ಯು.ಕೆ : ಅಭೂತಪಾರ್ವ ಫ್ಯಾಸಿಸ್ಟ್ ದಂಗೆಗಳೂ, “ಫ್ಯಾಸಿಸಂ ವಿರುದ್ಧ ಒಟ್ಟಾಗಿ ನಿಲ್ಲಿ” ಪ್ರತಿರೋಧವೂ

ಸೌತ್ ಪೋರ್ಟ್ ಎಂಬಲ್ಲಿ ಮೂವರು ಹುಡುಗಿಯರ ಹತ್ಯೆಯ ನಂತರದ ದಿನಗಳಲ್ಲಿ ಯು.ಕೆ ಯ 35 ಕ್ಕೂ ಹೆಚ್ಚು ನಗರಗಳಲ್ಲಿ ಉಗ್ರ-ಬಲಪಂಥೀಯ ಪಡೆಗಳ ದಂಗೆಗಳನ್ನು ಕಂಡಿವೆ. ಈ ಜನಾಂಗ-ದ್ವೇಷಿ ಮತ್ತು ಮುಸ್ಲಿಂ-ದ್ವೇಷಿ ದಂಗೆಗಳು ಯು.ಕೆ ಯಲ್ಲಿ ಹಿಂದೆಂದೂ ಕಾಣದ ಪ್ರಮಾಣ ಮತ್ತು ಭೀಕರತೆಯಲ್ಲಿ ಇದ್ದವು ಎನ್ನಲಾಗಿದೆ. ಎಲ್ಲೆಡೆ ಫ್ಯಾಸಿಸ್ಟ್ ಪ್ರಚೋದಕರಿಗೆ ಪ್ರತಿಕ್ರಿಯೆಯಾಗಿ ಸ್ವಯಂ-ಸ್ಫೂರ್ತವಾಗಿ “ಫ್ಯಾಸಿಸಂ ವಿರುದ್ಧ ಒಟ್ಟಾಗಿ ನಿಲ್ಲಿ” ಯಂತಹ ಫ್ಯಾಸಿಸ್ಟ್ ವಿರೋಧಿ ಒಕ್ಕೂಟಗಳು ಸಹ ಹೊರಹೊಮ್ಮಿವೆ. ಈ ಫ್ಯಾಸಿಸ್ಟ್ ದಂಗೆಗಳು ಪ್ರಪಂಚದಾದ್ಯಂತ ಇತರ ಉಗ್ರ ಬಲಪಂಥೀಯ ಚಳುವಳಿಗಳಲ್ಲಿ ಕಂಡು ಬರುತ್ತಿರುವ ಪ್ರವೃತ್ತಿಯ ಬ್ರಿಟಿಷ್ ಅಭಿವ್ಯಕ್ತಿಯಾಗಿದೆ. ಯುಕೆ ಯಲ್ಲಿ ಇದಕ್ಕೆ ಕಾರಣವಾದ ಅದರದ್ದೇ ಆದ ಇತಿಹಾಸವಿದೆ. ಇವೆಲ್ಲದರ ಕುರಿತು ಒಂದು ಸ್ಥೂಲ ನೋಟ, ನವ-ನಾಜಿಗಳ ಬೀದಿ ಹಿಂಸಾಚಾರ ಮತ್ತು ಆಳುವವರ ಪ್ರತಿಗಾಮಿ ಕಾರ್ಯಸೂಚಿಗಳ ನಡುವಿನ ನೇರ ಸಂಬಂಧವನ್ನು ಸೂಚಿಸುತ್ತದೆ.

ಈ ವಾರಾಂತ್ಯದಲ್ಲಿ (ಅಗಸ್ಟ್ 3-4) ಯುಕೆ ಯಾದ್ಯಂತ ಫ್ಯಾಸಿಸ್ಟ್ ಗಲಭೆಗಳು ಮತ್ತು ಮುಸ್ಲಿಂ ವಿರೋಧಿ ದ್ವೇಷದ ಮೆರವಣಿಗೆಗಳು ಹಿಂಸಾಚಾರವನ್ನು ಪ್ರಚೋದಿಸಿದವು. ಸೌತ್ ಪೋರ್ಟ್ ಎಂಬಲ್ಲಿ ನೃತ್ಯ ತರಗತಿಯಲ್ಲಿ ಮೂವರು ಯುವತಿಯರನ್ನು ಮಾರಣಾಂತಿಕವಾಗಿ ಇರಿದ ಘಟನೆಯನ್ನು ಉಗ್ರ-ಬಲಪಂಥೀಯ ಪಡೆಗಳು ದುರ್ಬಳಕೆ ಮಾಡಿಕೊಂಡವು. ಆನ್-ಲೈನ್ ನಲ್ಲಿ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಅಣಿ ನೆರೆಸಲಾದ ಹಿಂಸಾತ್ಮಕ ಉಗ್ರ-ಬಲಪಂಥೀಯ ಗ್ಯಾಂಗುಗಳು ಮಸೀದಿಗಳು ಮತ್ತು ನಿರಾಶ್ರಿತರು ಮತ್ತು ಆಶ್ರಯ ಕೇಳಿ ಬಂದವರು ವಾಸಿಸುತ್ತಿರುವ ಹೋಟೆಲ್ ಗಳ ಮೇಲೆ ದಾಳಿಗಳನ್ನು ಪ್ರಾರಂಭಿಸಿತು. ಈ ಗ್ಯಾಂಗುಗಳು ಕಿಟಕಿಗಳನ್ನು ಒಡೆದು ಕಟ್ಟಡಗಳನ್ನು ಸುಡಲು ಪ್ರಯತ್ನಿಸಿ, ಜರ್ಮನಿಯ ಭೀಕರ ನಾಜಿ ಹಿಂಸಾಚಾರವನ್ನು ನೆನಪಿಸುವ ದೃಶ್ಯಗಳು ಕೆಲವು ಪಟ್ಟಣಗಳಲ್ಲಿ ಕಾಣಿಸಿದವು.

ರೊಥರ್ ಹ್ಯಾಮ್ ಪಟ್ಟಣದಲ್ಲಿ ಅಗಸ್ಟ್ 4ರಂದು ಗಲಭೆಕೋರರು ಆಶ್ರಯ ಕೇಳಿ ಬಂದವರು ತಂಗಿರುವ ಹಾಲಿಡೇ ಇನ್ ಮೇಲೆ ಆಕ್ರಮಣ ಮಾಡಿದರು. ಗಾಜು ಒಡೆಯುವ ಶಬ್ದದೊಂದಿಗೆ ಗೋಡೆಗಳು ಪ್ರತಿಧ್ವನಿಸಿದವು ಮತ್ತು ಫ್ಯಾಸಿಸ್ಟರು ಕಟ್ಟಡದಲ್ಲಿ ಹಲವು ಕಡೆ ಬೆಂಕಿ ಹಚ್ಚಿ ಒಳಗೆ ಸಿಲುಕಿದ್ದ ನಿರಾಶ್ರಿತರನ್ನು ಸುಟ್ಟು ಸಾಯಿಸುವ ಪ್ರಯತ್ನದಲ್ಲಿ ದಟ್ಟ ಹೊಗೆಯಾಡಿತು. ನೂರಾರು ಪ್ರತಿ-ಪ್ರದರ್ಶಕರು ಆಗಮಿಸಿದ ನಂತರ ಕಾರ್ಡಿಫ್ ನಲ್ಲಿ ಇದೇ ರೀತಿಯ ಭೀಕರ ದಾಳಿಯನ್ನು ಹಿಮ್ಮೆಟ್ಟಿಸಲಾಯಿತು. ಅಲ್ಲಿದ್ದ ಬೃಹತ್ ಸಂಖ್ಯೆಯ ಫ್ಯಾಸಿಸ್ಟ್ ಗುಂಪನ್ನು ಓಡಿಸಲಾಯಿತು. ಲಿವರ್ಪೂಲ್, ಸುಂದರ್ಲ್ಯಾಂಡ್, ಲೀಡ್ಸ್ ಮತ್ತು ಇತರ ಸ್ಥಳಗಳಲ್ಲಿ, ಜನಾಂಗವಾದ-ವಿರೋಧಿ ಪ್ರದರ್ಶನಕಾರರು ಸಹ ಪ್ರತಿ-ಪ್ರದರ್ಶನಗಳ ಕರೆಗೆ ಓಗೊಟ್ಟು ನೆರೆದರು.

ಇದನ್ನೂ ಓದಿ: ಶೀಘ್ರದಲ್ಲೇ ಭಾರತಕ್ಕೆ ದೊಡ್ಡ ಸುದ್ದಿ: ಹಿಂಡೆನ್‌ಬರ್ಗ್ ಹೊಸ ಬಾಂಬ್!

ಅಗಸ್ಟ್ 5ರಂದು ಕಡಲತೀರದ ಇಂಗ್ಲಿಷ್ ಪಟ್ಟಣವಾದ ಸೌತ್ ಪೋರ್ಟಲ್ಲಿ, 17 ವರ್ಷದ ಶಸ್ತ್ರಸಜ್ಜಿತ ಹುಡುಗ, ನೃತ್ಯ ಪಾಠ ಮತ್ತು ಯೋಗ ಕಾರ್ಯಾಗಾರದೊಳಹೆ ನುಗ್ಗಿ ಮೂವರು ಹುಡುಗಿಯರ ಹತ್ಯೆ ಮಾಡಿದ ನಂತರ, ಉಗ್ರ ಬಲಪಂಥೀಯ ಪಡೆಗಳು ಹಿಂಸಾಚಾರದ ಚಕ್ರ ಪ್ರಾರಂಭಿಸಿದವು. ಈ ಪ್ರಕರಣದಲ್ಲಿ ಗಂಭೀರ ಸ್ಥಿತಿಯಲ್ಲಿರುವ ಐವರು ಸೇರಿದಂತೆ ಇತರ ಎಂಟು ಮಕ್ಕಳು ಗಾಯಗೊಂಡಿದ್ದಾರೆ. ಇಬ್ಬರು ವಯಸ್ಕರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ದಾಳಿಕೋರನು ಅಪ್ರಾಪ್ತನಾಗಿದ್ದ ಕಾರಣ, ಅವನ ಗುರುತನ್ನು ಆರಂಭದಲ್ಲಿ ಕಾನೂನಿಗೆ ಅನುಗುಣವಾಗಿ ಪೊಲೀಸರು ತಡೆಹಿಡಿದರು. ಫ್ಯಾಸಿಸ್ಟ್ ಮತ್ತು ಬಿಳಿಯ ಪ್ರಾಬಲ್ಯವಾದಿ ಗುಂಪುಗಳು ತಮ್ಮದೇ ಆದ ಉದ್ದೇಶಪೂರ್ವಕ ತಪ್ಪು ಮಾಹಿತಿ ಮತ್ತು ಅಪರಾಧಿಯ ಬಗ್ಗೆ ಸುಳ್ಳುಗಳನ್ನು ಹರಡಲು ಈ ಮಾಹಿತಿ ನಿರ್ವಾತದ ಲಾಭವನ್ನು ಪಡೆದುಕೊಂಡವು. ದಾಳಿಕೋರ ಮುಸ್ಲಿಂ ಮತ್ತು ವಲಸಿಗ ಎಂದು ಸುಳ್ಳು ಹೇಳಿಕೆಗಳನ್ನು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಯಿತು.

