ವಸಂತರಾಜ ಎನ್.ಕೆ
ಟ್ರಂಪ್ ಅಲೆ ಠುಸ್ಸೆಂದರೂ ರಿಪಬ್ಲಿಕನ್ ಪಕ್ಷವು ಕಾಂಗ್ರೆಸ್ ಕೆಳಸದನವನ್ನು ಡೆಮೊಕ್ರಾಟಿಕ್ ಪಕ್ಷದಿಂದ ಕಸಿದುಕೊಂಡಿದೆ. ಮೆಲ್ ಸದನವನ್ನು ಡೆಮೊಕ್ರಾಟರು ಉಳಿಸಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷ ಅಧ‍್ಯಕ್ಷ ಬಿಡೆನ್ ಅವರ ವಿರುದ್ಧ ತನಿಖೆ, ದೋಷಾರೋಪಣೆಗಳನ್ನು ಹರಿಯ ಬಿಟ್ಟು ಅವರ ಕ್ರಮಗಳಿಗೆಲ್ಲ ಅಡ್ಡಿ ಒಡ್ಡಲಿದೆ. ‘ಸ್ವಲ್ಪವಾದರೂ ಜನಪರವಾಗಿರುವ ಕನಿಷ್ಠ ವೇತನ ಏರಿಕೆ, ಬಡ ಕುಟುಬಗಳಿಗೆ ಆರೋಗ್ಯ ವಿಮೆ ವಿಸ್ತರಿಸುವ ಮತ್ತು ಮೆಡಿಕೇರ್ ಗಟ್ಟಿಗೊಳಿಸುವ ಬಿಡೆನ್ ಸರಕಾರದ ಕ್ರಮಗಳಿಗೆ ರಿಪಬ್ಲಿಕನ್ನರು ಅಡೆತಡೆಯನ್ನು ಒಡ್ಡಲಿದ್ದಾರೆ. ಹವಾಮಾನ ಬದಲಾವಣೆ ತಡೆಯುವ ಬಿಡೆನ್ ಕ್ರಮಗಳಿಗೂ ಕುತ್ತು ಕಾದಿದೆ. ಬಿಡೆನ್ ಅವರ ಉಕ್ರೇನ್ ಯುದ್ಧ, ರಶ್ಯಾ-ಚೀನಾ ವಿರುದ್ಧ ಆರ್ಥಿಕ ಯುದ್ಧ ಮುಂತಾದ ಆಕ್ರಾಮಕ ಕ್ರಮಗಳಿಗೆ ಕಡಿವಾಣ ಬೀಳಬಹುದು. ಟ್ರಂಪ್ ಅಲೆ’ಗೆ ತಡೆಯಾದರೂ, ಯು.ಎಸ್ ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿಲ್ಲ.
ನವೆಂಬರ್ 8ರಂದು ನಡೆದ ಯು.ಎಸ್ ಕಾಂಗ್ರೆಸ್ (ಯು.ಎಸ್ ಪಾರ್ಲಿಮೆಂಟ್ ನ ಹೆಸರು) ಗೆ ಚುನಾವಣೆಗಳ ಬಹುಪಾಲು ಫಲಿತಾಂಶಗಳು ಬಂದಿವೆ. ರಿಪಬ್ಲಿಕನ್ ಪಕ್ಷವು ಪ್ರತಿನಿಧಿ ಸಭೆ (ಹೌಸ್ ಆಫ್ ರೆಪ್ರಸೆಂಟಿಟಿವ್ಸ್ – ಪಾರ್ಲಿಮೆಂಟಿನ ಕೆಳಸದನ) ಯನ್ನು ಅಧ್ಯಕ್ಷ ಬಿಡೆನ್ ಅವರ ಡೆಮೊಕ್ರಾಟಿಕ್ ಪಕ್ಷದಿಂದ ಕಸಿದುಕೊಂಡಿದೆ. ಪ್ರತಿನಿಧಿ ಸಭೆಯ 435 ಸೀಟುಗಳಲ್ಲಿ ರಿಪಬ್ಲಿಕನ್ ಪಕ್ಷ 218 ಸೀಟು ಪಡೆದು ಅಲ್ಪ ಬಹುಮತ ಗಳಿಸಿದೆ. ಇನ್ನೂ 5 ಸೀಟುಗಳ ಫಲಿತಾಂಶ ಪ್ರಕಟವಾಗಿಲ್ಲ. ಈ ವರೆಗೆ ಡೆಮೊಕ್ರಾಟಿಕ್ ಪಕ್ಷ 212 ಸೀಟು ಪಡೆದಿದೆ. ಸೆನೆಟ್ ನಲ್ಲಿ (ಕಾಂಗ್ರೆಸ್ ನಲ್ಲಿ ಮೇಲ್ ಸದನ) ಡೆಮೊಕ್ರಾಟಿಕ್ ಪಕ್ಷ ಅತಿ ಪ್ರಯಾಸದಿಂದ ಅಲ್ಪ ಬಹುಮತ ಉಳಿಸಿಕೊಂಡಿದೆ. ಸೆನೆಟ್ ನಲ್ಲಿ 100 ಸೀಟುಗಳಿದ್ದು ಡೆಮೊಕ್ರಾಟಿಕ್ ಪಕ್ಷ 50 ಮತ್ತು ರಿಪಬ್ಲಿಕನ್ ಪಕ್ಷ 49 ಸೀಟುಗಳನ್ನು ಗೆದ್ದಿದೆ.
