ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಭಾನುವಾರ, ಜೂನ್ 22ರ ಮುಂಜಾವಿನ ಸಮಯದಲ್ಲಿ (ವಾಷಿಂಗ್ಟನ್ನಲ್ಲಿ ಶನಿವಾರ ಸಂಜೆ), ಅಮೆರಿಕಾ ಇಸ್ರೇಲ್ ಮತ್ತು ಇರಾನ್ನ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಧಿಕೃತವಾಗಿ ಭಾಗವಹಿಸಿದೆ ಎಂದು ಘೋಷಿಸಿದರು. ಅವರು ಇರಾನಿನ ಮೂರು ಅಣುಶಕ್ತಿ ಸಂಬಂಧಿಸಿದ ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಹೇಳಿದರು.
“ನಾವು ಇರಾನಿನ ಮೂರು ಅಣುಸ್ಧಳಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ಗಳ ಮೇಲೆ ಅತ್ಯಂತ ಯಶಸ್ವಿಯಾಗಿ ದಾಳಿ ನಡೆಸಿದ್ದೇವೆ. ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪರಿಧಿಯಿಂದ ಹೊರಬಂದಿವೆ. ಮುಖ್ಯ ಗುರಿಯಾದ ಫೋರ್ಡೋ ಸ್ಥಳದ ಮೇಲೆ ಯುದ್ಧವಿಮಾನದಲ್ಲಿ ಪೂರ್ಣವಾಗಿ ತುಂಬಿದ್ದ ಎಲ್ಲ ಬಾಂಬುಗಳನ್ನು ಹಾಕಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ ಮರಳುತ್ತಿವೆ. ನಮ್ಮ ಮಹಾನ್ ಅಮೆರಿಕನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನಲ್ಲಿ ಇದನ್ನು ಮಾಡಲು ಸಾಧ್ಯವಾಗುವ ಇನ್ನೊಂದು ಸೇನೆ ಇಲ್ಲ. ಈಗ ಶಾಂತಿಯ ಸಮಯ! ಈ ವಿಷಯದತ್ತ ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಪೋಸ್ಟ್ ಮಾಡಿದರು.
ಜೂನ್ 21, ಶನಿವಾರ ಬೆಳಿಗ್ಗೆ, ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅಮೆರಿಕದ ಪಶ್ಚಿಮ ಕರಾವಳಿಯಿಂದ ಪೆಸಿಫಿಕ್ ದಿಕ್ಕಿನಲ್ಲಿ ಹಲವಾರು B-2 ಬಾಂಬರ್ಗಳು ಹಾರುತ್ತಿದ್ದವು. ಈ ಬಾಂಬರ್ಗಳು 30,000 ಪೌಂಡ್ ತೂಕದ ಬಂಕರ್-ಬಸ್ಟರ್ ಬಾಂಬ್ಗಳನ್ನು ಕೊಂಡೊಯ್ಯಲು ಯೋಗ್ಯವಾದ ಏಕೈಕ ವಿಮಾನಗಳಾಗಿವೆ. ಟ್ರಂಪ್ ಆಡಳಿತವು ಈ ಹಿಂದೆ ಇರಾನ್ನ ಭೂಗರ್ಭದಲ್ಲಿರುವ ಅಣು ಸ್ಥಾವರಗಳ ಮೇಲೆ ಇವುಗಳನ್ನು ಬಳಸುವ ಸಾಧ್ಯತೆಯ ಬಗ್ಗೆ ಚರ್ಚಿಸಿತ್ತು. ಈ ವಿಮಾನಯಾನ ನಡೆಯುತ್ತಿದ್ದಾಗ ಟ್ರಂಪ್ ಅವರು ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಮುಂದಿನ ಕ್ರಮಗಳನ್ನು ಚರ್ಚಿಸುತ್ತಿದ್ದರು.
ಇದನ್ನೂ ಓದಿ: ಭಾರತ ಇರಾನ್ ಪರ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ ಒತ್ತಾಯ
ಅಮೆರಿಕದ ದಾಳಿಯ ನಂತರ, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿ ಸಿಬಿಎಸ್ ನ್ಯೂಸ್ಗೆ ನೀಡಿದ ಮಾಹಿತಿಯಲ್ಲಿ, ದಾಳಿಯಲ್ಲಿ ಅಮೆರಿಕ ನಿರ್ಮಿತ GBU-57 MOP (Massive Ordnance Penetrators) ಬಳಸಲಾಗಿದೆ. “ಪ್ರತಿಯೊಂದು ಗುರಿಗೆ ಎರಡು MOP ಬಳಸಲಾಗಿದೆ,” ಎಂದು ಅವರು ಹೇಳಿದರು.
