“ರಾಷ್ಟ್ರವಾದದ ಸೋಗಿನಲ್ಲಿ ಜೇಬುತುಂಬಿಸಿಕೊಳ್ಳಲು ಸಂಸ್ಕೃತಿಯ ಮೇಲೆ ದಾಳಿಯನ್ನು ಪ್ರತಿರೋಧಿಸಬೇಕು” ಕೇರಳ ಸ್ಟೋರಿ
ಮಾರ್ಚ್ 2024 ರಲ್ಲಿ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಚಲನಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗಿದೆ. ‘ದಿ ಕೇರಳ ಸ್ಟೋರಿ’ ಎಂಬ ಅಪಪ್ರಚಾರ ಸಿನಿಮಾದ ಹಿಂದೆ ಇದ್ದ ತಂಡವೇ ಈ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದೆ. “ಅರ್ಬನ್ ನಕ್ಸಲ್” ಎಂಬುದು ಬಲಪಂಥೀಯರ ಒಂದು ನೆಚ್ಚಿನ ಅಪಪ್ರಚಾರ ಪದ, “ಎಡ ಉದಾರವಾದಿ ಖೋಟಾ ಬುದ್ಧಿಜೀವಿಗಳನ್ನು” ಗುಂಡಿಕ್ಕಿ ಸಾಯಿಸುವುದಾಗಿ ಈ ಚಲನಚಿತ್ರದ ಮುಖ್ಯ ಪಾತ್ರ ಹೇಳುವುದರೊಂದಿಗೆ ಈ ಟೀಸರ್ ಕೊನೆಗೊಳ್ಳುತ್ತದೆ. ಆಕೆ ವಿಶೇಷವಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುತ್ತಾಳೆ. ಕೇರಳ ಸ್ಟೋರಿ
“ಪ್ರತಿ ಕಲಾವಿದರು ವಾಕ್ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ‘ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾ’ ಬಲವಾಗಿ ನಂಬುತ್ತದೆ ಮತ್ತು ಅದರ ಪರವಾಗಿ ನಿಲ್ಲುತ್ತದೆ. ಆದರೆ ಕೊಲೆಗಳಿಗೆ ಕರೆ ನೀಡುವುದು ಮತ್ತು ಪ್ರತಿಷ್ಠಿತ ಸಂಸ್ಥೆಗಳ ಮೇಲೆ ದಾಳಿ ಮಾಡುವುದು ರಾಜಕೀಯ ಪ್ರಚಾರದ ಭಾಗವಾಗಿದೆ ಎಂದೂ ಅದು ಅರ್ಥಮಾಡಿಕೊಂಡಿದೆ. ಇದು ಭಾರತೀಯ ಎಡಪಂಥೀಯರನ್ನು ಮಾತ್ರವಲ್ಲದೆ ಕಾನೂನಿನ ಆಳ್ವಿಕೆ ಮತ್ತು ಭಾರತದ ಸಂವಿಧಾನದ ತತ್ವಗಳನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಫ್ಯಾಸಿಸ್ಟ್ ತೆರನ ಯೋಜನೆಯ ಭಾಗವಾಗಿದೆ “ ಎಂದು ಈ ಬಗ್ಗೆ 16 ವಿದ್ಯಾರ್ಥಿಗಳ ಸಂಘಟನೆಗಳ ಜಂಟಿ ವೇದಿಕೆಯಾದ ‘ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾ’ ಬಿಡುಗಡೆ ಮಾಡಿದ ಹೇಳಿಕೆ ಬಲವಾಗಿ ಖಂಡಿಸಿದೆ.
ವಿಶ್ವವಿದ್ಯಾನಿಲಯಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ, ಕೊಲೆಗಳಿಗೆ ಕರೆ ನೀಡುವುದನ್ನು ಕೊನೆಗೊಳಿಸಿ ಆದರೆ ಕೋಮುವಾದದ ವಿರುದ್ಧ ಒಂದಾಗಿ ಎಂದು ಅದು ಕರೆ ನೀಡಿದೆ.
ಕಳೆದ ಕೆಲವು ವರ್ಷಗಳಿಂದ, ವಿಶೇಷವಾಗಿ ಆರ್‌ಎಸ್‌ಎಸ್-ಬಿಜೆಪಿ ಸರ್ಕಾರದ ಅಡಿಯಲ್ಲಿ, ಮಾಧ್ಯಮ ಮತ್ತು ಸಂಸ್ಕೃತಿ ಉದ್ಯಮದಲ್ಲಿನ ಕೆಲವು ಶಕ್ತಿಗಳು ಪ್ರಭುತ್ವ ತನ್ನ ಹೊಣೆ ನಿಭಾಯಿಸಬೇಕು ಎಂದು ಕೇಳುವ, ಮತ್ತು ಭಾರತದಾದ್ಯಂತ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸ್ವಾತಂತ್ರ್ಯ, ಸೋದರತ್ವ ಮತ್ತು ಸಮಾನತೆಯ ಆದರ್ಶಗಳನ್ನು ಸಾಧಿಸಲು ಹೆಣಗಾಡುತ್ತಿರುವ ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳ ವಿರುದ್ಧ ವ್ಯಾಪಕ ಪ್ರಚಾರದಲ್ಲಿ ತೊಡಗಿವೆ ಎಂಬುದನ್ನು ದೇಶವು ಕಾಣುತ್ತಿದೆ. ಹೀಗಾಗಿಯೇ ಭಾರತದ ಪ್ರಮುಖ ಸಂಸ್ಥೆಗಳಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಇತರೆಡೆಗಳಲ್ಲಿ ಶಿಕ್ಷಣದ ಸರಕೀಕರಣದ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿ ಚಳವಳಿಯನ್ನು ದೇಶದ್ರೋಹಿಗಳೆಂದು ಬಿಂಬಿಸಲಾಯಿತು, ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಬೀದಿಗಿಳಿದ ರೈತರು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಎಂದು ಕರೆಯಲಾಯಿತು ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವ ನಾಗರಿಕ ಸಮಾಜದ ಕಾರ್ಯಕರ್ತರು ಮತ್ತು ಅಧ್ಯಯನಕಾರರನ್ನು ದೇಶವಿರೋಧಿಗಳೆಂಬ ಹಣೆಪಟ್ಟಿ ಹಚ್ಚಿ ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲುಕಂಬಿಗಳ ಹಿಂದೆ ಎಸೆಯಲಾಯಿತು ಎಂಬುದನ್ನು ನೋಡಿದ್ದೇವೆ. ಪ್ರಸ್ತುತ ಒಬ್ಬ ಕೇಂದ್ರ ಸಚಿವರೇ ತಮ್ಮ ಪಕ್ಷವು ದೇಶದ್ರೋಹಿಗಳೆಂದು ಪರಿಗಣಿಸುವವರನ್ನು ಗುಂಡೇಟಿನಿಂದ ಹೊಡೆದುರುಳಿಸಲು ಕರೆ ನೀಡಿದ ದಾಖಲೆಯೇ ಇರುವಾಗ, ಮತ್ತು ಆಳುವ ಪಕ್ಷದಲ್ಲಿ ಇಂತಹುದೇ ‘ಸಾಧನೆ’ ಮಾಡಿರುವ ಹಲವು ನಾಯಕರಿರುವಾಗ ಅದರಲ್ಲಿ ಆಶ್ಚರ್ಯವೇನಿಲ್ಲ ಎಂದು ಈ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
“ಇದಲ್ಲದೆ ಕಳೆದ ಕೆಲವು ವರ್ಷಗಳಿಂದ, ಕೇಂದ್ರ ಸರ್ಕಾರದ ತೀವ್ರ ಜನ-ವಿರೋಧಿ ಕ್ರಮಗಳಿಂದ ಧೈರ್ಯ ತುಂಬಿಕೊಂಡ ಅವಕಾಶವಾದಿಗಳು ಮತ್ತು ಬೂಟಾಟಿಕೆಯ ಮಂದಿ ರಾಷ್ಟ್ರವಾದದ ಸೋಗಿನಲ್ಲಿ ತಮ್ಮ ಬ್ಯಾಂಕ್ ಖಾತೆಗಳನ್ನು ಕೊಬ್ಬಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಮೂಲಕ , ದೇಶಕ್ಕೆ ಮಾರಲಾಗುತ್ತಿರುವ ರಾಷ್ಟ್ರವಾದದ ಬ್ರಾಂಡೆಂದರೆ ಅದು ರಾಜಕೀಯ ಹಿಂದುತ್ವದ್ದು ಎಂಬುದು ಸ್ಪಷ್ಟವಾಗಿದೆ: ಆದ್ದರಿಂದ ಭಾರತದ ಅಲ್ಪಸಂಖ್ಯಾತರನ್ನು ‘ಅನ್ನರು’ ಎಂದು ಬಿಂಬಿಸುವ, ಕೋಮು ವಿಭಜನೆ ಮತ್ತು ದ್ವೇಷದ ಬೀಜಗಳನ್ನು ಬಿತ್ತುವ ಏಕೈಕ ಉದ್ದೇಶ ಹೊಂದಿರುವ ಪ್ರಚಾರ ಸಾಮಗ್ರಿಗಳು ಭರದಿಂದ ತಯಾರಾಗುತ್ತಿವೆ. ಈ ಮೂಲಕ ಅವರು ಆಳುವವರ ಅನೇಕ ಪಾಪಗಳತ್ತ ಗಮನ ಹರಿಯದಂತೆ ಮಾಡುವ, ಸರಕಾರ ಭಾರತದ ನೆಲ ಮತ್ತು ಸಂಪನ್ಮೂಲಗಳನ್ನು ಅಂತರಾಷ್ಟ್ರೀಯ ಹಣಕಾಸು ಮತ್ತು ಬಂಟ ಬಂಡವಾಳಶಾಹಿಗಳ ಸೇವೆಯಲ್ಲಿ ಹಂಚಲು ಅನುವು ಮಾಡಿಕೊಡುತ್ತದೆ. ಇದೇನು ಹೊಸ ವಿದ್ಯಮಾನವೇನಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ತಲೆಮಾರುಗಳ ಎಡಪಂಥೀಯರು ಹುತಾತ್ಮರಾಗಿರುವಾಗ ಮತ್ತು ಈಗಲೂ ಭಾರತೀಯ ಗಣರಾಜ್ಯದ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಲೇ ಇರುವಾಗ, ಆರ್‌ಎಸ್‌ಎಸ್ ಮತ್ತು ಅದಕ್ಕೆ ಸಂಬಂಧಪಟ್ಟವರು ಭಾರತದ ಭದ್ರತೆಯನ್ನು, ಶಾಂತಿ ಮತ್ತು ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಶಕ್ತಿಗಳ ರಕ್ಷಣೆಯಲ್ಲಿ ಯಾವಾಗಲೂ ಹೇಗೆ ನಿಂತಿವೆ ಎಂಬುದನ್ನು ದೇಶವು ನೋಡಿದೆ” ಎಂದು ‘ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾ’ ಟಿಪ್ಪಣಿ ಮಾಡಿದೆ.
ಕಾನೂನಿನ ಆಳ್ವಿಕೆಯನ್ನು ದುರ್ಬಲಗೊಳಿಸುವುದರಿಂದ ಲಾಭ ಪಡೆಯಬಹುದೆಂದು ಯೋಚಿಸುವ ಮಂದಿಗಳ ತಪ್ಪು ಪ್ರಯತ್ನಗಳನ್ನು ದೇಶದ ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಬಲವಾಗಿ ಪ್ರತಿರೋಧಿಸುತ್ತವೆ, ಭಾರತದಲ್ಲಿ ಪ್ರಜಾಸತ್ತಾತ್ಮಕ ಅವಕಾಶ ಮತ್ತು ಸಂಸ್ಕೃತಿಯ ಮೇಲಿನ ನಗ್ನ ದಾಳಿಯ ವಿರುದ್ಧ ಪ್ರತಿಭಟಿಸಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿರುವ ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾ, ಈ ಅಪಪ್ರಚಾರ ದ ಸಿನಿಮಾದ ವಿರುದ್ಧ ಒಗ್ಗಟ್ಟಾಗಿ ನಿಂತು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದೆ.
ಎಐಎಸ್‍ಎ, ಎಐಎಸ್‍ಬಿ, ಎಐಎಸ್‍ಎಫ್, ಎಸ್‍ಎಫ್‍ಐ, ಡಿಎಸ್‍ಎಫ್, , ಸಮಾಜವಾದಿ ಛಾತ್ರ ಸಭಾ, ಆರ್‌ಎಲ್‌ಡಿ ಛಾತ್ರಸಭಾ, ಡಿಎಂಕೆ ವಿದ್ಯಾರ್ಥಿ ವಿಭಾಗ , ಸಿ ಆರ್ ಜೆಡಿ, ಸಿವೈಎಸ್‍ಎಸ್, ಪಿಎಸ್‍ಎಫ್, ಟಿಎಸ್‍ಎಫ್, ಪಿಎಸ್‍ಯು, ಎಸ್‍ಎಂಎಸ್‍ಎಸ್ ಮುಂತಾದ 16 ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.