ವಾಶಿಂಗ್ಟನ್ : ಅಮೇರಿಕನ್ ವೈದ್ಯರು ಮತ್ತೊಂದು ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಇತಿಹಾಸ ಸೃಷ್ಟಿಸಿರುವ ಅಲ್ಲಿನ ವೈದ್ಯರು ಈ ಬಾರಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಬ್ರೈನ್ ಡೆಡ್ ಆದ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದ್ದಾರೆ.
ಈ ಕಾರ್ಯಾಚರಣೆಯನ್ನು ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾಡಲಾಗಿದೆ. ದೊರೆತ ಮಾಹಿತಿಯ ಪ್ರಕಾರ, ಅಲ್ಲಿ ವಾಸಿಸುವ 57 ವರ್ಷದ ಜಿಮ್ ಪಾರ್ಸನ್ಸ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದರು, ನಂತರ ಅವರ ಮೆದುಳು ಡೆಡ್ ಆಗಿದೆ ಎಂದು ಘೋಷಿಸಲಾಗಿದೆ. ಇದರ ನಂತರ, ಪಾರ್ಸನ್ಸ್ ಕುಟುಂಬದ ಒಪ್ಪಿಗೆಯೊಂದಿಗೆ ರೋಗಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ. ಅಷ್ಟೇ ಅಲ್ಲ ಕಸಿ ಪ್ರಕ್ರಿಯೆಯ ಬಳಿಕ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎನ್ನಲಾಗಿದೆ.
ಇದಕ್ಕೂ ಮುನ್ನ ಅಮೆರಿಕದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರು ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸಿ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದರು. ಇಲ್ಲಿ ವೈದ್ಯರ ತಂಡವೊಂದು ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು 57 ವರ್ಷದ ಬೆನೆಟ್ ಡೇವಿಡ್‌ಗೆ ಯಶಸ್ವಿಯಾಗಿ ಕಸಿ ಮಾಡಿದ್ದರು.
ಅಂಗಗಳ ಸಂಗ್ರಹಣೆ ಮತ್ತು ಕಸಿ ಜಾಲದ ಅಂಕಿ ಅಂಶಗಳ ಆಧಾರದ ಮೇಲೆ, ಪ್ರಸ್ತುತ 90,272 ಜನರು ಮೂತ್ರಪಿಂಡ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. ಇದಲ್ಲದೆ, ಪ್ರತಿ ತಿಂಗಳು ಸುಮಾರು 3,000 ಹೊಸ ರೋಗಿಗಳನ್ನು ಅಂಗಕ್ಕಾಗಿ ಕಾಯುವ ಪಟ್ಟಿಗೆ ಸೇರಿಸಲಾಗುತ್ತದೆ. “ಮೂತ್ರಪಿಂಡದ” ವೈಫಲ್ಯವು ಹೆಚ್ಚಾಗುತ್ತಿದೆ. ಇದಕ್ಕೆ ಮೂಲಭೂತ ಪರಿಹಾರದ ಅಗತ್ಯವಿದೆ ಎಂದು ಡಾ. ಲಾಕ್ ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ರೋಗಿಗಳಿಗೆ ಜೀವ ಉಳಿಸುವ ಹಂದಿ ಮೂತ್ರಪಿಂಡ ಕಸಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದ್ದಾರೆ.
ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡಲು ದೀರ್ಘಕಾಲದಿಂದ ಸಂಶೋಧನೆ ನಡೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಜಿಮ್ ಪಾರ್ಸನ್ಸ್ ಮತ್ತು ಬೆನೆಟ್ ಡೇವಿಡ್ನಲ್ಲಿ ಕಸಿ ಮಾಡಿದ ನಂತರ ಹಂದಿಗಳ ಮೂತ್ರಪಿಂಡ ಮತ್ತು ಹೃದಯವು ಸರಿಯಾಗಿ ಕೆಲಸ ಮಾಡಿದರೆ, ವೈದ್ಯಕೀಯ ಲೋಕದಲ್ಲಿ ಅದೊಂದು ಮಹತ್ತರ ಸಾಧನೆಯೇ ಎಂದು ಹೇಳಬಹುದು.