ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೊನಿಕ್ಸ್) ಸಹಯೋಗದಲ್ಲಿ ರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು, ವಿನ್ಯಾಸ ರೂಪಿಸಿ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಒಳಗೊಂಡ ಪುಟ್ಟ ಗಾತ್ರದ ಮತ್ತು ಅಗ್ಗದ ವೈಯಕ್ತಿಕ ಕಂಪ್ಯೂಟರ್ (ಪಿಸಿ) ‘ಕಿಯೋ’ವನ್ನು ಪರಿಚಯಿಸಿದೆ.
ಈ ಸಂಬಂಧ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾಧ್ಯಮಗೋಷ್ಟಿ ನಡೆಸಿ ಪುಟ್ಟ ಗಾತ್ರದ ಕಿಯೋ ಪಿಸಿ ಬಗ್ಗೆ ವಿವರಿಸಿದರು. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಈ ಕಂಪ್ಯೂಟರ್ ಕೈಗೆಟುಕುವ ಕಂಪ್ಯೂಟಿಂಗ್ ಸೌಲಭ್ಯದ ಬುದ್ಧಿವಂತ ಹಾಗೂ ಅಗ್ಗದ ಕಂಪ್ಯೂಟರ್ ತಳಮಟ್ಟದಲ್ಲಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿದೆ ಎಂದರು.
ಇದನ್ನೂ ಓದಿ : ಬೆಂಗಳೂರು | ಕೃಷಿ ಮೇಳದ ಎರಡನೇ ದಿನ 11.85 ಲಕ್ಷ ಜನರು ಭೇಟಿ
ದೇಶದಲ್ಲಿ ಶೇಕಡ 10ಕ್ಕಿಂತ ಕಡಿಮೆ ಜನರು ಕಂಪ್ಯೂಟರ್ ಹೊಂದಿದ್ದಾರೆ. ಕರ್ನಾಟಕದಲ್ಲಿ ಇದರ ಪ್ರಮಾಣ ಕೇವಲ ಶೇಕಡ 15 ರಷ್ಟಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ವ್ಯಾಪಕವಾಗಿದ್ದರೂ, ಶೈಕ್ಷಣಿಕ ಉದ್ದೇಶ, ಕೋಡಿಂಗ್, ಆನ್‌ಲೈನ್ ತರಗತಿಗಳು ಮತ್ತು ಹೈಬ್ರಿಡ್ ಕಲಿಕೆಗೆ ಕಂಪ್ಯೂಟರ್‌ಗಳು ಅಗತ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ ಎಂದು ಹೇಳಿದರು. ಸೂಕ್ತ ಸಾಧನಗಳ ಲಭ್ಯತೆಯ ಕೊರತೆಯಿಂದಾಗಿ ಶೇಕಡ 60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಶಾಲೆ – ಕಾಲೇಜ್ ತೊರೆಯಲು ಇದು ಕೂಡ ನೇರವಾಗಿ ಕೊಡುಗೆ ನೀಡುತ್ತಿದೆ ಎಂದರು.
ಜ್ಞಾನ ಆಧಾರಿತ (ಕೆ), ಮಿತವ್ಯಯ (ಇ) ಮತ್ತು ಮುಕ್ತ-ಕಂಪ್ಯೂಟಿಂಗ್ (ಓಪನ್ ಸೋರ್ಸ್) ಕಿಯೋ – ಈ ಸವಾಲಿಗೆ ಕರ್ನಾಟಕದ ಉತ್ತರವಾಗಿದೆ. ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ (ಒಎಸ್) ಹೊಂದಿರುವ ಓಪನ್-ಸೋರ್ಸ್ ಆರ್‌ಐಎಸ್‌ಸಿ-ವಿ ಪ್ರೊಸೆಸರ್‌ನಲ್ಲಿ ನಿರ್ಮಿಸಿರುವ ʼಕೆಇಒʼ ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕಂಪ್ಯೂಟಿಂಗ್ ಬಳಕೆಯ ಅನುಭವ ನೀಡಲಿದೆ. ಇದು ಕರ್ನಾಟಕದಲ್ಲಿನ ಡಿಜಿಟಲ್ ವಿಭಜನೆಯನ್ನು ಕಡಿಮೆಗೊಳಿಸಲಿದೆ. ಇದು ಐಶಾರಾಮಿ ಸಾಧನವಲ್ಲ. ಅಗ್ಗದ ಈ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಜನರು ಡಿಜಿಟಲ್ ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ನೆರವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
4ಜಿ, ವೈ-ಫೈ, ಈಥರ್ನೆಟ್, ಯುಎಸ್‌ಬಿ- ಎ ಮತ್ತು ಯುಎಸ್‌ಬಿ – ಸಿ ಪೋರ್ಟ್‌ಗಳು, ಹೆಚ್‌ಡಿಎಂಐ ಮತ್ತು ಆಡಿಯೋ ಜ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ. ಆನ್-ಡಿವೈಸ್ ಎಐ ಕೋರ್ ಒಳಗೊಂಡಿದೆ. ಇದು ಇಂಟರ್ನೆಟ್ ಲಭ್ಯ ಇರದಿದ್ದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಎಐ ಅನುವು ಮಾಡಿಕೊಡುತ್ತದೆ. ಇದು ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕರ್ನಾಟಕ ಡಿಎಸ್‌ಇಆರ್‌ಟಿ ಪಠ್ಯಕ್ರಮದಲ್ಲಿ ತರಬೇತಿ ಪಡೆದ ಎಐ ಏಜೆಂಟ್ ಬುದ್ಧ (BUDDH) ಜೊತೆಗೆ ಬರಲಿದೆ.
ಬೆಂಗಳೂರು ಟೆಕ್ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ʼಕೆಇಒʼ ವನ್ನು ಔಪಚಾರಿಕವಾಗಿ ಅನಾವರಣಗೊಳಿಸಲಿದ್ದಾರೆ. ಬಿಡುಗಡೆಯ ನಂತರ, ಇದನ್ನು ಶೃಂಗಸಭೆಯ ಉದ್ದಕ್ಕೂ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಇದು ವಿದ್ಯಾರ್ಥಿಗಳು, ನವೋದ್ಯಮಿಗಳು, ಉದ್ಯಮ ಮುಖಂಡರು ಮತ್ತು ಸಂದರ್ಶಕರು ಇದನ್ನು ಬಳಸಲು ಮತ್ತು ರಾಜ್ಯಾದ್ಯಂತ ಸಾಮೂಹಿಕ ಬಳಕೆಗೆ ಕೈಗೆಟುಕುವ ಕೃತಕ ಜಾಣ್ಮೆಯ ಕಾಂಪ್ಯಾಕ್ಟ್ ಕಂಪ್ಯೂಟರ್ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ.
ಕೆಇಒ ಡಿಜಿಟಲ್ ಅಂತರ ಕಡಿಮೆ ಮಾಡುವುದಕ್ಕೆ ಕರ್ನಾಟಕದ ಪ್ರಾಯೋಗಿಕ ಉತ್ತರವಾಗಿದೆ. ಇದು ಐಷಾರಾಮಿ ಸಾಧನವಲ್ಲ. ಇದು ಎಲ್ಲರಿಗೂ ಲಭ್ಯವಾಗುವ ಅಗ್ಗದ ಸಾಧನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ, ಸಣ್ಣ ವ್ಯಾಪಾರಿ ಮತ್ತು ಪ್ರತಿ ಮನೆಯು ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಿಯೋ ಪಿಸಿ ಚಿಪ್ ಸ್ಟಾರ್ಟ್ ಅಪ್ ಕಂಪನಿಯದ್ದಾಗಿದ್ದು, ಉಳಿದ ತಂತ್ರಜ್ಞಾನ, ಹಾರ್ಡ್ವೇರ್ಗಳನ್ನು ಕಿಯೋನಿಕ್ಸ್ ಅಭಿವೃದ್ಧಿಪಡಿಸಿದೆ. ಐಐಐಟಿ ಧಾರವಾಡ, ಐಐಎಸ್ಸಿಯಲ್ಲಿ ಈ ಕಿಯೋ ಕಂಪ್ಯೂಟರನ್ನು ಪರೀಕ್ಷೆಗೊಳಪಡಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಿಯೋ ಪಿಸಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಗತ್ಯ ಅಪ್ಡೇಟ್ಗಳನ್ನು ಮಾಡಲಾಗಿದೆ. ಈಗಾಗಲೇ ವಿವಿಧ ಕಂಪನಿಗಳಿಂದ ಸುಮಾರು 500 ಕಿಯೋ ಪಿಸಿಗಳಿಗೆ ಆರ್ಡರ್ ಬಂದಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಕಿಯೋವನ್ನು ಉತ್ಪಾದಿಸುವ ಬಗ್ಗೆ ಚಿಂತನೆ ಇದೆ ಎಂದು ತಿಳಿಸಿದರು.
ಹೆಚ್ಚು ಜನರಿಗೆ ಕೈಗೆಟುಕುವ ದರದಲ್ಲಿ ಕಂಪ್ಯೂಟರ್ ಸಿಗಬೇಕಿದೆ. ಒಂದು ವರ್ಷದೊಳಗೆ KEO ಕಂಪ್ಯೂಟರ್ ಅನ್ನು ನಾವು ಲಾಂಚ್ ಮಾಡ್ತಿದ್ದೇವೆ. ನಾಳೆ KEOನ ಬೆಲೆಯನ್ನು ನಾವು ಬಹಿರಂಗ ಪಡಿಸಲಿದ್ದೇವೆ. ಮಂಗಳವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯನವರು ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟನೆ ಮಾಡಲಿದ್ದಾರೆ. ಅಲ್ಲಿ ಇದನ್ನು ಅನಾವರಣಗೊಳಿಸಲಿದ್ದೇವೆ ಎಂದು ವಿವರಿಸಿದರು.
ಲಾಂಚ್ ಆದ ಮೇಲೆ Keonext.in ವೆಬ್‌ಸೈಟ್‌ನಲ್ಲಿ ಫ್ರೀ ಬುಕಿಂಗ್ಗೆ ಅವಕಾಶ ಇರಲಿದೆ. ಬುಕಿಂಗ್ ಮಾಡಿದ ಎರಡು ತಿಂಗಳಲ್ಲಿ ವಿತರಣೆ ಮಾಡ್ತೇವೆ. ಕಿಯೋನಿಕ್ಸ್ ಮೂಲಕ ಎಲೆಕ್ಟ್ರಾನಿಕ್ ಕ್ರಾಂತಿ ಮಾಡುವ ಗುರಿ ಇದೆ. ಸೆಮಿಕಂಡಕ್ಟರ್ ಕಂಪನಿ, ಸೆಮಿಕಂಡಕ್ಟರ್ ಚಿಪ್ ಡಿಸೈನ್ ಕಂಪನಿಯೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಕಂಪನಿಯ ಹೆಸರನ್ನು ಸದ್ಯದಲ್ಲೇ ಬಹಿರಂಗ ಮಾಡ್ತೇವೆ ಎಂದರು.
ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ಕೆಇಒಐಸಿಎಸ್ ಎಲೆಕ್ಟ್ರಾನಿಕ್ಸ್ ನಾವೀನ್ಯತೆಯ ಧ್ಯೇಯವನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಲವು ತೋರುತ್ತಿದೆ. ಓಪನ್-ಸೋರ್ಸ್ ಆರ್‌ಐಎಸ್‌ಸಿ-ವಿ ಸ್ಟ್ಯಾಕ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ʼಕೆಇಒʼ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ, ಸ್ಥಳೀಯವಾಗಿ ಅಳವಡಿಸಿಕೊಳ್ಳುವ, ರಾಜ್ಯದಲ್ಲಿಯೇ ಅಭಿವೃದ್ಧಿಪಡಿಸುವ ಕಂಪ್ಯೂಟಿಂಗ್ ಪರಿಹಾರಗಳಿಗೆ ಕರ್ನಾಟಕದ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಶಾಲೆಗಳು, ವಿಶ್ವವಿದ್ಯಾಲಯಗಳು, ಸಣ್ಣ ಉದ್ದಿಮೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ಕೆಇಒ ಬಳಕೆಯಾಗಲಿದೆ. ಡಿಜಿಟಲ್ ಕಲಿಕೆ, ಕೌಶಲ ಮತ್ತು ಉದ್ಯಮಶೀಲತೆಗೆ ಇದು ಹೊಸ ಮಾರ್ಗಗಳನ್ನು ಸೃಷ್ಟಿಸಲಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಕೇಂದ್ರೀಕೃತ ತಂತ್ರಜ್ಞಾನದ ಬೆಳವಣಿಗೆ ಸಾಧಿಸುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಡಿಜಿಟಲ್ ಅವಕಾಶವನ್ನು ಖಚಿತಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಧ್ಯೇಯವನ್ನು ಸಾಕಾರಗೊಳಿಸಲು ನೆರವಾಗಲಿದೆ ಎಂದಿದ್ದಾರೆ.
ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe
