– ಮಂಡ್ಯ ಲೋಕಸಭಾ, ಶಿರಾ, ಆರ್.ಆರ್.ನಗರ ಉಪಚುನಾವಣೆ ಸೋಲಿನ ಹಿನ್ನೆಲೆ
ಬೆಂಗಳೂರು: ಮಸ್ಕಿ ಹಾಗೂ ಬಸವಕಲ್ಯಾಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲ್ವಾ?
ಹೌದು, ಇಂತಹದೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಕಾರಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಇಂತಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, ಮಸ್ಕಿ ಹಾಗೂ ಬಸವಕಲ್ಯಾಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ವ್ಯರ್ಥ ಎಂದಿದ್ದಾರೆ.
ಈಗಿರುವ ವ್ಯವಸ್ಥೆಯಲ್ಲಿ ಬಿಜೆಪಿಯನ್ನು ಎದುರಿಸುವುದು ಕಷ್ಟ, ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿಧಾನವೇ ಬೇರೆ ಇದೆ. ಹೀಗಿರುವಾಗ ಉಪಚುನಾವಣೆಯಲ್ಲಿ ವ್ಯರ್ಥ ಕಸರತ್ತು ಮಾಡುವುದರ ಬದಲಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿ ವಿಚಾರವಾಗಿ ಕ್ಷೇತ್ರದ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಪ್ರದರ್ಶನ ಮಾಡಿದೆ. ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪರಿಣಾಮ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಹೀನಾಯವಾಗಿ ಸೋಲುವಂತಾಯಿತು.
ಇನ್ನು ಶಿರಾದಲ್ಲಿ ಅಭ್ಯರ್ಥಿ ಆಯ್ಕೆಯಲ್ಲೂ ಗೊಂದಲ ಉಂಟಾಗಿ ಗೆದ್ದುಕೊಂಡಿದ್ದ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗಿ ಬಂತು. ಎರಡೂ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.