ಬೆಂಗಳೂರು: ನವೆಂಬರ್ 3ರಂದು ಶಿರಾ ಹಾಗೂ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಮೈತ್ರಿಯ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನಾಯಕರು ಈಗಾಗಲೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ನಮ್ಮ ಪಕ್ಷದಿಂದ ಏಕಾಂಗಿ ಸ್ಪರ್ಧೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಆರ್.ಆರ್. ನಗರ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳ ಜೊತೆ ಸಭೆ ನಡೆಸಿ, ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು. ರಾಷ್ಟ್ರೀಯ ಪಕ್ಷಗಳನ್ನು ಮಣಿಸುವುದೇ ನಮ್ಮ ಗುರಿ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಮೈತ್ರಿಗೆ ಯೋಗ್ಯ ಪಕ್ಷವಲ್ಲ. ರಾಜ್ಯದಲ್ಲಿ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಿದ,ರಾಜಸ್ಥಾನದಲ್ಲಿ ಬೆಂಬಲ ನೀಡಿದ್ದ BSP ಶಾಸಕರನ್ನೇ ಸೆಳೆದ,ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ದಿನವೂ ಅಲುಗಾಡಿಸುತ್ತಿರುವ ಅದರ ವರ್ತನೆಯು, ಮೈತ್ರಿಗೆ ತಾನು ಯೋಗ್ಯವಲ್ಲ ಎಂಬುದರ ಸಂದೇಶ. ಅಷ್ಟಕ್ಕೂ ಕಾಂಗ್ರೆಸ್ ಮಿತ್ರ ಪಕ್ಷಗಳು ಬೇರೆಯೇ ಇವೆ.
2/3— H D Kumaraswamy (@hd_kumaraswamy) October 1, 2020
ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ. ಮೈತ್ರಿ ವಿಷಯವಾಗಿ ಕಾಂಗ್ರೆಸ್ ಎದುರು ಜೆಡಿಎಸ್ನ ಅವಕಾಶವನ್ನು ಯಾರೂ ಮುಂದಿಡುವುದೂ ಬೇಡ. ರಾಜ್ಯದಲ್ಲಿ ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆಯೂ ಬೇಡ. ಹಾಗೇ, ಜೆಡಿಎಸ್, ದೇವೇಗೌಡರ ಹೆಸರು ಬಳಸಿ ಆ ಪಕ್ಷದ 'ನಾಯಕ'ರು ಲಾಭ ಮಾಡಿಕೊಳ್ಳುವುದೂ ಬೇಡ.
3/3— H D Kumaraswamy (@hd_kumaraswamy) October 1, 2020
ಆರ್.ಆರ್. ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕುತಂತ್ರಕ್ಕೆ ಪ್ರತಿತಂತ್ರ ಸಿದ್ಧವಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗೆ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವುದು ಸವಾಲಿನ ಕೆಲಸವಾಗಿದೆ. ಹೀಗಿದ್ದರೂ ನಾವು ಮಾನಸಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 3ರಂದು ಶಿರಾ ಹಾಗೂ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 9ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಬಳಿಕ 17ನೇ ತಾರೀಕಿನಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಇದಾದ ನಂತರ ನವೆಂಬರ್ 10ರಂದು ಎರಡು ಕ್ಷೇತ್ರದ ಫಲಿತಾಂಶ ಪ್ರಕಟಗೊಳ್ಳಲಿದೆ.
ಇನ್ನೊಂದೆಡೆ ಈ ಎರಡೂ ಉಪಚುನಾವಣೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಡಿದಾಡುತ್ತಿದ್ದಾರೆ. ಇನ್ನೊಂದೆಡೆ ಕುಮಾರಸ್ವಾಮಿ ನಮ್ಮದೂ ಒಂದು ಪಕ್ಷ ಇದೆ ಎನ್ನುತ್ತಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಸರ್ಕಾರ ಹಾಗೂ ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರೆಲ್ಲ ಈಗ ಎಲ್ಲಿದ್ದಾರೆ? ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಬಿಜೆಪಿಯೇ ಗೆದ್ದಿದೆ. ಕಾಂಗ್ರೆಸ್ನವರಿಗೇ ಈ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಭರವಸೆಯಿಲ್ಲ ಎಂದು ಈಶ್ವರಪ್ಪ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.