ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ರೈತರು, ಕೋವಿಡ್ ಯೋಧರು, ಶಿಕ್ಷಕರು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳನ್ನು ಉಲ್ಲೇಖಿಸಿ ಪ್ರಣಾಳಿಕೆ ಸಿದ್ದಪಡಿಸಲಾಗಿದೆ.
ಸಾರ್ವಜನಿಕರು ಬೇಕಿರುವುದನ್ನೇ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿದೆ. ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಛತ್ತೀಸ್ಗಢ ಜಾರಿಗೊಳಿಸಿದಂತೆ ಇಲ್ಲಿಯೂ ಕೂಡ ರೈತರ ಎಲ್ಲ ರೀತಿಯ ಕೃಷಿ ಸಾಲ ಮನ್ನಾ ಮಾಡಲಾಗುವುದು.
ಭತ್ತ ಮತ್ತು ಗೋಧಿಯನ್ನು ಪ್ರತಿ ಕ್ವಿಂಟಲ್‌ಗೆ 2500 ರೂ.ಗೆ ಖರೀದಿ ಮಾಡಲಾಗುವುದು ಮತ್ತು ಕಬ್ಬನ್ನು ಪ್ರತಿ ಕ್ವಿಂಟಲ್‌ಗೆ 400 ರೂಪಾಯಿಗೆ ಖರೀದಿಸಲಾಗುವುದು. ವಿದ್ಯುತ್ ಬಿಲ್ನಲ್ಲಿ ಅರ್ಧದಷ್ಟು ಕಡಿಮೆ ಮಾಡಲಾಗುತ್ತದೆ ಮತ್ತು ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಬಾಕಿ ಇರುವ ಗ್ರಾಹಕರ ಬಿಲ್ನ ಹಣವನ್ನು ಮನ್ನಾ ಮಾಡಲಾಗುತ್ತದೆ ಎಂದೂ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ನಾಳೆ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ಇಂದು ಚುನಾವಣಾ ಪ್ರಣಾಳಿಕೆ ʻಉನ್ನತಿ ವಿಧಾನ ಜನ ಘೋಷಣ ಪತ್ರʼ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು
- ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು.
- ಭತ್ತ ಮತ್ತು ಗೋಧಿಯನ್ನು ಕ್ವಿಂಟಲ್‌ಗೆ ₹ 2500 ಹಾಗೂ ಕಬ್ಬನ್ನು ₹ 400ಕ್ಕೆ ಖರೀದಿಸಲಾಗುವುದು.
- ವಿದ್ಯುತ್ ದರವನ್ನು ಅರ್ಧದಷ್ಟು ಕಡಿಮೆ ಮಾಡಲಾಗುವುದು.
- ಸಾಂಕ್ರಾಮಿಕದ ಅವಧಿಯಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಲಾಗುವುದು.
- ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಕುಟುಂಬಗಳಿಗೆ ₹ 25,000 ನೀಡಲಾಗುವುದು.
- ಪೊಲೀಸ್, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿದಂತೆ ಸಾರ್ವಜನಿಕ ವಲಯಗಳಲ್ಲಿ ಖಾಲಿ ಇರುವ 12 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಜೊತೆಗೆ ಎಂಟು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
- ಶಾಲೆಗಳಲ್ಲಿ ಅಡುಗೆ ತಯಾರಿಸುವ ವ್ಯಕ್ತಿಗೆ ₹ 5,000 ವೇತನ ನೀಡಲಾಗುವುದು.
- ಮಹಿಳಾ ಪೊಲೀಸರಿಗೆ ಹತ್ತಿರದ ಸ್ಥಳದಲ್ಲಿ ಪೋಸ್ಟಿಂಗ್ ಕೊಡಲಾಗುವುದು.
- ಮೃತಪಟ್ಟ ಕೋವಿಡ್ ಯೋಧರ ಕುಟುಂಬಗಳಿಗೆ ₹ 50 ಲಕ್ಷ ಪರಿಹಾರ ನೀಡಲಾಗುವುದು.
- ಅನುಭವ ಮತ್ತು ನಿಯಮಗಳ ಆಧಾರದ ಮೇಲೆ ಶಿಕ್ಷಕರು ಹಾಗೂ ಶಿಕ್ಷಾ ಮಿತ್ರರನ್ನು ಖಾಯಂಗೊಳಿಸಲಾಗುವುದು.
ರಾಜ್ಯದಲ್ಲಿ ಕೊರೊನಾದಿಂದ ತೀವ್ರವಾಗಿ ಬಾಧಿತವಾಗಿರುವ ಕುಟುಂಗಳಿಗೆ 25 ಸಾವಿರ ರೂಪಾಯಿ ನೀಡಲಾಗುವುದು. ಪೊಲೀಸ್, ಆರೋಗ್ಯ, ಶಿಕ್ಷಣ ಕ್ಷೇತ್ರ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಸೇರಿ ಖಾಲಿ ಇರುವ ಒಟ್ಟು 12 ಲಕ್ಷ ಹುದ್ದೆಗಳ ನೇಮಕಾತಿಗೆ ಅಡೆತಡೆ ನಿವಾರಿಸುವುದರೊಂದಿಗೆ, ಇನ್ನೂ 8 ಲಕ್ಷಗಳಷ್ಟು ಉದ್ಯೋಗ ಸೃಷ್ಟಿಸಲು ಕಾಂಗ್ರೆಸ್ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ರೈತರು, ಕೊವಿಡ್ 19 ವಾರಿಯರ್ಸ್, ಶಿಕ್ಷಕರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತ ಹಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ರಾಜ್ಯದ ಹಲವು ಪತ್ರಕರ್ತರ ವಿರುದ್ಧ ಹಾಕಲಾದ ಸುಳ್ಳು ಕೇಸ್ಗಳನ್ನು ಹಿಂಪಡೆಯುವುದಾಗಿಯೂ ಅವರು ತಿಳಿಸಿದ್ದಾರೆ.
ರೈತರು ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯದ ಪಶ್ಚಿಮ ಭಾಗಗಳಲ್ಲಿ ನಾಳೆ ಮೊದಲ ಹಂತದ ಮತದಾನ ಆರಂಭವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಪ್ರಿಯಾಂಕಾ ಅವರು ಕಾಂಗ್ರೆಸ್ ಸರಕಾರವನ್ನು ರಚಿಸಿದ 10 ದಿನಗಳಲ್ಲಿ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದರು.
“ನಾವು ಇಲ್ಲಿಯವರೆಗೆ ಮೂರು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ್ದೇವೆ. ಒಂದು ಮಹಿಳೆಯರಿಗೆ ಹಾಗೂ ಮತ್ತೊಂದು ಯುವಕರಿಗೆ. ಇಂದು ಮೂರನೆ ಪ್ರಣಾಳಿಕೆ ತಂದಿದ್ದೇವೆ. ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ಪ್ರಣಾಳಿಕೆ ರಚಿಸಿದ್ದೇವೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.