ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿಗಳ ಅಮಾನತು: ಪ್ರಾಂಶುಪಾಲರ ಕ್ರಮಕ್ಕೆ ಎಸ್ಎಫ್ಐ ಖಂಡನೆ

ಮಂಗಳೂರು: ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ  ಘರ್ಷಣೆಯು ಮತೀಯ ತಿರುವನ್ನು ಪಡೆದಿತ್ತು. ಈ ಬಗ್ಗೆ ಇತ್ತಂಡಗಳು ಪರಸ್ಪರ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರತಿದೂರನ್ನು ನೀಡಿದ ಬಳಿಕ ಹೊಡೆದಾಟ ನಿರತ ವಿದ್ಯಾರ್ಥಿಗಳನ್ನು ಒಂದು ಕೋಮಿನ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಮಾನತುಗೊಳಿಸಿರುವ ಕ್ರಮವನ್ನು ಎಸ್‌ಎಫ್‌ಐ ಸಂಘಟನೆಯು ಖಂಡಿಸಿದೆ.

ಘರ್ಷಣೆ ನಡೆದ ಬಳಿಕ ವಿದ್ಯಾರ್ಥಿಗಳ ಹೆತ್ತವರನ್ನು ತರಿಸಿ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿತ್ತು. ಆದರೆ ಘಟನೆ ನಡೆದು ಕೆಲ ದಿನದ ನಂತರ ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಬ್ಬರನ್ನು ಮಾತ್ರ ಕಾಲೇಜಿನಿಂದ ಅಮಾನತುಗೊಳಿಸುವ ಮೂಲಕ ಮತೀಯ ತಾರತಮ್ಯ ಎಸಗಿರುವ ಕಾಲೇಜಿನ ಪ್ರಾಂಶುಪಾಲರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ರೀತಿ ಒಂದು ಸರಕಾರಿ ಕಾಲೇಜಿನ ಪ್ರಾಂಶುಪಾಲರು ಕೈಗೊಂಡಿರುವ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ), ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಬಲವಾಗಿ ವಿರೋಧಿಸಿದೆ.

ಈ ಬಗ್ಗೆ ಎಸ್ಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ವಿನೀತ್ ದೇವಾಡಿಗ ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷ ಮತೀಯ ರೂಪಪಡೆದಿರುವ ಬಗ್ಗೆ ಯಾವುದೇ ತಾರತಮ್ಯ ಎಸಗದೆ ಶಿಕ್ಷಣ ಇಲಾಖೆಯ ನೀತಿ ನಿಯಮಗಳಿಗೆ ಅನುಸಾರವಾಗಿ ಸೂಕ್ತ ಕ್ರಮಕೈಗೊಳ್ಳುವ ಬದಲಾಗಿ ಬಿಜೆಪಿ ಬೆಂಬಲಿತರ ಮಾರ್ಗದರ್ಶನದ ಅನುಸಾರವಾಗಿ ಕೇವಲ ಮುಸ್ಲಿಂ ಸಮುದಾಯ ಹಿನ್ನಲೆಯ ವಿದ್ಯಾರ್ಥಿಗಳ ಮೇಲಷ್ಟೇ ಕ್ರಮಕೈಗೊಂಡು ಅವರನ್ನು ಟಿಸಿ ನೀಡಿ ಮನೆಗೆ ಕಳುಹಿಸಿರುವ ಪ್ರಾಂಶುಪಾಲರ ಕ್ರಮ ರಾಜ್ಯದ ಶಿಕ್ಷಣ ಇಲಾಖೆಯ ನೀತಿಗಳಿಗೆ ವಿರುದ್ದವಾಗಿದೆ ಎಂದು ಆರೋಪಿಸಿದ್ದಾರೆ.

ಎಸ್‌.ಎಫ್‌.ಐ. ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಕಾಲೇಜು ವಿದ್ಯಾರ್ಥಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಂತಹ ಶಿಕ್ಷಣಗಳನ್ನು ಕಲಿಸಿಕೊಡಬೇಕಾಗಿದ್ದ ಪ್ರಾಂಶುಪಾಲರು ಪರಸ್ಪರ ಮತೀಯ ಧೃವೀಕರಣ ನಡೆಸುವುದಾದರೆ ಅವರು ಪ್ರಾಂಶುಪಾಲ ಹುದ್ದೆಗೆನೇ ಕಳಂಕವನ್ನು ತಂದೊಡ್ಡಿರುತ್ತಾರೆ ಎಂದು ತಿಳಿಸಿದ್ದಾರೆ.

ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲಿನ ಅಮಾನತು ಕ್ರಮವನ್ನು ರದ್ದುಗೊಳಿಸಿ ಮತ್ತೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದೇ ಹೋದಲ್ಲಿ ಎಸ್‌.ಎಫ್‌.ಐ. ಸಂಘಟನೆಯು ಅನ್ಯಾಯಗೊಳಗಾದ ವಿದ್ಯಾರ್ಥಿಗಳ ಪರವಾಗಿ ಹಾಗೂ ತಾರತಮ್ಯ ಎಸಗಿದ ಪ್ರಾಂಶುಪಾಲರ ವಿರುದ್ಧ ಹೋರಾಟ ನಡೆಸಲಿದೆ ಎಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *