ಮುಂಬಯಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾರತದ ಸ್ವಾತಂತ್ರ್ಯದ ವರ್ಷವನ್ನು ತಪ್ಪಾಗಿ ಹೇಳಿದಾಗ ಅವರ ಕಪಾಳಕ್ಕೆ ಬಾರಿಸಬೇಕು ಎಂದು ಅನಿಸಿತ್ತು ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನಾರಾಯಣ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನೀಡಿದ ಹೇಳಿಕೆ ಸಂಬಂಧ ಅವರನ್ನು ಮುಂಬೈ ಪೊಲೀಸರು ರತ್ನಗಿರಿ ಬಳಿ ಬಂಧಿಸಿದ್ದಾರೆ.
ನಾರಾಯಣ ರಾಣೆ ಅವರ ವಿರುದ್ಧ ನಾಶಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಅವರು ಬಂಧನ ವಾರಂಟ್ ಜಾರಿಗೊಳಿಸಿದ್ದಾರೆ. ಇವುಗಳ ಮಧ್ಯೆ ರಾಣೆ ಸಿಎಂ ವಿರುದ್ಧದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಸಿಎಂ ವಿರುದ್ಧ ಹೇಳಿಕೆ ನೀಡುವ ಮೂಲಕ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ವಿರುದ್ಧ ಒಟ್ಟು 36 ಕೇಸು ದಾಖಲು
ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಪುಣೆ ಮತ್ತು ಮಹದ್ ನಲ್ಲಿ ಎರಡು ಎಫ್ಐಆರ್ ದಾಖಲಾಗಿದ್ದು, ನಾಸಿಕ್, ಥಾಣೆ ಮತ್ತು ಪುಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯವನ್ನು ಪೊಲೀಸ್ ಠಾಣೆಗಳಲ್ಲಿ ವರದಿ ಮಾಡಿದ್ದಾರೆ.
ಕೇಂದ್ರ ಸಚಿವ ನಾರಾಯಣ ರಾಣೆ ಅವರು ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ವಜಾಗೊಳಿಸುವಂತೆ ಕೋರಿ ಸಚಿವರ ಪರವಾಗಿ ವಕೀಲ ಅನಿಕೇತ್ ನಿಕ್ಕಂ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
“ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರು ಎಷ್ಟನೇ ವರ್ಷದ ಸ್ವಾತಂತ್ರ್ಯ ಎಂದು ಕೇಳಲು ಹಿಂದೆ ಬಾಗಿದರು. ನಾನು ಅಲ್ಲಿರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಯಗಡದಲ್ಲಿ ನೆನ್ನೆ ಜನಾಶೀರ್ವಾದ ಯಾತ್ರೆಯಲ್ಲಿ ರಾಣೆ ಹೇಳಿಕೆ ನೀಡಿದ್ದರು.
ರಾಣೆ ಅವರ ಹೇಳಿಕೆಗೆ ಶಿವಸೇನಾ ತೀವ್ರವಾಗಿ ಖಂಡಿಸಿದೆ. ಶಿವಸೇನಾ ಕಾರ್ಯಕರ್ತರು ಮುಂಬಯಿ ಮತ್ತು ಮಹಾರಾಷ್ಟ್ರ ಕೆಲವು ಕಡೆಗಳಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದು ರಾಣೆಯನ್ನು ‘ಕೊಂಬಿಡಿ ಚೋರ್’ (ಕೋಳಿ ಕಳ್ಳ) ಎಂದು ಕರೆದಿದ್ದಾರೆ. ಐದು ದಶಕಗಳ ಹಿಂದೆ ಚೆಂಬೂರಿನಲ್ಲಿ ಅವರು ನಡೆಸುತ್ತಿದ್ದ ಕೋಳಿ ಅಂಗಡಿಯ ಉಲ್ಲೇಖಿಸಿ ಶಿವಸೇನಾ ಈ ರೀತಿ ಹೇಳಿದೆ.
ರತ್ನಗಿರಿ-ಸಿಂಧುದುರ್ಗದ ಶಿವಸೇನಾ ಸಂಸದ ವಿನಾಯಕ್ ರಾವುತ್ ʻನಾರಾಯಣ ರಾಣೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಬಿಜೆಪಿ ನಾಯಕತ್ವವನ್ನು ಮೆಚ್ಚಿಸಲು ರಾಣೆ ಶಿವಸೇನಾ ಮತ್ತು ಅದರ ನಾಯಕರ ಮೇಲೆ ಆರೋಪವನ್ನು ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಸಚಿವಾಲಯಕ್ಕೆ ಸೇರ್ಪಡೆಗೊಂಡ ನಂತರ ಅವರು ಮಾನಸಿಕ ಸಮತೋಲನ ಕಳೆದುಕೊಂಡಿರುವ ಅವರಿಗೆ ಮೋದಿ ಕ್ರಮಕೈಗೊಳ್ಳಬೇಕು” ಎಂದು ರಾವುತ್ ಹೇಳಿದ್ದಾರೆ.