ಅಮೆರಿಕಾದ ಸೇಬಿಗೆ ಆಮದು ಸುಂಕ ಕಡಿತದ ಲಾಭ, ಭಾರತದ ಸೇಬು ಬೆಳೆಗಾರರಿಗೆ ದುರಂತ

ಜಿ-20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭೇಟಿಯ ಮುನ್ನಾದಿನ ಅಮೆರಿಕದ ಬಾದಾಮಿಸೇಬುಆಕ್ರೋಟ್‍(ವಾಲ್ನಟ್ಸ್) ಮೇಲಿನ ಆಮದು
ಸುಂಕವನ್ನು 35% ದಿಂಧ 15% ಕ್ಕೆ ಇಳಿಸಲಾಯಿತು. ಇದಲ್ಲದೆ ಮಸೂರ್‌ ಬೇಳೆಗೆ ಆಮದು ಸುಂಕದಿಂದ ವಿನಾಯ್ತಿ ನೀಡಲಾಗಿದೆ. ಇದಕ್ಕೆ ಮೊದಲು 20%  ಸುಂಕವಿತ್ತು.

ರೈತರು ಹವಾಮಾನ ಬದಲಾವಣೆ ಮತ್ತು ಕನಿಷ್ಠ ಬೆಂಬಲ ಬೆಲೆ ಇಲ್ಲದ ಮುಕ್ತ ಮಾರುಕಟ್ಟೆಯ ಸುಲಿಗೆಗಳಿಂದ ಉಂಟಾಗಿರುವ ಬೆಲೆಗಳ ಸಂಕಟಗಳಿಂದ ಈಗಾಗಲೇ ಹೋರಾಡುತ್ತಿರುವ ಸಮಯದಲ್ಲಿ ಈ ಆಮದು ಸುಂಕ ಕಡಿತಗಳು ತಮ್ಮ ಜೀವನದ ಮೇಲೆ ದುರಂತ ಪರಿಣಾಮವನ್ನು ಬೀರುತ್ತವೆ, ಇದು ರೈತರಿಗೆ ದುರಂತ ತಂದಿರುವ ಕ್ರಮ ಎಂದು ಸೇಬು, ಬಾದಾಮಿ,ಆಕ್ರೋಟ್ ಮತ್ತು ಮಸೂರ್ ಬೆಳೆಗಾರರು ಹಾಗೂ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಸೇಬು ಬೆಳಗಾರರ ಒಕ್ಕೂಟದ ಅಧ್ಯಕ್ಷ ಸೋಹನ್ ಠಾಕೂರ್, ಆಮದು ಸುಂಕ ಕಡಿತದ ತಕ್ಷಣದ ಪರಿಣಾಮವಾಗಿ  ಅಗ್ಗದ ವಾಷಿಂಗ್ಟನ್ ಸೇಬುಗಳನ್ನು ನಮ್ಮ ಮಾರುಕಟ್ಟೆಗಳಿಗೆ ತಂದು ಸುರುವಲಿದ್ದಾರೆ ಎಂದು ಹೇಳಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 6,000 ಕೋಟಿ ರೂಪಾಯಿಗಳಷ್ಟು ಸೇಬುಗಳನ್ನು ಸುರಿಯಲಾಗುವುದು ಎಂಬ ನಿರೀಕ್ಷೆಯಿದೆ. ಹಿಮಾಚಲ ಪ್ರದೇಶದ ರೈತರು ಪ್ರತಿ ವರ್ಷ ಇಷ್ಟು ಮೌಲ್ಯದ ಸೇಬುಗಳನ್ನು ಉತ್ಪಾದಿಸುತ್ತಾರೆ. ಅಮೆರಿಕನ್‍ ಸರಕಾರದಿಂದ ಭಾರೀ ಸಬ್ಸಿಡಿ ಪಡೆಯುತ್ತಿರುವ ಅವರ ಹೆಚ್ಚಿನ ಗುಣಮಟ್ಟದ ಅಗ್ಗದ ಸೇಬುಗಳಿಂದಾಗಿ ಭಾರತದ  ರೈತರಿಗೆ ಸೇಬು ಮಾರುಕಟ್ಟೆ  ಕಣ್ಮರೆಯಾಗುತ್ತದೆ ಎಂದು ಸೋಹನ್‍ ಠಾಕುರ್ ಹೇಳಿದ್ದಾರೆ.

ವಾಷಿಂಗ್ಟನ್ ಸೇಬು ಬೆಳೆಗಾರರು ಭಾರತದ ರೈತರಿಗೆ ಹೋಲಿಸಿದರೆ ಅಸಾಧಾರಣ ಸಬ್ಸಿಡಿಗಳನ್ನು ಪಡೆಯುತ್ತಿದ್ದಾರೆ. ಅಮೆರಿಕದ ಸೇಬು ಬೆಳೆಗಾರರು ಅಲ್ಲಿನ ಒಕ್ಕೂಟ ಸರಕಾರ ಮತ್ತು ಪ್ರಾತೀಯ ಸರ್ಕಾರಗಳಿಂದ ಸುಮಾರು 32% ಸಬ್ಸಿಡಿಗಳನ್ನು ಪಡೆಯುತ್ತಾರೆ ಎಂದು ದತ್ತಾಂಶವು ಸೂಚಿಸುತ್ತದೆ. ಆದರೆ ಭಾರತ ಸರಕಾರ ತನ್ನ ಸೇಬು ಬೆಳೆಗಾರರ ಬಗ್ಗೆ ಸತತವಾಗಿ ನಿರಾಸಕ್ತಿಯ ನಿಲುವನ್ನೇ ಪ್ರದರ್ಶಿಸಿದೆ ಎನ್ನುವ ಠಾಕುರ್,  “1991 ರಲ್ಲಿ, ನಾವು ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕೃಷಿ ಉಪಕರಣಗಳಂತಹ ವಿವಿಧ ವಿಷಯಗಳ ಮೇಲೆ ಒಟ್ಟಾರೆಯಾಗಿ 9% ಸಬ್ಸಿಡಿಗಳನ್ನು ಪಡೆಯುತ್ತಿದ್ದೆವು. ಇದು 2023 ರಲ್ಲಿ 2.5% ಕ್ಕೆ ಇಳಿದಿದೆ” ಎನ್ನುತ್ತಾರೆ.

ಇದನ್ನೂ ಓದಿ:ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಘೋಷಣೆಗಳು ಎಲ್ಲಿ ಹೋದವು?

ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ತೋಟಗಳಲ್ಲಿ ಸೇಬುಗಳನ್ನು ಬೆಳೆಯುತ್ತವೆ, ಹಿಮಾಚಲ ಪ್ರದೇಶದಲ್ಲಿ ಮೂರು ಲಕ್ಷ ಕುಟುಂಬಗಳು
ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಏಳು ಲಕ್ಷ ಕುಟುಂಬಗಳು ಸೇಬು ಕೃಷಿಯನ್ನು ಅವಲಂಬಿಸಿವೆ.  ಆದರೆ ಅಮೆರಿಕಾದಲ್ಲಿ ದೊಡ್ಡ-ದೊಡ್ಡ ಕಾರ್ಪೊರೇಟ್‍ಗಳು ಕೃಷಿಯನ್ನು ವಹಿಸಿಕೊಂಡಿವೆ. ಮೋದಿ ಸರಕಾರದ ಈ ಕ್ರಮದಿಂದಾಗಿ  ಅಮೆರಿಕ ಸಂಯುಕ್ತ ಸಂಸ್ಥಾನಗಳ ಕೇವಲ 1,400 ಸೇಬು ಬೆಳೆಗಾರರು ಭಾರತದ ಬಹುಪಾಲು ಸೇಬು ವ್ಯಾಪಾರದ ಪಾಲನ್ನು ಕಿತ್ತುಕೊಳ್ಳುತ್ತಾರೆ ಎಂಬ ಸಂಗತಿಯತ್ತ ಅವರು ಗಮನ ಸೆಳೆಯುತ್ತ ನಮ್ಮ ಸರಕಾರ ಕನಿಷ್ಟ ನಮ್ಮ ರೈತರ ಹಿತಾಸಕ್ತಿಯನ್ನಾದರೂ ಪರಿಗಣಿಸಬೇಕಾಗಿತ್ತು ಎನ್ನುತ್ತಾರೆ.

ಅಸಮಾನ ನೆಲೆಯ ಮಾರಕ ಸ್ಪರ್ಧೆ-ಕೃಷಿ ವಿಜ್ಞಾನಿ

ಹೌದು, ಭಾರತದ ಸರಕಾರ ಈ ದೇಶದ ಅಂಚಿಗೆ  ತಳ್ಳ್ಪಟ್ಟಿರುವ ರೈತರ ಹಿತಗಳನ್ನು ಕಾಪಾಡಲು ಡಬ್ಲ್ಯುಟಿಒ ವ್ಯವಸ್ಥೆಯ ಅಡಿಯಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿತ್ತು ಎನ್ನುತ್ತಾರೆ ಜವಹರಲಾಲ್‍ ವಿಶ್ವವಿದ್ಯಾಲಯದ  ಕೃಷಿವಿಜ್ಞಾನಿ ವಿಕಾಸ್‍ ರಾವಲ್.

“ಕೃಷಿಯಲ್ಲಿ ‘ಪ್ರತೀಕಾರದ ಆಮದು ಸುಂಕ’ಗಳ ತರ್ಕ ನನಗೆ  ಅರ್ಥವಾಗುತ್ತಿಲ್ಲ. ನಮ್ಮ ರೈತರು ಮತ್ತು  ಅಮೆರಿಕದ ರೈತ ನಡುವೆ ಸಮಾನ ನೆಲೆಯ ಸ್ಪರ್ಧೆ ಸಾಧ್ಯವಿಲ್ಲ. ಅಲ್ಲಿ ನೂರಾರು ಎಕರೆಗಳಷ್ಟು ವಿಶಾಲವಾದ ಭೂಮಿಯಲ್ಲಿ ಅವರು ದೊಡ್ಡ ಪ್ರಮಾಣದ ಡಿ-ಕಪಲ್ಡ್ ಸಬ್ಸಿಡಿಗಳನ್ನು ಪಡೆಯುತ್ತಾರೆ, ಅಂದರೆ ಅವರು ಜಮೀನಿನ ವಿಸ್ತಾರಕ್ಕೆ ಅನುಗುಣವಾಗಿ ನಗದು ಸಬ್ಸಿಡಿ ಪಡೆಯುತ್ತಾರೆ. ಅಲ್ಲಿಯ ರೈತ ಯುಎಸ್ ಸರ್ಕಾರದಿಂದ $50,000 ಪಡೆಯುತ್ತಾನೆ ಎಂದು ಭಾವಿಸೋಣ. ಅವನು ಅದನ್ನು ನೇರವಾಗಿ ತನ್ನ ಮೂಲಸೌಕರ್ಯಕ್ಕೆ ಹಾಕಬಹುದು ಅಥವಾ ಯಂತ್ರೋಪಕರಣಗಳನ್ನು ಖರೀದಿಸಬಹುದು. ಅವರು ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವುದರಿಂದ ಅವರ ಉತ್ಪಾದಕತೆಯು ಸಾಟಿಯಿಲ್ಲದ್ದು. ಭಾರತದಲ್ಲಿನ ಸಣ್ಣ ಮತ್ತು ಅಂಚಿನ ರೈತರು ದೊಡ್ಡ ಯುಎಸ್‍ ಭೂಮಾಲೀಕರನ್ನು ಎದುರಿಸಬೇಕೆಂಧು ಹೇಗೆ ತಾನೇ  ನಿರೀಕ್ಷಿಸಬಹುದು? ಈ ಪ್ರಸ್ತುತ ಆಮದು ಸುಂಕಗಳು ಪ್ರಮುಖ ರಫ್ತು ವಸ್ತುಗಳನ್ನು ಬೆಳೆಯುವ ಎಲ್ಲಾ ರೈತರನ್ನು ಬಾಧಿಸುತ್ತವೆ ”ಎಂದು ವಿಕಾಸ್‍ ರಾವಲ್‍ ಹೇಳುತ್ತಾರೆ.

