ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ವಿಜಯ

ಪ್ರಕಾಶ್ ಕಾರತ್

-ಅನು: ವಿಶ್ವ

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ಕೊನೆಗೊಳ್ಳಲಿದೆ ಎಂಬ ಚುನಾವಣಾ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿ ಡೊನಾಲ್ಡ್ ಟ್ರಂಪ್ ನಿರ್ಣಾಯಕ ಜಯ ಸಾಧಿಸಿದ್ದಾರೆ. 538 ಎಲೆಕ್ಟೋರಲ್ ಕಾಲೇಜ್ ಮತಗಳ ಪೈಕಿ ಟ್ರಂಪ್ 312 ಗಳಿಸಿ ಜನಪ್ರಿಯ ಮತ ಗಳಿಕೆಯಲ್ಲಿ ಕಮಲಾ ಹ್ಯಾರಿಸ್‌ರನ್ನು ಹಿಂದಿಕ್ಕಿ ಶೇಕಡ 51 ಮತ ಪಡೆದಿದ್ದಾರೆ. ಉದಾರವಾದಿ ಮಾಧ್ಯಮವು ಕಮಲಾ ಹ್ಯಾರಿಸ್ ಪ್ರಚಾರಕ್ಕೆ ಅನುಕೂಲಕರವಾಗಿ ನಿಂತರೂ ಟ್ರಂಪ್ ಮೇಲುಗೈ ಸಾಧಿಸುತ್ತಿದ್ದಾರೆನ್ನುವುದು ಸ್ವತಂತ್ರ ವೀಕ್ಷಕಕರಿಗೆ ಮನವರಿಕೆಯಾಗಿತ್ತು. ಅದರಲ್ಲೂ ಕೊನೆಯ ಒಂದು ತಿಂಗಳಲ್ಲಿ ಅದು ಗೊತ್ತಾಗಿತ್ತು. ವಲಸೆ ಕುರಿತ ಟ್ರಂಪ್‌ರ ಪ್ರಚೋದನಕಾರಿ ಭಾಷಣಗಳು ಮತ್ತು ಹೆಚ್ಚುತ್ತಿರುವ ಅಪರಾಧಗಳು ಮತ್ತು ‘ಉಳ್ಳವರ’ (ಎಲೈಟ್ಸ್) ವಿರುದ್ಧ ಅವರಾಡಿದ ಅಬ್ಬರದ ಮಾತುಗಳು ಮತದಾರರ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದ್ದವು. ಜೀವನ ವೆಚ್ಚ ಹಾಗೂ ಬೆಲೆ ಏರಿಕೆ ಗಳಿಂದಾಗಿ ಜೋ ಬೈಡೆನ್ ಆಡಳಿತದ ವಿರುದ್ಧ ಜನರಲ್ಲಿ ಮಡುಗಟ್ಟಿದ್ದ ಅತೃಪ್ತಿ  ಕೂಡ ಟ್ರಂಪ್‌ಗೆ ನೆರವಾಗಿದೆ.

ಇದಕ್ಕೆ ತದ್ವಿರುದ್ಧವಾಗಿ, ಕಮಲಾ ಹ್ಯಾರಿಸ್‌ರ ಪ್ರಚಾರ ನೀರಸವಾಗಿತ್ತು. ಪ್ರಜಾಪ್ರಭುತ್ವ ಮತ್ತು ಟ್ರಂಪ್ ಇನ್ನೊಮ್ಮೆ ಅಧ್ಯಕ್ಷರಾದರೆ ಅಗುವ ಅಪಾಯದ ಕುರಿತ ಮಾತುಗಳೇ ಹೆಚ್ಚಾಗಿದ್ದು ಪರ್ಯಾಯ ದೃಷ್ಟಿಕೋನ ಅಥವಾ ನೀತಿಗಳ ನ್ನು ಮುಂದಿಡುವಲ್ಲಿ ಅವರು ವಿಫಲರಾಗಿದ್ದರು. ದುಡಿಯುವ ಜನರ ಹಕ್ಕುಗಳ ಪರವಾಗಿ ಮತ್ತು ಕಾರ್ಪೋರೇಟ್ ಲೂಟಿ ಹಾಗೂ ಬೆಲೆಯೇರಿಕೆ ಬಿಸಿ ಮತ್ತು ವಾಲ್‌ಸ್ಟ್ರೀಟ್ ಶ್ರೀಮಂತರ ವಿರುದ್ಧ ಹೆಚ್ಚು ತೀವ್ರವಾಗಿ ಪ್ರಚಾರ ಮಾಡಿದ್ದಿದ್ದರೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಇನ್ನಷ್ಟು ಬೆಂಬಲ ಸಿಗಬಹುದಿತ್ತು.

