ಉತ್ತರ ಪ್ರದೇಶ | ವಿಶ್ವಕಪ್ ಟ್ರೋಫಿಗೆ ಕಾಲಿಟ್ಟ ಮಿಚೆಲ್ ಮಾರ್ಷ್ ವಿರುದ್ಧ ದೂರು ದಾಖಲು

ಅಲಿಗಢ: ವಿಶ್ವಕಪ್ ಕ್ರಿಕೆಟ್ ಟ್ರೋಫಿಯ ಮೇಲೆ ತನ್ನ ಕಾಲುಗಳನ್ನು ಇಟ್ಟಿದ್ದಕ್ಕಾಗಿ ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿರುದ್ಧ ಉತ್ತರ ಪ್ರದೇಶದ ಆರ್‌ಟಿಐ ಕಾರ್ಯಕರ್ತರೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆದರೆ ಯಾವುದೆ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಕ್ವಿಂಟ್ ಫ್ಯಾಕ್ಟ್‌ಚೆಕ್ ವರದಿ ಹೇಳಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಮಾರ್ಷ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ಭ್ರಷ್ಟಾಚಾರ ವಿರೋಧಿ ಸೇನೆಯ ಅಧ್ಯಕ್ಷ ಪಂಡಿತ್ ಕೇಶವ್ ದೇವ್ ಅವರು ಅಲಿಘರ್‌ನ ದೆಹಲಿ ಗೇಟ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. “ದೂರು ಸ್ವೀಕರಿಸಲಾಗಿದೆ. ಆದರೆ ಇದುವರೆಗೆ ಪ್ರಕರಣ ದಾಖಲಾಗಿಲ್ಲ, ಸೈಬರ್ ಸೆಲ್‌ನಿಂದ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಮೃಗಾಂಕ್ ಶೇಖರ್ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ.

ಇದನ್ನೂ ಓದಿ: ಪ್ರದರ್ಶನ ಬೇಡ ಎಂದರೂ ಪಟ್ಟು ಹಿಡಿದು ಹುತಾತ್ಮ ಸೈನಿಕನ ತಾಯಿಯ ಫೋಟೋ ಕ್ಲಿಕ್ ಮಾಡಿದ ಬಿಜೆಪಿ ಸಚಿವ | ರಣಹದ್ದು ಎಂದ ಕಾಂಗ್ರೆಸ್

ವಿಜೇತ ತಂಡಕ್ಕೆ ‘ದೇಶದ ಪ್ರಧಾನಿ’ ಹಸ್ತಾಂತರಿಸಿದ ಟ್ರೋಫಿಯನ್ನು ಆಸ್ಟ್ರೇಲಿಯಾದ ಕ್ರಿಕೆಟಿಗ ತನ್ನ ಕೃತ್ಯದಿಂದ ಭಾರತದ ಜನರನ್ನು ಅವಮಾನಿಸಿದ್ದಾರೆ ಮತ್ತು  ಅಗೌರವಗೊಳಿಸಿದ್ದಾರೆ ಎಂದು ಕೇಶವ್ ದೇವ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ, ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್-2023ರನ್ನು ಗೆದ್ದಿತ್ತು.

ಕ್ರಿಕೆಟಿಗ ಮಾರ್ಷ್ ಪಂದ್ಯದ ನಂತರ ಟ್ರೋಫಿಯ ಮೇಲೆ ತನ್ನ ಕಾಲುಗಳನ್ನು ಇಟ್ಟುಕೊಂಡು ಪೋಟೋಗೆ ಪೋಸ್‌ ನೀಡಿರುವ ಚಿತ್ರವೂ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವಿಚಾರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಕೂಡಾ ನಡೆದಿತ್ತು. ಕೆಲವು ಜನರು ಇದನ್ನು ಟೀಕಿಸಿದ್ದು, ಹಲವಾರು ಜನರು ಇದನ್ನು ಸಮರ್ಥಿಸಿಕೊಂಡಿದ್ದರು.

ವಿಡಿಯೊ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?

Donate Janashakthi Media

Leave a Reply

Your email address will not be published. Required fields are marked *