ಚಿತ್ರದುರ್ಗ : ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರುವ ಸಂದರ್ಭದಲ್ಲಿ ಮಠದ ಅವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ.
ಮುರುಘಾ ಮಠದಲ್ಲಿ ಮಗು ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗು ನಾಲ್ಕೂವರೆ ವರ್ಷದ ಹಿಂದೆ ಮಠದ ಮುಂದಿನ ಕಾಂಪೌಂಡ್ ನಲ್ಲಿ ಸಿಕ್ಕಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಫೈರೋಜಾ ಎಂಬ ಮಹಿಳೆ ನಾಲ್ಕುವರೆ ವರ್ಷದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದು, ಮಗು ಹುಟ್ಟಿದ ನಾಲ್ಕೈದು ದಿನಗಳಲ್ಲಿ ಮಠದ ಮುಂದೆ ಕಾಂಪೌಂಡ್ ಪಕ್ಕದಲ್ಲಿ ಸಿಕ್ಕಿತ್ತು. ಈ ವೇಳೆ ಆ ಮಗುವಿನ ಬಳಿ ಪತ್ರವಿತ್ತು. ಅದರಲ್ಲಿ ದಯವಿಟ್ಟು ಮಗುವನ್ನು ಮಠಕ್ಕೆ ಸೇರಿಸಬೇಕು ಎಂದು ಬರೆಯಲಾಗಿತ್ತು. ಹೀಗಾಗಿ ಸ್ವಾಮೀಜಿ, ಮಠದ ಸಿಬ್ಬಂದಿಯನ್ನು ಇಲ್ಲಿ ಕಳುಹಿಸಿ, ಮಗುವನ್ನು ತೆಗೆದುಕೊಂಡು ಹೋಗಿದ್ದರು. ಸ್ಥಳೀಯರು ಮಗುವನ್ನು ಕೊಡುವಂತೆ ಮಠಕ್ಕೆ ಹೋಗಿ ಕೇಳಿದಾಗ ಸ್ವಾಮೀಜಿ ಸ್ಥಳೀಯರ ಹತ್ತಿರ ಆಸ್ತಿ ಏನಾದರೂ ಇದ್ದರೇ ಅದನ್ನು ಮಗುವಿನ ಹೆಸರಿಗೆ ಬರೆಸಿ, ಆಗ ಮಗುವನ್ನು ಕೊಡುತ್ತೇವೆ ಎಂದು ತಿಳಿಸಿದ್ದರು ಎಂದು ಮಹಿಳೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ಪೋಕ್ಸೋ ಪ್ರಕರಣ: ಮುರುಘಾ ಸ್ವಾಮಿ ನ್ಯಾಯಾಂಗ ಬಂಧನ ಅ.21ರ ತನಕ ವಿಸ್ತರಣೆ
ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾದ ಬೆನ್ನಲ್ಲೇ ವಸತಿ ಶಾಲೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಶಿಫ್ಟ್ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಗುವಿನ ಪೋಷಕರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಮುರುಘಾ ಮಠದಲ್ಲಿ ಹಲವು ಮಕ್ಕಳನ್ನು ಅನಧಿಕೃತವಾಗಿ ಇರಿಸಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನೊಂದೆಡೆ ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ಪತ್ತೆಯಾಗಿರುವ ನಾಲ್ಕು ವರ್ಷದ ಚಿಗುರು ಎಂಬ ಹೆಣ್ಣು ಮಗುವಿನ ಪೋಷಕರ ಪತ್ತೆಗಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪತ್ರಿಕಾ ಜಾಹೀರಾತು ನೀಡಿದ್ದಾರೆ.