ವಿಶಿಷ್ಟ ಸೌಹಾರ್ದ ಕಾರ್ಯಕ್ರಮ: ಅಲ್ಲಾಹ್ ಎಂದರೆ ಯಾರು

ಹೊಸಪೇಟೆ: ನಗರದ ಮಸೀದಿಯೊಳಗೆಯೇ ವಿಶಿಷ್ಟ ಸೌಹಾರ್ದ ಕಾರ್ಯಕ್ರಮ ಭಾನುವಾರ ನಡೆಯಿತು. ಮಸೀದಿಯೊಳಗೆ ಏನಿರುತ್ತದೆ, ಪ್ರಾರ್ಥನೆಯ ವಿಧಾನ ಹೇಗೆ, ಇಸ್ಲಾಂ ಪದದ ಅರ್ಥ ಏನು, ಅಲ್ಲಾಹ್ ಎಂದರೆ ಯಾರು, ಕುರಾನ್‌ ಸಾರುವ ಸಂದೇಶ ಏನು… ಹೀಗೆ ಅನ್ಯ ಧರ್ಮೀಯರಿಗೆ ಕಾಡುವ ನಾನಾ ಬಗೆಯ ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಪ್ರಯತ್ನವೊಂದು ಅಲ್ಲಿ ನಡೆಯಿತು. ವಿಶಿಷ್ಟ

ನೂರಾರು ಹಿಂದೂಗಳು, ಸಿಖ್ಖರು, ಕ್ರೈಸ್ತರು ಹಾಗೂ ಇತರ ಧರ್ಮೀಯರು ಚಪ್ಪರದಹಳ್ಳಿಯ ಮದೀನಾ ಜಾಮಿಯ ಮಸ್ಜಿದ್ ಅಹ್ಲೆ ಹದೀಸ್ ಮಸೀದಿಯಲ್ಲಿ ನಡೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಇಸ್ಲಾಂ ಕುರಿತಂತೆ ಇದುವರೆಗ ತಿಳಿಯದೆ ಇದ್ದ ಹಲವು ಮಾಹಿತಿಗಳನ್ನು ಪಡೆದುಕೊಂಡರು.

ಮಾನವೀಯ ಮನೋಭಾವವನ್ನು ಎತ್ತಿ ಹಿಡಿಯುವ, ಪರಸ್ಪರ ಪ್ರೀತಿ, ಸಹೋದರತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜಮಿಅತ್ -ಎ-ಅಹ್ಲೆ ಹದೀಸ್‌ ಸಂಘಟನೆಯ ವತಿಯಿಂದ ಈ ಕಾರ್ಯಕ್ರಮ ಇದೇ ಪ್ರಥಮ ಬಾರಿಗೆ ನಗರದಲ್ಲಿ ನಡೆಯಿತು. ವಿಶಿಷ್ಟ

ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿ ಮೇಲೆ ಹೆಜ್ಜೆನು ದಾಳಿ

ಮಸೀದಿಯೊಳಗೆ ಕೈಕಾಲು ತೊಳೆದು ಪ್ರವೇಶಿಸುವ ಬಗೆ, ಆಜಾನ್‌ ಕೂಗುವುದು ಏಕೆ, ದಿನಕ್ಕೆ ಎಷ್ಟು ಬಾರಿ ಆಜಾನ್‌ ಕೂಗಲಾಗುತ್ತದೆ ಎಂಬ ಮಾಹಿತಿ ಮೊದಲಿಗೆ ನೀಡಲಾಯಿತು. ಪ್ರತಿಯೊಂದು ವಿಷಯದಲ್ಲೂ ದೊಡ್ಡದಾಗಿ ಬರೆದಂತಹ ಭಿತ್ತಫಲಕ, ಅದರ ಬಳಿಯಲ್ಲಿ ನಿಂತು ವಿವರಣೆ ನೀಡಿದ ವ್ಯಕ್ತಿಗಳು ಬಂದವರಿಗೆಲ್ಲರಿಗೂ ನಗುಮೊಗದಿಂದಲೇ ಮಾಹಿತಿ ನೀಡುತ್ತಲೇ ಇದ್ದರು. ಮಸೀದಿಯೊಳಗೆ ಪ್ರವೇಶಿಸುತ್ತಿದ್ದಂತೆಯ ಇಸ್ಲಾಂ ಪದದ ಅರ್ಥ, ನಮಾಜ್ ಮಾಡುವ ವಿಧಾನ, ಕುರ್‌ಆನ್‌ ಯಾವಾಗ ಸೃಷ್ಟಿಯಾಯಿತು, ಪ್ರವಾದಿಗಳೆಂದರೆ ಯಾರು ಮೊದಲಾದ ಮಾಹಿತಿಗಳನ್ನು ವಿವರವಾಗಿ ನೀಡಲಾಯಿತು.

ಮಸೀದಿಯೊಳಗೆಯೇ ಏಳೆಂಟು ಮಂದಿ ವಿವರಣೆ ನೀಡಿದರೆ, ಸಾಮೂಹಿಕ ಪ್ರಾರ್ಥನೆ ಮಾಡುವ ವಿಧಾನವನ್ನೂ ತೋರಿಸಿಕೊಟ್ಟರು. ಮಸೀದಿಯ ಇನ್ನೊಂದು ಬದಿಯಲ್ಲೂ ಕುರ್‌ಆನ್‌ ನೀಡುವ ಸಂದೇಶಗಳನ್ನು ಇನ್ನಷ್ಟು ವಿವರವಾಗಿ ನೀಡುವ ಪ್ರಯತ್ನ ನಡೆಯಿತು. ಕೊನೆಯಲ್ಲಿ ಇಸ್ಲಾಂ ಧರ್ಮದ ಸಾರವನ್ನು ತಿಳಿಸುವ ಕೈಪಿಡಿಗಳನ್ನು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾದ ಕುರ್‌ಆನ್‌ ಗ್ರಂಥವನ್ನು ಉಚಿತವಾಗಿ ನೀಡಲಾಯಿತು.

ಜಿಲ್ಲಾಧಿಕಾರಿ ಸಹಿತ ಹಲವರ ಭೇಟಿ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿ ಟಿ.ಮಂಜುನಾಥ್‌, ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಹಿತ ಹಲವಾರು ಮಂದಿ ಮಸೀದಿಗೆ ಭೇಟಿ ನೀಡಿ ಪರಿಚಯ ಮಾಡಿಕೊಂಡರು.

ಅಂಜುಮನ್‌ ಕಮಿಟಿಯ ಅಧ್ಯಕ್ಷರೂ ಆದ ‘ಹುಡಾ’ ಅಧ್ಯಕ್ಷ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ, ವಕ್ಫ್‌ ಬೋರ್ಡ್‌ ಜಿಲ್ಲಾ ಘಟಕದ ಅಧ್ಯಕ್ಷ ದಾದಾಪೀರ್‌, ಮುಖಂಡರಾದ ಕೆ.ಝಕಾವುಲ್ಲಾ, ಅಬ್ದುಲ್ ಜಬ್ಬಾರ್, ಡಾ.ಹಬೀಬುಲ್ಲಾ, ಮೌಲಾನಾ ಉಮರ್ ಫರೂಕ್‌, ಫಜಲುಲ್ಲಾ ಸಾಬ್‌, ಬಿ.ಹನೀಫ್‌, ಮುಶೀರ್ ಅಹ್ಮದ್‌, ಉಮರ್ ಫರೂಕ್ ಇತರರು ಇದ್ದರು.

ಇದನ್ನೂ ನೋಡಿ: ವಚನಾನುಭವ – 18 | ವಾರವೇಳು ಜಾತಿ ಹದಿನೆಂಟೆಂದು – ಅಲಮ್ಮಪ್ರಭುವಿನ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *