ಕಟ್ಟಾಯ (ಹಾಸನ): “ವಿಶ್ವದ ಅನಂತ ಪಯಣದಲ್ಲಿ ಭೂಮಿಯೆಂಬುದು ಒಂದು ಪುಟ್ಟ ನೀಲಿ ಚುಕ್ಕೆ. ನಾವು ನಕ್ಷತ್ರಗಳ ದೂಳಿನಿಂದ ಬಂದವರು ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಮಾತ್ರ ನಮಗೆ ಪರಿಸರದ ಮೇಲೆ ಕಾಳಜಿ ಮತ್ತು ವಿಜ್ಞಾನದ ಬಗ್ಗೆ ಕುತೂಹಲ ಬೆಳೆಯಲು ಸಾಧ್ಯ” ಎಂದು ಖ್ಯಾತ ವಿಜ್ಞಾನ ಸಂವಹನಕಾರ ಹಾಗೂ ಬಿ.ಜಿ.ವಿ.ಎಸ್ ಜಿಲ್ಲಾಸಮಿತಿ ಸದಸ್ಯ ಅಹಮದ್ ಹಗರೆ ತಿಳಿಸಿದರು. ಕಟ್ಟಾಯ
ಅವರು ಇತ್ತೀಚೆಗೆ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಬ್ರಹ್ಮಾಂಡದ ಅನಂತ ಪಯಣ: ನಮ್ಮ ಮನೆಯಂಗಳದಿಂದ ಕಪ್ಪುಕುಳಿಯವರೆಗೆ” ಎಂಬ ವಿಶೇಷ ವಿಜ್ಞಾನ ಸಂವಾದ ಮತ್ತು ಪಿ.ಪಿ.ಟಿ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಸುಮಾರು 90 ನಿಮಿಷಗಳ ಕಾಲ ನಡೆದ ಈ ರೋಚಕ ಸಂವಾದದಲ್ಲಿ, ವಿದ್ಯಾರ್ಥಿಗಳನ್ನು ಕಾಲ್ಪನಿಕ ರಾಕೆಟ್ ಮೂಲಕ ಬಾಹ್ಯಾಕಾಶ ಪಯಣಕ್ಕೆ ಕರೆದೊಯ್ದ ಹಗರೆಯವರು, ಭೂಮಿಯ ವಾತಾವರಣದ ಪದರಗಳಿಂದ ಆರಂಭಿಸಿ ಸೌರವ್ಯೂಹದ ಗ್ರಹಗಳ ವೈಚಿತ್ರಗಳು, ನಕ್ಷತ್ರಗಳ ಹುಟ್ಟು-ಸಾವು (ಸೂಪರ್ ನೋವಾ) ಹಾಗೂ ಬ್ರಹ್ಮಾಂಡದ ನಿಗೂಢ ರಹಸ್ಯವಾದ ‘ಕಪ್ಪುಕುಳಿ’ (Black Hole) ಕುರಿತು ಸರಳವಾಗಿ ವಿವರಿಸಿದರು. “ಪ್ರಶ್ನೆ ಕೇಳುವವನೇ ನಿಜವಾದ ವಿಜ್ಞಾನಿ. ನಿಮ್ಮ ಕಾಲುಗಳು ಭೂಮಿಯ ಮೇಲಿದ್ದರೂ ಮನಸ್ಸು ಆಕಾಶದಾಚೆಗಿನ ಅದ್ಭುತಗಳ ಕಡೆಗೆ ಸದಾ ಚಲಿಸುತ್ತಿರಲಿ” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಇದನ್ನೂ ಓದಿ: ವಲಸಿಗ ಕಾರ್ಮಿಕರ ಶೋಷಣೆ – ಕಾರ್ಮಿಕ ಸಮಸ್ಯೆಗಳು ಹೆಚ್ಚಳ; ಪರಿಣಾಮಕಾರಿ ಕ್ರಮ ಅಗತ್ಯ: ವಿ. ಸಿವದಾಸನ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಜಿ.ವಿ.ಎಸ್ ಹಾಸನ ತಾಲೂಕು ಸಮಿತಿ ಅಧ್ಯಕ್ಷರಾದ ಡಾ. ಎಚ್.ಜಿ. ಮಂಜುನಾಥ್ ಅವರು ಮಾತನಾಡಿ, ಇಕೋ ಕ್ಲಬ್ನ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಪರಿಸರಾನಂದದ ಕುರಿತು ಮಾತನಾಡುತ್ತಾ, ಹಸಿರು ಹೊದಿಕೆಯ ಹೆಚ್ಚಳ, ಮನುಷ್ಯನ ಚಯಾಪಚಯ ಕ್ರಿಯೆ (Metabolism), ದ್ಯುತಿಸಂಶ್ಲೇಷಣೆ ಹಾಗೂ ಸ್ವಚ್ಛತೆಯ ಮಹತ್ವದ ಬಗ್ಗೆ ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ರವೀಶ ಅವರು ವಹಿಸಿದ್ದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ವಿಶ್ವನಾಥರಾವ್ ಚೌಹಾಣ್ ಅವರು ಉಪಸ್ಥಿತರಿದ್ದು ಹಿತನುಡಿಗಳನ್ನಾಡಿದರು.
ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಶ್ರೀಯುತ ಅಶ್ವಾಕ್ ತಬ್ರೈಸ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಇಕೋ ಕ್ಲಬ್ ಮಾರ್ಗದರ್ಶಕಿ ಶ್ರೀಮತಿ ಪೃಥ್ವಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕೊನೆಯಲ್ಲಿ ಶ್ರೀ ಸಣ್ಣಲಿಂಗಗೌಡ ಅವರು ವಂದನಾರ್ಪಣೆ ಮಾಡಿದರು. ಸಂವಾದದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.
ಇದನ್ನೂ ನೋಡಿ: ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media
