ಬೆಂಗಳೂರು: ವಿಧಾನಸೌಧದ ಪ್ರವೇಶಕ್ಕೆ ನಕಲಿ ಪಾಸ್‌ಗಳ ಬಳಕೆಯಾಗುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ (ಜುಲೈ 7 ರಂದು) ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ ನಡೆದಿದ್ದು, ವಿಧಾನಸೌಧಕ್ಕೆ ಅನಾಮಿಕ ವ್ಯಕ್ತಿಯೊಬ್ಬರು ಪ್ರವೇಶಿಸಿ ಸುಮಾರು 15 ನಿಮಿಷಗಳ ಕಾಲ ಕುಳಿತ ಘಟನೆ ವರದಿಯಾಗಿತ್ತು. ಶಾಸಕರ ಜಾಗದಲ್ಲಿ ಅನಾಮಿಕ ವ್ಯಕ್ತಿ ಕುಳಿತಿದ್ದು, ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕುಂದಕೂರು ಸ್ಪೀಕರ್ ಗಮನಕ್ಕೆ ತಂದಿದ್ದರು. ಶಾಸಕರಲ್ಲದ ಅನಾಮಿಕ ವ್ಯಕ್ತಿ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಅವರ ಆಸನದಲ್ಲಿ ಕುಳಿತಿದ್ದರು. ಒಬ್ಬ ವ್ಯಕ್ತಿ ಬಂದು ಸದನದಲ್ಲಿ 15 ನಿಮಿಷ ಕುಳಿತಿದ್ದು, ಆತ ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡಿದ್ದಾನೆ. ನಂತರ 15 ನಿಮಿಷದಲ್ಲಿ ಆತ ನಾಪತ್ತೆಯಾಗಿದ್ದಾನೆ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದಾದ ನಂತರ ಎಚ್ಚೆತ್ತುಕೊಂಡ ಪೊಲೀಸರು ವಿಧಾನಸೌಧದಲ್ಲಿ ನಕಲಿ ಪಾಸ್‌ಗಳ ಹಾವಳಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ನಕಲಿ ಪಾಸ್‌ಗಳನ್ನು ಬಳಸಿ ವಿಧಾನಸೌಧದ ಒಳಗೆ ಆಗಮಿಸುತ್ತಿರುವವರನ್ನು ತಡೆಯುತ್ತಿದ್ದಾರೆ.
ವಿಧಾನಸೌಧದ ಭದ್ರತೆ ಗಂಭೀರವಾಗಿ ಪರಿಗಣಿಸಿದ ಭದ್ರತಾ ಪೊಲೀಸರು, ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ. ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ ಮುನ್ನೂರಕ್ಕು ಹೆಚ್ಚು ನಕಲಿ ಪಾಸ್ ಪತ್ತೆಹಚ್ಚಿದ್ದಾರೆ. ಅಧಿಕೃತ ಪಾಸ್‌ಗಳನ್ನು ಕಲರ್ ಜೆರಾಕ್ಸ್, ಓಲ್ಡ್ ಪಾಸ್‌ಗಳು, ಅವಧಿ ಮುಗಿದಿರುವ ಪಾಸ್‌ಗಳು, ಮತ್ತು ವಾಹನಗಳ ನಕಲಿ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೇ 27: ವಿಧಾನಸೌಧ ಬಂದ್‌ಗೆ ಕರೆ ನೀಡಿದ ಸಚಿವಾಲಯ ನೌಕರರು
ವಿಧಾನಸೌದಕ್ಕೆ ಎಂಟ್ರಿಯಾಗುವ ಎಲ್ಲಾ ಗೇಟ್ಗಳಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡುತ್ತಿದ್ದಾರೆ. ನಕಲಿ ಪಾಸ್ ಬಳಸಿ ವಿಧಾನಸೌಧ ಒಳ ಪ್ರವೇಶ ಮಾಡುತ್ತಿದ್ದವರಿಗೆ ತಡೆದಿದ್ದಾರೆ. ಇದೀಗ ಪೊಲೀಸರು ಅವಧಿ ಮುಗಿದಿರುವ ಪಾಸ್, ಕಲರ್ ಜೆರಕ್ಸ್ ಪಾಸ್‌ಗಳನ್ನು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸದ್ಯ ನಕಲಿ ಪಾಸ ಬಳಸುತ್ತಿದ್ದ ಎಲ್ಲರ ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಮಾಜಿ ಎಂಎಲ್ಎ, ಎಂಎಲ್ಸಿ ಪಾಸ್ಗಳೇ ನಕಲಿಯಾಗಿದ್ದು ಆಘಾತಕಾರಿ ಸಂಗತಿಯಾಗಿದೆ. ಇದೀಗ ಪೊಲೀಸರು 300 ಕ್ಕೂ ಹೆಚ್ಚು ನಕಲಿ ಪಾಸ್‌ಗಳನ್ನು ವಶಕ್ಕೆ ಪಡೆದಿದ್ದು, ಈ ನಕಲಿ ಪಾಸ್‌ಗಳ ಹಿಂದಿನ ಉದ್ದೇಶ ಏನಾಗಿತ್ತು ಎಂದು ತನಿಖೆ ನಡೆಸುತ್ತಿದ್ದಾರೆ. ಸರಿಯಾದ ದಾಖಲಾತಿ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕೊಡಲು ಪೋಲಿಸರು ಮುಂದಾಗಿದ್ದಾರೆ. ವಿಧಾನಸೌಧಕ್ಕೆ ಆಗಮಿಸಿದ ಸಿಬ್ಬಂದಿಗಳ ಬ್ಯಾಗ್ ಚೆಕ್ ಮಾಡಿ ಬಿಡಲಾಗುತ್ತಿದೆ.
ಸಿಸಿಬಿ ಮುಖ್ಯಸ್ಥರಾಗಿದ್ದ ಡಾ.ಶರಣಪ್ಪ ವಿಧಾನಸೌಧ ಭದ್ರತೆ ನೇತೃತ್ವ ವಹಿಸಿಕೊಂಡಿದ್ದು, ತಪಾಸಣೆ ಸಂದರ್ಭದಲ್ಲಿ ಅಧಿಕೃತ ಪಾಸ್‌ಗಳ ಕಲರ್ ಜೆರಾಕ್ಸ್, ಹಳೇ ಪಾಸ್‌ಗಳು, ಅವಧಿ ಮುಗಿದಿರೋ ಪಾಸ್‌ಗಳನ್ನು ಬಳಸಲಾಗುತ್ತಿತ್ತು. ಅಲ್ಲದೇ ಕೆಲ ವಾಹನಗಳ ನಕಲಿ ಪಾಸ್ ಪತ್ತೆಯಾಗಿವೆ. ಎಲ್ಲರ ವಿರುದ್ದ ಪ್ರಕರಣ ದಾಖಲಿಸಲಾಗಿದೆ