ಬೆಂಗಳೂರು ಜ 20 : ಉಪ ಸಭಾಪತಿಯಾಗಿದ್ದ ಎಸ್ ಎಲ್ ಧರ್ಮೇಗೌಡ ನಿಧನದಿಂದಾಗಿ ತೆರವಾಗಿದ್ದಂತ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಜನವರಿ 29ರಂದು ಚುನಾವಣೆಯ ದಿನಾಂಕ ನಿಗದಿ ಪಡಿಸಲಾಗಿದೆ.
ಈ ಕುರಿತಂತೆ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅಧಿಸೂಚನೆ ಹೊರಡಿಸಿದ್ದು, ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 8(1)ರ ಅನ್ವಯ ಉಪ ಸಭಾಪತಿಯವರ ಸ್ಥಾನಕ್ಕೆ ಚುನಾವಣೆಯನ್ನು ಮಾನ್ಯ ಸಭಾಪತಿಯವರು ಶುಕ್ರವಾರ, ದಿನಾಂಕ 29-01-2021ರಂದು ನಡೆಸತಕ್ಕದೆಂದು ಗೊತ್ತುಪಡಿಸಿರುತ್ತಾರೆ.
ಚುನಾವಣೆ ಗೊತ್ತುಮಾಡಿದ ದಿನಾಂಕ 29-01-2021ರ ಹಿಂದಿನ ದಿನ ಅಂದ್ರೆ ದಿನಾಂಕ 28-01-2021ರ ಮಧ್ಯಾಹ್ನ 3 ಗಂಟೆಗೆ ಮೊದಲು ಯಾವುದೇ ಕಾಲದಲ್ಲಿ ಯಾವೊಬ್ಬ ಸದಸ್ಯನು ಇನ್ನೊಬ್ಬ ಸದಸ್ಯನನ್ನು ಉಪ ಸಭಾಪತಿಯನ್ನಾಗಿ ಆರಿಸುವ ಬಗ್ಗೆ ಕಾರ್ಯದರ್ಶಿಯವರಿಗೆ ಹೆಸರಿಸಿ, ವಿಧಾನಸೌಧದ ಕೊಠಡಿ ಸಂಖ್ಯೆ-156ಸಿ ಇಲ್ಲಿ ಲಿಖಿತ ಮೂಲಕ ಸೂಚನೆಯನ್ನು ಅಭ್ಯರ್ಥಿಯು ಅವರ ಹೆಸರನ್ನು ಸೂಚಿಸುವವರೊಂದಿಗೆ ಅಥವಾ ಅನುಮೋದಕರೊಂದಿಗೆ ಖುದ್ದಾಗಿ ಸಲ್ಲಿಸತಕ್ಕದ್ದು
ಆ ಸೂಚನೆಯು ಮೂರನೇ ಸದಸ್ಯರಿಂದ ಅನುಮೋದಿಸತಕ್ಕದ್ದು ಮತ್ತು ಯಾವ ಸದಸ್ಯರ ಹೆಸರು ಸೂಚಿತವಾಗಿದೆಯೋ ಅವರು ತಾವು ಉಪ ಸಭಾಪತಿಯಾಗಿ ಚುನಾಯಿತರಾದಲ್ಲಿ, ಉಪ ಸಭಾಪತಿಯಾಗಿ ಸೇವೆ ಸಲ್ಲಿಸಲು ಒಪ್ಪಿರುವರೆಂದು ತಿಳಿಸುವ ಹೇಳಿಕೆಯನ್ನು ಸೂಚನೆಗೆ ಲಗತ್ತಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಯಾವೊಬ್ಬ ಸದಸ್ಯನು ತನ್ನ ಹೆಸರನ್ನು ತಾನೇ ಸೂಚಿಸತಕ್ಕದ್ದಲ್ಲ ಅಥವಾ ತನ್ನ ಹೆಸರನ್ನು ಸೂಚಿಸುವ ಯಾವುದೇ ಪ್ರಸ್ತಾವವನ್ನು ಅನುಮೋದಿಸತಕ್ಕದ್ದಲ್ಲ. ಒಂದಕ್ಕಿಂತ ಹೆಚ್ಚು ಪ್ರಸ್ತಾವಗಳನ್ನು ಸೂಚಿಸತಕ್ಕದ್ದಲ್ಲ, ಅನುಮೋದಿಸತಕ್ಕದ್ದಲ್ಲ ಎಂಬುದಾಗಿ ತಿಳಿಸಿದ್ದಾರೆ
ದಿನಾಂಕ ನಿಗದಿಯಾದ ಬೆನ್ನಲ್ಲೆ ಆಕಾಂಕ್ಷೆಗಳ ಪಟ್ಟಿ ಹೆಚ್ಚಾಗಿದ್ದು, ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮೂಲಕ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಪುಟ್ಟಣ್ಣ ಹೆಸರು ಕೇಳಿ ಬರುತ್ತಿದೆ.