ಗುರುರಾಜ ದೇಸಾಯಿ
ಹುಬ್ಬಳ್ಳಿ ಬಂತು ಇಳೀರಿ.. ಎಂದು ಕಂಡಕ್ಟರ್ ಹೇಳಿದಾಕ್ಷಣ ಸರ್… ಈ ಬಸ್ ಗೋಕುಲ್ ಬಸ್ ಸ್ಟ್ಯಾಂಡ್ ಗೆ ಹೊಕ್ಕೈತೇನ್ರಿ… ಮತ್ತ ಹೊಸೂರು ಬಸ್ ಸ್ಟ್ಯಾಂಡ್ ಗೂ ಹೊಕ್ಕತನ್ರಿ… ಜನರ ಚಡಪಡಿಕೆ, ಗೊಂದಲ, ಗೋಳಾಟ ಆರಂಭವಾಗುತ್ತದೆ.
ಹೌದು ಹುಬ್ಬಳ್ಳಿಯಲ್ಲಿ ಮೂರು ಬಸ್ ನಿಲ್ದಾಣಗಳಿವೆ. ಹಳೆ ಬಸ್ ನಿಲ್ದಾಣ, ಹೊಸೂರು ರೋಡ್ ಬಸ್ ನಿಲ್ದಾಣ, ಗೋಕುಲ್ ರೋಡ್ ಬಸ್ ನಿಲ್ದಾಣಗಳಿವೆ. ಹಳೆ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ, ಹೊಸೂರು ರೋಡ್ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಸಾರಿಗೆ, ಗೋಕುಲ್ ರೋಡ್ ಬಸ್ ನಿಲ್ದಾಣದಲ್ಲಿ ದಕ್ಷಿಣ ಕರ್ನಾಟಕ ಭಾಗದ ಸಾರಿಗೆ ಸಿಗುತ್ತದೆ. ಪ್ರಯಾಣಿಕರು ಸರಿಯಾದ ಮಾಹಿತಿ ಸಿಗದೆ ಇಳಿದುಬಿಟ್ಟರೆ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ. ಮಾಹಿತಿ ಕೇಳಿದರೂ ಸರಿಯಾಗಿ ಮಾಹಿತಿ ನೀಡದ ಸಿಬ್ಬಂದಿ ವರ್ಗ, ಇಲ್ಲಿ ಬರಲ್ರಿ ಆ ಬಸ್ ಸ್ಟ್ಯಾಂಡ್ ಗೆ ಹೋಗ್ರಿ ಎಂದು ಗತ್ತಿನಲ್ಲಿ ಉತ್ತರಿಸುತ್ತಾರೆ. ಇಲ್ಲಿಂದ ಆ ಬಸ್ ಸ್ಟ್ಯಾಂಡ್ ಗೆ ಬಸ್ ಇಲ್ಲನ್ರಿ.. ಅಲ್ಲಿಗೆ ಹೋಗೋದು ಹ್ಯಾಂಗ್ರಿ ಅಂತ ಕೇಳಿದ್ರೆ.. ಇಲ್ಲಿ ಬಸ್ ಇಲ್ರಿ ಇಲ್ಲಿಂದ ನಡ್ಕೊಂಡು ಹೋಗಬೇಕ್ರಿ, ಇಲ್ಲಾ ಅಂದ್ರ ಅಟೋಗೆ ಹೋಗಬೇಕ್ರಿ.. ಎಂಬ ಉಡಾಫೆಯ ಉತ್ತರ ಸಿಬ್ಬಂದಿಗಳಿಂದ ಬರುತ್ತದೆ.
ಸಿಬ್ಬಂದಿಗಳ ನಿರ್ಲಕ್ಯದ ಉತ್ತರ, ತಡವಾಗಿ ಬಿಡುತ್ತದೆ ಎಂಬ ಗೊಂದಲಕ್ಕೆ ಸಿಲುಕಿದ ಪ್ರಯಾಣಿಕನ ಕಣ್ಣು ಹುಡುಕುವುದು ಆಟೋವನ್ನ, ಪ್ರಯಾಣಿಕರ ಪರಿಸ್ಥಿತಿ ಹಾಗೂ ಸಿಬ್ಬಂದಿಯ ಉಡಾಫೆಯ ಉತ್ತರವನ್ನು ಬಂಡವಾಳವಾಗಿಸಿಕೊಂಡಿರುವ ಆಟೋದವರು ಬರೋಬ್ಬರಿ 100 ರಿಂದ 150 ರೂ ಜೇಬಿಗಿಳಿಸಿ ಬಿಡುತ್ತಾರೆ.
ಆಟೋ ಹತ್ತಿದ ತಕ್ಷಣವೇ ನೀವು ಯಾವ ಊರ ಬಸ್ ಹತ್ತ ಬೇಕ್ರಿ ಅಂತ ಕೇಳುವ ಆಟೋ ಚಾಲಕರು, ಪ್ರಯಾಣಿಕರು ಉತ್ತರಿಸುತ್ತಿದ್ದಂತೆ “ಓ ಹೌದ್ರಾ.. ಆ ಊರಿಗೆ ಬಸ್ ಇಲ್ಲಿಂದ ಹೊಕ್ಕೈತಿ ಬರ್ರಿ ಎಂದಾಗ ” ಕೊಟ್ಟ ದುಡ್ಡಿಗೆ ದಾರಿ ಸಿಕ್ಕಿತ್ತಲ್ಲ ಎಂಬ ಸಮಾಧಾನ ಪ್ರಯಾಣಿಕರದ್ದಾಗಿರುತ್ತದೆ.
ಹುಬ್ಬಳ್ಳಿ ನಗರ ಬೆಳೆಯುತ್ತಿದೆ. ಬೆಳವಣಿಗೆಗೆ ತಕ್ಕಂತೆ ಬದಲಾಗುತ್ತಿದೆ. ಜನರ ಓಡಾಟವೂ ಹೆಚ್ಚುತ್ತಿರುವ ಕಾರಣ, ಮತ್ತು ಉಡುಪಿ, ಮಂಗಳೂರು, ಬೆಂಗಳೂರಿಗೆ ಹಾಗೂ ಮಹಾರಾಷ್ಟ್ರಕ್ಕೆ ಹೋಗಲು ಕೇಂದ್ರೀಯ ಸ್ಥಾನವಾದ ಕಾರಣ ಜನಸಂದಣಿ ಹೆಚ್ಚಾಗುತ್ತಲೇ ಇದೆ. ಆ ಕಾರಣಕ್ಕಾಗಿಯೇ ಮೂರು ಬಸ್ ನಿಲ್ದಾಣಗಳನ್ನು ಮಾಡಿದ್ದರೆ ಕನಿಷ್ಠ ಮಾಹಿತಿಯನ್ನು ನೀಡುವ ಕೆಲಸಗಳಾಗಬೇಕಿದೆ.
ಮೂರು ಬಸ್ ನಿಲ್ದಾಣದಲ್ಲಿ ಯಾವ ಬಸ್ ಎಲ್ಲಿಗೆ ಹೋಗುತ್ತೆ, ಎಲ್ಲಿ ಸಿಗುತ್ತೆ ಅಂತಾ ಗೊತ್ತಾಗುವುದಿಲ್ಲ. ಪ್ರಯಾಣಿಕರಿಗೆ ಇಷ್ಟೊಂದು ತೊಂದರೆ ಆದರೆ ಹೇಗೆ ಎಂದು ಸ್ಥಳೀಯ ನಿರ್ವಾಹಕ ಅಧಿಕಾರಿಯನ್ನು ಕೇಳಿದರೆ “ಬಸ್ ಹತ್ತೋರೋ ಹುಡುಕ್ತಾರೆ ಬಿಡಿ” ಎಂಬ ಗರ್ವದ ಉತ್ತರ ನಿಜಕ್ಕೂ ಬೇಸರಿಸಿತು. ಮೀಡಿಯಾದವರಿಗೆ ಹೀಗಾದರೆ ಸಾಮಾನ್ಯ ಪ್ರಯಾಣಿಕರಿಗೆ ಹೇಗೆ ಉತ್ತರಿಸುತ್ತೀರಿ ಸರ್? ಎಂದಿದಕ್ಕೆ ಮೇಲಾಧಿಕಾರಿಗಳನ್ನು ಕೇಳಿ ಎಂದು ಅಲ್ಲಿಂದ ಕಾಲ್ಕಿತ್ತ ಅಧಿಕಾರಿಯ ವರ್ತನೆಗೆ ಜನ ಬೇಸರಿಸಿಕೊಂಡರು.
ಇನ್ನದಾರೂ ಹಿರಿಯ ಅಧಿಕಾರಿಗಳು ಈ ಗೊಂದಲವನ್ನು ಸರಿ ಪಡಿಸಬೇಕಿದೆ. ಸಾರಿಗೆ ಇಲಾಖೆಯ ಹಿತಾಸಕ್ತಿಯನ್ನು ಮರೆತು ಖಾಸಗಿ ಆಟೋಗಳಿಗೆ ಲಾಭ ಮಾಡಿಕೊಡುತ್ತಿರುವ ಸಾರಿಗೆ ಸಿಬ್ಬಂದಿ ಇಂತಹ ತಪ್ಪುಗಳನ್ನು ಮಾಡದಂತೆ ಸರಕಾರ ಹಾಗೂ ಅಧಿಕಾರಿಗಳು ಎಚ್ವರಿಸಬೇಕಿದೆ.