ವಸಂತರಾಜ ಎನ್.ಕೆ.
ಫೆಬ್ರುವರಿ 21, ಕೆಂಪು ಪುಸ್ತಕ ದಿನ ಮತ್ತೆ ಬಂದಿದೆ. ಫೆಬ್ರುವರಿ 21 ಎರಡು ಮಹತ್ವದ ಘಟನೆಗಳು ನಡೆದ ದಿನ. ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಪ್ರಕಟಿಸಿದ ಮತ್ತು “ಅಂತರರಾಷ್ಟ್ರೀಯ ಮಾತೃಭಾಷಾ ದಿನ”. ಈ ವರ್ಷದ ಕೆಂಪು ಪುಸ್ತಕ ದಿನವನ್ನು ಸಾಮ್ರಾಜ್ಯಶಾಹಿ-ವಿರೋಧದ ವಿಷಯದ ಸುತ್ತ ಆಚರಿಸಲಾಗುತ್ತಿದೆ. ಇದು ಅತ್ಯಂತ ದೃಢ ಸಾಮ್ರಾಜ್ಯಶಾಹಿ-ವಿರೋಧಿ ನಾಯಕನಾಗಿದ್ದ ಫಿಡೆಲ್ ಕ್ಯಾಸ್ಟ್ರೊ ಅವರ ಶತಮಾನೋತ್ಸವ ವರ್ಷ ಸಹ. ಯು.ಎಸ್
ಫೆಬ್ರುವರಿ 21, ಕೆಂಪು ಪುಸ್ತಕ ದಿನ ಮತ್ತೆ ಬಂದಿದೆ. ಇದು ಏಳನೇ ಕೆಂಪು ಪುಸ್ತಕ ದಿನ. ಫೆಬ್ರುವರಿ 21 ಎರಡು ಮಹತ್ವದ ಘಟನೆಗಳು ನಡೆದ ದಿನ. ಮೊದಲನೆಯದು – 178 ವರ್ಷಗಳ ಹಿಂದೆ ಈ ದಿನವೇ ಇಬ್ಬರು ಯುವ ಚಿಂತಕ-ಹೋರಾಟಗಾರರು – ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡೆರಿಕ್ ಏಂಗೆಲ್ಸ್ – ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಪ್ರಕಟಿಸಿದರು. ಕಮ್ಯುನಿಸ್ಟ್ ಪ್ರಣಾಳಿಕೆ ಸಮಾಜವನ್ನು ಸಮಗ್ರವಾಗಿ ವೈಜ್ಞಾನಿಕವಾಗಿ ಅರ್ಥೈಸಿ ಅದನ್ನು ಆಮೂಲಾಗ್ರವಾಗಿ ಬದಲಾಯಿಸಲು ಪ್ರೇರೇಪಣೆ ಕೊಡುವ ಪುಸ್ತಕವಾಗಿದೆ. ಇದು ಕಾರ್ಮಿಕರ ಕ್ರಾಂತಿಕಾರಿ ಮುಂಚೂಣಿಯ ಕೈಪಿಡಿಯಾಗಿದ್ದು, ಬೈಬಲ್, ಕುರಾನ್ ಬಿಟ್ಟರೆ ಮೂರನೇ ಅತಿ ಹೆಚ್ಚು ಪ್ರತಿ ಮಾರಾಟ ಕಂಡ ಮತ್ತು ಅತಿ ಹೆಚ್ಚು ಭಾಷೆಗಳಿಗೆ ಅನುವಾದವಾದ ಕೃತಿ. ಅತ್ಯಂತ ಹೆಚ್ಚು ಭಾಷೆಗಳಿಗೆ ಅನುವಾದವಾದ ಕೃತಿ ಇದು.
ಎರಡನೆಯದು – ಈ ದಿನವನ್ನು 2002ರಿಂದ ವಿಶ್ವಸಂಸ್ಥೆಯ ಕರೆಯ ಮೇರೆಗೆ “ಅಂತರರಾಷ್ಟ್ರೀಯ ಮಾತೃಭಾಷಾ ದಿನ”ವಾಗಿಯೂ ಆಚರಿಸಲಾಗುತ್ತಿದೆ. ಈ ದಿನವನ್ನು 1948ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಉರ್ದು ಭಾಷೆಯ ಹೇರಿಕೆಯ ವಿರುದ್ಧ ಮತ್ತು ಬಾಂಗ್ಲಾ ಭಾಷಾ ಸಂರಕ್ಷಣೆಗೆ ನಡೆದ ಚಳುವಳಿಯನ್ನು ನೆನಪಿಸಲು ಆಯ್ದುಕೊಳ್ಳಲಾಗಿದೆ. ಆ ದಿನ ಡಾಕ್ಕಾ ವಿವಿಯ ಐದು ವಿದ್ಯಾರ್ಥಿಗಳು ಹುತಾತ್ಮರಾಗಿದ್ದರು. ಇದು ಜಗತ್ತಿನಲ್ಲಿ ಮಾತೃಭಾಷೆಯ ಮಹತ್ವ ಮತ್ತು ಎಲ್ಲ ಭಾಷೆಗಳ ಸಮಾನತೆ ತಿಳಿಸುವ ಹಾಗೂ ಭಾಷಾ ಬಹುತ್ವ ವೈವಿಧ್ಯತೆಯನ್ನು ಸಂಭ್ರಮಿಸುವ ದಿನ ಸಹ ಆಗಿದೆ.

ಸಮಾಜವನ್ನು ಆಮೂಲಾಗ್ರವಾಗಿ ಬದಲಾಯಿಸಲು ದುಡಿಯುವ ಜನರ ಮನಸ್ಸಿನ ಮೇಲೆ ಬಿಗಿ ಹಿಡಿತ ಸಾಧಿಸಿರುವ ಆಳುವ ವರ್ಗಗಳ ಆಶಯಗಳು ಮತ್ತು ಚಿಂತನೆಗಳ ವಿರುದ್ಧ ಸಮರ ಹೂಡುವ ಅಗತ್ಯವಿದೆ. ಇದಲ್ಲದೆ ಎಡ-ಪ್ರಗತಿಪರ ಆಶಯಗಳು ಚಿಂತನೆಗಳು ದುಡಿಯುವ ಜನರ ‘ಕಾಮನ್ ಸೆನ್ಸ್’ ಆಗಬೇಕು. ಇದಕ್ಕೆ ಅವರ ಮಾತೃಭಾಷೆಯಲ್ಲಿ ‘ಚಿಂತನೆಗಳ ಸಮರ’ ಮತ್ತು ಕ್ರಾಂತಿಕಾರಿ ವಿಚಾರಗಳನ್ನು ಮಂಡಿಸುವ ಸರಳ ಪುಸ್ತಕಗಳನ್ನು ವ್ಯಾಪಕವಾಗಿ ಓದಿಸುವ ಅಗತ್ಯವಿದೆ. ಹೀಗೆ ‘ಕಮ್ಯುನಿಸ್ಟ್ ಪ್ರಣಾಳಿಕೆ’ ಮತ್ತು ‘ಮಾತೃಭಾಷಾ” ದಿನಗಳ ಸಂಗಮವಾದ ಈ ದಿನ ಮಹತ್ವದ್ದು. ದುಡಿಯುವ ಜನರಿಗೆ ‘ಮಾತೃಭಾಷೆ’ಯಾದ ವರ್ಗ ಹೋರಾಟ ಸಹ ಈ ಸಂಗಮವನ್ನು ಬಿಂಬಿಸುತ್ತದೆ.
ಸಾಮ್ರಾಜ್ಯಶಾಹಿ-ವಿರೋಧದ ದಿನ
2020ರಲ್ಲಿ ಭಾರತದ ಲೆಫ್ಟ್ ವರ್ಡ್ ಸೇರಿದಂತೆ ಕೆಲವು ಎಡ ಪ್ರಕಾಶಕರು ಫೆಬ್ರುವರಿ 21ನ್ನು ‘ಕೆಂಪು ಪುಸ್ತಕ ದಿನ’ವಾಗಿ ಆಚರಿಸಬೇಕೆಂದು ನಿರ್ಧರಿಸಿದರು. ಅಂದು ಜಗತ್ತಿನಾದ್ಯಂತ ತಮ್ಮ ಭಾಷೆಯಲ್ಲಿ ಜನರು ತಮ್ಮ ಮಾತೃಭಾಷೆಯಲ್ಲಿ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಸಾಮೂಹಿಕವಾಗಿ ಸಾರ್ವಜನಿಕವಾಗಿ ಓದಬೇಕು ಎಂದು ಕರೆ ಕೊಟ್ಟರು. ಮೊದಲ ವರ್ಷ ಕೆಲವು ಎಡ ಪ್ರಕಾಶಕರು, ಲೇಖಕರು, ಬುದ್ಧಿಜೀವಿಗಳು, ಎಡ ಗುಂಪುಗಳ ಜನ ಭಾಗವಹಿಸಿದರು. ಇವೇ ಎಡ ಪ್ರಕಾಶಕರು ಮುಂದೆ ಎಡ ಪ್ರಕಾಶಕರ ಅಂತರಾಷ್ಟ್ರೀಯ ಒಕ್ಕೂಟ (IULP – International Union of Left Publishers) ರಚಿಸಿದರು.
ಭಾರತದ ಸಿಪಿಐ(ಎಂ) 2021ರಲ್ಲಿ ತನ್ನ ಘಟಕಗಳಿಗೆ ‘ಕೆಂಪು ಪುಸ್ತಕ ದಿನ’ ಆಚರಿಸಬೇಕು ಎಂದು ಕರೆ ಕೊಡುವ ಮೂಲಕ ಇದಕ್ಕೆ ವ್ಯಾಪಕ ಸಾಮೂಹಿಕ ರೂಪ ಸಿಕ್ಕಿತು. ಆ ಮೇಲೆ ಲ್ಯಾಟಿನ್ ಅಮೆರಿಕ, ಆಫ್ರಿಕಾ, ಯುರೋಪಿನಲ್ಲೂ .ಹಲವು ಎಡ ಸಂಘಟನೆಗಳು, ಚಳುವಳಿಗಳು, ಪಕ್ಷಗಳು ಈ ದಿನವನ್ನು ಆಚರಿಸಲಾರಂಭಿಸಿವೆ. ಕಳೆದ 6 ವರ್ಷಗಳಲ್ಲಿ ಹೆಚ್ಚೆಚ್ಚು ದೇಶಗಳಲ್ಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜನ ಚಳುವಳಿಗಳು, ಜನಸಂಘಟನೆಗಳು, ಎಡ ಗುಂಪುಗಳು, ಎಡ ಚಳುವಳಿಗಳು, ಎಡ ಪಕ್ಷಗಳು ‘ಕೆಂಪು ಪುಸ್ತಕ ದಿನ’ವನ್ನು ತಮ್ಮದಾಗಿಸಿಕೊಂಡರು. IULP ಸಹ 50ಕ್ಕೂ ಹೆಚ್ಚು ಎಡ ಪ್ರಕಾಶಕರನ್ನು ಒಳಗೊಂಡಿದ್ದು, ಕರ್ನಾಟಕದ ಕ್ರಿಯಾ ಮಾಧ್ಯಮ ಸಹ ಅದರ ಸದಸ್ಯನಾಗಿದೆ. 2022ರಿಂದ ಕೆಂಪು ಪುಸ್ತಕ ದಿನವನ್ನು ಕರ್ನಾಟಕದಲ್ಲಿ ಸಹ ಆಚರಿಸಲಾಗುತ್ತಿದೆ. ಕೆಂಪು ಪುಸ್ತಕವನ್ನು ಮೇ ದಿನವನ್ನು ಕಾರ್ಮಿಕರ ಹೋರಾಟದ ಜಾಗತಿಕ ದಿನವಾಗಿ ಆಚರಿಸಿದಂತೆ, ಕೆಂಪು ಪುಸ್ತಕದ ದಿನವನ್ನು ಅವರ ‘ಕ್ರಾಂತಿಕಾರಿ ಚಿಂತನೆಗಳ’ ಜಾಗತಿಕ ದಿನವಾಗಿ ಮಾಡುವ ಪ್ರಯತ್ನ ನಡೆದಿದೆ.
ಇದನ್ನೂ ಓದಿ: ಚೆನ್ನೈ | ತಮಿಳುನಾಡು ಚುನಾವಣೆ ಸ್ಥಾನ ಹಂಚಿಕೆಗೆ ಶೀಘ್ರ ಸಮಿತಿ ರಚನೆ
ಈ ವರ್ಷದ ಕೆಂಪು ಪುಸ್ತಕ ದಿನವನ್ನು ಸಾಮ್ರಾಜ್ಯಶಾಹಿ-ವಿರೋಧದ ವಿಷಯದ ಸುತ್ತ ಆಚರಿಸಲಾಗುತ್ತಿದೆ. ಇದು ಅತ್ಯಂತ ದೃಢ ಸಾಮ್ರಾಜ್ಯಶಾಹಿ-ವಿರೋಧಿ ನಾಯಕನಾಗಿದ್ದ ಫಿಡೆಲ್ ಕ್ಯಾಸ್ಟ್ರೊ ಅವರ ಶತಮಾನೋತ್ಸವ ವರ್ಷ ಸಹ. IULP 2026ರ ಕ್ಯಾಸ್ಟ್ರೋ ಕ್ಯಾಲೆಂಡರ್ ಪ್ರಕಟಿಸಿದೆ. ಯು.ಎಸ್ ಸಾಮ್ರಾಜ್ಯಶಾಹಿ ಇತ್ತೀಚಿನ ವರ್ಷಗಳಲ್ಲಿ ತನ್ನ ಆರ್ಥಿಕ-ಮಿಲಿಟರಿ ಪ್ರಾಬಲ್ಯಕ್ಕೆ ಯಜಮಾನಿಕೆಗೆ ಸವಾಲೊಡ್ಡುವ ದೇಶಗಳ ನಾಯಕರ-ಸರಕಾರಗಳ ಮತ್ತು ಜನತೆಯ ಮೇಲೆ ಮಿಲಿಟರಿ ದಾಳಿಯನ್ನು ಹೆಚ್ಚಿಸಿದೆ. ಹಲವು (ಮಿಲಿಟರಿ ಮಾತ್ರವಲ್ಲ ಆರ್ಥಿಕ) ಯುದ್ಧಗಳು, ನರಮೇಧಗಳು, ವಿಶ್ವವನ್ನು ಸುಡುತ್ತಿದ್ದು ಮೂರನೇ ಮಹಾಯುದ್ಧದ ಅಪಾಯ ಕಾಡುತ್ತಿದೆ. ಈ ಸನ್ನಿವೇಶದಲ್ಲಿ ಸಾಮ್ರಾಜ್ಯಶಾಹಿಯ ಆಕ್ರಾಮಕತೆಗೆ ಪ್ರತಿರೋಧ ಒಡ್ಡಿ ಸೋಲಿಸಬೇಕಾದರೆ, ಅದರ ಹುಟ್ಟು, ವಿಕಾಸಗಳ ಸ್ಥೂಲ ಇತಿಹಾಸ ಹಾಗೂ ಈಗಿನ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಕನ್ನಡದಲ್ಲಿ ಈ ಸಾಮ್ರಾಜ್ಯಶಾಹಿ-ವಿರೋಧಿ “ಕೆಂಪು ಪುಸ್ತಕ ದಿನ”ದ ವ್ಯಾಪಕ ಓದಿಗಾಗಿ “ಯು.ಎಸ್ ಸಾಮ್ರಾಜ್ಯಶಾಹಿ : ಭಾರತದ ಜನತೆಯ ಶತ್ರು” ಎಂಬ ಕಿರುಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.
