ಬೆಂಗಳೂರು:ಬಿಜೆಪಿ ಸರ್ಕಾರ ರೈತರ ವಿರೋಧ ಲೆಕ್ಕಿಸದೇ ಜಾರಿಗೆ ತಂದಿದ್ದ ರಾಜ್ಯ ಕೃಷಿ ಕಾಯ್ದೆಗಳು ಸೇರಿದಂತೆ ಹಲವಾರು ರೈತ ವಿರೋಧಿ ಕ್ರಮಗಳನ್ನು ರದ್ದುಪಡಿಸುವಂತೆ ಸಂಯುಕ್ತ ಹೋರಾಟ-ಕರ್ನಾಟಕದ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಇಂದು ಭೇಟಿ ಮಾಡಿ ಆಗ್ರಹಿಸಿದೆ.
ರಾಜ್ಯದ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳ ರದ್ದತಿ, ವಿದ್ಯುತ್ ಖಾಸಗೀಕರಣ ಮತ್ತು ರೈತರು, ದಲಿತರು, ಕೃಷಿ ಕೂಲಿಕಾರರು, ಕಾರ್ಮಿಕರು ಮತ್ತಿತರೆ ಜನ ವಿಭಾಗಗಳ ಬೇಡಿಕೆಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ತಮ್ಮ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಚಿವರು, ಇಲಾಖಾ ಕಾರ್ಯದರ್ಶಿಗಳ ಜೊತೆ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡತ್ವದೊಂದಿಗೆ ಸಭೆಯೊಂದನ್ನು ನಡೆಸಬೇಕೆಂದು ಸಮಯಾವಕಾಶ ಕೋರಿದ್ದಾರೆ.
ದೆಹಲಿಯ ಗಡಿಗಳಲ್ಲಿ ನಡೆದ ರೈತರ ಚರಿತ್ರಿಕ ಹೋರಾಟದ ಫಲವಾಗಿ ಒಕ್ಕೂಟ ಸರ್ಕಾರ, ತನ್ನ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯಿತು. ಆದರೆ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿಯ ರಾಜ್ಯ ಸರ್ಕಾರ, ಮೇಲಿನ ಮೂರು ಕೃಷಿ ಕಾಯ್ದೆಗಳಾದ ಭೂ ಸುದಾರಣಾ ಕಾಯ್ದೆ (ತಿದ್ದುಪಡಿ)-2022, ಕೃಷಿ ಮಾರುಕಟ್ಟೆ ಕಾಯ್ದೆ (ತಿದ್ದುಪಡಿ)-2022 ಮತ್ತು ಜಾನುವಾರು ಹತ್ಯೆ ನಿಷೇದ ಕಾಯ್ದೆ (ತಿದ್ದುಪಡಿ)-2022 ಗಳನ್ನು ರಾಜ್ಯದಲ್ಲಿ ಜಾರಿ ಮಾಡಿತು. ರಾಜ್ಯದ ರೈತರು, ದಲಿತರು, ಕಾಮಿಕರು ಮತ್ತಿತರೆ ಜನವಿಭಾಗಗಳು ಹಾಗೂ ಪ್ರಧಾನ ಪ್ರತಿಪಕ್ಷಗಳ ಪ್ರತಿರೋಧದ ನಡುವೆಯೇ ಈ ಕಾಯ್ದೆಗಳನ್ನು ಈ ಹಿಂದೆ ಇದ್ದ ರಾಜ್ಯ ಸರ್ಕಾರ ಜಾರಿ ಮಾಡಿದ್ದನ್ನು ಮುಖ್ಯಮಂತ್ರಿಯವರಿಗೆ ನೆನಪಿಸಿದ್ದಾರೆ.
ಈ ಮೂರು ಕಾಯ್ದೆಗಳು ‘ರೈತಾಪಿ ಕೃಷಿ’ ವಿರೋಧಿ ಮಾತ್ರವಲ್ಲ ‘ಕಾರ್ಫೋರೆಟ್ ಕೃಷಿ’ ಪರವಾಗಿವೆ. ಇಂತಹ ಕಾಯ್ದೆಗಳ ಮೂಲಕ ರಾಜ್ಯದ ಸಣ್ಣ, ಅತಿಸಣ್ಣ, ಮಧ್ಯಮ ರೈತರು ಮತ್ತು ಕೃಷಿ ಕೃಷಿಕೂಲಿಕಾರರ ಕೇಂದ್ರಿತವಾದ ‘ರೈತಾಪಿ ಕೃಷಿ’ ಯನ್ನು ನಾಶಮಾಡಿ, ಬಂಡವಾಳಶಾಹಿ ಭೂಮಾಲಿಕರು, ಕಾರ್ಫೋರೆಟ್ ಕಂಪನಿಗಳ ಮೂಲಕ ‘ಕಾರ್ಫೋರೆಟ್ ಕೃಷಿ’ಯನ್ನು ಜಾರಿಗೆ ತರಲು ಬಿಜೆಪಿಯ ಸರ್ಕಾರಗಳು ತುಂಬಾ ಪ್ರಯತ್ನಗಳನ್ನು ಮಾಡಿದವು. ಒಕ್ಕೂಟ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಈ ನೀತಿಗಳ ವಿರುದ್ದ ರಾಜ್ಯದಲ್ಲಿ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ಮತ್ತು ಸಾಮಾಜಿಕ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ‘ಸಂಯುಕ್ತ ಹೋರಾಟ-ಕರ್ನಾಟಕ’ ಅನೇಕ ಹೋರಾಟಗಳನ್ನು ನಡೆಸಿದೆ. ಇಂತಹ ಕೆಲವು ಹೋರಾಟಗಳಲ್ಲಿ ತಾವು ಭಾಗವಹಿಸಿ, ನಮ್ಮ ಹೋರಾಟಕ್ಕೆ ಬೆಂಬಲಿಸಿದ್ದು ಮಾತ್ರವಲ್ಲ, ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಜನ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸುವುದಾಗಿ ಘೋಷಣೆ ಮಾಡಿದ್ದೀರಿ. ಅಲ್ಲದೆ ತಮ್ಮ ಪಕ್ಷದ ಚುನಾವನಾ ಪ್ರಣಾಳಿಕೆಯಲ್ಲಿ ಸಹ ಈ ಕುರಿತು ಸ್ಪಷ್ಟವಾದ ನಿಲುವುನ್ನು ಪ್ರಕಟಿಸಿದ್ದೀರಿ. ಈ ಹಿನ್ನೆಲೆಯಲ್ಲಿ ಕೂಡಲೇ ತಮ್ಮ ಅಧ್ಯಕ್ಷೆತೆಯಲ್ಲಿ ಸಂಬಂಧಪಟ್ಟ ಸಚಿವರು, ಇಲಾಖಾ ಕಾರ್ಯದರ್ಶಿಗಳು ಮತ್ತು ‘ಸಂಯುಕ್ತ ಹೋರಾಟ-ಕರ್ನಾಟಕ’ ದ ಮುಂಖಡರ ಸಭೆಯನ್ನು ಕರೆಯಬೇಕು ಎಂದು ಈ ವೇಳೆ ಮನವಿ ಮಾಡಿದ್ದಾರೆ.
ಈ ಸಭೆಯಲ್ಲಿ ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಪಟ್ಟು, ಮಾತ್ರವಲ್ಲದೆ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿಧ್ಯಾರ್ಥಿ ಯುವಜನರು, ಮಹಿಳೆಯರು ಜನ ವಿಭಾಗಗಳ ಪ್ರಮುಖ ಬೇಡಿಕೆಗಳ ಕುರಿತು ಸಹ ಚರ್ಚಿಸಿ, ಪರಿಹಾರ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ಸಮಿತಿಯ ಸಂಯೋಜಕರಾದ ಬಡಗಲಪುರ ನಾಗೇಂದ್ರ, ಹೆಚ್.ಆರ್. ಬಸವರಾಜಪ್ಪ, ಜಿಸಿ ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಎಸ್.ಆರ್. ಹಿರೇಮಠ್, ಹೆಚ್.ವಿ. ದಿವಾಕರ್, ಪಿ.ಆರ್.ಎಸ್. ಮಣಿ, ಚಂದ್ರಪ್ಪ ಹೊಸ್ಕೇರಾ, ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.