ಸರಕಾರಗಳು ಶಿಕ್ಷಣ ಕ್ಷೇತ್ರವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದ್ದಾರೆ? ಶಿಕ್ಷಣ ನಿಜಕ್ಕೂ ಎಲ್ಲರ ಸ್ವತ್ತಾಗುತ್ತಿದೆಯಾ? ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಂದ ಶಿಕ್ಷಣದ ಮೂಲ ಆಶಯ ಏನಾಗುತ್ತಿದೆ? ಉನ್ನತ ಶಿಕ್ಷಣದ ಅಪಹರಣಕ್ಕೆ ಯಾರು ಹೊಣೆ? ಎಂದು ಉನ್ನತ ಶಿಕ್ಷಣದ ಕ್ಷೇತ್ರದ ಕುರಿತು ಹತ್ತು ಹಲವು ಪ್ರಶ್ನಗಳು ಮೂಡುತ್ತಿವೆ.
ಭಾರತದಲ್ಲಿ ಉನ್ನತ ಶಿಕ್ಷಣ ಪ್ರಾಚೀನ ಕಾಲದಿಂದಲೂ ಹೆಚ್ಚು ಮಹತ್ವ ಪಡೆದುಕೊಂಡ ಕ್ಷೇತ್ರ. ಪ್ರಾಚೀನ ಕಾಲದ ನಳಂದ, ತಕ್ಷಶೀಲ, ಕಂತಿ, ಓದಂಟಪುರಿ, ಉಜ್ಜಯಿನಿ, ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದಲ್ಲದೆ ದೇಶ ವಿದೇಶದಿಂದ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಆಕರ್ಷಿಸುತ್ತಿದ್ದವು. ಪ್ರಾಚೀನ ಕಾಲದಿಂದಲೂ ಉನ್ನತ ಶಿಕ್ಷಣ ಆಳುವ ವರ್ಗದ ಮತ್ತು ಶ್ರೀಮಂತರ ಹಿತಕ್ಕೆ ರಕ್ಷಣೆಗೆ ಮಾತ್ರ ಮೀಸಲಾಗಿತ್ತೇ ವಿನಃ ಸಾಮಾನ್ಯ ಜನರಿಗೆ ಸಿಗುತ್ತಿರಲಿಲ್ಲ. ಆಧುನಿಕ ಕಾಲದಲ್ಲಿ ಬ್ರಿಟಿಷ್ ರು, ಉನ್ನತ ಶಿಕ್ಷಣ ಮುಕ್ತವಾಗಿ ನೀಡುವ ಉದ್ದೇಶದಿಂದ ಭಾರತದಲ್ಲಿ 1858ರಲ್ಲಿ ಕಲ್ಕತ್ತ, ಬಾಂಬೆ ಮತ್ತು ಮದ್ರಾಸ್ ನಲ್ಲಿ ಮೂರು ವಿಶ್ವವಿದ್ಯಾಲಯ ಆರಂಭಿಸಿದರು. 1916ರಲ್ಲಿ 16 ವಿಶ್ವವಿದ್ಯಾನಿಲಯಗಳನ್ನು ಭಾರತದಲ್ಲಿ ಆರಂಭಿಸಿದರು. ಸ್ವಾತಂತ್ರ ನಂತರ ಉನ್ನತ ಶಿಕ್ಷಣದ ಕ್ಷೇತ್ರ ವಿಶಾಲವಾಗಿ ವಿಸ್ತರಿಸುತ್ತಾ ಹೋಯಿತು.
1991 ರಿಂದ ಉನ್ನತ ಶಿಕ್ಷಣ ಸುಧಾರಣೆಗಳ ಬಗ್ಗೆ ಸಲಹೆ ನೀಡುವ ವರದಿಗಳು ಆರಂಭಗೊಂಡವು, ಬಹುತೇಕ ಆ ವರದಿಗಳು ಖಾಸಗೀಕರಣ, ಉದಾರೀಕರಣ, ವಿದೇಶಿಕರಣಕ್ಕೆ ಆದ್ಯತೆ ನೀಡಿವೆ. 19 ನೇ ಶತಮಾನ ಕೃಷಿಯ ವಾಣಿಜ್ಯಕರಣಕ್ಕೆ ಪ್ರೊತ್ಸ್ಸಾಹವನ್ನು ನೀಡಿದರೆ. 21 ನೇ ಶತಮಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉನ್ನತ ಶಿಕ್ಷಣವನ್ನು ಖಾಸಗೀಕರಣ ಮತ್ತು ವಾಣಿಜ್ಯಕರಣಗೊಳಿಸಿವೆ. ಕೇಂದ್ರದಲ್ಲಿ ಈ ಹಿಂದೆ ಹಲವು ದಶಕಗಳ ಕಾಲ ಆಳ್ವಿಕೆ ನಡೆಸಿದ ಯು.ಪಿ.ಎ ಸರ್ಕಾರ ಅನುಸರಿಸಿದ ಖಾಸಗೀಕರಣ ಹಾಗೂ ನವ ಉದಾರೀಕರಣ ನೀತಿಗಳ ಪರಿಣಾಮ ಶಿಕ್ಷಣ ಕ್ಷೇತ್ರವು ದಿವಾಳಿಯಂಚಿಗೆ ತಲುಪಿತ್ತು. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರವು ಹಿಂದಿನ ಯುಪಿಎ ಸರಕಾರ ಅನುಸರಿಸಿದ ಖಾಸಗೀಕರಣ ಹಾಗೂ ನವ ಉದಾರೀಕರಣ ನೀತಿಗಳನ್ನು ಚಾಚೂ ತಪ್ಪದೇ ಜಾರಿ ಮಾಡಲು ಮುತುವರ್ಜಿ ವಹಿಸುವ ಜೊತೆಗೆ ಶಿಕ್ಷಣ ಕ್ಷೇತ್ರವನ್ನು ಕೋಮುವಾದೀಕರಣಗೊಳಿಸುವ ಹಾಗೂ ಶಿಕ್ಷಣ ಕ್ಷೇತ್ರದ ಮೇಲೆ ಧಾಳಿ ನಡೆಸಲು ಮುಂದಾಗಿದೆ. ಅದಕ್ಕಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ 2020 ರಲ್ಲಿ 100 ಖಾಸಗಿ ವಿ.ವಿ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಆರಂಭಿಸುವುದಾಗಿ ಹೇಳಿದೆ. ಈಗ ಕರ್ನಾಟಕದಿಂದಲೆ ಅದಕ್ಕೆ ಚಾಲನೆ ನೀಡಲಾಗಿದೆ. ಮೊನ್ನೆ ನಡೆದ ವಿಧಾನ ಸಭಾ ಅಧೀವೇಶನದಲ್ಲಿ ಐದು ಖಾಸಗಿ ವಿವಿಗಳಿಗೆ ಅನುಮತಿ ನೀಡಲು ಮುಂದಾಗಿದೆ. ವಿದ್ಯಾಶಿಲ್ಪ ವಿಶ್ವವಿದ್ಯಾನಿಲಯ, ಏಟ್ರಿಯಾ ವಿಶ್ವವಿದ್ಯಾಲಯ, ನ್ಯೂ ಹೊರೈಜನ್ ವಿಶ್ವವಿದ್ಯಾನಿಲಯ, ಜಗದ್ಗುರು ಮುರುಘ ರಾಜೇಂದ್ರ ವಿಶ್ವವಿದ್ಯಾನಿಲಯ ವಿಧೇಯಕ ಅಂಗೀಕಾರಗೊಂಡಿದೆ. ಸೇಂಟ್ ಜೋಸೆಫ್ ವಿವಿ ವಿಧೇಯಕ ಅಂಗಿಕಾರಕ್ಕೆ ರಾಜ್ಯಪಾಲರ ಒಪ್ಪಿಗೆ ಬೇಕಾದ ಹಿನ್ನೆಲೆಯಲ್ಲಿ ವಿಧೇಯಕ ಮಂಡನೆಯನ್ನು ಮುಂದೂಡಲಾಗಿದೆ.
ಬಿಜೆಪಿ ಸರಕಾರ ಅಧಿಕಾರವಿದ್ದಾಗಲೆಲ್ಲ ಖಾಸಗಿ ವಿ.ವಿ ಸ್ಥಾಪನೆ ಮಾಡುತ್ತಿದೆ. ಹಿಂದೆ ಸಿ.ಟಿ ರವಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ 20 ಕ್ಕೂ ಹೆಚ್ಚು ಖಾಸಗಿ ವಿ.ವಿ ಗಳ ಸ್ಥಾಪನೆ ಮಾಡಿದ್ದರು. ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡುವ ಮೂಲಕ ಶಿಕ್ಷಣವನ್ನು ಉಳ್ಳವರಪರ ಮಾಡುತ್ತಿದ್ದಾರೆ. ಸಂಶೋಧನಾ ಶಿಕ್ಷಣವನ್ನು ತಳ ಸಮುದಾಯಗಳು ಪಡೆಯಬಾರದು ಎಂಬುದು ಬಿಜೆಪಿ ಉದ್ದೇಶವಾಗಿದೆ. ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಸರ್ಕಾರಿ 30 ವಿಶ್ವ ವಿದ್ಯಾಲಯಗಳಿವೆ, 14 ಡೀಮ್ಡ್ ವಿಶ್ವ ವಿದ್ಯಾಲಯಗಳಿವೆ, 22 ಖಾಸಗಿ ವಿವಿ ಸೇರಿದಂತೆ ಒಟ್ಟು 65 ವಿಶ್ವ ವಿದ್ಯಾಲಯಗಳಿವೆ. ಅದರಲ್ಲಿ ಖಾಸಗಿಯವರು ಪಾಲು ಹೆಚ್ಚಿದೆ. 35 ಖಾಸಗಿ ವಿಶ್ವ ವಿದ್ಯಾಲಯಗಳು ಕರ್ನಾಟಕದಲ್ಲಿ ಈಗ ತಲೆ ಎತ್ತಿವೆ. ಉನ್ನತ ಶಿಕ್ಷಣವನ್ನು ಮಾರುಕಟ್ಟೆಯ ಸರಕನ್ನಾಗಿಸಲು ಯತ್ನಿಸಿಲಾಗುತ್ತಿದೆ ಎಂಬುದು ಈ ಅಂಕಿ ಅಂಶಗಳಿಂದ ಸಾಬೀತಾಗಿದೆ. ಖಾಸಗಿ ವಿಶ್ವ ವಿದ್ಯಾಲಯಗಳು ಶಿಕ್ಷಣದ ಮೂಲ ಆಶಯವನ್ನೆ ನಾಶಮಾಡುತ್ತವೆ. ಕೇಂದ್ರ, ರಾಜ್ಯ ಸರಕಾರಗಳು ಶಿಕ್ಷಣವನ್ನು ಉಳ್ಳವರ ಪರವಾಗಿಸುವ ಕೆಲಸವನ್ನು ಮಾಡುತ್ತಿವೆ ಎಂದು ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಚಂದ್ರ ಪೂಜಾರಿಯವರು ಆರೋಪವನ್ನು ಮಾಡಿದ್ದಾರೆ.
ಡೀಮ್ಡ್ ವಿಶ್ವ ವಿದ್ಯಾಲಯಗಳು ಕೂಡಾ ಮುಂದೆ ಖಾಸಗಿ ವಿ.ವಿ ತೆರೆಯಲು ಅರ್ಜಿಯನ್ನು ಸಲ್ಲಿಸುತ್ತವೆ ಆಗ ಅವುಗಳಿಗೂ ಅನುಮತಿ ಕೊಟ್ಟರೆ ಆಶ್ವರ್ಯವಿಲ್ಲ, ಸರ್ಕಾರ ಖಾಸಗೀ ಸಹಭಾಗಿತ್ವ ಹೆಸರಿನಲ್ಲಿ ಎಲ್ಲಾ ಹಂತದಲ್ಲಿ ಶಿಕ್ಷಣವನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ ಎಂದು ಶಿಕ್ಷಣ ತಜ್ಙ ಶ್ರೀಪಾದ್ ಭಟ್ ಆರೋಪಿಸಿದ್ದಾರೆ.
ಸಂವಿಧಾನ ಬದ್ದ ಶಿಕ್ಷಣದ ಹಕ್ಕನ್ನು ಎಲ್ಲರಿಗೂ ತಲುಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸರಕಾರಿ ಶಾಲೆಗಳನ್ನು ಮುಚ್ಚಿದಂತೆ ಸರಕಾರಿ ಕಾಲೇಜು, ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭೀತಿ ಎದುರಾಗಿದೆ. ವ್ಯಾಪಾರಿ ಮನೋಭಾವದ ಸರಕಾರಗಳು ಶಿಕ್ಷಣವನ್ನು ಉಳ್ಳವರ ಪರವಾಗಿಸಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಶಿಕ್ಷಣಕ್ಕೆ ನೀಡಿದ ಆಧ್ಯತೆಯನ್ನು ನಮ್ಮ ಕೇಂದ್ರ ರಾಜ್ಯ ಸರಕಾರಗಳು ಅಧ್ಯಯನ ಮಾಡಬೇಕಿದೆ. ಶಿಕ್ಷಣ ಜಗತ್ತನ್ನು ಬದಲಿಸಬಹುದಾದ ಅತ್ಯಂತ ಶಕ್ತಿಯುತವಾದ ಆಯುಧ ಎಂಬ ನೆಲ್ಸನ್ ಮಂಡೇಲಾರ ಆಶಯವನ್ನು ಜಾರಿ ಮಾಡಲು ಮುಂದಾಗಬೇಕಿದೆ.