ಬೆಂಗಳೂರು :ದೇಶದ ಅಭಿವೃದ್ಧಿಗಾಗಿ ತಮ್ಮ ದುಡಿಮೆಯ ಮೂಲಕ ಶ್ರಮಿಸುತ್ತಿರುವ ಎಲ್ಲ ಜನರಿಗೆ ತಮ್ಮ ಇಳಿವಯಸ್ಸಿನಲ್ಲಿ ಆರ್ಥಿಕ ಭದ್ರತೆಗಾಗಿ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಅಗತ್ಯವಿದ್ದು ಸರ್ಕಾರ ಇಚ್ಚಾಶಕ್ತಿ ತೋರಿದಲ್ಲಿ ಇದನ್ನು ಜಾರಿಗೊಳಿಸುವುದು ಸಾಧ್ಯವಿದೆ ಎಂದು ಖ್ಯಾತ ಆರ್ಥಿಕ ತಜ್ಞರಾದ ಪ್ರಭಾತ್ ಪಟ್ನಾಯಕ್ ತಿಳಿಸಿದ್ದಾರೆ.
ಅವರು ಇಂದು ನಗರದ ಎನ್ ಜಿ ಓ ಹಾಲ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಪಿಂಚಣಿ ಯೋಜನೆಯ ಅವಶ್ಯಕತೆ ಕುರಿತು ನಡೆದ ರಾಜ್ಯ ಮಟ್ಟದ ವಿಚಾರಸಂಕಿರಣ ದಲ್ಲಿ ಭಾಗವಹಿಸಿ ಮಾತನಾಡುತ್ತಾ, ಭಾರತದಲ್ಲಿ ಈಗ ಅತಿ ಕಡಿಮೆ ಸಂಖ್ಯೆಯ ಸಂಘಟಿತ ವಲಯದ ನೌಕರರು ಮಾತ್ರ ಪಿಂಚಣಿ ಪಡೆಯುತ್ತಿದ್ದು, ಅದೂ ಕೂಡಾ ಜಿ ಡಿ ಪಿ ಯ ಬೆಳವಣಿಗೆಗೆ ಅನುಸಾರವಾಗಿ ಹೆಚ್ಚಾಗುತ್ತಿಲ್ಲ. ಇನ್ನು ಬಡತನ ರೇಖೆಗಿಂತ ಕೆಳಗಿರುವ ಸ್ವಲ್ಪ ಮಂದಿಗೆ ಕನಿಷ್ಠ ಮಟ್ಟದ ಪಿಂಚಣಿ ನೀಡಲಾಗುತ್ತಿದೆ. ಎಲ್ಲ ಹಿರಿಯ ನಾಗರಿಕರಿಗೂ ಕನಿಷ್ಠ ಮೂರು ಸಾವಿರದಷ್ಟು ಸಾರ್ವಜನಿಕ ಪಿಂಚಣಿಯನ್ನು ನೀಡಲು ಜನರ ಮೇಲೆ ಮತ್ತಷ್ಟು ತೆರಿಗೆ ವಿಧಿಸಬೇಕಾಗಿಲ್ಲ. ಬದಲಿಗೆ ಶೇಕಡಾ ಒಂದರಷ್ಟು ಇರುವ ದೇಶದ ಆಗರ್ಭ ಶ್ರೀಮಂತರಿಗೆ ಕೇವಲ ಎರಡರಷ್ಟು ಸಂಪತ್ತು ತೆರಿಗೆ ವಿಧಿಸಿದರೆ ಸಾಕಾಗುತ್ತದೆ. ಹಾಗೆಯೇ ಪಿತ್ರಾರ್ಜಿತ ಆಸ್ತಿಯ ಮೇಲೂ ಒಂದರಿಂದ ಎರಡು ಶೇಕಡಾ ತೆರಿಗೆ ವಿಧಿಸಬಹುದು ಎಂದರು. ಸರ್ಕಾರಗಳು ಈಗಿರುವ ಸಾಮಾಜಿಕ ಮೂಲಭೂತ ಹಕ್ಕುಗಳ ಜೊತೆಗೆ ಆರ್ಥಿಕ ಮೂಲಭೂತ ಹಕ್ಕುಗಳನ್ನು ನೀಡಬೇಕು. ಈ ಮೂಲಕ ಎಲ್ಲರಿಗೂ ಆಹಾರ, ಉದ್ಯೋಗ, ಆರೋಗ್ಯ, ಉತ್ತಮ ಶಿಕ್ಷಣ ಮತ್ತು ಕಡ್ಡಾಯ ನಿವೃತ್ತಿ ವೇತನಗಳನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ವಿಚಾರಸಂಕಿರಣ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಕುಂಞಕೃಷ್ಣನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪಿಂಚಣಿ ಪಾವತಿಯು ವೇತನದ ಹಾಗೆಯೇ ದುಡಿಯುವ ಜನರ ಹಕ್ಕಾಗಿದ್ದು ಅದನ್ನು ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿಯಾಗಿದೆ. ಕೇರಳ ಸರ್ಕಾರ 1980 ರಲ್ಲಿಯೇ ಅರವತ್ತು ಮೀರಿದ ಕೃಷಿ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಜಾರಿಗೊಳಿಸಿತ್ತು. ಈಗಲೂ ಸಹ ಕೇರಳದಲ್ಲಿ ಸಾರ್ವಜನಿಕ ಪಿಂಚಣಿ ವ್ಯವಸ್ಥೆಯಡಿ ಮೂರು ಸಾವಿರ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಕೆಲವು ಇತರ ರಾಜ್ಯಗಳಲ್ಲಿ ಸಹ ಸಾರ್ವಜನಿಕ ಪಿಂಚಣಿಯನ್ನು ನೀಡಲಾಗುತ್ತಿದೆ ಎಂದರು.
ಅಖಿಲ ಭಾರತ ವಿಮಾ ನೌಕರರ ಸಂಘದ ಪೂರ್ವ ಅಧ್ಯಕ್ಷ ಅಮಾನುಲ್ಲಾ ಖಾನ್ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಆರ್ಥಿಕ ಅಸಮಾನತೆ ಹೊಂದಿರುವ ಭಾರತದಂತಹ ದೇಶದಲ್ಲಿ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು, ಸಮಾವೇಶಗಳು, ಜನಾಂದೋಲನಗಳನ್ನು ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಇಂತಹ ಜನ ಜಾಗೃತಿಯಿಂದ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಕಾರ್ಮಿಕ ಸಂಘಟನೆಗಳಿಂದ ಮಾತ್ರ ಸಾಧ್ಯ ಎಂದರು.
ಸಿಐಟಿಯು ನೇತೃತ್ವದಲ್ಲಿ ನಡೆಸಿದ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ಸ್ಥಾಪನೆಯ ಮೂಲಕ ಲಕ್ಷಾಂತರ ಕಾರ್ಮಿಕರಿಗೆ ಇಳಿ ವಯಸ್ಸಿನ ವೇಳೆ ಕನಿಷ್ಠ ಪಿಂಚಣಿ ನೀಡುವುದು ಸಾಧ್ಯವಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದರು. ಇತ್ತೀಚೆಗೆ ಜಾರಿಯಾಗಿರುವ ಹೊಸ ಪಿಂಚಣಿ ಯೋಜನೆ ಯಾದ ಎನ್ ಪಿ ಎಸ್ ನಿಂದ ಕಾರ್ಮಿಕರಿಗೆ ಯಾವುದೇ ನಿಶ್ಚಿತ ಆರ್ಥಿಕ ಭದ್ರತೆ ಇಲ್ಲ. ಅದನ್ನು ಕೂಡಲೇ ಹಿಂದಕ್ಕೆ ಪಡೆದು ಎಲ್ಲರಿಗೂ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ವಿಮಾ ನೌಕರರ ಸಂಘಟನೆಗಳ ನಾಯಕರಾದ ಆನಂದ್, ಎಸ್ ಕೆ ಗೀತಾ, ಕೃಷ್ಣಮೂರ್ತಿ ಮತ್ತಿತರು ಮಾತನಾಡಿ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ, ಮುಂಬರುವ ಚುನಾವಣೆಯ ವೇಳೆ ಈ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಅಗ್ರಹಿಸಲಾಗುವುದು ಎಂದರು.
ವಿಮಾ ವಲಯದ ಪ್ರಮುಖ ಸಂಘಟನೆಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಈ ವಿಚಾರ ಸಂಕಿರಣದಲ್ಲಿ ರಾಜ್ಯದ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.