ಬೆಂಗಳೂರು : ವಿವಾದ ಹುಟ್ಟುಹಾಕಿದ್ದ ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣವನ್ನು ಸಚಿವ ಮುನಿರತ್ನ ಕೈಬಿಟ್ಟಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಬಳಿಕ ಚಿತ್ರಕ್ಕೆ ಬ್ರೇಕ್ ಬಿದ್ದಿದೆ.
ಸೋಮವಾರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಕಥೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಸದ್ಯ ಈ ಚಿತ್ರವನ್ನು ಕೈ ಬಿಡಲಾಗಿದೆ. ಚಿತ್ರ ಮಾಡುವುದಿಲ್ಲ ಎಂದು ಶ್ರೀಗಳಿಗೆ ತಿಳಿಸಿದ್ದೇನೆ. ಉರಿಗೌಡ-ನಂಜೇಗೌಡ ವಿಚಾರದಲ್ಲಿ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಸುಳ್ಳು ಸುಳ್ಳು ಮಅಹಿತಿ ಇಟ್ಟುಕೊಂಡು ಸಿನೆಮಾ ಮಾಡಿದರೆ ಸಮುದಾಯಕ್ಕೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ ಈ ಸಿನೆಮಾ ಬಿಟ್ಟು ಬೇರೆ ಯಾವುದಾದರು ಮಾಡು ಎಂದು ಸ್ವಾಮೀಜಿ ಹೇಳಿದ್ದಾರೆ. ಹಾಗಾಗಿ ನಾನು ಈ ಸಿನಿಮಾವನ್ನು ಇಲ್ಲಿಗೆ ಕೈ ಬಿಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಕಪೋಲ ಕಲ್ಪಿತ ಪಾತ್ರಗಳಾದ ‘ಉರಿಗೌಡ-ನಂಜೇಗೌಡ’ ಮಹಾದ್ವಾರ ತೆರವು
ಕಪೋಲ ಕಲ್ಪಿತ ಪಾತ್ರಗಳಾದ ‘ಉರಿಗೌಡ-ನಂಜೇಗೌಡ’ ಹೆಸರಲ್ಲಿ ಚಿತ್ರ ನಿರ್ಮಾಣ ಮಾಡುವುದಕ್ಕೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಬಿಜೆಪಿ ಇತಿಹಾಸವನ್ನು ತಿರುಚಿ, ಸುಳ್ಳನ್ನು ಹೇಳಲು ಹೋರಟಿದೆ. ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡುತ್ತಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೋಮುಗಲಭೆ ಸೃಷ್ಟಿ ಮಾಡುತ್ತಿದೆ. ಟಿಪ್ಪು ಕುರಿತು ಸುಳ್ಳು ಪ್ರಚಾರವನ್ನು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.