ಬೆಂಗಳೂರು : ರಾಜ್ಯದಲ್ಲಿ ಮ್ಯಾನ್ ಹೋಲ್ ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಮ್ಯಾನ್ ಹೋಲ್ ಗುಂಡಿಗೆ ಬಿದ್ದು ಒಟ್ಟು 90 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, 1995 ರಿಂದ 2022 ರವರೆಗೆ ಒಟ್ಟು 90 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಈ ಸಂಬಂಧಿಸಿದಂತೆ ಎಷ್ಟು ಮಂದಿ ಗುತ್ತಿಗೆದಾರ ಮೇಲೆ ಪ್ರಕರಣಗಳು ದಾಖಲಾಗಿದೆ. ಈ ಕುರಿತು ಮಾಹಿತಿ ಕೊಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಮೃತ ಕಾರ್ಮಿಕರ ಜಿಲ್ಲಾವಾರು ವಿವರ : ಬೆಂಗಳೂರು ನಗರ- 40, ಬೆಂ.ಗ್ರಾಮಾಂತರ- 4, ಮೈಸೂರು – 6, ಮಂಡ್ಯ – 1, ಹಾಸನ- 5, ಕೋಲಾರ- 5, ತುಮಕೂರು – 4, ಚಾಮರಾಜನಗರ – 1, ಶಿವಮೊಗ್ಗ – 4, ರಾಯಚೂರು – 1, ಉಡುಪಿ – 1, ಧಾರವಾಡ- 9, ವಿಜಯಪುರ – 3, ಉತ್ತರ ಕನ್ನಡ – 1, ಕಲಬುರಗಿ- 2, ರಾಮನಗರ – 3
ರಾಜ್ಯದಲ್ಲಿ ಈವರೆಗೆ ನಡೆದಿರುವ ಮರ್ಯಾದೆ ಹತ್ಯೆಗಳ ಮಾಹಿತಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಸಕಾಲದಲ್ಲಿ ಪರಿಣಾಮಕಾರಿಯಾಗಿ ಆರೋಪಪಟ್ಟಿ ಸಲ್ಲಿಸದಿರುವುದು ಪೊಲೀಸರ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತಿ ನಿಂದನೆಗೆ ಸಂಬಂಧಿಸಿದ 60,000 ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮಾಸ್ಟರ್ ಪ್ಲಾನ್ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು. ಈ ಕೆಲಸದಲ್ಲಿ ಗ್ರಾಮೀಣಾಭಿವೃದ್ಧಿ, ನರೇಗಾ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳು ಜತೆಗೂಡಿ ಕಾರ್ಯನಿರ್ವಹಿಸಬೇಕು ಎಂದರು. ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಗೈರು ಹಾಜರಾಗಿದ್ದರು. ಪೂರ್ವ ನಿಗದಿತ ಕೆಡಿಪಿ ಸಭೆಗೆ ಅವರು ತೆರಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈಶ್ವರಪ್ಪ ಕನಸನ್ನು ಹೇಗೆ ಒಪ್ಪಲಿ?’
‘ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವುದು ಸಚಿವ ಕೆ.ಎಸ್. ಈಶ್ವರಪ್ಪ ಕನಸು. ಅವರ ಕನಸನ್ನು ನಾನು ಹೇಗೆ ಒಪ್ಪಲಿ’ ಎಂದು ಎ. ನಾರಾಯಣ ಸ್ವಾಮಿ ಪ್ರಶ್ನಿಸಿದರು.
ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ರಾಷ್ಟ್ರ ಧ್ವಜಕ್ಕೆ ಗೌರವ ಕೊಡುತ್ತೇನೆ. ಹಿಜಾಬ್ ವಿವಾದದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನ್ಯಾಯಾಲಯದ ಆದೇಶ ಪಾಲಿಸುತ್ತೇನೆ’ ಎಂದರು.