ಯು.ಎಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 4 ವರ್ಷಗಳಿಗೊಮ್ಮೆ ಅಧ್ಯಕ್ಷೀಯ ಚನಾವಣೆಗಳು ನಡೆಯುತ್ತವೆ. ಪ್ರತಿ 2 ವರ್ಷಗಳಿಗೊಮ್ಮೆ ಕಾಂಗ್ರೆಸ್ ಗೆ ಚುನಾವಣೆಗಳು ನಡೆಯುತ್ತವೆ. ಕೆಳಸದನದ ಎಲ್ಲ 435 ಸೀಟುಗಳಿಗೂ ಮತ್ತು ಸೆನೆಟ್ ನ ಮೂರನೆ ಒಂದುಭಾಗದ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಕಾಂಗ್ರೆಸ್ ಗೆ ಚುನಾವಣೆಗಳು ಅಧ್ಯಕ್ಷೀಯ ಚುನಾವಣೆಗಳ ಜತೆಗೆ ಸಹ ನಡೆಯುತ್ತವೆ. ಎರಡು ಅಧ್ಯಕ್ಷೀಯ ಚುನಾವಣೆಗಳ ನಡುವೆ ನಡೆಯುವ ಚುನಾವಣೆಗಳಿಗೆ ‘ಮಧ್ಯಂತರ ಚುನಾವಣೆ’ ಎಂದು ಕರೆಯಲಾಗುತ್ತದೆ. ಪ್ರತಿನಿಧಿ ಸಭೆಯ (ಕೆಳಸದನದ) ಸದಸ್ಯರ ಅವಧಿ 2 ವರ್ಷಗಳಾದರೆ, ಅಧ‍್ಯಕ್ಷರ ಅಧಿಕಾರಾವಧಿ 4 ವರ್ಷಗಳು ಮತ್ತು ಸೆನೆಟ್ ಸದಸ್ಯರ ಕಾಲಾವಧಿ 6 ವರ್ಷಗಳು. ಪ್ರತಿನಿಧಿ ಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ (ಅತಿ ಹೆಚ್ಚು ಜನಸಂಖ್ಯೆಯ ಕ್ಯಾಲಿಫೋರ್ನಿಯಕ್ಕೆ 52 ಸೀಟು ಇದ್ದರೆ, ಅತಿ ಕಡಿಮೆ ಜನಸಂಖ್ಯೆಯ ಅಲಾಸ್ಕಾಕ್ಕೆ 1 ಸೀಟು) ಇರುತ್ತದೆ. ಆದರೆ ಸೆನೆಟ್ ನಲ್ಲಿ ಎಲ್ಲ ರಾಜ್ಯಗಳಿಗೆ ತಲಾ 2 ಸೀಟು ಇರುತ್ತದೆ. ಸೆನೆಟ್ ಸೇರಿದಂತೆ ಈ ಮೂರೂ ಚುನಾವಣೆಗಳು ನೇರ ಚುನಾವಣೆಗಳೇ. ಈ ಎರಡು ಚುನಾವಣೆಗಳ ಜತೆಗೆ ರಾಜ್ಯದ ಗವರ್ನರ್ ಮತ್ತು ಶಾಸನಸಭೆಯ ಚುನಾವಣೆಗಳೂ ನಡೆಯುತ್ತವೆ.
ಮಾಧ್ಯಮ ಭವಿಷ್ಯವಾಣಿ, ದೀರ್ಘಕಾಲೀನ ಟ್ರೆಂಡ್ ಮೀರಿದ ಫಲಿತಾಂಶ
ಈ ಬಾರಿಯ ಕಾಂಗ್ರೆಸ್ ಚುನಾವಣೆಗಳು ಹಲವು ಮಾಧ್ಯಮ ಸಮೀಕ್ಷೆಗಳ ಭವಿಷ್ಯವಾಣಿಯನ್ನು ಮತ್ತು ದೀರ್ಘಕಾಲೀನ ಟ್ರೆಂಡ್ ಗಳನ್ನು ಮೀರಿದೆ ಎಂದು ಹೇಳಲಾಗುತ್ತದೆ. ಕಾಂಗ್ರೆಸ್ ಗೆ ನಡೆಯುವ ‘ಮಧ್ಯಂತರ ಚುನಾವಣೆ’ಗಳಲ್ಲಿ ಅಧ್ಯಕ್ಷರ ಪಕ್ಷ ಸೀಟುಗಳನ್ನು ಕಳೆದುಕೊಳ್ಳುವುದು ದೀರ್ಘಕಾಲೀನ ಟ್ರೆಂಡ್. 1946ರಿಂದ ಕೇವಲ 2 ಬಾರಿ ಮಾತ್ರ ಅಧ್ಯಕ್ಷರ ಪಕ್ಷ ಸೀಟುಗಳನ್ನು ಕಳೆದುಕೊಂಡಿಲ್ಲವಂತೆ. ಅದು ಮಾತ್ರವಲ್ಲ ಅಧ್ಯಕ್ಷರ ಜನಪ್ರಿಯತೆಯ ರೇಟಿಂಗ್ ಶೇ.50ಕ್ಕಿಂತ ಹೆಚ್ಚಿದ್ದರೆ ಸರಾಸರಿ 27 ಸೀಟುಗಳನ್ನು ಕಳೆದುಕೊಳ್ಳುತ್ತದೆ. ರೇಟಿಂಗ್ ಶೇ.50ಕ್ಕಿಂತ ಕಡಿಮೆಯಿದ್ದರೆ (ಬಿಡೆನ್ ಅವರ ರೇಟಿಂಗ್ ಕೇವಲ ಶೇ.42 ಇತ್ತು) ಸರಾಸರಿ 27 ಸೀಟುಗಳನ್ನು ಕಳೆದುಕೊಳ್ಳುತ್ತವೆ. ಮಾಧ್ಯಮಗಳು ರಿಪಬ್ಲಿಕನ್ ಪಕ್ಷ 222ರಿಂದ 244 ಸೀಟುಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯ ಆಧಾರದ ಮೇಲೆ ಹೇಳಿದ್ದವು. ಡೆಮೊಕ್ರಾಟಿಕ್ ಪಕ್ಷ ಕಳೆದ ಸದನದಲ್ಲಿ 220 ಸೀಟು ಹೊಂದಿದ್ದು, ಈ ಬಾರಿ 8 ಸೀಟುಗಳನ್ನು ಮಾತ್ರ ಕಳೆದುಕೊಂಡಿದೆ. ಸೆನೆಟ್ ನಲ್ಲಿ ಬಹುಮತ ಉಳಿಸಿಕೊಂಡಿದೆ. ಆ ಮೂಲಕ ಮಾಧ್ಯಮ ಸಮೀಕ್ಷೆಗಳ ಭವಿಷ್ಯವಾಣಿಯನ್ನು ಮತ್ತು ದೀರ್ಘಕಾಲೀನ ಟ್ರೆಂಡ್ ಗಳನ್ನು ಮೀರಿದೆ ಎಂದು ಹೇಳಲಾಗುತ್ತದೆ.
ತೀವ್ರ ಬೆಲೆಏರಿಕೆ, ಹಣದುಬ್ಬರ ಗಳಿಂದಾಗಿ ಮತ್ತು ‘ಟ್ರಂಪ್ ಅಲೆ’ಯಿಂದಾಗಿ ರಿಪಬ್ಲಿಕನ್ ಪಕ್ಷ ಜಯಭೇರಿ ಹೊಡೆಯುತ್ತದೆ, ಡೆಮೊಕ್ರಾಟಿಕ್ ಪಕ್ಷ ಭಾರೀ ಸೋಲು ಕಾಣುತ್ತದೆ ಎಂದು ಮಾಧ್ಯಮಗಳು ಹೇಳಿದ್ದವು. ಅಭ್ಯರ್ಥಿಗಳ ಆಯ್ಕೆಗೆ ನಡೆಯುವ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ ಕೆಲವು ಅಭ್ಯರ್ಥಿಗಳನ್ನು ಟ್ರಂಪ್ ಬೆಂಬಲಿಸಿದ್ದು ಅವರು ಪಕ್ಷದ ಟಿಕೇಟುಗಳನ್ನು ಗೆದ್ದಿದ್ದರು. ಈ ಅಭ‍್ಯರ್ಥಿಗಳ ಪರವಾಗಿ ಟ್ರಂಪ್ ಭಾರೀ ಬಿರುಸಿನ ಪ್ರಚಾರ ನಡೆಸಿದ್ದರು. ಒಟ್ಟಾರೆಯಾಗಿ ಟ್ರಂಪ್ ತೀವ್ರ ಬೆಲೆಏರಿಕೆ, ಹಣದುಬ್ಬರಗಳನ್ನು ತಡೆಯಲು ಅಧ್ಯಕ್ಷ ಬಿಡೆನ್ ವೈಫಲ್ಯದ ವಿರುದ್ಧ ಬಿರುಸಿನ ದಾಳಿ ನಡೆಸಿದ್ದರು. ಇದಕ್ಕೆ ಮತದಾರರ ಒಂದು ವಿಭಾಗದಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರಂಪ್ 2024ರಲ್ಲಿ 3ನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಅದಕ್ಕಾಗಿ ಈ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ‘ಟ್ರಂಪ್ ಅಲೆ’ ಡೆಮೊಕ್ರಾಟಿಕ್ ಪಕ್ಷವನ್ನು ಗುಡಿಸಿ ಹಾಕುತ್ತದೆ ಎಂಬುದು ಮಾಧ್ಯಮಗಳ ನಿರೀಕ್ಷೆಯಾಗಿತ್ತು. ಆದರೆ ಈ ನಿರೀಕ್ಷಿತ ‘ಟ್ರಂಪ್ ಅಲೆ’ ಠುಸ್ ಆಗಿದೆ. ಟ್ರಂಪ್ ಬೆಂಬಲಿತ ಹೆಚ್ಚಿನ ಅಭ್ಯರ್ಥಿಗಳು ಸೆನೆಟ್, ಪ್ರತಿನಿಧಿ ಸಭೆ, ಗವರ್ನರ್, ರಾಜ್ಯಗಳ ಶಾಸನಸಭೆಗಳಲ್ಲಿ ಸೋತಿದ್ದಾರೆ. ಇದಕ್ಕೇನು ಕಾರಣವೆಂದು ಮಾಧ್ಯಮಗಳು, ಚುನಾವಣಾ ಪಂಡಿತರು ತಲೆಕೆರೆದುಕೊಳ್ಳುತ್ತಿದ್ದಾರೆ.