ದ್ವಿದಳ ಧಾನ್ಯಗಳ, ಅದರಲ್ಲೂ ಮಸೂರ್ ದಾಲ್‍ ರೈತರ ಬಗ್ಗೆ ಹೇಳುತ್ತ, “ಯುಎಸ್ ಮತ್ತು ಕೆನಡಾ ಭಾರತ ಮತ್ತು ಬಾಂಗ್ಲಾದೇಶಕ್ಕೆ ಹೆಚ್ಚಿನ ಮಸೂರ್ ಅನ್ನು ಬೆಳೆಯುತ್ತವೆ. ಪಶ್ಚಿಮ ಗೋಳಾರ್ಧದಲ್ಲಿ ಇದರ ಬಳಕೆ ಬಹಳ ಕಡಿಮೆ. ಯುರೋಪಿನಲ್ಲಿ ಸಹ, ಇದನ್ನು ಬಡವರ ಆಹಾರವೆಂದು ಪರಿಗಣಿಸಲಾಗುತ್ತದೆ. ನಮ್ಮ ರೈತರು ಬಹಳ ಕಡಿಮೆ ಪ್ರಮಾಣದಲ್ಲಿ ಮಸೂರ್ ದಾಲ್ ಅನ್ನು ಬೆಳೆಯುತ್ತಾರೆ, ಏಕೆಂದರೆ ಅದನ್ನು ಕನಿಷ್ಟ ಬೆಂಬಲ ಬೆಲೆಗಳಲ್ಲಿ ಮೂಲಕ ಸಂಗ್ರಹಿಸಲಾಗುತ್ತಿಲ್ಲ ಮತ್ತು ಮುಕ್ತ ಮಾರುಕಟ್ಟೆ ಬೆಲೆಗಳು ಲಾಭದಾಯಕವಾಗಿಲ್ಲ” ಎಂದು ವಿಕಾಸ್‍ ರಾವಲ್‍ ಕೂಡ ಹೇಳುತ್ತಾರೆ.

ಆಮದು ಸುಂಕ ಕಡಿತವನ್ನು ಕೂಡಲೇ ಹಿಂತೆಗೆದುಕೊಳ್ಳಲು ತರಿಗಾಮಿ ಆಗ್ರಹ

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ  ಸೇಬು ಬೆಳಗಾರರು ಮತ್ತು ಸಣ್ಣ ವ್ಯಾಪಾರಿಗಳು ಕಳೆದ ಕೆಲವು ವರ್ಷಗಳಿಂದ ಹಲವಾರು ತೊಂದರೆಗಳಿಂದ ನರಳುತ್ತಿರುವಾಗ, ಭಾರತ ಸರಕಾರ ಈ ರೀತಿ ವಿದೇಶೀರಿಗಾಗಿ ಆಮದು ಸುಂಕಗಳನ್ನು ಇಳಿಸಿರುವುದು ಅವರ ಸಂಕಟಗಳನ್ನು ಉಲ್ಬಣಗೊಳಿಸುತ್ತದೆ. ಇದನ್ನು,  ಸಾಲಗ್ರಸ್ತರಾಗಿರುವ, ತಮ್ಮ ಲಾಗುವಾಡುಗಳ ವೆಚ್ಚಗಳನ್ನೂ ಭರಿಸಲಾರದ ಬೆಳೆಗಾರರ ಹಿತ ಕಾಪಾಡಲು ತಕ್ಷಣವೇ ಹಿಂಪಡೆಯಬೇಕು, ಬದಲಿಗೆ ಸೇಬು ಮತ್ತು ಆಕ್ರೋಟ್‍ಗಳ ಆಮದಿನ ಮೇಲೆ 100% ಸುಂಕ ವಿಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಸಿಪಿಐ(ಎಂ) ಮುಖಂಡ ಮಹಮ್ಮ್‍ ಯುಸುಫ್‍ ತರಿಗಾಮಿ ಆಗ್ರಹಿಸಿದ್ದಾರೆ.

“ ಸೇಬು ನಮ್ಮ ಅರ್ಥವ್ಯವಸ್ಥೆಯ ಬೆನ್ನೆಲುಬು. ಮಾರುಕಟ್ಟೆ ಮಧ್ಯಪ್ರವೇಶ ಸ್ಕೀಮ್‍(ಎಂಐಎಸ್)ನ್ನು ಪುನರುಜ್ಜೀವನ ಗೊಳಿಸಬೇಕು, ಫಲದಾಯಕ ಬೆಲೆ ಕೊಡಬೇಕು, ನಿಯಂತ್ರಿಯ ಬೆಳೆ ವಿಮಾ ಯೋಜನೆ, ಸಮಗ್ರ ಸಾಲ ಮನ್ನಾ ಪ್ಯಾಕೇಜ್‍ ಮತ್ತು ರಸಗೊಬ್ಬರ, ಕೀಟನಾಶಕ ಮುಂತಾದವುಗಳ ಮೇಲೆ ಸಬ್ಸಿಡಿಗಳನ್ನು ಕೊಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *