ತಮ್ಮ ವಿರುದ್ದ ಸುದ್ದಿ ಪ್ರಕಟಿಸದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ಪಡೆದ ಸಚಿವ ಸದಾನಂದಗೌಡ

  • ಡಿವಿಎಸ್‌ಗೂ ಶುರುವಾಯ್ತಾ ಸಿಡಿ ಬೀತಿ?
  • ನಾಯಕತ್ವ ಬದಲಾವಣೆಯ ಮಾಸ್ಟರ್‌ ಮೈಂಡ್‌ ಸೋರಿಕೆ ತಡೆಯಲು ಈ ತಂತ್ರ ಹೂಡಿದ್ರಾ? 

ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಿಂದ ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲ ಪತ್ರಿಕೆ, ಚಾನಲ್​​ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂದು ಕಾರಣ ನೀಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ವಿರುದ್ಧ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ನಗರದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ.

ಈ ಕುರಿತು ಕೆಲ ಹಳೆಯ ದೃಷ್ಟಾಂತಗಳ ಉದಾಹರಣೆಯನ್ನೂ ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕುರಿತು ನಕಲಿ ವಿಡಿಯೋ ಮಾಡಲಾಗಿತ್ತು ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇಂಥ ವಿಡಿಯೋ ಪ್ರಸಾರ ಮಾಡಿದರೆ ಘನತೆಗೆ ಧಕ್ಕೆ ಆಗಲಿದೆ. ಅದರಿಂದ ಚಾರಿತ್ರ್ಯ ವಧೆಯಾಗಲಿದೆ. ಆದ್ದರಿಂದ ತಮ್ಮ ಬಗ್ಗೆಯೂ ಇಂತಹ ವಿಡಿಯೋ ಪ್ರಸಾರ ಮಾಡುವ ಅಪಾಯವಿದ್ದು, ಹಾಗಾದಲ್ಲಿ ಘನತೆಗೆ ಧಕ್ಕೆಯಾಗಲಿದೆ. ಚಾರಿತ್ರ್ಯ ವಧೆಯಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಮಾನಹಾನಿಕರ ವರದಿ ಮಾಡದಂತೆ ನಿರ್ಬಂಧ ವಿಧಿಸಿದೆ.

ಇದನ್ನೂ ಓದಿ : ಟ್ಯಾಪಿಂಗ್‌ ಪ್ರಕರಣ : ತಪ್ಪು ನಂಬರ್‌ನಿಂದ ನಾಯಕತ್ವ ಬದಲಾವಣೆಯ ಗುಟ್ಟು ರಟ್ಟಾಯ್ತು!?

ಸದಾನಂದ ಗೌಡರಿಗೆ ಭೀತಿ ಯಾಕೆ? :  ಸದಾನಂದಗೌಡರಿಗೆ ಈ ಭೀತಿ ಯಾಕೆ ಆರಂಭವಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಅವರಿಗೂ ಸಿಡಿ ಭೀತಾ ಶುರುವಾಗಿದೆಯಾ? ಆ ಸಿಡಿ ಎಂತಹದ್ದು ಇರಬಹುದು?  ಅಥವಾ ನಾಯಕತ್ವ ಬದಲಾವಣೆಯ ಹಿಂದೆ ಅವರಿದ್ದಾರೆ ಎಂಬ ಸತ್ಯ ಹೊರಬರಬಹುದಾ ಎಂಬ ಪ್ರಶ್ನೆಗಳು ಈಗ ಎದ್ದಿವೆ. ನಾಯಕತ್ವ ಬದಲಾವಣೆ ವಿಚಾರ ಆರಂಭವಾದಗಿನಿಂದ  ಸದಾನಂದಗೌಡರ ಹೆಸರು ಕೇಳಿ ಬರುತ್ತಿದೆ. ಅಶ್ವಥ್‌ ನಾರಾಯಣ ಜೊತೆಗೂಡಿ ತಂತ್ರ ರೂಪಿಸುತ್ತಾದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇತ್ತೀಚೆಗೆ ಅರವಿಂದ್‌ ಬೆಲ್ಲದ ಫೋನ್‌ಟ್ರ್ಯಾಪ್‌ ಪ್ರಕರಣದ ತನಿಖೆ ನಡೆಸಲು ಹೈದ್ರಾಬಾದ್‌ಗೆ ತೆರಳಿದ್ದ ಪೊಲೀಸರಿಗೆ ಆ ಜಾಗದಿಂದ ವಾಪಸ್ಸ ಬರುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು ಎಂಬ ಆರೋಪಗಳು ಕೇಳಿ ಬರುತ್ತಿವೆ.  ಮಾಧ್ಯಮಗಳ ಕೈಗೆ ಇದು ಸಿಕ್ಕರೆ ರಾಜಕೀಯ ಭವಿಷ್ಯವೇ ಮುಗಿದಂತಾಗುತ್ತದೆ ಎಂದು ಸದನಾಂದಗೌಡರು ನಿರ್ಬಂಧಕಾಜ್ಞೆ ಪಡೆದಿದ್ದಾರೆಯೇ?  ಎಂಬ ಪ್ರಶ್ನೆ ಈಗ ಸಹಜವಾಗಿ ಕಾಡುತ್ತಿದೆ.

ಇದೇ ರೀತಿ ಅರ್ಜಿ ಸಲ್ಲಿಸಿದ್ದ 6 ಸಚಿವರು : ಈ ಮುನ್ನ ರಾಜ್ಯ ಸರ್ಕಾರದ 6 ಸಚಿವರು ಇದೇ ರೀತಿ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿದ್ದರು. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕ್ರೀಡಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಹ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿ ನಿರ್ಬಂಧ ತಂದಿದ್ದರು.

ತಮ್ಮ ನಡೆ ಕುರಿತು ಪ್ರತಿಕ್ರಿಯೆ ನೀಡಿರುವ ಸದಾನಂದಗೌಡ ಅವರು,  ವಿರೋಧಿಗಳು ಈ ಮುಂಚೆಯೂ ನನ್ನ ವೈಯಕ್ತಿಕ ತೇಜೋವಧೆಗೆ ಪ್ರಯತ್ನಿಸಿದ್ದರು. ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪು ಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ‌ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯಥಾ ಭಾವಿಸಬಾರದು ಎಂದು ಡಿವಿಎಸ್ ಟ್ವೀಟ್ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *