ಇತ್ತೀಚೆಗೆ ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಅವರ ನೇಮಕ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯ ರದ್ದು ಮಾಡಿರುವುದು ಭಾರತದಂತಹ ಒಕ್ಕೂಟ ವ್ಯವಸ್ಥೆಯಿರುವ ದೇಶದ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಸರಿಯಲ್ಲ ಎಂದು ಸಂವಿದಾನಿಕ ವಿಷಯಗಳ ತಜ್ಞ ಹಾಗೂ ಲೋಕಸಭೆಯ ನಿವೃತ್ತ ಮಹಾಕಾರ್ಯದರ್ಶಿ(ಸೆಕ್ರೆಟರಿ ಜನರಲ್) ಪಿ.ಡಿ.ಟಿ.ಚಾರಿ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ, ಕೇರಳದ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕವನ್ನು ಪ್ರಶ್ನಿಸಿದ ಅರ್ಜಿಯನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ, ಆ ನೇಮಕ ರಾಜ್ಯದ ವಿಶ್ವವಿದ್ಯಾಲಯಗಳ ಕಾಯ್ದೆಯ ಪ್ರಕಾರವೇ ಇದ್ದರೂ, ಆ ಕಾಯ್ದೆಯಲ್ಲಿನ ಶೋಧನಾ ಸಮಿತಿಯ ಕುರಿತ ಅಂಶ ಯುಜಿಸಿಯ ನಿಬಂಧನೆಗಳಿಗೆ ಸಂಗತವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ರದ್ದು ಮಾಡಿದೆ.
ಇದಕ್ಕೆ ಮೊದಲು ಇದೇ ಮಾರ್ಚ್ ತಿಂಗಳಲ್ಲಿ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕವನ್ನೂ, ಸುಪ್ರಿಂ ಕೋರ್ಟ್, ಶೋಧನಾ ಸಮಿತಿಯ ನೇಮಕ ಯುಜಿಸಿ ನಿಬಂಧನೆಗಳ ಪ್ರಕಾರ ಇರಲಿಲ್ಲ ಎಂಬ ಕಾರಣಕ್ಕೆ ರದ್ದುಪಡಿಸಿತ್ತು.
ಮೇಲೆ ಹೇಳಿದ ಕೇರಳದ ತಾಂತ್ರಿಕ ವಿವಿಯ ಉಪಕುಲಪತಿಯ ನೇಮಕವನ್ನು ರದ್ದುಗೊಳಿಸಿದ ನಂತರ, ಕೇರಳದ ರಾಜ್ಯಪಾಲರು, ರಾಜ್ಯದ ಇತರ 11 ವಿವಿಗಳ ಉಪಕುಲಪತಿಗಳಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ನೋಟೀಸುಗಳನ್ನು ಕಳಿಸಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ. ನಂತರ ನವಂಬರ್ 14 ರಂದು ಕೇರಳ ಹೈಕೋರ್ಟ್ ಕೂಡ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನಗಳ ವಿಶ್ವ ವಿದ್ಯಾಲಯದ ಉಪಕುಲಪತಿಗಳ ನೇಮಕವನ್ನು ರದ್ದು ಮಾಡಿದೆ.
ಆದರೆ ರಾಜ್ಯ ವಿವಿ ಕಾಯ್ದೆಗಳ ಉಪಬಂಧಗಳು ಸಂವಿಧಾನದ ಕಲಮು 254ರ ಅಡಿಯಲ್ಲಿ ಯುಜಿಸಿಯ ನಿಬಂಧನೆಗಳಿಗೆ ಸಂಗತವಾಗಿಲ್ಲ ಎಂಬ ನ್ಯಾಯಾಲಯದ ತೀರ್ಮಾನ ದೋಷಪೂರಿತವಾಗಿದೆ ಎನ್ನಲು ಹಲವು ಕಾರಣಗಳಿವೆ ಎನ್ನುತ್ತಾರೆ ಪಿ.ಡಿ.ಟಿ.ಚಾರಿಯವರು.
ಮೊದಲನೆಯದಾಗಿ, ಕಲಮು 254ರ ಅಡಿಯಲ್ಲಿ ಅಸಂಗತತೆ ಎಂಬುದು ಒಂದು ರಾಜ್ಯದ ಕಾಯ್ದೆ ಮತ್ತು ಸಂಸತ್ತು ಮಾಡಿರುವ ಒಂದು ಮೂಲ ಕಾಯ್ದೆಗೆ ಸಂಬಂಧಪಟ್ಟದ್ದು- ಈ ಕಲಮನ್ನು ಜಾಗರೂಕತೆಯಿಂದ ನೋಡಿದಾಗ ಇದು ಕಾಣುತ್ತದೆ. ಈ ಕಾಯ್ದೆಯ ಅಡಿಯಲ್ಲಿನ ನಿಯಮ-ನಿಬಂಧನೆಗಳಿಗೆ ಇದು ಅನ್ವಯವಾಗುವುದಿಲ್ಲ. ಅಂದರೆ ಯುಜಿಸಿಯಂತಹ ಒಂದು ಅಧೀನ ಪ್ರಾಧಿಕಾರ ರೂಪಿಸಿದ ನಿಯಮ-ನಿಬಂಧನೆಗಳು ಕಲಮು 254ರ ಅಡಿಯಲ್ಲಿ ಬರುವುದಿಲ್ಲ. ಅಸಂಗತತೆ ರಾಜ್ಯಗಳ ವಿವಿ ಕಾಯ್ದೆಗಳು ಮತ್ತು ಯುಜಿಸಿ ಕಾಯ್ದೆಯ ನಡುವೆ ಬರಬಹುದೇ ವಿನಃ ಯುಜಿಸಿ ಯ ನಿಬಂಧನೆಗಳ ನಡುವೆ ಅಲ್ಲ ಎನ್ನುತ್ತಾರೆ ಚಾರಿಯವರು ಲೇಖನವೊಂದರಲ್ಲಿ ಹೇಳುತ್ತಾರೆ(ದಿ ಹಿಂದು, ನವಂಬರ್ 17)
ಅವರ ಪ್ರಕಾರ, ಎರಡನೆಯದಾಗಿ, ಅಧೀನ ಪ್ರಾಧಿಕಾರವೊಂದು ರೂಪಿಸುವ ನಿಯಮ-ನಿಬಂಧನೆಗಳನ್ನು ಸಾಮಾನ್ಯವಾಗಿ ಸಂಸತ್ತಿನಲ್ಲಿ ಚಚರ್ಚಿಸಲಾಗುವದಿಲ್ಲ, ಅವಕ್ಕೆ ಸಂಸತ್ತಿನ ಅನುಮೋದನೆಯ ಅಗತ್ಯವಿರುವುದಿಲ್ಲ. ಆದ್ದರಿಂದ ಅವಕ್ಕೆ ಕಾಯ್ದೆಗಿಂತ ಕೆಳಗಿನ ಸ್ಥಾನಮಾನ. ಸಂವಿಧಾನವು ಕಾಯ್ದೆ ಮತ್ತು ನಿಬಂಧನೆಗಳನ್ನು ಸಮಾನವಾಗಿ ಕಾಣುವುದಿಲ್ಲ.
ಚಾರಿಯವರು ಕೊಡುವ ಮೂರನೇ ಕಾರಣ-ಸಂವಿಧಾನ ‘ಕಾಯ್ದೆ’ ಎಂಬುದನ್ನು ಸಾರ್ವತ್ರಿಕ ರೀತಿಯಲ್ಲಿ ನಿರೂಪಿಸುವುದಿಲ್ಲ. ಕಲಮು 254ರ ಅಡಿಯಲ್ಲಿ ‘ಕಾಯ್ದೆ’ ಎಂಬ ಪದ ನಿಯಮ-ನಿಬಂಧನೆಗಳು ಇತ್ಯಾದಿಗಳನ್ನು ಒಳಗೊಂಡಿರುವುದಿಲ್ಲ.
ನಾಲ್ಕನೆಯದಾಗಿ, ಕೇಂದ್ರದ ಅಧೀನ ಪ್ರಾಧಿಕಾರವೊಂದು ರಾಜ್ಯದ ಶಾಸಕಾಂಗ ಮಾಡಿರುವ ಕಾಯ್ದೆಯನ್ನು ತಳ್ಳಿ ಹಾಕುವುದು ಒಕ್ಕೂಟ ನೀತಿಗಳ ಉಲ್ಲಂಘನೆಯಾಗುತ್ತದೆ ಮತ್ತು ಸಂವಿಧಾನ ರಾಜ್ಯಗಳಿಗೆ ನೀಡಿರುವ ಸಮವರ್ತಿ ಅಧಿಕಾರಗಳ ನಿರಾಕರಣೆಯಾಗುತ್ತದೆ.
ಮತ್ತು ಕೊನೆಯದಾಗಿ, ಉಪಕುಲಪತಿಗಳ ನೇಮಕ ಕುರಿತಾದ ಯುಜಿಸಿ ನಿಬಂಧನೆಗಳು ಯುಜಿಸಿ ಕಾಯ್ದೆಯ ಉಪಬಂಧಗಳ ವ್ಯಾಪ್ತಿಯಲ್ಲಿ ಇಲ್ಲ, ಏಕೆಂದರೆ ಯಾವ ಉಪಬಂಧದಲ್ಲೂ ಉಪಕುಲಪತಿಗಳ ನೇಮಕದ ಉಲ್ಲೇಖವಿಲ್ಲ. ನಿಬಂಧನೆಗಳು ಸ್ವತಂತ್ರ ಶಾಸನಗಳಲ್ಲ, ಅವು ಸಂಬಂಧಪಟ್ಟ ಕಾಯ್ದೆಯ ವ್ಯಾಪ್ತಿಯ ಒಳಗೇ ಇರಬೇಕು. ಯುಜಿಸಿಗೆ ನಿಬಂಧನೆಗಳನ್ನು ರೂಪಿಸುವ ಅಧಿಕಾರ ಕೊಡುವ ಯುಜಿಸಿ ಕಾಯ್ದೆ ಯವಿಭಾಗ 26ನ್ನು ನೋಡಿದರೆ ಅದರಲ್ಲಿ ಉಪಕುಲಪತಿಗಳ ನೇಮಕದ ಉಲ್ಲೇಖ ಇಲ್ಲ.
ಆದ್ದರಿಂದ ರಾಜ್ಯಗಳ ವಿವಿಗಳ ಉಪಕುಲಪತಿಗಳ ನೇಮಕಕ್ಕೆ ಪಾಲಿಸಲೇ ಬೇಕಾದ ನಿಬಂಧನೆಗಳನ್ನು ಮಾಡುವ ಯುಜಿಸಿಯ ಕಾನೂನಾತ್ಮಕ ಅಧಿಕಾರದ ಬಗ್ಗೆ ತುರ್ತಾಗಿ ಮರು ಪರೀಕ್ಷಣೆ ನಡೆಸುವ ಅಗತ್ಯವಿದೆ ಎಂದು ಪಿ.ಡಿ.ಟಿ.ಚಾರಿ ಹೇಳುತ್ತಾರೆ.
ಕಲಮು 254 ಅಡಿಯಲ್ಲಿ ಅಸಂಗತತೆಯ ತೀರ್ಮಾನಕ್ಕೆ ಬರುವ ಮೊದಲು ನ್ಯಾಯಾಲಯ ಈ ಅಸಂಗತತೆಯ ಪರಿಕಲ್ಪನೆಯನ್ನು ವಿಶ್ಲೇಷಿಸಿಲ್ಲ ಎಂದು ಅವರು ಹೇಳುತ್ತಾರೆ. ರಾಜ್ಯ ಕಾಯ್ದೆಯೊಂದು ಕೇಂದ್ರ ಕಾಯ್ದೆಗೆ ಅಸಂಗತವಾಗಿರಬಹುದೇ ವಿನಃ ಕೇಂದ್ರ ಕಾಯ್ದೆಯ ಅಡಿಯಲ್ಲಿ ಮಾಡಿದ ನಿಯಮ-ನಿಬಂಧನೆಗಳಿಗೆ ಅಲ್ಲ ಎಂಬುದು ಇಂತಹ ವಿಶ್ಲೇಷಣೆ ಮಾಡಿದಾಗ ಸ್ಪಷ್ಟವಾಗುತ್ತದೆ. ಇಲ್ಲಿ ವಿಶ್ವವಿದ್ಯಾಲಯ ಶಿಕ್ಷಣವನ್ನು ನಿರ್ವಹಿಸುವ ರಾಜ್ಯಗಳ ಹಕ್ಕಿನ ಪ್ರಶ್ನೆಯಿರುವುದರಿಂದ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡುವುದು ಅಗತ್ಯವಾಗಿದೆ ಎಂದು ಚಾರಿಯವರು ಅಭಿಪ್ರಾಯ ಪಡುತ್ತಾರೆ.
ಇನ್ನು ಕಾಯ್ದೆಗಳ ನಡುವೆ ಅಸಂಗಗತೆ ಇರುವಾಗಲೂ ನ್ಯಾಯಾಲಯ ಅವನ್ನು ಸಂಗತಗೊಳಿಸಲು ಸಾಧ್ಯವೇ ಎಂದು ಸರ್ವಪ್ರಯತ್ನ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವೇ 1994ರಲ್ಲಿ ಎಸ್.ಸತ್ಯಪಾಲ ರೆಡ್ಡಿ ವರ್ಸಸ್ ಆಂಧ್ರಪ್ರದೇಶ ಸರಕಾರ ಕೇಸಿನಲ್ಲಿ ಹೇಳಿದೆ ಎಂದು ನೆನಪಿಸಿರುವ ಪಿ.ಡಿ.ಟಿ.ಚಾರಿಯವರು, ಅಂತಹ ಪ್ರಯತ್ನ ಮಾಡಿದಾಗ ಒಂದು ರಾಜ್ಯ ಕಾಯ್ದೆಯನ್ನು ಅಸಂಗತತೆಯ ಕಾರಣಕ್ಕಾಗಿ ರದ್ದುಮಾಡುವ ಅಗತ್ಯ ಬರುವುದಿಲ್ಲ ಎಂದು ಅವರು ಹೇಳುತ್ತಾರೆ.