ಬೆಂಗಳೂರು: ದೇಶದ ಅಭ್ಯುದಯಕ್ಕಾಗಿ ಸಂವಿಧಾನಬದ್ಧವಾಗಿ ರಚನೆಗೊಂಡಿರುವ ಒಕ್ಕೂಟ ವ್ಯವಸ್ಥೆ ತನ್ನ ಮೂಲ ಆಶಯದಂತೆ ಪಾಲನೆಯಾಗುತ್ತಿಲ್ಲ ಎಂದು ಹಿರಿಯ ವಿಮರ್ಶಕ ಡಾ.ಜಿ.ರಾಮಕೃಷ್ಣ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಂಧಿ ಭವನದಲ್ಲಿ ನಡೆದ ಜನಮನ ಪ್ರತಿಷ್ಠಾನ ಮತ್ತು ಭಾರತ ಯಾತ್ರಾ ಕೇಂದ್ರವು , ಜಾಗೃತ ನಾಗರಿಕರು ಕರ್ನಾಟಕ, ಕರ್ನಾಟಕ ಸಮಾನ ಮನಸ್ಕರ ಸಂಚಾಲನಾ ಸಮಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ – ಸಂವಿಧಾನ – ಒಕ್ಕೂಟ ವ್ಯವಸ್ಥೆ ಚಿಂತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ಪಾತ್ರ ಪ್ರಮುಖವಾಗಿದೆ. ಆದರೆ ಒಕ್ಕೂಟ ವ್ಯವಸ್ಥೆಯ ಪ್ರಕಾರ ರಾಜ್ಯಗಳಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ನಮ್ಮಿಂದ ಸಂಗ್ರಹ ಮಾಡಿರುವ ತೆರಿಗೆಯ ಪಾಲನ್ನು ಕೇಳಿದರೆ ಅದನ್ನು ಕೊಡುತ್ತಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಹಣಕಾಸು ಸಚಿವರು. ಆದರೆ ಗುಜರಾತಿಗೆ ಸಿಗುತ್ತಿರುವ ಸೌಲಭ್ಯಗಳು ಕರ್ನಾಟಕಕ್ಕೆ ಸಿಗುತ್ತಿಲ್ಲ. ಸಂವಿಧಾನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅವುಗಳದ್ದೇ ಪ್ರತ್ಯೇಕ ಅಧಿಕಾರ ವ್ಯಾಪ್ತಿ ಇದೆ. ಈ ನಡುವೆ ಡಬ್ಬಲ್ ಇಂಜಿನ್ ಸರ್ಕಾರ ಎಂಬ ಪರಿಕಲ್ಪನೆಯೇ ತಪ್ಪು.
ಇದನ್ನೂ ಓದಿ: ಸರ್ಕಾರದಿಂದ ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣ ದುರುಪಯೋಗ – ರಾಜಶೇಖರ ಮೂರ್ತಿ ಆರೋಪ
ದೇಶದಲ್ಲಿ ಬುಲ್ಡೋಜರ್ ಸಂಸ್ಕೃತಿಯನ್ನು ಹೇರಲಾಗುತ್ತಿದೆ. ರಾಮನನ್ನು ದೇವರಲ್ಲ ಎಂದು ಹೇಳುವುದು ಶಿಕ್ಷಾರ್ಹ ಎಂದು ಯುಪಿ ಮುಖ್ಯಮಂತ್ರಿ ಹೇಳುತ್ತಾರೆ. ಇಂದಿಗೂ ಮನುಸ್ಮತಿಯನ್ನು ಪಾಲನೆ ಮಾಡುವ, ಪ್ರತಿಪಾದಿಸುವ ಪ್ರಯತ್ನ ನಡೆದಿದೆ. ಶೂದ್ರನನ್ನು ಕೇವಲ ದುಡಿಸಕೊಳ್ಳುವುದಕ್ಕೆ ಬಳಸಿಕೊಳ್ಳಬೇಕೆಂಬ ಮನುವಾದ ಸಂವಿಧಾನಕ್ಕೆ ಹೇಗೆ ಸಮವಾಗಬಹುದು ಎಂದು ರಾಮಕೃಷ್ಣ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ವಿಮರ್ಶಕ ಪ್ರೊ.ಎ.ನಾರಾಯಣ, ಜನವಾದಿ ಮಹಿಳಾ ಸಂಘಟನೆಯ ವಿಮಲ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಹಿರಿಯ ಪತ್ರಕರ್ತ ಲಕ್ಷ್ಮಣ್ ಕೊಡಸೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮುಂತಾದವರು ಪಾಲ್ಗೊಂಡಿದ್ದರು.
ದೇಶಕ್ಕೆ ರಾಷ್ಟ್ರಪತಿ ಇದ್ದಂತೆ, ರಾಜ್ಯಕ್ಕೆ ರಾಜ್ಯಪಾಲರು ಎಂಬ ತಪ್ಪು ಸಂದೇಶವನ್ನು ಶಿಕ್ಷಕರೇ ಬೋದಿಸುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಚುನಾಯಿತ ಹುದ್ದೆಯಲ್ಲ. ಇದು ಕೇಂದ್ರ ಸರ್ಕಾರ ತನಗೆ ಬೇಕಾದವನ್ನು ನೇಮಕ ಮಾಡುವ ‘ಗಂಜಿ ಗಿರಾಕಿ’ ಹುದ್ದೆ ಎಂದು ಪ್ರೊ.ಎ.ನಾರಾಯಣ ಟೀಕಿಸಿದ್ದಾರೆ.
ರಾಜ್ಯಗಳು ದೇಶವನ್ನು ಹುಟ್ಟುಹಾಕಿವೆಯೇ ಹೊರತು, ದೇಶ ರಾಜ್ಯವನ್ನು ಸೃಷ್ಟಿಸಿಲ್ಲ. ಇಲ್ಲಿರುವ ಪ್ರಜಾಪ್ರಭುತ್ವ ಸರ್ಕಾರಕ್ಕೆ ಅನಗತ್ಯ ಕಿರುಕುಳ ನೀಡುವ ರಾಜ್ಯಪಾಲರಿಗೆ, ಸಂವಿಧಾನಕ್ಕಿಂತ ತಮ್ಮನ್ನು ನೇಮಕ ಮಾಡಿದ ಕೇಂದ್ರ ಸರ್ಕಾರದ ಸೂಚನೆಯೇ ಪ್ರಮುಖವಾಗಿರುತ್ತದೆ. ಆ ಮೂಲಕ ತಮ್ಮ ವಿಲಾಸಿ ಜೀವನಕ್ಕೆ ಬೇಕಾದ ರಾಜ್ಯಪಾಲರ ಹುದ್ದೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹುದ್ದೆಯನ್ನೇ ತೆರವುಗೊಳಿಸುವುದು ಉತ್ತಮ ಎಂದರು.
ಇದನ್ನೂ ನೋಡಿ: ಪಿಚ್ಚರ್ ಪಯಣ | ಹಸಿವಿನ ಪಾಠ ಹೇಳುವ ವಾಳೈJanashakthi Media