ಲಕ್ನೋ : ಡೆಂಗ್ಯೂ ರೋಗಿಯೊಬ್ಬರಿಗೆ ಪ್ಲಾಸ್ಮಾ ಬದಲು ಮೂಸಂಬಿ ರಸವನ್ನು ನೀಡಿದ ಹಿನ್ನೆಲೆಯಲ್ಲಿ ರೋಗಿಯೂ ಮೃತಪಟ್ಟಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡ ಪೊಲೀಸರು ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 10 ಮಂದಿಯನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಅಕ್ರಮವಾಗಿ ರಕ್ತ ಪೂರೈಕೆ ಮಾಡಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ 12 ಜನರನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇದೀಗ ನಕಲಿ ಪ್ಲೇಟ್‌ಲೆಟ್ ಮಾರಾಟದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ.
ಇಲ್ಲಿನ ಆಸ್ಪತ್ರೆಯೊಂದು ಡೆಂಗ್ಯೂ ರೋಗಿಯೊಬ್ಬರಿಗೆ ಸಿಹಿ ಮೋಸಂಬಿ ರಸವನ್ನು ಪ್ಲೇಟ್‌ಲೆಟ್‌ಗಳಾಗಿ ರವಾನಿಸಿತು. ಸಾಮಾನ್ಯವಾಗಿ ಡೆಂಗ್ಯೂ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಆರೋಪಿಗಳು, ರಕ್ತ ನಿಧಿ ಕೇಂದ್ರಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಅವುಗಳನ್ನು ಪ್ಲೇಟ್‌ಲೆಟ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಮಾಡಿದ್ದಾರೆ. ಇವೆರಡೂ ರಕ್ತದ ಅಂಶಗಳಾಗಿವೆ. ಆದರೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಮೂಸಂಬಿ ರಸವನ್ನು ಪ್ಲೇಟ್‌ಲೆಟ್‌ಗಳಾಗಿ ರವಾನಿಸುವ ಬಗ್ಗೆ ನಾವು ಆರೋಪಿಗಳನ್ನು ಪ್ರಶ್ನಿಸಿದ್ದೇವೆ. ಆದರೆ ಅವರು ಹಾಗೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅದರ ಬದಲಿಗೆ ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ರವಾನಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಹೇಳಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿದೆ. ಇದರಿಂದ ಪ್ಲೇಟ್‌ಲೆಟ್‌ಗಳ ಬೇಡಿಕೆ ಹೆಚ್ಚಾಗಿದೆ. ಆರೋಪಿಗಳು ಇದನ್ನೇ ಬಂಡವಾಳ ಮಾಡಿಕೊಂಡು, ಪ್ಲೇಟ್‌ಲೆಟ್ ನೀಡುವುದಾಗಿ ನಂಬಿಸಿ ಬಡವರನ್ನು ವಂಚಿಸುತ್ತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯೊಂದನ್ನು ಎರಡು ದಿನಗಳ ಹಿಂದೆ ಸೀಲ್ ಹಾಕಿದ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ಪರೀಕ್ಷೆಯ ನಂತರವಷ್ಟೇ ಸರಿಯಾದ ಚಿತ್ರಣ ಬರಲಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ಮಾಲೀಕರು ಪ್ಲೇಟ್‌ಲೆಟ್‌ಗಳನ್ನು ಬೇರೆ ವೈದ್ಯಕೀಯ ಸೌಲಭ್ಯದಿಂದ ತರಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ : ಡೆಂಗ್ಯೂ ರೋಗಕ್ಕೆ ತುತ್ತಾದ 32 ವರ್ಷದ ಪ್ರದೀಪ್ ಪಾಂಡೆ ಅವರಿಗೆ ಮೂಸಂಬಿ ರಸದ ಡ್ರಿಪ್ ಹಾಕಿದ್ದರಿಂದ ಮೃತಪಟ್ಟ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ನಕಲಿ ರಕ್ತದ ಪ್ಲೇಟ್‌ಲೆಟ್ ಮತ್ತು ಪ್ಲಾಸ್ಮಾ ಮಾರಾಟಗಾರರ ಮೇಲೆ ಕ್ರಮಕ್ಕೆ ಮುಂದಾಗಿದೆ. ನಕಲಿ ರಕ್ತ ಇದು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ ಇದು ಮೂಸಂಬಿ ರಸ ಎಂಬುದು ಇನ್ನೂ ಸಾಬೀತಾಗಿಲ್ಲ. ಇದು ಏನು ಎಂಬುದು ಪ್ರಯೋಗದ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಗಿಯ ಸಂಬಂಧಿಕರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನಲ್ಲಿ ‘ಪ್ಲಾಸ್ಮಾ’ ಎಂದು ಗುರುತಿಸಲಾದ ಚೀಲ ಸರಬರಾಜು ಮಾಡಲಾಗಿದೆ. ರೋಗಿಯ ಕುಟುಂಬವು ಆಸ್ಪತ್ರೆಯಿಂದ ಸರಬರಾಜು ಮಾಡಿದ ಚೀಲಗಳಲ್ಲಿ ಒಂದನ್ನು ರೋಗಿಗೆ ನೀಡಿದ ಬಳಿಕ ಅವನ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ರೋಗಿಯನ್ನು ಎರಡನೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಗ ಅಲ್ಲಿ ಆತ ನಿಧನ ಹೊಂದಿದ. ಎರಡನೇ ಆಸ್ಪತ್ರೆಯ ವೈದ್ಯರು ಈ ‘ಪ್ಲೇಟ್‌ಲೆಟ್’ ಬ್ಯಾಗ್ ನಕಲಿ. ಇದರಲ್ಲಿ ರಾಸಾಯನಿಕಗಳು ಮತ್ತು ಸಿಹಿ ಅಥವಾ ಮೋಸಂಬಿ ರಸದ ಮಿಶ್ರಣವನ್ನು ತುಂಬಿಸಲಾಗಿದೆ ಎಂದು ಹೇಳಿರುವುದು ವರದಿಯಾಗಿದೆ.