“ಯು.ಎಸ್ ಸಾಮ್ರಾಜ್ಯಶಾಹಿ : ಭಾರತದ ಜನತೆಯ ಶತ್ರು”
ಈ ಪುಸ್ತಕ ಯು.ಎಸ್ ಸಾಮ್ರಾಜ್ಯಶಾಹಿಯ ಈಗಿನ ಸ್ವರೂಪದ ಮುಖ್ಯ ಗುಣಲಕ್ಷಣಗಳನ್ನು ಪರಿಚಯಿಸುತ್ತದೆ. ಜಗದಗಲಕ್ಕೂ ನಿರಂತರ ಸಂಘರ್ಷ, ಹಿಂಸಾಚಾರ, ಸಾವು-ನೋವು, ನರಮೇಧ, ಯುದ್ಧಗಳ ಮೂಲ ಕಾರಣ ಯು.ಎಸ್ ಸಾಮ್ರಾಜ್ಯಶಾಹಿಯೇ. ಅದು ಇಡೀ ಜಗತ್ತಿನಲ್ಲಿ ಆರ್ಥಿಕ ಸಾಮ್ರಾಜ್ಯ ಸ್ಥಾಪಿಸಿ ಶೋಷಣೆ, ಲೂಟಿ ನಡೆಸುತ್ತಿದೆ. ಜಗತ್ತಿನ ಎಲ್ಲ (ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ) ದೇಶಗಳಲ್ಲಿ ಹಸಿವು, ಬಡತನ. ಅನಭಿವೃದ್ಧಿಗೆ ಮೂಲ ಕಾರಣ ಸಹ ಅದೇ. “ಸಾಮ್ರಾಜ್ಯಶಾಹಿಯು ಬಂಡವಾಳಶಾಹಿಯ ಅತ್ಯುನ್ನತ ಘಟ್ಟ” ಎಂಬ ಲೆನಿನ್ ಅವರ ಅರ್ಥೈಸುವಿಕೆಯ ಸಾರವನ್ನು ಪುಸ್ತಕ ನಿರೂಪಿಸುತ್ತದೆ. ಪಶ್ಚಿಮ ಯುರೋಪಿನ ದೇಶಗಳ ಐದು ಶತಮಾನಗಳ ವಸಾಹತುಶಾಹಿ ಲೂಟಿ, ಶೋಷಣೆಯಿಂದ ಹಿಂಡಿದ ಆದಿಮ ಬಂಡವಾಳ, ಬಂಡವಾಳಶಾಹಿ ವ್ಯವಸ್ಥೆಯ ಹುಟ್ಟು, ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಪ್ರತಿಪಾದಿಸುತ್ತದೆ.

ಬಂಡವಾಳಶಾಹಿಯ ಕೊನೆಯ ಘಟ್ಟವೇ ಸಾಮ್ರಾಜ್ಯಶಾಹಿ. ಎರಡನೇ ಮಹಾಯುದ್ಧದ ನಂತರ ಯು.ಎಸ್ ಸಾಮ್ರಾಜ್ಯಶಾಹಿಯ ಬೆಳವಣಿಗೆಯಾಗಿದೆ. ಅದಕ್ಕಿಂತ ಮೊದಲು ಪಶ್ಚಿಮ ಯುರೋಪಿನ ವಸಾಹತುಶಾಹಿದೇಶಗಳು ಸಾಮ್ರಾಜ್ಯಶಾಹಿಯತ್ತ ಸಾಗಿದ್ದವು. ಎರಡು ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಬಣಗಳ ನಡುವೆ ಜಗತ್ತನ್ನು ಹಂಚಿಕೊಳ್ಳುವ ಸಂಘರ್ಷದಲ್ಲೇ ಎರಡು ಮಹಾಯುದ್ಧಗಳಾದವು. ಸಾಮ್ರಾಜ್ಯಶಾಹಿಯ ಕುರಿತು ಲೆನಿನ್ ಅವರ ಮುಂಗಾಣ್ಕೆಯ ಬೆಳಕಿನಲ್ಲಿ ನಂತರದ ಸಾಮ್ರಾಜ್ಯಶಾಹಿಯ ಮೂರು ಹಂತಗಳ ಕುರಿತು, ಜನತೆಯ ಬದುಕಿನ ಮೇಲೆ ಅದರ ಪರಿಣಾಮಗಳ ಕುರಿತು ಮತ್ತು ಯು.ಎಸ್ ಸಾಮ್ರಾಜ್ಯಶಾಹಿ ಭಾರತದ (ಮಾತ್ರವಲ್ಲ ಇಡೀ ಜಗತ್ತಿನ) ಜನತೆಯ ಶತ್ರು ಎಂಬ. ಅರಿವನನ್ನು ಪುಸ್ತಕ ಕಟ್ಟಿಕೊಡುತ್ತದೆ. ಇದರ ಜತೆಗೆ ಸಾಮ್ರಾಜ್ಯಶಾಹಿಗೆ ಅಗಾಧ ಮಿಲಿಟರಿ-ಆರ್ಥಿಕ ಶಕ್ತಿ ಇದ್ದರೂ, ಅದು ಅಬೇಧ್ಯವೂ ಅಲ್ಲ, ಅಜೇಯವೂ ಅಲ್ಲ. ಜಗತ್ತಿನಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧ ಪ್ರತಿರೋಧ ಮತ್ತು ವಿಜಯದ ದೀರ್ಘ ಪರಂಪರೆ ಮತ್ತು ಅದನ್ನು ಮುಂದಕ್ಕೊಯ್ಯುವ ಅಗತ್ಯದ ಬಗೆಗೂ ಪುಸ್ತಕ ಅರಿವು ಮೂಡಿಸುತ್ತದೆ.
