ಮಂಡ್ಯ| ದೇಗುಲದೊಳಗೆ ದಲಿತರು ಪ್ರವೇಶಿಸಿದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ್ರು

ಮಂಡ್ಯ : ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರ ಪ್ರವೇಶ ಮಾಡಿದ್ದಾರೆ ಎಂದು ಸವರ್ಣೀಯರು ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಹೊರಗಡೆ ತಂದಿಟ್ಟು, ದಲಿತರೊಡನೆ ಅಮಾನವೀಯವಾಗಿ ನಡೆದುಕೊಂಡ ಘಟನೆ ಜರುಗಿದೆ.

ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರು ಪ್ರವೇಶಿಸಿ ಪೂಜೆ ಸಲ್ಲಿಸಿದರು. ದಲಿತರ ಪ್ರವೇಶದಿಂದ ದೇವರಿಗೆ ಅವಮಾನ ಮಾಡಿದ್ದಾರೆ ಎಂದು ಸವರ್ಣೀಯರು ಕೂಗಾಡುತ್ತಾ, ದೇಗುಲದಿಂದ ಉತ್ಸವ ಮೂರ್ತಿಯನ್ನು ಹೊರತಂದು, ದೇವಾಲಯದ ನಾಮಫಲಕ ಆಚೆ ಎಸೆದು, ದಲಿತರನ್ನು ನಿಂದಿಸಿದ್ದಾರೆ. ಸದ್ಯ ಹನಕೆರೆ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿದೆ.

ಕಳೆದ 2 ವರ್ಷಗಳ ಹಿಂದೆ ದೇವಾಲಯ ಪುನರ್ ನಿರ್ಮಾಣ ಮಾಡಲಾಗಿದೆ. ಬಳಿಕ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ದೇಗುಲ ಸೇರುತ್ತಿದ್ದಂತೆ ದಲಿತರ ಪ್ರವೇಶಕ್ಕೆ ಕೆಲ ಪ್ರಭಾವಿ ಸವರ್ಣೀಯರು ಒಪ್ಪುತ್ತಿಲ್ಲ. ಈ ಕುರಿತಾಗಿ ಈಗಾಗಲೇ ಎರಡು ಬಾರಿ ನಡೆಸಿದ ಶಾಂತಿ ಸಭೆಯೂ ವಿಫಲಾವಾದ ಹಿನ್ನೆಲೆಯಲ್ಲಿ ನಾವು ದೇವಸ್ಥಾನ ಪ್ರವೇಶಿಸಿದೆವು ಎಂದು, ತಾರಾ ಎಚ್ ಎಸ್ ಜನಶಕ್ತಿ ಮೀಡಿಯಾಗೆ ತಿಳಿಸಿದರು.

ತಹಶಿಲ್ದಾರ್ ಶಿವಕುಮಾರ್ ಬಿರದಾರ್ ಪ್ರತಿಕ್ರಿಯಿಸಿದ್ದು, ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎಂದು ನಮಗೆ ದೂರು ಕೊಟ್ಟಿದ್ದರು. ದಲಿತ ಕುಟುಂಬದವರಿಗೆ ಪ್ರವೇಶ ಇಲ್ಲ ನಮಗೆ ಮಾಹಿತಿ ಕೊಟ್ಟಿದ್ದರು. 4 ತಿಂಗಳ ಹಿಂದೆ ಎಲ್ಲಾರು ದೇವಸ್ಥಾನಕ್ಕೆ ಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ಇಲ್ಲಿ ಸಮಸ್ಯೆ ಉಂಟಾಗಿದೆ. ಇದು ಮುಜುರಾಯಿ ದೇವಸ್ಥಾನವಾಗಿದೆ. ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಇದೆ ಎಂದಿದ್ದಾರೆ. ನಿರಾಕರಿಸಿದವರ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ದಲಿತರ ದೇಗುಲ ಪ್ರವೇಶಕ್ಕೆ ಸವರ್ಣೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲ ಅವರೇ ಇಟ್ಟುಕೊಳ್ಳಲಿ, ದೇವರನ್ನ ಕೊಂಡೊಯುತ್ತೇವೆ. ಎಂದು ಕೆಲವರು ಪ್ರತಿಭಟನೆ ನಡೆಸಿದರು. ಈ ಮಧ್ಯೆ ಪೊಲೀಸರ ಭದ್ರತೆ ನಡುವೆ 40 ಮಹಿಳೆಯರೂ ಸೇರಿದಂತೆ ನೂರಾರು ದಲಿತರು ದೇಗುಲ ಪ್ರವೇಶಿಸಿದ್ದಾರೆ. ಸದ್ಯ ಹನಕೆರೆ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು ನಾವೆಲ್ಲರೂ ಡಿಜಿಟಲ್ ಯುಗದಲ್ಲಿದ್ದರೂ ಕೂಡ ಕರ್ನಾಟಕದ ಹಲವು ಭಾಗಗಳಲ್ಲಿ ಅಸ್ಪೃಶ್ಯತೆ ಇನ್ನೂ ಪ್ರಚಲಿತದಲ್ಲಿದೆ. ಮರಕುಂಬಿಯಲ್ಲಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ 98 ಜನ‌ಸವರ್ಣೀಯರಿಗೆ ಜೀವಾವಧಿ ಶಿಕ್ಷೆಯಾಗಿದ್ದರೂ, ದಲಿತರ ಮೇಲಿನ‌ ದೌರ್ಜನ್ಯಗಳು ಮುಂದುವರೆದಿರುವುದು ಕಳವಳಿಕಾರಿಯಾಗಿದೆ.

 

Donate Janashakthi Media

Leave a Reply

Your email address will not be published. Required fields are marked *