ನವದೆಹಲಿ : ಎಲ್‌ಜೆಪಿ (ಪಶುಪತಿ) ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಪಶುಪತಿ ಪರಾಸ್ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಎಲ್ ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಅಸಮಾಧಾನಗೊಂಡಿರುವ ಪಶುಪತಿ ಪರಾಸ್ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಪ್ರಧಾನ ನರೇಂದ್ರ ಮೋದಿ ದೊಡ್ಡ ನಾಯಕರು. ಆದರೆ ನನಗೆ ಮತ್ತು ನನ್ನ ಪಕ್ಷಕ್ಕೆ ಅನ್ಯಾಯವಾಗಿದೆ ಎಂದು ಪರಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷವು ಐದು ಮಂದಿ ಸಂಸದರನ್ನು ಹೊಂದಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹೀಗಿದ್ದೂ ನಮಗೆ ಅನ್ಯಾಯವೆಸಗಲಾಗಿದೆ. ಹೀಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ(ರಾಮ್ ವಿಲಾಸ್) 5 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವ ಅವಕಾಶ ಪಡೆದಿದ್ದಕ್ಕಾಗಿ ಪಶುಪತಿ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಸೀಟು ಹಂಚಿಕೆ ಘೋಷಣೆಗೂ ಮುನ್ನ ನಮ್ಮ ಜತೆ ಮಾತನಾಡಿಲ್ಲ ಎಂದು ಪಶುಪತಿ ಪರಾಸ್ ಹೇಳಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರ ಪಶುಪತಿ ಪಾರಸ್ ಅವರು ಹಾಜಿಪುರದ ಹಾಲಿ ಸಂಸದರಾಗಿದ್ದು, ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈ ಬಾರಿ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಕಾರಣ ಪಶುಪತಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.