ನವದೆಹಲಿ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಯು ಅಕ್ಟೋಬರ್ 30ರಂದು ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರವು ಸಿ.ಎಂ ಉದಾಸಿ ಅವರ ನಿಧನದಿಂದ ತೆರವಾಗಿತ್ತು. ಎಂ.ಸಿ.ಮನಗೂಳಿ ಅವರ ನಿಧನದಿಂದ ಸಿಂದಗಿ ಕ್ಷೇತ್ರ ತೆರವಾಗಿತ್ತು. ಇದೀಗ ರಾಜ್ಯದ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದೆ.
ಅಕ್ಟೋಬರ್ 1ರಿಂದ ಅಧಿಸೂಚನೆ
ಅಕ್ಟೋಬರ್ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಅಕ್ಟೋಬರ್ 11ರಂದು ನಾಮಪತ್ರ ಪರಿಶೀಲನೆ
ಅಕ್ಟೋಬರ್ 13 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
ಅಕ್ಟೋಬರ್ 30ರಂದು ಮತದಾನ
ನವೆಂಬರ್ 2ರಂದು ಮತ ಎಣಿಕೆ
ಅಕ್ಟೋಬರ್ 1ರಂದು ಅಧಿಸೂಚನೆ ಹೊರಬೀಳಲಿದ್ದು, ಅಕ್ಟೋಬರ್ 8 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಅ. 11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಅ.30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಉಪ ಸಮರಕ್ಕೆ ಮುಂಚಿನಿಂದಲೂ ಕಸರತ್ತು ನಡೆಸಿಕೊಂಡು ಬಂದಿದೆ. ಇದೀಗ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರಿಸುಗೊಂಡಿದೆ. ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ
ದಾದ್ರಾ ಮತ್ತು ನಗರ್ ಹವೇಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ತಲಾ ಒಂದೊಂದು ಲೋಕಸಭಾ ಸ್ಥಾನಗಳು ಮತ್ತು ವಿವಿಧ ರಾಜ್ಯಗಳಲ್ಲಿನ 30 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗವು ಸಾಂಕ್ರಾಮಿಕ, ಪ್ರವಾಹ, ಹಬ್ಬಗಳು, ಕೆಲವು ಪ್ರದೇಶಗಳಲ್ಲಿನ ಶೀತ ಪರಿಸ್ಥಿತಿಗಳ ಬಗ್ಗೆ, ಸಂಬಂಧಿತ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದೆ ಮತ್ತು ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದೆ.
ಮೂರು ಸಂಸತ್ ಕ್ಷೇತ್ರಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಈ ಉಪ ಚುನಾವಣೆ ನಡೆಯುತ್ತಿದೆ. ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ 30 ಸೀಟುಗಳು ಖಾಲಿ ಇವೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.