ಆದರೆ, ಡೆಮಾಕ್ರಟಿಕ್ ಪಕ್ಷದ ವ್ಯವಸ್ಥೆ ಹಾಗೂ ವಾಲ್‌ಸ್ಟ್ರೀಟ್ ಫೈನಾನ್ಶಿಯರ್‌ಗಳು ಮತ್ತು ತಂತ್ರಜ್ಞಾನ ಮಿಲಿಯಾಧಿಪತಿಗಳೊಂದಿಗೆ ಸಂಪರ್ಕ ಹೊಂದಿರುವ ಅದರ ಒಳಗಿನ ಕೂಟವು ಕಮಲಾ ಪ್ರಚಾರ ಕೇವಲ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವುದಕ್ಕೆ ಹಾಗೂ ತಾಳಮೇಳ ಇಲ್ಲದ ನೀತಿ ಉಪಕ್ರಮಗಳು ಹಾಗೂ ಆಶ್ವಾಸನೆಗಳಿಗೆ ಸೀಮಿತವಾಗಿತ್ತು. ಮಹಿಳೆಯರ ಪುನರುತ್ಪಾದನಾ ಹಕ್ಕುಗಳು ಮತ್ತು ಗರ್ಭಪಾತದ ಹಕ್ಕಿಗಾಗಿ ದನಿಯೆತ್ತಿದರಷ್ಟೇ ಹೆಚ್ಚು ಸಮಗ್ರ ಬೆಂಬಲ ಕ್ರೋಡೀಕರಿಸಲು ಸಾಲದು. ಲಿಂಗ ವಿಚಾರ ಕೂಡ ಅಷ್ಟೇ ಪ್ರಮುಖವಾದುದು ಎನ್ನುವುದನ್ನು ಫಲಿತಾಂಶ ತೋರಿಸಿಕೊಟ್ಟಿದೆ. ಹಿಂದೆ ಟ್ರಂಪ್ ಪರವಾಗಿ ಹೆಚ್ಚಾಗಿ ನಿಲ್ಲುತ್ತಿದ್ದ ಬಿಳಿಯ ಪುರುಷರಲ್ಲದೆ, ಈ ಬಾರಿ ಕರಿಯ ಹಾಗೂ ಲ್ಯಾಟಿನೊ ಪುರುಷರ ಒಂದು ವಿಭಾಗವೂ ಕಮಲಾರಿಗೆ ಬೆಂಬಲ ನೀಡಲಿಲ್ಲ. ಇದು ಸ್ತ್ರೀ ದ್ವೇಷವು  ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎನ್ನವುದನ್ನು ಬಟಾ ಬಯಲುಗೊಳಿಸಿದೆ.

ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸೀಟ್ ಬ್ಲಾಕಿಂಗ್’ ಹಗರಣ ಶಂಕೆ

ಡೆಮಾಕ್ರಟಿಕ್ ಪಕ್ಷವು ವೃತ್ತಿಪರರು, ಹೆಚ್ಚು ವೇತನದ ಕಾಲೇಜ್ ಪದವೀಧರರು ಮತ್ತು ಕಾರ್ಪೊರೇಟ್‌ಗಳ ಹಿತವನ್ನು ಪ್ರತಿನಿಧಿಸುತ್ತದೆ ಎಂದು ಕಾಣಲಾಗುತ್ತದೆ. ಈ ಪರಿಕಲ್ಪನೆಯೇ ಸಾಂಪ್ರದಾಯಿಕವಾಗಿ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿರುವ ದುಡಿಯುವ ಜನರು ಅದರಿಂದ ದೂರವಾಗುವಂತೆ ಮಾಡಿತು. ವಿಶೇಷವಾಗಿ ಮಿಚಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ಓಹಿಯೋದಂಥ ಮಧ್ಯ-ಪಶ್ಚಿಮ ರಾಜ್ಯಗಳಲ್ಲಿ ಇದು ಸ್ಪಷ್ಟವಾಗಿದೆ.   ಸಹಜವಾಗಿಯೇ ವರ್ತಕರು, ಉದ್ಯಮಿಗಳು, ಧನಿಕರ ತೆರಿಗೆ ಕಡಿತದಂಥ ಕಾರ್ಪೊರೇಟ್-ಪರ ಧೋರಣೆಗಳನ್ನು ಹೊಂದಿರುವ ಬಿಲಿಯಾಧಿಪತಿ ಅಭ್ಯರ್ಥಿಯನ್ನು ದುಡಿಯುವ ವರ್ಗವು ಬೆಂಬಲಿಸಿದ್ದು ನಿಶ್ಚಯವಾಗಿಯೂ ಒಂದು ವಿರೋಧಾಭಾಸವಾಗಿದೆ.

ಪರಿಸರ ರಕ್ಷಣೆ ಕುರಿತಾದ ಕಾನೂನುಗಳನ್ನು ಟ್ರಂಪ್ ಖಂಡಿತವಾಗಿಯೂ ಸಂಪೂರ್ಣವಾಗಿ ತಿರುವು ಮುರುವು ಮಾಡುತ್ತಾರೆ ಹಾಗೂ ತೈಲ ಮತ್ತು ತ್ಯಾಜ್ಯ ನೀರು (ಫ್ರಾಕಿಂಗ್) ಉದ್ಯಮವನ್ನು ಉತ್ತೇಜಿಸುತ್ತಾರೆ. ಮಿಚಿಗನ್‌ನಂಥ ರಾಜ್ಯದಲ್ಲಿ ಅರಬ್-ಅಮೆರಿಕನ್ ಮತಗಳ ನಷ್ಟವಾಗಿ ಕಮಲಾ ಸೋಲಿಗೆ ಕಾರಣವಾಗಿದ್ದು ಒಂದು ಅಣಕವಾಗಿದೆ. ಬೈಡೆನ್-ಹ್ಯಾರಿಸ್ ಆಡಳಿತವು ಗಾಜಾ ನರಮೇಧವನ್ನು ಕಣ್ಮುಚ್ಚಿಕೊಂಡು ನೋಡುತ್ತಾ ಕುಳಿತದ್ದು ಅರಬ್-ಅಮೆರಿಕನ್ ಮತದಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕಾರಣಕ್ಕಾಗಿ, ಅನೇಕ ಯುವಜನರು ಕೂಡ ಕಮಲಾ ಹ್ಯಾರಿಸ್‌ರನ್ನು ಬೆಂಬಲಿಸಲಿಲ್ಲ.

ಅತಿ ಬಲಪಂಥೀಯತೆ

ಯುರೋಪ್ ಮತ್ತಿತರ ದೇಶಗಳಲ್ಲಿ ಅತಿ ಬಲಪಂಥೀಯ ಪಕ್ಷಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಜಯವನ್ನು ನೋಡಬೇಕಾಗುತ್ತದೆ. ವಲಸೆ ಮತ್ತು ಹೊರಗಿನವರ ಭಯವು ಈ ವಿದ್ಯಮಾನದ ಅತಿ ಪ್ರಮುಖ ಅಂಶವಾಗಿದೆ. ರಿಪಬ್ಲಿಕನ್ನರು ಸೆನೆಟ್‌ನಲ್ಲಿ ಬಹುಮತ ಪಡೆದಿದ್ದು ಇದೀಗ ಕಾಂಗ್ರೆಸ್ ಕೂಡ ರಿಪಬ್ಲಿಕನ್ನರ ಪಾಲಾಗಿರುವುದರಿಂದ, ಬಲಪಂಥೀಯ ಹಾಗೂ ಪ್ರತಿಗಾಮಿ ಕ್ರಮಗಳನ್ನು ಕೈಗೊಳ್ಳಲು ಟ್ರಂಪ್ ಹಾದಿ ಸುಗಮವಾಗಲಿದೆ.

ಹೊರ ಪ್ರಪಂಚಕ್ಕೆ, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಅಧ್ಯಕ್ಷರ ನಡುವೆ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನದ್ದೇನೂ ಉಳಿದಿರುವುದಿಲ್ಲ. ಎರಡೂ ಪಕ್ಷಗಳು ಸಾಮ್ರಾಜ್ಯಶಾಹಿ ಯುದ್ಧಕೋರ ಪಕ್ಷಗಳೇ ಆಗಿವೆ. ಕ್ಲಿಂಟನ್ ಆಗಲಿ ಬುಷ್ ಆಗಲಿ, ಇರಾಕ್ ಮತ್ತು ಪಶ್ಚಿಮ ಏಷ್ಯಾದ ಜನರು ಅಮೆರಿಕನ್ ಯುದ್ಧ ಯಂತ್ರದ ಟಾರ್ಗೆಟ್ ಆಗಿರುತ್ತಾರೆ. ಟ್ರಂಪ್‌ನಂತೆ ಬೈಡೆನ್ ಕೂಡ ಇಸ್ರೇಲ್‌ಗೆ ಅಂಧ ಬೆಂಬಲ ನೀಡುವ ನೀತಿಯನ್ನೇ ಅನುಸರಿಸಿದರು.  ಗಾಜಾದಲ್ಲಿನ ನರಮೇಧದ ಯುದ್ಧಕ್ಕೆ ಬೈಡೆನ್ ಆಡಳಿತ ಹಣಕಾಸು ಮತ್ತು ಶಸ್ತ್ರಾಸ್ತ್ರ ಗಳನ್ನು ಒದಗಿಸಿ ಬೆಂಬಲ ನೀಡಿದೆ. ಮಿಲಿಟರಿ ಮಧ್ಯಪ್ರವೇಶಗಳ ಮೂಲಕ ಅಥವಾ ನಿರ್ಬಂಧಗಳನ್ನು ಹೇರಿ ಅಮೆರಿಕದ ಏಕಸ್ವಾಮ್ಯವನ್ನು ಸಾಧಿಸುವ ವಿಚಾರದಲ್ಲಿ ಡೆಮಾಕ್ರಾಟರು ಮತ್ತು ರಿಪಬ್ಲಿಕನ್ನರ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ.

ಟ್ರಂಪ್ ಎರಡನೇ ಸಲ ಅಧ್ಯಕ್ಷರಾಗಿದ್ದು ಪ್ಯಾಲೆಸ್ತೀನಿಯರಿಗೆ ನಿಜಕ್ಕೂ ಕೆಟ್ಟ ಸುದ್ದಿ.  ಟ್ರಂಪ್, ಇಸ್ರೇಲ್‌ನ ಕಟ್ಟಾ ಬೆಂಬಲಿಗ ಆಗಿರುವುದು ಮಾತ್ರವಲ್ಲದೆ ಬೆಂಜಮಿನ್ ನೆತನ್ಯಾಹುಗೆ ಪ್ರಬಲವಾಗಿ ಬೆಂಬಲಿಸುವುದೇ ಇದಕ್ಕೆ ಕಾರಣ. ಚೀನಾ ಜತೆಗಿನ ಬಾಂಧವ್ಯ ಇನ್ನಷ್ಟು ಹಳಸಬಹುದು. ಯಾಕೆಂದರೆ, ಟ್ರಂಪ್ ಚೀನಿ ಸರಕುಗಳ ಮೇಲೆ ಹೆಚ್ಚು ತೆರಿಗೆ ವಿಧಿಸಬಹುದು ಹಾಗೂ ವಾಣಿಜ್ಯ ಸಂಬಂಧಗಳಲ್ಲಿ ನಿರ್ಬಂಧ ಹೇರಬಹುದು. ಅಮೆರಿಕ ಫಸ್ಟ್ ಎಂಬ ಟ್ರಂಪ್ ಧೋರಣೆಯ ಕಾರಣದಿಂದಾಗಿ ಯುರೋಪ್‌ನ ಮಿತ್ರರು ಹಾಗೂ ನ್ಯಾಟೋ ಜೊತೆಗಿನ ಸಂಬಂಧ ಅನಿಶ್ಚಿತ ಘಟ್ಟವನ್ನು ಪ್ರವೇಶಿಸಲಿದೆ. ರಷ್ಯಾ ಜತೆಗಿನ ಯೂಕ್ರೇನ್ ಯುದ್ಧಕ್ಕೆ ಬೇಷರತ್ ಬೆಂಬಲ ನೀತಿಗೆ ಟ್ರಂಪ್ ಬದ್ಧರಾಗಿರುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಹೇಳುವುದಾದರೆ, ಅಂತಾರಾಷ್ಟ್ರೀಯ  ಸಂಬಂಧಗಳಲ್ಲಿ ಮಹಾ ಅನಿಶ್ಚಯದ ಅವಧಿ ಬರುವುದಂತೂ ನಿಶ್ಚಿತ.

ಭಾರತದಲ್ಲಿ, ಅಮೆರಿಕದ ಚುನಾವಣಾ ಫಲಿತಾಂಶದಿAದ ನರೇಂದ್ರ ಮೋದಿಗೆ ಖುಷಿಯಾಗಬಹುದು. ಯಾಕೆಂದರೆ, ಮೋದಿಗೆ ಟ್ರಂಪ್ ಸೈದ್ಧಾಂತಿಕ ಸಾಮೀಪ್ಯವಿರುವ ಗೆಳೆಯನಾಗಿದ್ದಾರೆ. ಬಹಳ ವೇಗವಾಗಿ ಮಿಲಿಟರಿ ಒಪ್ಪಂದಗಳು ಏರ್ಪಡಬಹುದೆಂದು ನಿರೀಕ್ಷಿಸಬಹುದಾಗಿದೆ.

ಇದನ್ನೂ ನೋಡಿ: ಸುಳ್ಳಿನ ಮೂಲಕ ಕೋಮುದ್ವೇಷ ಹರಡಿದ ತೇಜಸ್ವಿ ಸೂರ್ಯ – ಸಚಿವ ಪ್ರಿಯಾಂಕ್ ಖರ್ಗೆ ಆರೋಪ

Donate Janashakthi Media

Leave a Reply

Your email address will not be published. Required fields are marked *