ರಿಪಬ್ಲಿಕನ್ ಅಲೆ ಠುಸ್ ಯಾಕಾಯಿತು?
ಚುನಾವಣೆಯ ದಿನ ಮತದಾನದ ನಂತರ ಮತ್ತು ಆ ಮೇಲೆ ಮಾಡಲಾದ ಸಮೀಕ್ಷೆಗಳಲ್ಲಿ ಮತದಾರರ ಮುಂದೆ ಇದ್ದ ಅತಿ ದೊಡ್ಡ ವಿಷಯ ಬೆಲೆಏರಿಕೆ/ಹಣದುಬ್ಬರ ಗಳಿಂದ ಉಂಟಾದ ಭರಿಸಲಾಗದ ವಿಪರೀತ ಜೀವನ ವೆಚ್ಚ ಮತ್ತು ಅದನ್ನು ಸರಿಯಾಗಿ ನಿಭಾಯಿಸುವುದರಲ್ಲಿ ಅಧ್ಯಕ್ಷ ಬಿಡೆನ್ ವೈಫಲ್ಯ. ಇದು ಮುಖ್ಯ ವಿಷಯವಾಗಿದ್ದರೆ ಡೆಮೊಕ್ರಾಟರು ಹೀನಾಯವಾಗಿ ಸೋಲಬೇಕಿತ್ತು. ಆದರೆ ‘ರಿಪಬ್ಲಿಕನ್ ಅಲೆ’ ಯಾಕೆ ಅಷ್ಟು ಜೋರಾಗಿ ಬೀಸಲಿಲ್ಲ. ಇದಕ್ಕೆ ಕಾರಣ ಮತದಾರರಿಗೆ ಮುಖ್ಯವಾಗಿದ್ದ ಎರಡನೆಯ ಅತಿ ದೊಡ್ಡ ವಿಷಯವಾಗಿದ್ದ, ಮಹಿಳೆಯರ ಗರ್ಭಪಾತದ ಹಕ್ಕಿನ ಮೇಲೆ ತೀವ್ರ ನಿರ್ಬಂಧಗಳನ್ನು ಹೇರುವ, ಹೆಚ್ಚು ಕಡಿಮೆ ನಿಷೇಧ ಹೇರುವ ಸುಪ್ರೀಂ ಕೋರ್ಟಿನ ತೀರ್ಪು. ಇದು ಮಹಿಳೆಯರ ದೊಡ್ಡ ವಿಭಾಗ ಮತ್ತು ಶೇ.70 ಯುವಜನರನ್ನು ಬಾಧಿಸಿದ್ದು ಸಾರಾ ಸಗಟಾಗಿ ರಿಪಬ್ಲಿಕನ್ ರನ್ನು ಸೋಲಿಸಲು ಅವರು ದೊಡ್ಡ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದರು ಎನ್ನಲಾಗಿದೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಾಟರು ಮೋಸದಲ್ಲಿ ಗೆದ್ದಿದ್ದಾರೆ. ಈಗಲೂ ಮೋಸ ಮಾಡುವವರಿದ್ದಾರೆ. ಹಾಗೆ ಮೋಸ ಮಾಡಿದರೆ 2021 ಜನವರಿ 6 ಕ್ಕೆ ಮಾಡಿದ ಹಾಗೆ ತನ್ನ ಬೆಂಬಲಿಗರು ನೇರ ಹಿಂಸಾತ್ಮಕ ಕಾರ್ಯಾಚರಣೆಗೆ ಹಿಂಜರಿಯುವುದಿಲ್ಲವೆಂಬ ಟ್ರಂಪ್ ಪ್ರಚಾರವೇ ರಿಪಬ್ಲಿಕನ್ನರಿಗೆ ಗರ್ಭಪಾತ ವಿಷಯದಂತೆ ಮುಳುವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಟ್ರಂಪ್ ಅವರ ಈ ಪ್ರಚಾರ ಮತ್ತು ವಲಸೆಗಾರರ ಮೇಲೆ ದ್ವೇಷ ಕಾರುವ ಅಭಿಯಾನ ಅವರ ಅಭಿಮಾನಿಗಳಾದ ಬಡ ಬಿಳಿಯ ಮತ್ತು ಉಗ್ರ ಬಲಪಂಥೀಯ ಬೆಂಬಲಿಗರನ್ನು ಅಣಿನೆರೆಸಲು ಸಹಾಯಕವಾಯಿತು. ಆದರೆ 2021 ಜನವರಿ 6 ರ ಹಿಂಸಾಚಾರವನ್ನು ಮತ್ತು ಚುನಾವಣಾ ಫಲಿತಾಂಶವನ್ನು ಒಪ್ಪದೆ ಪ್ರಜಾಪ್ರಭುತ್ವ ನಿಯಮಗಳನ್ನು ಗಾಳಿಗೆ ತೂರಿದ್ದನ್ನು ರಿಪಬ್ಲಿಕನ್ ಬೆಂಬಲಿಗರ ಒಂದು ವಿಭಾಗ ಇಷ್ಟಪಡಲಿಲ್ಲ. ಟ್ರಂಪ್ ಬೆಂಬಲಿತ ಹಲವು ಅಭ‍್ಯರ್ಥಿಗಳು ರಿಪಬ್ಲಿಕನ್ ಪ್ರಬಲವಾಗಿರುವ ಕ್ಷೇತ್ರಗಳಲ್ಲೂ ಸೋತಿದ್ದನ್ನು ಇದಕ್ಕೆ ಉದಾಹರಿಸಲಾಗಿದೆ. ರಿಪಬ್ಲಿಕನ್ ಭಾರೀ ಬಹುಮತದಿಂದ ಗೆದ್ದರೆ ಟ್ರಂಪ್ ರಿಪಬ್ಲಿಕನ್ ಅಭ‍್ಯರ್ಥಿ ಆಗುವ ಸಾಧ್ಯತೆ ಹೆಚ್ಚು. ಅದು ರಿಪಬ್ಲಿಕನ್ನರಿಗೆ ಮುಳುವಾಗಬಹುದು ಎಂಬ ಆತಂಕವೂ ಇತ್ತು. ಆದ್ದರಿಂದ ಟ್ರಂಪ್ ಬೆಂಬಲಿತ ಅಭ್ಯರ್ಥಿಗಳನ್ನು ವಿಶೇಷವಾಗಿ ಸೋಲಿಸಲಾಯಿತು. ರಿಪಬ್ಲಿಕನ್ ಅಧ್ಯಕ್ಷ ಅಭ್ಯರ್ಥಿ ಸ್ಥಾನಕ್ಕೆ ಟ್ರಂಪ್ ಗೆ ಪ್ರತಿಸ್ಪರ್ಧಿಯಾದ ಡಿ ಸಾಂಟಿಸ್ ಫ್ಲಾರಿಡಾ ಗವರ್ನರ್ ಪದವಿಗೆ ಶೇ.20ಕ್ಕೂ ಹೆಚ್ಚು ಅಂತರದಿಂದ ಆಯ್ಕೆಯಾಗಿರುವುದು ಟ್ರಂಫ್ ಗೆ ಹಿನ್ನಡೆ ಎನ್ನಲಾಗಿದೆ.
ಟ್ರಂಪ್ ಮತ್ತು ರಿಪಬ್ಲಿಕನ್ನರ ವಿರುದ್ಧ ಸಂಘಟಿತ ಕಾರ್ಮಿಕ ಸಂಘಗಳು, ಮಹಿಳಾವಾದಿ, ಅಲ್ಪಸಂಖ‍್ಯಾತ, ಪರಿಸರ ಸಂಬಂಧಿತ ಜನಚಳುವಳಿಗಳ ಬಿರುಸಿನ ಪ್ರಚಾರ ಸಹ ಪರಿಣಾಮಕಾರಿಯಾಗಿತ್ತು. ಅಮೆರಿಕದ ‘ಎಡಪಂಥ’ ಎನ್ನಲಾದ ಡೆಮೊಕ್ರಾಟಿಕ್ ಸೋಶಲಿಸ್ಟ್ ಕಾಂಗ್ರೆಸ್ ಸದಸ್ಯರ ಸಂಖ್ಯೆ 4ರಿಂದ 6ಕ್ಕೆ ಏರಿದೆ. ರಾಜ್ಯಗಳ ಶಾಸನ ಸಭೆಗಳಲ್ಲೂ ಹಲವು ಡೆಮೊಕ್ರಾಟಿಕ್ ಸೋಶಲಿಸ್ಟ್ ರು ಡೆಮೊಕ್ರಾಟಿಕ್ ಟಿಕೆಟ್ ಮೇಲೆ ಗೆದ್ದಿದ್ದಾರೆ
ಹಲವು ಕ್ಷೇತ್ರಗಳಲ್ಲಿ ಗನ್ ನಿಯಂತ್ರಣ, ವಲಸೆಗಾರರ ಭೀತಿ ಮತ್ತು ಕೆಲವು ಸ್ಥಳೀಯ ವಿಷಯಗಳು ಪ್ರಮುಖ ಪಾತ್ರ ವಹಿಸಿದ್ದವು. ಈ ಚುನಾವಣೆಗಳಲ್ಲಿ 2020ರ ಜನಗಣತಿಯನ್ನು ಆಧರಿಸಿ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿತ್ತು. ಇವು ಎರಡೂ ಪಕ್ಷಗಳಿಗೆ ಕೆಲವು ರಾಜ್ಯಗಳಲ್ಲಿ/ಕ್ಷೇತ್ರಗಳಲ್ಲಿ ಲಾಭ ತಂದು ಕೊಟ್ಟಿದೆ. ಆದರೆ ಎರಡು (ಅದರಲ್ಲಿ ನ್ಯೂಯಾರ್ಕ್ ಒಂದು) ಡೆಮೊಕ್ರಾಟಿಕ್ ಪ್ರಾಬಲ್ಯದ ರಾಜ್ಗಗಳಲ್ಲಿ ಮರುವಿಂಗಡಣೆಯನ್ನು ಕೋರ್ಟು ಕಿತ್ತು ಹಾಕಿದ್ದು ರಿಪಬ್ಲಿಕನ್ನರಿಗೆ ಅಲ್ಪ ಬಹುಮತಕ್ಕೆ ಕಾರಣವಾಯಿತು ಎನ್ನಲಾಗಿದೆ.
ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿಲ್ಲ
ಕೆಳಸದನದಲ್ಲಿ ರಿಪಬ್ಲಿಕನ್ ಬಹುಮತ, ಮೇಲ್ ಸದನದಲ್ಲಿ ಡೆಮೊಕ್ರಾಟಿಕ್ ಅಲ್ಪ ಬಹುಮತ ಅಧ್ಯಕ್ಷ ಬಿಡೆನ್, ಡೆಮೊಕ್ರಾಟಿಕ್ ಪಕ್ಷದ ಆಳ್ವಿಕೆಯನ್ನು ಕಷ್ಟಕರಗೊಳಿಸಲಿದೆ. ಟ್ರಂಪ್ ವಿರುದ್ಧ ನಡೆಸಲಾಗುತ್ತಿರುವ ತನಿಖೆ, ವಿಚಾರಣೆಗಳನ್ನು ನಿಲ್ಲಿಸಬಹುದು. ಪ್ರತೀಕಾರವಾಗಿ ಬಿಡೆನ್ ವಿರುದ್ಧ ತನಿಖೆಗಳು, ದೋಷಾರೋಪಣೆಯ ಗಂಭೀರ ಪ್ರಯತ್ನಗಳು ನಡೆಯುವ ಸಾಧ್ಯತೆಯಿದೆ. ಸ್ವಲ್ಪವಾದರೂ ಜನಪರವಾಗಿರುವ ಕನಿಷ್ಠ ವೇತನ ಏರಿಕೆ, ಬಡ ಕುಟುಬಗಳಿಗೆ ಆರೋಗ್ಯ ವಿಮೆ ವಿಸ್ತರಿಸುವ ಮತ್ತು ಮೆಡಿಕೇರ್,ಗಟ್ಟಿಗೊಳಿಸುವ ಬಿಡೆನ್ ಸರಕಾರದ ಕ್ರಮಗಳಿಗೆ ರಿಪಬ್ಲಿಕನ್ನರು ಅಡೆತಡೆಯನ್ನು ಒಡ್ಡಲಿದ್ದಾರೆ. ಹವಾಮಾನ ಬದಲಾವಣೆ ತಡೆಯುವ ಬಿಡೆನ್ ಕ್ರಮಗಳಿಗೂ ಕುತ್ತು ಕಾದಿದೆ. ಹಲವು ರಾಜ್ಯಗಳಲ್ಲಿ ಚುನಾವಣೆ ಜತೆಗೆ ಗರ್ಭಪಾತ ಹಕ್ಕು ಹಿಂದಿನ ಹಾಗೆ ಮುಂದುವರೆಸಬೇಕೆ ಎಂಬ ಜನಮತಸಂಗ್ರಹದಲ್ಲಿ ವ್ಯಕ್ತವಾದ ಬೆಂಬಲವನ್ನು ಜಾರಿ ಮಾಡಲು ಹೊರಟ ಡೆಮೊಕ್ರಾಟಿಕ್ ಸರಕಾರಗಳ ಕ್ರಮಗಳಿಗೂ ಅಡ್ಡಿ ಮಾಡುವ ಸಾಧ್ಯತೆಯಿದೆ. ‘ಡೆಮೊಕ್ರಾಟಿಕ್ ಚುನಾವಣಾ ಮೋಸ’ದ ವಿರುದ್ಧ ಪ್ರಚಾರ ಹಿಂಸಾಚಾರ ಪ್ರಚೋದಿಸುವ ಪ್ರಯತ್ನ ನಡೆಯಲಿದೆ. ಜನರ ಜೀವನ ವೆಚ್ಚ ಏರಿಕೆ ಕಡಿಮೆ ಮಾಡುವ ಗಂಭೀರ ಕ್ರಮಗಳನ್ನು ನಿರ್ಲಕ್ಷ ಮಾಡಿ ಬಿಡೆನ್ ಉಕ್ರೇನ್ ಹುಚ್ಚಾಟ ಮುಂದುವರೆಸಿದರೆ ಇತರ ಹಲವು ದೇಶಗಳಂತೆ ಯು.ಎಸ್ ನಲ್ಲೂ ಉಗ್ರ ಬಲಪಂಥ ಗಟ್ಟಿಗೊಂಡು ಪ್ರಜಾಪ್ರಭುತ್ವಕ್ಕೆ ತೀವ್ರ ಅಪಾಯ ಕಾಡಲಿದೆ. ಎರಡು ಪಕ್ಷಗಳ ಹಣಾಹಣಿ ಸಹ ಯು.ಎಸ್ ಸಮಾಜ ಮತ್ತು ಪ್ರಜಾಪ್ರಭುತ್ವದಲ್ಲಿ ತೀವ್ರ ಬಿಕ್ಕಟ್ಟು ತರಬಹುದು.
ಯು.ಎಸ್ ಚುನಾವಣಾ ಫಲಿತಾಂಶಗಳಿಂದ ಕೆಲವು ಸಕಾರಾತ್ಮಕ ಪರಿಣಾಮಗಳು ಸಹ ಆಗುವ ಸಾಧ‍್ಯತೆಗಳಿವೆ. ರಿಪಬ್ಲಿಕನ್ ಪಕ್ಷ ಬಿಡೆನ್ ಗೆ ತೊಂದರೆ ಕೊಡಲು ಉಕ್ರೇನ್ ಯುದ್ಧ ಬಜೆಟ್ ಗೂ ಸಮಸ್ಯೆ ಮಾಡಬಹುದು. ಉಕ್ರೇನ್ ಯುದ್ಧ ದೀರ್ಘಕಾಲ ಎಳೆಯುವ ಬಿಡೆನ್ ನೀತಿ ಬದಲಾಯಿಸಬೇಕಾಗಬಹುದು. ಅಂತರ್ದೇಶೀಯ ಆರ್ಥಿಕ ವಿಷಯಗಳ ಮೇಲೆ ಗಮನ ಹರಿಸಲು ಮತ್ತು ಅದಕ್ಕೆ ಹಣ ಒದಗಿಸಲು, ಮತ್ತು ಅದನ್ನು ಉಲ್ಬಣಗೊಳಿಸುತ್ತಿರುವ ಉಕ್ರೇನ್ ಯುದ್ಧ ಮತ್ತು ರಶ್ಯಾ, ಚೀನಾಗಳ ವಿರುದ್ಧ ಆಕ್ರಾಮಕ ಆರ್ಥಿಕ ಯುದ್ಧದ ಧೋರಣೆ ಸಡಿಲಿಸಲು ಒತ್ತಡ ಬರಬಹುದು.
ಹಲವು ‘ಪ್ರಥಮ’ಗಳು
ಇವಲ್ಲದೆ, ಗವರ್ನರುಗಳ ಹುದ್ದೆಗೆ ಈ ಬಾರಿ ಚುನಾವಣೆ ನಡೆದ 35 ರಾಜ್ಯಗಳಲ್ಲಿ ಈ ವರೆಗೆ ಲಭ್ಯವಿರುವ ಫಲಿತಾಂಶಗಳ ಪ್ರಕಾರ 18 ಡೆಮೊಕ್ರಾಟರು ಗೆಲ್ಲಲಿದ್ದಾರೆ. 17 ರಿಪಬ್ಲಿಕನ್ನರ ಪಾಲಾಗಲಿದೆ. 3 ರಾಜ್ಯಗಳಲ್ಲಿ ಡೆಮೊಕ್ರಾಟರು ರಿಪಬ್ಲಿಕನ್ನರಿಂದ, 1 ರಾಜ್ಯದಲ್ಲಿ ರಿಪಬ್ಲಿಕನ್ನರು ಡೆಮೊಕ್ರಾಟರಿಂದ ಗವರ್ನರ್ ಹುದ್ದೆ ಕಸಿದಿದ್ದಾರೆ, ಈ ಚುನಾವಣೆಗಳ ನಂತರ, ಒಟ್ಟು 50 ರಾಜ್ಯಗಳಲ್ಲಿ 25 ರಾಜ್ಯಗಳಲ್ಲಿ ರಿಪಬ್ಲಿಕನ್ ಮತ್ತು 24 ರಾಜ್ಯಗಳಲ್ಲಿ ಡೆಮೊಕ್ರಾಟ್ ಗವರ್ನರ್ ಗಳು ಅಧಿಕಾರ ನಡೆಸಲಿದ್ದಾರೆ. ಒಂದು ರಾಜ್ಯದಲ್ಲಿ ಚಿತ್ರ ಇನ್ನೂ ಸ್ಪಷ್ಟವಿಲ್ಲ.
ಈ ಬಾರಿಯ ಫಲಿತಾಂಶಗಳ ಕೆಲವು ‘ಪ್ರಥಮ’ಗಳು ಗಮನಾರ್ಹವಾಗಿವೆ. ಮಹಿಳಾ ಗವರ್ನರ್ ಗಳ ಸಂಖ್ಯೆ ಚಾರಿತ್ರಿಕ ಅತ್ಯಧಿಕವಾಗಿದೆ. ಹಿಂದಿನ 2004ರ ರೆಕಾರ್ಡ್ 9ನ್ನು ಮುರಿದು ಮಹಿಳಾ ಗವರ್ನರುಗಳ ಸಂಖ್ಯೆ 12ನ್ನು ಮುಟ್ಟಿದೆ. ಕಳೆದ ಬಾರಿಯ 7 ಮಹಿಳಾ ಗವರ್ನರುಗಳು ಪುನರಾಯ್ಕೆಯಾಗಿದ್ದಾರೆ. ಹಿಂದಿನ ಗವರ್ನರ್ ರಾಜೀನಾಮೆಯ ನಂತರ ಮಧ್ಯದಲ್ಲಿ ಅಧಿಕಾರ ವಹಿಸಿಕೊಂಡ ನ್ಯೂಯಾರ್ಕ್ ಗವರ್ನರ್ ಚುನಾಯಿತರಾಗಿದ್ದಾರೆ. ಎರಡು ರಾಜ್ಯಗಳಲ್ಲಿ ಮೊದಲ ಬಾರಿಗೆ ಮಹಿಳಾ ಗವರ್ನರ್ ಚುನಾಯಿತರಾಗಿದ್ದಾರೆ. ಈ ಎರಡು ರಾಜ್ಯಗಳಲ್ಲಿ ಗವರ್ನರ್ ಮತ್ತು ಲೆಫ್ಟಿನೆಂಟ್ ಗವರ್ನರ್ ಇಬ್ಬರೂ ಮಹಿಳೆಯರಾಗಿರುವುದು ಇನ್ನೊಂದು ‘ಪ್ರಥಮ’. ಎರಡು ಗವರ್ನರ್ ಗಳು ಯು.ಎಸ್ ನಲ್ಲೇ ಮೊದಲ ಸಲಿಂಗಿ ಮಹಿಳಾ ಗವರ್ನರ್ ಗಳು ಎಂಬುದು ಇನ್ನೊಂದು ವಿಶೇಷತೆ. ಲಾಸ್ ಏಂಗೆಲಿಸ್ ನಲ್ಲಿ ಮೊದಲ ಮಹಿಳಾ (ಅದೂ ಆಫ್ರಿಕನ್ ಅಮೆರಿಕನ್) ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆಕೆ ಶತಕೋಟ್ಯಾಧಿಪತಿ ಆಗಿರುವ 10 ಕೋಟಿ ಡಾಲರುಗಳನ್ನು ಪ್ರಚಾರಕ್ಕೆ ಸುರಿದ ರಿಪಬ್ಲಿಕನ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿಗಳು ಸಾಮಾನ್ಯವಾಗಿ ಬಿಳಿಯರಾಗಿರುತ್ತಾರೆ. ಜನಾಂಗೀಯ ಅಲ್ಪಸಂಖ್ಯಾತ (ಆಪ್ರಿಕನ್-ಅಮೆರಿಕ್ ಅಥವಾ ಲ್ಯಾಟಿನೊ) ಅಭ್ಯರ್ಥಿಗಳನ್ನು ಈವರೆಗೆ ಡೆಮೊಕ್ರಾಟಿಕ್ ಪಕ್ಷ ಮಾತ್ರ ಟಿಕೆಟ್ ಕೊಟ್ಟು ಗೆಲ್ಲಿಸುತ್ತಿತ್ತು. ಮೊದಲ ಬಾರಿಗೆ ರಿಪಬ್ಲಿಕನ್ ಪಕ್ಷದಿಂದ ತಲಾ ಒಬ್ಬ ಆಪ್ರಿಕನ್-ಅಮೆರಿಕ್ ಮತ್ತು ಲ್ಯಾಟಿನೊ ಅಭ್ಯರ್ಥಿಗಳು ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. ಹಲವು ರಾಜ್ಯಗಳಿಂದ ಸೆನೆಟರ್, ಪ್ರತಿನಿಧಿ ಸಭೆ ಸದಸ್ಯ, ಸೆಕ್ರೆಟರಿ ಆಫ್ ಸ್ಟೇಟ್, ಅಟಾರ್ನಿ ಜನರಲ್, ನಗರಗಳ ಮೇಯರ್ ಆಗಿ ಮೊದಲ ಬಾರಿಗೆ ಮಹಿಳೆಯರು ಅಥವಾ ಜನಾಂಗೀಯ ಅಥವಾ ಲೈಂಗಿಕ ಅಲ್ಪಸಂಖ‍್ಯಾತರು ಆಯ್ಕೆಯಾಗಿದ್ದಾರೆ. ಅತ್ಯಂತ ಕಿರಿಯ ಅಂದರೆ 25 ವರ್ಷದ ಯುವಕ ಪ್ರತಿನಿಧಿ ಸಭೆಗೆ ಫ್ಲಾರಿಡಾದಿಂದ ಆಯ್ಕೆಯಾಗಿದ್ದಾರೆ.