ಮಂಗಳೂರು: “ರಾಜ್ಯಕ್ಕೆ ಬೇಡಿಕೆ ಇರುವ ಆಕ್ಸಿಜನ್ ಬಗ್ಗೆ, ಪೂರೈಕೆ ಎಷ್ಟಾಗುತ್ತಿದೆ? ಎಂಬುದರ ಬಗ್ಗೆ ನಿಖರವಾದ ಮಾಹಿತಿ ರಾಜ್ಯದ ಜನತೆಗೆ ಬೇಕಾಗಿದೆ ಹಾಗಾಗಿ ಸರಕಾರವು ಕೂಡಲೇ ಶ್ವೇತಪತ್ರ ಬಿಡುಗಡೆ ಮಾಡಬೇಕು” ಎಂದು ಯು.ಟಿ ಖಾದರ್ ಒತ್ತಾಯಿಸಿದರು.
ಇಂದು ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಆರೋಗ್ಯ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಸದ್ಯದ ಪರಿಸ್ಥಿತಿಗಳ ಮಾಹಿತಿ ಪಡೆದುಕೊಂಡರು.
ಇದನ್ನು ಓದಿ: ಚಾಮರಾಜನಗರ ಘಟನೆ ಹೊಣೆಹೊತ್ತು ಸಿಎಂ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ
ವೈದ್ಯಾಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕೋವಿಡ್ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರವಾಗಲಿದೆ. ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಊಹಿಸಲು ಸಾಧ್ಯವಿಲ್ಲ. ಎಲ್ಲಾ ವ್ಯವಸ್ಥೆಗಳು ಇದೆ, ಏನು ಸಮಸ್ಯೆಯಿಲ್ಲ ಎಂದು ಸಚಿವರುಗಳು ಹೇಳುತ್ತಿದ್ದಾರೆ. ಹಾಗಾದರೆ ಚಾಮರಾಜನಗರದ ಆಸ್ಪತ್ರೆಯ ದುರಂತಕ್ಕೆ ಯಾರು ಹೊಣೆ? ಎಂದು” ಯು. ಟಿ. ಖಾದರ್ ಪ್ರಶ್ನೆ ಮಾಡಿದರು.
ʻʻಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಕಳೆದ ಕೆಲವು ದಿನಗಳ ಹಿಂದೆಯೇ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ಗಮನ ಸೆಳೆದಿದ್ದರುʼʼ ಎಂದರು.
ಇದನ್ನು ಓದಿ: ಕಡೆಗೂ ರದ್ದಾದ ಐಪಿಎಲ್ ಮುಂದಿನ ಪಂದ್ಯಗಳು
“ಜಿಂದಾಲ್‌ನಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ಲಿಕ್ವಿಡ್ ಆಕ್ಸಿಜನ್ ಕಳುಹಿಸಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಮೊದಲ ಆದ್ಯತೆ ಕೊಡಬೇಕು. ತಮಿಳುನಾಡಿನ ಸಂಸದರು ಕೇಂದ್ರಕ್ಕೆ ಒತ್ತಡ ಹಾಕಿ ಹೆಚ್ಚುವರಿ ಆಕ್ಸಿಜನ್ ಪಡೆಯುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷವೂ ಅಧಿಕಾರದಲ್ಲಿದೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಏಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿಲ್ಲ” ಎಂದು ಪ್ರಶ್ನಿಸಿದರು.
ʻʻದಕ್ಷಿಣ ಕನ್ನಡ ಜಿಲ್ಲೆಗೆ ಶೇ 80ರಷ್ಟು ಆಕ್ಸಿಜನ್ ಜಿಂದಾಲ್‌ನಿಂದ ಬರುತ್ತಿದೆ. ಶೇ 20% ಕೇರಳದ ಪಾಲ್ಗಾಟ್ ನಿಂದ ಬರುತ್ತಿದೆ. ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು. ರಾಜ್ಯಕ್ಕೆ ಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬೇಕು. ಮಂತ್ರಿಗಳು, ಮುಖ್ಯಮಂತ್ರಿಗಳ ನಡುವೆ ಸಮನ್ವಯತೆ ಇರಬೇಕು. ದಿನಕ್ಕೊಂದು ಹೇಳಿಕೆ ಕೊಟ್ಟರೆ ಜನ ಗೊಂದಲಕ್ಕೆ ಒಳಗಾಗುತ್ತಾರೆ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.