ್ಕಳ ಸಾವು
- ಫಿರೋಜಾಬಾದ್‌ನಲ್ಲಿ ಅತಿ ಹೆಚ್ಚು ಸಾವು
- ತೀವ್ರ ಅನಾರೋಗ್ಯದಿಂದ ನೂರಾರು ಮಂದಿ ಆಸ್ಪತ್ರೆಗೆ ದಾಖಲು
- ಮಕ್ಕಳ ಆರೋಗ್ಯದ ಮೇಲೆಯೇ ಅಧಿಕ ಪರಿಣಾಮ
- ಡೆಂಘಿ ಹರಡಿರುವ ಸಾಧ್ಯತೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಸೂಚನೆ
- ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಫಿರೋಜಾಬಾದ್: ಕಳೆದ ಹತ್ತು ದಿನಗಳಲ್ಲಿ ಉತ್ತರ ಪ್ರದೇಶದ ಆಗ್ರಾ, ಫಿರೋಜಬಾದ್, ಮಥುರಾ, ಮಣಿಪುರಿ ಮತ್ತು ಇಟಾ ಹಾಗೂ ಕಾಸಗಂಜ್ ಜಿಲ್ಲೆಗಳಲ್ಲಿ 53ಕ್ಕೂ ಹೆಚ್ಚು ಮಂದಿ ವಿಚಿತ್ರ ಅನಾರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಠಾತ್ ಸರಣಿ ಸಾವುಗಳಿಗೆ ಡೆಂಘಿ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಆದೇಶ ನೀಡಿದೆ.
ಮಕ್ಕಳು ತೀವ್ರ ಜ್ವರ, ನಿರ್ಜಲೀಕರಣ ಮತ್ತು ಪ್ಲೆಟ್ಲೆಟ್ ಪ್ರಮಾಣದ ಹಠಾತ್ ಕುಸಿತದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಫಿರೋಜಬಾದ್ ಜಿಲ್ಲೆ ಒಂದರಲ್ಲೇ 40 ಮಕ್ಕಳು ಸಾವಿಗೀಡಾಗಿದ್ದಾರೆ. ಪ್ರಾಥಮಿಕ ಕಾರಣ ಡೆಂಗ್ಯೂ ಎಂದು ತೋರುತ್ತಿದ್ದು, ಇತರ ಕಾರಣಗಳನ್ನು ಸಹ ಪತ್ತೆ ಮಾಡಲಾಗುತ್ತಿದೆ ಎಂದು ಆಗ್ರಾ ವಿಭಾಗೀಯ ಆಯುಕ್ತ ಅಮಿತ್ ಗುಪ್ತಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. “ನಾವು ಸಂಬಂಧಪಟ್ಟ ಆಸ್ಪತ್ರೆಗಳಿಗೆ ಪ್ಲೇಟ್‌ಲೆಟ್‌ಗಳನ್ನು ಒದಗಿಸಲು ಕ್ರಮಗಳನ್ನು ಹೆಚ್ಚಿಸಿದ್ದೇವೆ ಮತ್ತು ಅವುಗಳನ್ನು ಆಗ್ರಾದಿಂದಲೂ ತರಲಾಗುತ್ತಿದೆ. ಅಧಿಕೃತ ತಂಡಗಳಿಂದ ತಪಾಸಣೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಮಂಗಳವಾರದಂದು ಫಿರೋಜಾಬಾದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸಿ, ಈ ಸಾವುಗಳಿಗೆ ನಿಖರ ಕಾರಣ ತಿಳಿದುಕೊಳ್ಳಲು ತಂಡವೊಂದನ್ನು ರಚಿಸುವುದಾಗಿ ಹೇಳಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯ ಇರುವಂತೆ ನಿರ್ದೇಶನ ಹೊರಡಿಸಿದ್ದಾರೆ.
ಪ್ರಕರಣ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫಿರೋಜಾಬಾದ್ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಆ ಜಾಗಕ್ಕೆ ಡಾ. ದಿನೇಶ್ ಕುಮಾರ್ ಪ್ರೇಮಿ ಅವರನ್ನು ನೂತನ ವೈದ್ಯಾಧಿಕಾರಿಯಾಗಿ ನೇಮಕ ಮಾಡಿದೆ.
ಇದೇ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜ್ವರ ಹಾಗೂ ಕೊವಿಡ್-19 ಲಕ್ಷಣಗಳಿರುವ ಜನರ ಆರೋಗ್ಯ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆಯೂ ಸರಕಾರ ಸೂಚಿಸಿದೆ.
ಫಿರೋಜಾಬಾದ್ ವೈದ್ಯಕೀಯ ಕಾಲೇಜಿನಲ್ಲಿ ರೋಗಕ್ಕೆ ತುತ್ತಾದವರು ಮತ್ತು ಮಕ್ಕಳ ಪೋಷಕರ ದೃಶ್ಯಗಳು ಕರುಣಾಜನಕವಾಗಿದೆ. ಜ್ವರದಿಂದ ಬಳಲುತ್ತಿರುವ ಮಕ್ಕಳು ಬೇಗನೇ ಚೇತರಿಸಿಕೊಳ್ಳಲಿ ಎಂದು ಪೋಷಕರು ಪ್ರಾರ್ಥಿಸುತ್ತಿದ್ದಾರೆ.
ಆರು ವರ್ಷದ ಲಕ್ಕಿ ಎಂಬ ಬಾಲಕ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆತನ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆಗ್ರಾಗೆ ಕರೆದೊಯ್ಯುವಂತೆ ವೈದ್ಯರು ಹೇಳಿದ್ದರು. ಆಗ್ರಾ ತಲುಪಲು ಹತ್ತು ನಿಮಿಷಗಖು ಇರುವಾಗ ಆತ ಕೊನೆಯುಸಿರೆಳೆದರು ಎಂದು ಮಗುವಿನ ಚಿಕ್ಕಪ್ಪ ಪ್ರಕಾಶ್ ಹೇಳಿದ್ದಾರೆ.
ಆರು ದಿನಗಳ ಹಿಂದೆ ಮಗ ಮತ್ತು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದ ಸುನೀಲ್ ಎಂಬುವರ ಮಗಳು ಅಂಜಲಿ ತೀವ್ರ ಜ್ವರದಿಂದ ಮೃತಪಟ್ಟಿದ್ದಾರೆ. ಈಗ ಮಗ ಅಭಿಜಿತ್ ಚೇತರಿಕೆಗಾಗಿ ಆಸ್ಪತ್ರೆಯಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಮಕ್ಕಳು ಸಾಂಕ್ರಾಮಿಕ ಜ್ವರದಿಂದ ಬಳಲುತ್ತಿದ್ದಾರೆ. ಇವರಲ್ಲಿ ಕೆಲವರು ಡೆಂಘಿ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ ಎಂದು ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಎಲ್ ಕೆ ಗುಪ್ತಾ ಮಾಧ್ಯಮದವರೊಂದಿಗೆ ತಿಳಿಸಿದರು.
ಸದ್ಯ 186 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರವರೆ 1ರಿಂದ 8ನೇ ತರಗತಿ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಆದೇಶ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಂಡವು ಫಿರೋಜಾಬಾದ್‌ನ ಪರಿಸ್ಥಿತಿಯ ಅವಲೋಕನಕ್ಕಾಗಿ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದೆ.