ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯೊಂದರಲ್ಲಿರುವ ಬಾಲಕಿಯರ ವಸತಿ ಶಾಲೆಯ ಇಬ್ಬರು ಮಹಿಳಾ ಶಿಕ್ಷಕಿಯರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಸುಮಾರು 24 ವಿದ್ಯಾರ್ಥಿಗಳನ್ನು ಶಾಲೆಯ ಮೇಲ್ಛಾವಣಿ ಮೇಲೆ ಕೂಡಿ ಹಾಕಿ ಬೀಗ ಹಾಕಿದ್ದಲ್ಲದೆ, ಅವರನ್ನು ಬಿಡಬೇಕು ಎಂದರೆ ವರ್ಗಾವಣೆ ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ.
ಈ ಘಟನೆ ನಡೆದಿದ್ದು ಲಖಿಂಪುರ ಖೇರಿ ಜಿಲ್ಲೆಯ ಬೆಹಜಾಮ್ನಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ. ಗುರುವಾರ ರಾತ್ರಿ ಸುಮಾರು 24 ಹೆಣ್ಣುಮಕ್ಕಳನ್ನು ಇಬ್ಬರು ಶಿಕ್ಷಕರು, ಶಾಲೆಯ ಮೇಲ್ಛಾವಣಿಯಲ್ಲಿ ಕೂಡಿಹಾಕಿದ್ದರು. ಆದರೆ ಸ್ಥಳೀಯ ಪೊಲೀಸರು, ಅಧಿಕಾರಿಗಳು ಸೇರಿ, ಹುಡುಗಿಯರನ್ನು ಅಲ್ಲಿಂದ ಬಿಡಿಸಿ ವಾಪಸ್ ಕರೆದುಕೊಂಡು ಬಂದಿದ್ದಾರೆ.
ರಾತ್ರಿ 7 ಗಂಟೆಗೆ ಊಟದ ನಂತರ, ಶಾಲೆಯ ಛಾವಣಿಗೆ ಕರೆದೊಯ್ದು ಮೇಲಿಂದ ಕೆಳಗೆ ಬಾರದಂತೆ ಬಾಗಿಲು ಹಾಕಿ ಕೂಡಿಹಾಕಿದ್ದರು. ಭಯಭೀತರಾದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಳ್ಳಲಾರಂಭಿಸಿದರು. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯರನ್ನು ಶಿಕ್ಷಕರು ಕೂಡಿ ಹಾಕಿದ್ದನ್ನು ಮೊದಲು ಶಿಕ್ಷಣಾಧಿಕಾರಿಗೆ ಬಾಲಕಿಯರು ಇದ್ದ ಹಾಸ್ಟೆಲ್ನ ವಾರ್ಡನ್ ಲಲಿತಾ ಕುಮಾರಿ ಶಿಕ್ಷಣಾಧಿಕಾರಿ ಪಾಂಡೆ ಮತ್ತು ಹೆಣ್ಣುಮಕ್ಕಳ ಶಿಕ್ಷಣ ಜಿಲ್ಲಾ ಸಂಯೋಜಕಿ ರೇಣು ಶ್ರೀವಾತ್ಸವ್ ಗಮನಕ್ಕೆ ತಂದಿದ್ದಾರೆ. ಅವರು ತಕ್ಷಣ ಶಾಲೆಯ ಬಳಿ ಹೋಗಿದ್ದಾರೆ. ಹಲವು ತಾಸುಗಳ ಹೊತ್ತು ಅಲ್ಲೇ ಇದ್ದರು. ಬಳಿಕ ಸ್ಥಳಕ್ಕೆ ಮಹಿಳಾ ಪೊಲೀಸರು ಆಗಮಿಸಿದರು. ವಿದ್ಯಾರ್ಥಿಯರನ್ನು ಬಿಡುಗೊಡೆಗೊಳಿಸಿದ್ದಾರೆ.
ತಮ್ಮ ವರ್ಗಾವಣೆಯನ್ನು ತಪ್ಪಿಸಲು ಈ ತಂತ್ರ ಪ್ರಯೋಗ ಮಾಡಿದ್ದ ಶಿಕ್ಷಕಿಯರು ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ಅವರಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ತಿಳಿಸಿದ್ದಾರೆ. ಇಬ್ಬರು ಮಹಿಳಾ ಶಿಕ್ಷಕಿಯರ ಮೇಲೆ ವಿದ್ಯಾರ್ಥಿನಿಯರನ್ನು ಪ್ರಚೋದಿಸಿದ ಮತ್ತು ವಾರ್ಡನ್ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಹೊರಿಸಲಾಗಿದೆ.
ʻವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಶಿಕ್ಷಕಿಯರು, ಮೊದಲಿಗೆ ವಿದ್ಯಾರ್ಥಿಗಳನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ನಂತರ, ವರ್ಗಾವಣೆಯನ್ನು ವಿರೋಧಿಸಲು ಅವರನ್ನು ಒತ್ತಾಯಿಸಿದ್ದಾರೆ. ಹೀಗೆ ಮಾಡಿದರೆ ಅಧಿಕಾರಿಗಳು ಆದೇಶಗಳನ್ನು ರದ್ದುಗೊಳಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದರು‘ ಎಂದು ಲಖಿಂಪುರ ಖೇರಿ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.