ಇದರ ಜತೆ ಪುಸ್ತಕದ ಸಾರವನ್ನು ಸರಳವಾಗಿ ದಾಟಿಸುವ ಮತ್ತು ಪುಸ್ತಕವನ್ನು ಓದುವಂತೆ ಪ್ರೇರೇಪಿಸುವ ವಿಡಿಯೋ/ಅಡಿಯೋ ತಯಾರಿಸಲಾಗುವುದು.
ಕರ್ನಾಟಕದಲ್ಲಿ 100 ಕೇಂದ್ರಗಳಲ್ಲಿ ಕೆಂಪು ಪುಸ್ತಕ ದಿನ 2026
ಕರ್ನಾಟಕದಲ್ಲಿ ಕೆಂಪು ಪುಸ್ತಕ ದಿನವನ್ನು ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕವಾಗಿ ಆಚರಿಸುವ ಪ್ರಯತ್ನಗಳು ನಡೆದಿವೆ. ಕನಿಷ್ಟ ನೂರು ಕೇಂದ್ರಗಳಲ್ಲಿ ಪುಸ್ತಕ ಬಿಡುಗಡೆ, ಓದು ಮತ್ತು 10 ಸಾವಿರ ಪ್ರತಿಗಳ ಮಾರಾಟವನ್ನು ಯೋಜಿಸಲಾಗಿದೆ. ಈ ದಿನದ ಆಚರಣೆಯ ಅಂಗವಾಗಿ ಪ್ರತಿ ಸ್ಥಳದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
- ಪ್ರಗತಿಪರ ಲೇಖಕರು, ಬುದ್ಧೀಜಿವಿ ಅಥವಾ ಹೋರಾಟಗಾರರಿಂದ ಪುಸ್ತಕ ಬಿಡುಗಡೆ
- ಪುಸ್ತಕದ ಸಾರವನ್ನು ಸರಳವಾಗಿ ದಾಟಿಸುವ ಮತ್ತು ಪುಸ್ತಕವನ್ನು ಓದುವಂತೆ ಪ್ರೇರೇಪಿಸುವ ವಿಡಿಯೋ/ಅಡಿಯೋ ಪ್ರದರ್ಶನ
- ಸಾಮ್ರಾಜ್ಯಶಾಹಿ-ವಿರೋಧಿ ಹಾಡು, ಕವನ
- ಪುಸ್ತಕದ ಪರಿಚಯದ ಮಾತು
- ಆಯ್ದ 2-3 ಭಾಗಗಳ ಓದು
- ಪುಸ್ತಕ ಮಾರಾಟ ಅಭಿಯಾನ ಆರಂಭ
ತಮಿಳುನಾಡಿನಲ್ಲಿ ‘ಭಾರತೀ ಪುಸ್ತಕಾಲಯಂ’ ನೇತೃತ್ವದಲ್ಲಿ, 10 ಸಾವಿರ ಕೆಂದ್ರಗಳಲ್ಲಿ “ಕೂಲಿ-ಕೆಲಸ ಮತ್ತು ಬಂಡವಾಳ” ಪುಸ್ತಕದ ಸಾರ್ವಜನಿಕ ಓದು ಮತ್ತು 1 ಲಕ್ಷ ಪ್ರತಿಗಳ ಮಾರಾಟದ ಮೂಲಕ ಕೆಂಪು ಪುಸ್ತಕ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಕೇರಳದಲ್ಲಿ ‘ಚಿಂತಾ ಪುಸ್ತಕ’ ನೇತೃತ್ವದಲ್ಲಿ 38 ಸಾವಿರ ಕೇಂದ್ರಗಳಲ್ಲಿ ಲೆನಿನ್ ಅವರ “ಸಾಮ್ರಾಜ್ಯಶಾಹಿ – ಬಂಡವಾಳಶಾಹಿಯ ಅತ್ಯುನ್ನತ ಘಟ್ಟ” ಪುಸ್ತಕವನ್ನು ಓದಲಾಗುವುದು.
ಇದನ್ನೂ ನೋಡಿ: “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media
