ಲಖನೌ: ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತದತ್ತ ಮುನ್ನಡೆಯಲ್ಲಿದೆ.
ಉತ್ತರ ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಮೈತ್ರಿಕೂಟ 272ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಸಮಾಜವಾದಿ ಪಕ್ಷ ಮೈತ್ರಿಕೂಟ 122ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ 3 ಹಾಗೂ ಬಿಎಸ್‌ಪಿ 3 ಕ್ಷೇತ್ರಗಳಲ್ಲಿ, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇದರೊಂದಿಗೆ, ಬಿಜೆಪಿ ಮರಳಿ ಅಧಿಕಾರಕ್ಕೇರುವುದು ಬಹುತೇಕ ಖಚಿತಗೊಂಡಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಗಳಿಸಿದರೆ, 1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದಂತಾಗಲಿದೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಯೋಗಿ ಆದಿತ್ಯನಾಥ್ ಅವರೇ ಇನ್ನೊಂದು ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರೆ ಅದು ಮತ್ತೊಂದು ದಾಖಲೆಯಾಗಲಿದೆ. 1950ರ ಬಳಿಕ ಇದೇ ಮೊದಲ ಬಾರಿಗೆ, ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿದ ಬಳಿಕ ಮತ್ತೆ ಅಧಿಕಾರ ಉಳಿಸಿಕೊಂಡ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಳ್ಳಲಿದ್ದಾರೆ. 1950ರಿಂದ 54ರ ವರೆಗೆ ಗೋವಿಂದ ವಲ್ಲಭ ಪಂತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 1955ರಿಂದ 61 ರವರೆಗೆ ಅವರೇ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.
2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಸಮಾಜವಾದಿ ಪಾರ್ಟಿ(ಎಸ್‌ಪಿ)– 47, ಬಿಎಸ್‌ಪಿ– 19 ಹಾಗೂ ಕಾಂಗ್ರೆಸ್– 07ರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.