ಈ ದಾಳಿಗಳ ಗುರಿಯಾಗಿದ್ದ ಅಣು ಸೌಲಭ್ಯಗಳಿಗೆ ಉಂಟಾದ ನಷ್ಟದ ವಿವರಗಳು ಇನ್ನೂ ಬಹಿರಂಗವಾಗಿಲ್ಲ, ಮತ್ತು ಇರಾನ್ ಸರ್ಕಾರ ಈ ದಾಳಿಗಳ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದಾಗ್ಯೂ, ಇರಾನಿನ ಟಿವಿ ಮೂಲಗಳ ಪ್ರಕಾರ, ಈ ಮೂರು ಸ್ಥಳಗಳನ್ನು ಮುಂಜಾನೆಯೇ ಖಾಲಿ ಮಾಡಲಾಗಿತ್ತು.
ಅಮೆರಿಕದ ದಾಳಿಗೆ ವ್ಯಾಪಕ ವಿರೋಧ:
“ಈ ದಾಳಿ ಒಂದು ಸಮರ್ಥಿಸಿಲಾಗದ, ಕಾನೂನುಬಾಹಿರ ಮತ್ತು ಅತ್ಯಂತ ಅಪಾಯಕರವಾದ ಆಕ್ರಮಣ ಕ್ರಿಯೆಯಾಗಿದೆ,” ಎಂದು ವೆನೆಜುವೆಲಾದ ಸರ್ಕಾರ ಹೇಳಿದೆ. ಬೊಲಿವೇರಿಯನ್ ಗಣರಾಜ್ಯವು ಈ ದಾಳಿಯನ್ನು ಸಂಯುಕ್ತರಾಷ್ಟ್ರ ಘೋಷಿತ ಸಂವಿಧಾನ, ಅಂತಾರಾಷ್ಟ್ರೀಯ ಕಾನೂನುಗಳು ಹಾಗೂ ರಾಷ್ಟ್ರಗಳ ಸ್ವಾಯತ್ತತೆಯ ತತ್ವಗಳ ತೀವ್ರ ಉಲ್ಲಂಘನೆ ಎಂದು ಕರೆದಿದೆ.
“ನಾವು ಇರಾನ್ ಜನರೊಂದಿಗೆ ನಮ್ಮ ಐಕ್ಯತೆಯನ್ನು ಮತ್ತೊಮ್ಮೆ ಪುಷ್ಠಿಪಡಿಸುತ್ತೇವೆ ಮತ್ತು ಶಾಂತಿ, ಸ್ವಾಯತ್ತತೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ರಕ್ಷಣೆಯತ್ತ ನಮ್ಮ ಬದ್ಧತೆಯನ್ನು ಪ್ರಕಟಿಸುತ್ತೇವೆ.”

ಕ್ಯೂಬಾದ ಅಧ್ಯಕ್ಷ ಮಿಗೆಲ್ ಡಿಯಾಸ್-ಕನೆಲ್ X (ಹಿಂದಿನ Twitter) ನಲ್ಲಿ ಹೀಗಂದುಕೊಂಡರು: “ಅಮೆರಿಕವು ಇರಾನ್ನ ಅಣು ಸೌಲಭ್ಯಗಳ ಮೇಲೆ ನಡೆಸಿದ ಬಾಂಬ್ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಮಧ್ಯಪ್ರಾಚ್ಯದಲ್ಲಿ ಘರ್ಷಣೆಯನ್ನು ಮತ್ತಷ್ಟು ಉಲ್ಬಣಗೊಳಿಸುವ ಅಪಾಯಕರ ಕ್ರಮವಾಗಿದೆ. ಈ ಆಕ್ರಮಣ ಕ್ರಿಯೆ ಸಂಯುಕ್ತ ರಾಷ್ಟ್ರಗಳ ಘೋಷಣೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಘೋರ ಉಲ್ಲಂಘನೆ ಹಾಗೂ ಮಾನವೀಯತೆಯನ್ನು ಮುಗ್ಗರಿಸುವ ಅಪಾಯವನ್ನುಂಟು ಮಾಡುತ್ತದೆ.”
ಅಮೆರಿಕದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಇಂಟರ್ ರಿಲಿಜಿಯಸ್ ಫೌಂಡೇಶನ್ ಫಾರ್ ಕಮ್ಯೂನಿಟಿ ಆರ್ಗನೈಜೇಶನ್ (IFCO) ನಿರ್ದೇಶಕಿ ಕ್ಲೌಡಿಯಾ ಡೆ ಲಾ ಕ್ರೂಜ್ ಅವರು ಹೀಗಂದಿದ್ದಾರೆ: “’ಈಗ ಶಾಂತಿಯ ಸಮಯ’ ಎಂದು ಹೇಳುತ್ತಿರುವಾಗ ಬಾಂಬ್ ಬಿಸುಡುವುದು, ಮನೆಗೆ ಬೆಂಕಿ ಹಚ್ಚಿ ಅದನ್ನು ಸುಧಾರಣೆಯೆಂದು ಹೇಳಿದಂತೆ. ಅಮೆರಿಕಾ – ಇಸ್ರೇಲ್ ಇರಾನ್ ಮೇಲೆ ಬಾಂಬ್ ಹಾಕುತ್ತಿರುವುದು ‘ಭದ್ರತೆ’ಗಾಗಿ ಅಲ್ಲ. ಈ ದಾಳಿಗಳು ಅಮೆರಿಕದ ಪ್ರಭುತ್ವವನ್ನು ವಿಸ್ತರಿಸಲು ನಡೆಯುತ್ತಿರುವ ಆಕ್ರಮಣಗಳು. ಅಫ್ಘಾನಿಸ್ತಾನ ನೆನಪಿಸಿಕೊಳ್ಳಿ. ಇರಾಕ್ ನೆನಪಿಸಿಕೊಳ್ಳಿ. ಅವರು ಸುಳ್ಳು ಹೇಳುತ್ತಾರೆ, ಜನರು ಸತ್ತು ಹೋಗುತ್ತಾರೆ. ಯುದ್ಧವು ಶ್ರೀಮಂತರ ವ್ಯಾಪಾರ.”
ಇರಾನ್ ಅಣ್ವಸ್ತ್ರ ಹೊಂದಿಲ್ಲ ಮತ್ತು ಹೊಂದುವ ಹತ್ತಿರದಲ್ಲಿಲ್ಲವೆಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೇನ್ಸಿ (ಐಎಇಎ) ಮತ್ತು ಕೇವಲ ಮೂರು ತಿಂಗಳ ಹಿಂದೆ ಯು.ಎಸ್ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾದ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದಾರೆ. ಆದರೆ ಅತ್ಯಂತ ವಿಡಂಬನಕಾರಿ ಸಂಗತಿಯೆಂದರೆ ಅಣ್ವಸ್ತ್ರ ಹೊಂದಿರುವ ಮತ್ತು ಇಡೀ ಪಶ್ಚಿಮ ೇಶ್ಯಾದ ಶಾಂತಿಗೆ ಬೆದರಿಕೆ ಹಾಕಿರುವ ಎರಡು ದೇಶಗಳು (ಯು.ಎಸ್ ಮತ್ತು ಇಸ್ರೇಲ್) ಇರಾನ್ ಅಣ್ವಸ್ತ್ರ ಬೆದರಿಕೆ ವಿರುದ್ಧ ಕಾರ್ಯಾಚರಣೆಗೆ ತೊಡಗಿವೆ.
ಟ್ರಂಪ್ ಇನ್ನಷ್ಟು ದಾಳಿಗಳ ಬೆದರಿಕೆ:
ದಾಳಿಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಅವರು ಇರಾನ್ನ್ನು “ಮಧ್ಯಪ್ರಾಚ್ಯದ ಬಲೀಶನ” ಎಂದು ವರ್ಣಿಸಿದರು. ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ “ಅತ್ಯಂತ ಸಮನ್ವಯದ ತಂಡದಂತೆ ಕೆಲಸ ಮಾಡಿದಕ್ಕಾಗಿ” ಧನ್ಯವಾದ ಹೇಳಿದರು.
“ಇಸ್ರೇಲ್ಗಾಗಿ ಈ ಭೀಕರ ಭೀತಿಯನ್ನು ನಿರ್ಮೂಲಗೊಳಿಸಲು ನಾವು ದೀರ್ಘ ಪ್ರಯಾಣ ಮಾಡಿದ್ದೇವೆ” ಎಂದು ಟ್ರಂಪ್ ಹೇಳಿದರು. ಅವರು ಇರಾನ್ಗೆ “ಇನ್ನೂ ಭಯಾನಕ ವಿಪತ್ತು” ಉಂಟಾಗಬಹುದು ಎಂದು ಎಚ್ಚರಿಸಿದರು ಹಾಗೂ ಶಾಂತಿಯ ಅಗತ್ಯವಿದೆ .”ಇನ್ನೂ ಅನೇಕ ಗುರಿಗಳು ಬಾಕಿಯಿವೆ ಎಂಬುದನ್ನು ನೆನಪಿಡಿ.” ಎಂದು ಒತ್ತಾಯಿಸಿದರು.
ಇದನ್ನೂ ನೋಡಿ: ಪುಸ್ತಕ ಬಿಡುಗಡೆ | ಆರದ ಹೋರಾಟದ ಕಿಚ್ಚು | ಪ್ರಬೀರ್ ಪುರಕಾಯಸ್ತ