ಅಪರಾಧಿ, ಮುಸ್ಲಿಂ ವಿರೋಧಿ ‘ಇಂಗ್ಲಿಷ್ ಡಿಫೆನ್ಸ್ ಲೀಗ್’ ನ ಸಂಸ್ಥಾಪಕ ಮತ್ತು ಬಲಪಂಥೀಯ ಯು.ಎಸ್ ಬಿಲಿಯಾಧೀಶರ ಮತ್ತು ಫ್ಯಾಸಿಸ್ಟ್ ಚಿಂತನಾ ಕೂಟಗಳ ಮಿತ್ರ ನವ-ನಾಜಿ ನಾಯಕ ಟಾಮಿ ರಾಬಿನ್ಸನ್, ಈ ಅಪಪ್ರಚಾರದ ಹಿಂದಿದ್ದ ಪ್ರಮುಖ ವ್ಯಕ್ತಿ. ಬಿಳಿ ರಾಷ್ಟ್ರೀಯತಾವಾದಿ ಗುಂಪು “ಪೇಟ್ರಿಯಾಟಿಕ್ ಆಲ್ಟರ್ನೇಟಿವ್” ಮತ್ತಷ್ಟು ಸುಳ್ಳುಗಳ ಸುನಾಮಿ ಹರಡಲು ಮತ್ತು ಪ್ರತಿಭಟನೆಗಳನ್ನು ಸಂಘಟಿಸಲು ಟೆಲಿಗ್ರಾಮ್ ಸಂದೇಶ ವೇದಿಕೆಯನ್ನು ಬಳಸಿತು. ಮೂವರು ಹುಡುಗಿಯರ ಹತ್ಯೆಯ ನಂತರದ ದಿನಗಳಲ್ಲಿ 35 ಕ್ಕೂ ಹೆಚ್ಚು ನಗರಗಳ ಈ ಉಗ್ರ-ಬಲಪಂಥೀಯ ಪಡೆಗಳಿಂದ ಕಾನೂನುಬಾಹಿರ ಗಲಭೆಗಳನ್ನು ಕಂಡಿವೆ. ಈ ಜನಾಂಗ ಮತ್ತು ಮುಸ್ಲಿಂ ದ್ವೇಷಿ ದಂಗೆಗಳು ಯು.ಕೆ ಯಲ್ಲಿ ಹಿಂದೆಂದೂ ಕಾಣದ ಪ್ರಮಾಣ ಮತ್ತು ಭೀಕರತೆಯಲ್ಲಿ ಇದ್ದವು ಎನ್ನಲಾಗಿದೆ.

ನ್ಯಾಯಾಧೀಶರು ಅಂತಿಮವಾಗಿ ಉಗ್ರ-ಬಲಪಂಥೀಯರ ದಂಗೆಯನ್ನು ಕುಗ್ಗಿಸುವ ಪ್ರಯತ್ನದಲ್ಲಿ ಇರಿತದ ಶಂಕಿತನನ್ನು ಸಾರ್ವಜನಿಕವಾಗಿ ಗುರುತಿಸಲು ಪೊಲೀಸರಿಗೆ ಅವಕಾಶ ನೀಡಿದರು. ನಿರೀಕ್ಷೆಯಂತೆ, ಆಕ್ರಮಣಕಾರರ ಧರ್ಮ ಮತ್ತು ವಲಸೆಯ ಸ್ಥಿತಿಯ ಬಗ್ಗೆ ಅವರು ಮಾಡಿದ ಎಲ್ಲಾ ಸುದ್ದಿಗಳು ಹಸಿ ಸುಳ್ಳು ಎಂಬುದು ಬಯಲಾಯಿತು. ದಾಳಿಕೋರ ಯುಕೆಯಲ್ಲಿಯೇ ಜನಿಸಿದವ ಮತ್ತು ಕ್ರಿಶ್ಚಿಯನ್ ಎಂಬುದು ತಿಳಿದು ಬಂತು.

ಫ್ಯಾಸಿಸಂ ವಿರುದ್ಧ ಒಟ್ಟಾಗಿ ನಿಲ್ಲಿ !

ಸೌತ್ ಪೋರ್ಟ್ ಹತ್ಯೆಗಳಿಗೆ ಮುಂಚೆಯೇ ಬ್ರಿಟನಿನ ಫ್ಯಾಸಿಸ್ಟರು ಈಗಾಗಲೇ ದೊಡ್ಡ ರೀತಿಯಲ್ಲಿ ಅಣಿ ನೆರೆಯಲಾರಂಭಿಸಿದ್ದರು. ಅವರಲ್ಲಿ 15,000 ಜನರು ಕಳೆದ ವಾರಾಂತ್ಯದಲ್ಲಿ ಲಂಡನ್ ನಲ್ಲಿ, ಸಂಸತ್ತಿನ ಚುನಾವಣೆಯಲ್ಲಿ ಟ್ರಂಪ್ ಮಿತ್ರ ನಿಗೆಲ್ ಫರಾಜ್ ಅವರ ನಾಯಕತ್ವದ ಜನಾಂಗವಾದಿ ‘ರಿಫೋರ್ಮ್ ಯುಕೆ’ ಪಕ್ಷದ ದೊಡ್ಡ ಗೆಲುವನ್ನು ಸಂಭ್ರಮದಿಂದ ಆಚರಿಸಲು ಭಾರೀ ಮೆರವಣಿಗೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಫ್ಯಾಸಿಸ್ಟ್-ವಿರೋಧಿ ಪ್ರತಿಭಟನಕಾರರು ಅವರಿಗೆ ಇದಿರಾದರು. ಓಸ್ವಾಲ್ಡ್ ಮೊಸ್ಲಿಯ ಫ್ಯಾಸಿಸ್ಟ್ ‘ಬ್ಲ್ಯಾಕ್ ಶರ್ಟ್’ ಗಳನ್ನು 1936 ರ ಕೇಬಲ್ ಸ್ಟ್ರೀಟ್ ಕದನ’ ದಲ್ಲಿ ಯಹೂದಿಗಳು, ಕಮ್ಯುನಿಸ್ಟರು ಮತ್ತು ಯೂನಿಯನಿಸ್ಟರು ಹಿಮ್ಮೆಟ್ಟಿಸಿದಾಗಿನ ನೆನಪಿಸುವ ಚಿತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ‘ಫ್ಯಾಸಿಸಂ ವಿರುದ್ಧ ಒಟ್ಟಾಗಿ ನಿಲ್ಲಿ’ (Stand Upto Fascism) ಸಹ-ಸಂಚಾಲಕ ವೇಮನ್ ಬೆನೆಟ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡುತ್ತಾ “ಪ್ರತಿ ಬಾರಿ ಟಾಮಿ ರಾಬಿನ್ಸನ್ ಜನಾಂಗೀಯ ಮತ್ತು ನಾಜಿ ಕೊಲೆಗಡುಕರನ್ನು ಬೀದಿಗೆ ತಂದಾಗ, ಅವರನ್ನು ವಿರೋಧಿಸಲು ನಾವು ಇರುತ್ತೇವೆ.” ಎಂದರು.

ಸೌತ್ ಪೋರ್ಟ್ ಘಟನೆಯ ನಂತರ ನಂತರ, ಎಲ್ಲೆಡೆ ಫ್ಯಾಸಿಸ್ಟ್ ಪ್ರಚೋದಕರು ತಲೆ ಎತ್ತಿದ್ದಾರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಸ್ವಯಂ-ಸ್ಫೂರ್ತವಾಗಿ ಫ್ಯಾಸಿಸ್ಟ್ ವಿರೋಧಿ ಒಕ್ಕೂಟಗಳು ಹೊರಹೊಮ್ಮಿವೆ. ಮುಸ್ಲಿಂ ಗುಂಪುಗಳು, ಟ್ರೇಡ್ ಯೂನಿಯನ್ ಗಳು, ಪ್ಯಾಲೆಸ್ಟೈನ್ ಸೌಹಾರ್ದ ಬೆಂಬಲ ಸಂಘಟನೆಗಳು ಮತ್ತು “ಬ್ಲ್ಯಾಕ್ ಲೈವ್ಸ್ ಮ್ಯಾಟರ್” ಗುಂಪುಗಳು – ಎಲ್ಲವೂ ಈ ಪ್ರಯತ್ನದಲ್ಲಿ ಕೈಜೋಡಿಸಿವೆ. ಕಾರ್ಡಿಫ್ ನಲ್ಲಿ, “ಬ್ಲ್ಯಾಕ್ ಲೈವ್ಸ್ ಮ್ಯಾಟರ್” ವಕ್ತಾರ ಕ್ವಾಬೆನಾ ಡೆವೊನಿಶ್ ಅವರು “ಫ್ಯಾಸಿಸ್ಟರನ್ನು ನಮ್ಮ ಬೀದಿಗಳಿಂದ ಹೊರದಬ್ಬಲು ಮತ್ತು ಜನಾಂಗೀಯ ವಿಷವನ್ನು ನಮ್ಮ ಸಮುದಾಯಗಳಲ್ಲಿ ಹರಡದಂತೆ ತಡೆಯಲು ಒಕ್ಕೂಟಗಳು
ಜನಾಂಗೀಯ-ವಿರೋಧಿ ಪ್ರತಿರೋಧವನ್ನು ನಿರ್ಮಿಸುವುದನ್ನು ಮುಂದುವರಿಸಬೇಕು” ಎಂದು ಹೇಳಿದರು. ವೇಲ್ಸ್ ನಲ್ಲಿ, ಟಿಯುಸಿ (ಟ್ರೇಡ್ಸ್ ಯೂನಿಯನ್ ಕಾಂಗ್ರೆಸ್) ಸಿಮ್ರು ಕ್ಷೇತ್ರದ ಕಾರ್ಮಿಕ ನಾಯಕ ಶವಾನಾ ತಾಜ್ ಮಾತನಾಡಿ, ಸೌತ್ ಪೋರ್ಟ ಜನರೊಂದಿಗೆ ಮತ್ತು ಉಗ್ರ ಬಲಪಂಥೀಯ ಪಡೆಗಳಿಂದ ಆಕ್ರಮಣಕ್ಕೊಳಗಾದ ಸಮುದಾಯಗಳೊಂದಿಗೆ ಕಾರ್ಮಿಕರ ಸೌಹಾರ್ದ ಬೆಂಬಲವನ್ನು ಒತ್ತಿಹೇಳಿದರು.

ಸರಕಾರದ, ಆಡಳಿತದ ಪ್ರತಿಕ್ರಿಯೆ

ಈ ಬಿಕ್ಕಟ್ಟಿನ ನಡುವೆ ಹಲವಾರು ಸರ್ಕಾರಿ ವ್ಯಕ್ತಿಗಳ ಮಾತುಗಳು ಮತ್ತು ಕ್ರಮಗಳು ಸಹ ವಿವಾದಾಸ್ಪದವಾಗಿವೆ. ಹಿರಿಯ ಪೊಲೀಸ್ ಕಮಿಷನರ್, ಕನ್ಸರ್ವೇಟಿವ್ ಪಕ್ಷದ ರಾಜಕಾರಣಿ ಡೊನ್ನಾ ಜೋನ್ಸ್, ತಮಗೆ ಫ್ಯಾಸಿಸ್ಟರೊಂದಿಗೆ ಸಹಾನುಭೂತಿಯಿದೆ ಎಂದು ಸ್ವತಃ ಬಹಿರಂಗಪಡಿಸಿದರು. ಅವರನ್ನು ಬಂಧಿಸುವುದು “ರೋಗಲಕ್ಷಣಕ್ಕೆ ಚಿಕಿತ್ಸೆ ನೀಡುತ್ತಿದೆಯೇ ಹೊರತು ರೋಗದ ಮೂಲ ಕಾರಣಕ್ಕಲ್ಲ” ಎಂದು ಅವರು ಹೇಳಿದರು. 2017 ರ ಚಾರ್ಲೊಟೆಸ್ವಿಲ್ಲೆ ನವ-ನಾಜಿ ಮೆರವಣಿಗೆಗಳ ನಂತರ ಪ್ರತಿಭಟನಾಕಾರರು “ಬ್ರಿಟನಿನ ಸಾರ್ವಭೌಮತ್ವವನ್ನು ರಕ್ಷಿಸುವ ಬಯಕೆ ” ಮತ್ತು “ಬ್ರಿಟಿಷ್ ಮೌಲ್ಯಗಳನ್ನು ಎತ್ತಿಹಿಡಿಯುವ ಅಗತ್ಯತೆಯ ಮೇಲೆ” ಕೇಂದ್ರೀಕರಿಸಿದ್ದಾರೆ ಎಂದು ಜೋನ್ಸ್ ಹೇಳಿದ್ದರು. ನಂತರ ಅವರು ಲೇಬರ್ ಪಕ್ಷದ ಸರ್ಕಾರವು “ಸಾಮೂಹಿಕ ಅನಿಯಂತ್ರಿತ ವಲಸೆಗೆ ಯಾವುದೇ ಪರಿಹಾರವನ್ನು ಹೊಂದಿಲ್ಲ” ಎಂದು ಆರೋಪಿಸಿದರು. ಫ್ಯಾಸಿಸ್ಟ್ ಗಲಭೆಗಳಿಗೆ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರ ಪ್ರಾಥಮಿಕ ಪ್ರತಿಕ್ರಿಯೆಯು, ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ಪಡೆಯುವುದಕ್ಕೆ ಸೀಮಿತವಾಗಿದೆ. ಇದು ತಾತ್ಕಾಲಿಕವಲ್ಲ ಮತ್ತು ವಾಸ್ತವವಾಗಿ ಭವಿಷ್ಯದಲ್ಲಿ ಎಡ, ಜನಾಂಗೀಯ-ವಿರೋಧಿ, ಕಾರ್ಮಿಕ ಮತ್ತು ಶಾಂತಿ ಚಳುವಳಿಗಳ ವಿರುದ್ಧ ಬಳಸಲ್ಪಡುತ್ತದೆ ಎಂದು ಅನೇಕ ಪ್ರಗತಿಪರರು ಎಚ್ಚರಿಸಿದ್ದಾರೆ.

ಸಾರ್ವಜನಿಕ ಭದ್ರತಾ ಕ್ಯಾಮೆರಾಗಳಲ್ಲಿ ‘ಮುಖ ಗುರುತಿಸುವಿಕೆ ತಂತ್ರಜ್ಞಾನ’ ದ ಬಳಕೆಯನ್ನು ವಿಸ್ತರಿಸುವ ಉದ್ದೇಶವನ್ನು ಪ್ರಧಾನಿ ಘೋಷಿಸಿದರು ಮತ್ತು ರಾಜಕೀಯ ಪ್ರತಿಭಟನೆಗಳಲ್ಲಿ ತೊಡಗಿರುವ ಜನರ ಚಲನೆಯನ್ನು ನಿರ್ಬಂಧಿಸಲು “ಕ್ರಿಮಿನಲ್ ನಡವಳಿಕೆಯ ಆದೇಶಗಳ” ಬಳಕೆಯನ್ನು ಹೆಚ್ಚಿಸಿದರು. ಅಲ್ಪಸಂಖ್ಯಾತರ ಮತ್ತು ರಾಜಕೀಯ ಚಳುವಳಿಗಾರರ ಮೇಲೆ ಈಗಾಗಲೇ ಇರುವ “ಪೋಲಿಸ್ ದಬ್ಬಾಳೀಕೆ”ಯನ್ನು ಇದು ಹೆಚ್ಚಿಸಲಿದೆ ಎಂದು ಮಾನವ ಹಕ್ಕುಗಳ ವೀಕ್ಷಕರು ಹೇಳಿದ್ದಾರೆ. ಬ್ರಿಟನ್ ಕಮ್ಯುನಿಸ್ಟ್ ಪಕ್ಷವು ಭಾನುವಾರ ತಡರಾತ್ರಿ ಹೇಳಿಕೆಯನ್ನು ನೀಡಿದ್ದು, ಫ್ಯಾಸಿಸ್ಟ್ ದಾಳಿಗಳು ಮತ್ತು ಸರ್ಕಾರದ ಪ್ರತಿಕ್ರಿಯೆ “ಮುಸ್ಲಿಮರು ಅಥವಾ ಕಪ್ಪು ಸಮುದಾಯಗಳನ್ನು ರಕ್ಷಿಸಲು, ಎಡ ಮತ್ತು ಟ್ರೇಡ್ ಯೂನಿಯನ್ ಚಳವಳಿಯು ನಿರಾಶ್ರಿತರು ಪೊಲೀಸರನ್ನು ನಂಬಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ…ನಾವೆಲ್ಲರೂ ನಮ್ಮ ಸಮುದಾಯಗಳನ್ನು ರಕ್ಷಿಸಬೇಕು ಮತ್ತು ನಮ್ಮ ಬೀದಿಗಳನ್ನು ಒಟ್ಟಾಗಿ ವಾಪಸು ಪಡೆಯಬೇಕು.” ಎಂದು ಹೇಳಿದೆ.

ಫ್ಯಾಸಿಸ್ಟ್ ದಂಗೆಗಳ ಮೂಲಕಾರಣ 

ಕಳೆದ ವಾರ ಯು.ಕೆ ನಲ್ಲಿ ಸ್ಫೋಟಗೊಂಡ ವಲಸೆ-ವಿರೋಧಿ ಮತ್ತು ಮುಸ್ಲಿಂ ವಿರೋಧಿ ಹಿಂಸಾಚಾರವು ಪ್ರಪಂಚದಾದ್ಯಂತದ ಇತರ ಉಗ್ರ ಬಲಪಂಥೀಯ ಚಳುವಳಿಗಳಲ್ಲಿ ಕಂಡುಬರುತ್ತಿರುವ ಪ್ರವೃತ್ತಿಯ ಬ್ರಿಟಿಷ್ ಅಭಿವ್ಯಕ್ತಿಯಾಗಿದೆ. ಯುಕೆ ಯಲ್ಲಿ ಇದಕ್ಕೆ ಕಾರಣವಾದ ಅದರದ್ದೇ ಆದ ಇತಿಹಾಸವಿದೆ.  ಯುಕೆ ಯಲ್ಲಿ ಈ ಫ್ಯಾಸಿಸ್ಟ್ ದಂಗೆಗಳ ಮೂಲಕಾರಣ ಶೋಧಿಸಬೇಕಾದರೆ 50 ವರ್ಷಗಳಷ್ಟು ಹಿಂದಕ್ಕೆ 80ರ ದಶಕದ ಮಾರ್ಗರೇಟ್ ಥ್ಯಾಚರ್ ಆಡಳಿತದ ಅವಧಿಗೆ ಮತ್ತು ಆ ನಂತರದ ಥ್ಯಾಚರ್ ವಾದಿ ರಾಜಕಾರಣ ವನ್ನು ವಿಶ್ಲೇಷಿಸಬೇಕು.. ಟ್ರೇಡ್ ಯೂನಿಯನ್ ಗಳ ಸೊಂಟ ಮುರಿಯಲು ಹೊರಟ ಥ್ಯಾಚರ್, ಆ ಪ್ರಕ್ರಿಯೆಯಲ್ಲಿ ಯುಕೆ ಯ ಕೈಗಾರಿಕಾ ಉತ್ಪಾದನೆಯ ವಲಯವನ್ನೇ ನಾಶ ಮಾಡಿದರು. ಕಲ್ಲಿದ್ದಲು ಗಣಿ, ಉಕ್ಕಿನ ಕಾರ್ಖಾನೆ ಮುಂತಾದವಕ್ಕೆ ಪ್ರಸಿದ್ಧವಾಗಿದ್ದ ಬ್ರಿಟಿಷ್ಉ ದ್ಯಮಗಳನ್ನು ನಾಶ ಮಾಡಿದರು. ಸಾರ್ವಜನಿಕ ಸೇವೆಗಳಲ್ಲಿ ಯೂನಿಯನುಗಳು ಪ್ರಬಲವಾಗಿದ್ದರಿಂದ ಅವುಗಳ ಖಾಸಗೀಕರಣವನ್ನು ಸಹ ಮಾಡಿದರು. 80ರ ದಶಕದ ಯುಕೆಯ ‘ಥ್ಯಾಚರ್ ವಾದ’ ಮತ್ತು ಯು.ಎಸ್ ನ ‘ರೇಗನ್ ವಾದ’ ನವ-ಉದಾರವಾದಿ ನೀತಿಗಳ ಹರಿಕಾರನಾಗಿತ್ತು. ಯುಕೆ ಯಲ್ಲಿ ಲೇಬರ್ ಒಳಗೊಂಡಂತೆ ಯಾವ ಸರಕಾರ ಬಂದರೂ ‘ಥ್ಯಾಚರ್ ವಾದ’, ‘ಮಿತವ್ಯಯ’ ‘ಹೊಸ ಲೇಬರ್’ ಮುಂತಾದ ವಿವಿಧ ಹೆಸರುಗಳಲ್ಲಿ ಮುಂದುವರೆಯಿತು.

ಯುಕೆ ಯಲ್ಲಿ ಕಳೆದ ಅರ್ಧ ಶತಮಾನದ – ಅಪ-ಕೈಗಾರಿಕೀಕರಣ, ಸಾರ್ವಜನಿಕ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಬಡವಾಗಿಸಿ ದುರ್ಬಲಗೊಳಿಸಿದ್ದು, ಹಣದುಬ್ಬರದಿಂದ ಜೀವನಮಟ್ಟ ಕುಸಿಯುತ್ತಿದ್ದದ್ದು, ವೇತನದಲ್ಲಿ ತೀವ್ರ ಕಡಿತ, ಶ್ರೀಮಂತರಿಗೆ ಹೆಚ್ಚಿನ ನೇರ ತೆರಿಗೆ ವಿನಾಯಿತಿಗಳು ಮತ್ತು ಉಳಿದವರಿಗೆ ಪರೋಕ್ಷೆ ತೆರಿಗೆ ಹೊರಿಸುವ ತೆರಿಗೆ ನೀತಿ – ಇತ್ಯಾದಿ ‘ಥ್ಯಾಚರ್ ವಾದಿ’ ನೀತಿಗಳು ಇಂದಿನ ಬಿಕ್ಕಟ್ಟಿನ ಮೂಲ. ಯುಕೆ ಯುರೋ ಕೂಟ ಸೇರಿದ್ದು ಪೂರ್ವ ಯುರೊಫಿನ ವಲಸೆಗಾರರ ಅಲೆ ಸೃಷ್ಟಿಸಿತು. ಅದನ್ನು ಕಾರ್ಮಿಕ ವೇತನ ಕಡಿತ ಮಾಡಲು, ಅವರನ್ನು ಬೆದರಿಸಲು ಇದ್ದಬದ್ದ ಯೂನಿಯನ್ ಒಡೆಯಲು ಯುಕೆ ಯ ಕಾರ್ಪೊರೆಟುಗಳು ಬಳಸಿಕೊಂಡವು.

ಯುಕೆ ಸಕ್ರಿಯ ಪಾತ್ರ ವಹಿಸಿದ ನಾಟೋ ಯುದ್ಧಗಳು ಸೃಷ್ಟಿಸಿದ ವಲಸಿಗರು ಯುಕೆ ಗೆ ದೊಡ್ಡ ಪ್ರಮಾಣದಲ್ಲಿ ವಲಸೆ ಬರುತ್ತಿದ್ದಾರೆ. ತಮ್ಮ ಹಿಂದಿನ “ವಸಾಹತುಶಾಹಿ ಸುವರ್ಣ ಯುಗದ ಆರ್ಥಿಕ ಪ್ರಾಬಲ್ಯದ” ಹುಸಿ ಕನಸನ್ನು ಬೆಂಬತ್ತಿ ಯುರೋ ಕೂಟದಿಂದ ಹೊರಬಂದ ಬ್ರೆಕ್ಸಿಟ್ ನೀತಿ ಮತ್ತು ಇತ್ತೀಚಿನ ಉಕ್ರೇನ್ ಯುದ್ಧದ ನಂತರ ರಶ್ಯಾದ ಮೇಲೆ ಹೊರಿಸಲಾದ ಆರ್ಥಿಕ ದಿಗ್ಬಂಧನ ಯುಕೆ ಯ ಆರ್ಥಿಕವನ್ನು ಇನ್ನಷ್ಟು ಹದಗೆಡಿಸಿದೆ.  ಇವೆಲ್ಲದರ ಪರಿಣಾಮವಾಗಿ ಉತ್ತಮ-ವೇತನಗಳ ಉದ್ಯೋಗಗಳು ಮಾಯವಾಗಿವೆ. ನಿರುದ್ಯೋಗ ಅದರಲ್ಲೂ ಯುವಜನರಲ್ಲಿ ಭೀಕರ ನಿರುದ್ಯೋಗ ತಾಂಡವವಾಡುತ್ತಿದೆ. ಸರಕು-ಸೇವೆಗಳ ಕೊರತೆ, ಭಾರೀ ಬೆಲೆಏರಿಕೆ ಗಂಭಿರ ಪ್ರಮಾಣದಲ್ಲಿ ಬಾಧಿಸುತ್ತಿವೆ.

ನವ-ನಾಜಿಗಳ ಬೀದಿ ಹಿಂಸಾಚಾರ, ಆಳುವವರ ಪ್ರತಿಗಾಮಿ ಕಾರ್ಯಸೂಚಿಗಳ ನಡುವಿನ ನೇರ ಸಂಪರ್ಕ

ಟೋರಿ, ಲಿಬರಲ್ ಅಥವಾ ಲೇಬರ್, ಈ ನವ-ಉದಾರವಾದಿ ಆರ್ಥಿಕ ದಾಳಿಗೆ ವಿಶ್ವಾಸಾರ್ಹ ಪರ್ಯಾಯವನ್ನು ನೀಡಲು ವಿಫಲವಾಗಿವೆ; ಬದಲಿಗೆ ಅವರು ವಾಸ್ತವವಾಗಿ ಅದನ್ನು ಉತ್ತೇಜಿಸಿದ್ದಾರೆ. ಥ್ಯಾಚರ್ ವಾದಿ ನೀತಿಗಳಿಗಾಗಲಿ, ವಲಸೆ ಪ್ರಶ್ನೆಗಾಗಲಿ, ಉಕ್ರೇನ್ ಯುದ್ಧ ಸೇರಿದಂತೆ ನಾಟೋ ಯುದ್ಧಗಳ ಬಗ್ಗೆ, ಗಾಜಾದಲ್ಲಿ ಪ್ಯಾಲೆಸ್ಟೈನ್ ನರಮೇಧದ ಬಗ್ಗೆಯಾಗಲಿ ಈ ಈ ಸಾಂಫ್ರದಾಯಿಕ ಪಕ್ಷಗಳ ನಡುವೆ ಭಾರಿ ಭಿನ್ನಾಭಿಪ್ರಾಯವಿಲ್ಲ. ಬ್ರೆಕ್ಸಿಟ್ ಬಗ್ಗೆ ಮಾತ್ರ ಲೇಬರ್ ವಿರೋಧ ವ್ಯಕ್ತ ಪಡಿಸಿತ್ತು.

ವಲಸೆಗಾರರ, ಗಾಜಾ ನರಮೇಧ ದ ಪ್ರಶ್ನೆ ಯಲ್ಲಿ ಮತ್ತು ಮುಸ್ಲಿಂ-ದ್ವೇಷದ ಉಗ್ರ ಬಲಪಂಥೀಯರ ಆಕ್ರೋಶದ ಬೆಂಕಿಗೆ ಇವು ತುಪ್ಪ ಎರೆದಿವೆ. ಈ ಪಕ್ಷಗಳ ವಿಫಲತೆ ಬಗ್ಗೆ ಜನರ ಆಕ್ರೋಶವನ್ನು ವಲಸೆಗಾರರ, ಮುಸ್ಲಿಮರ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ನವ-ನಾಜಿಗಳ ಬೀದಿ ಹಿಂಸಾಚಾರ ಮತ್ತು ಮುಖ್ಯವಾಹಿನಿಯ ಬಂಡವಾಳಶಾಹಿ ಪಕ್ಷಗಳ ದೊಡ್ಡ ಪ್ರತಿಗಾಮಿ ಕಾರ್ಯಸೂಚಿಗಳ ನಡುವಿನ ನೇರ ಸಂಬಂಧವನ್ನು ಇವು ಸೂಚಿಸುತ್ತವೆ. ಆದರೆ ಆ ಮೂಲಕ ಇವು ತಮ್ಮ
ಚುನಾವಣಾ ಭವಿಷ್ಯದ ಮೇಲೆ ಸಹ ಕೊಡಲಿಯೇಟು ಹಾಕಿಕೊಂಡಿವೆ. ಯುಕೆ ಯ ದುಡಿಯುವ ಜನರ, ಸಮಾಜವಾದಿ, ಶಾಂತಿವಾದಿಗಳ, ಅಲ್ಪಸಂಖ್ಯಾತ ಸಮುದಾಯಗಳ ಸಂಘಟನೆಗಳು ಚಳುವಳಿಗಳು ಇದಕ್ಕೆ ‘ಫ್ಯಾಸಿಸಂ ವಿರುದ್ಧ ಒಟ್ಟಾಗಿ ನಿಲ್ಲಿ’ (Stand Upto Fascism) ನಂತಹ ಸಂಘಟಿತ ಪ್ರತಿರೋಧ ಒಡ್ಡುತ್ತಿವೆ
ಎಂಬುದು ಮಾತ್ರ ಆಶಾದಾಯಕ ಬೆಳವಣಿಗೆಯಾಗಿದೆ.

ಇದನ್ನೂ ನೋಡಿ: ‘ಆಕಾಶಕ್ಕೆ ಏಣಿ ಹಾಕು’ ಕವನ ಸಂಕಲನದ ಕುರಿತು ಎಸ್. ಜಿ.‌ಸಿದ್ದರಾಮಯ್ಯ ಮಾತುಗಳುJanashakthi Media

Donate Janashakthi Media

Leave a Reply

Your email address will not be published. Required fields are marked *