ಅಮಿತ್ ಶಾ ದಿಢೀರ್ ಕರ್ನಾಟಕ ಪ್ರವಾಸ, ರಾಜ್ಯ ಬಿಜೆಪಿಯಲ್ಲಿ ಸಂಚಲನ

ಬೆಂಗಳೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೇಂದ್ರ ಸಾಂಸ್ಕೃತಿಕ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಆದರೂ, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಬುಧವಾರ ರಾತ್ರಿ 11 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಸಚಿವರು ರಾತ್ರಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಖಾಸಗಿ ಹೊಟೇಲ್‌ನಲ್ಲಿ ತಂಗಲಿರುವ ಅಮಿತ್‌ ಶಾ ಪ್ರಮುಖ ನಾಯಕರೊಂದಿಗೆ ಮಧ್ಯ ರಾತ್ರಿಯೇ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಅನೌಪಚಾರಿಕ ಚರ್ಚೆ ನಡೆಸುವ ಸಾಧ್ಯತೆ ಇದೆ.

ರಾಜ್ಯದ ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳ ಬಗ್ಗೆಯೂ ಅನೌಪಚಾರಿಕವಾಗಿ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಈ ಕೊಲೆಗಳ ನಂತರ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರೇ ಸರ್ಕಾರ ಹಾಗೂ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಆಕ್ರೋಶ ಹೊರ ಹಾಕುತ್ತಿರುವುದು ಪಕ್ಷ ಮುಜುಗರಕ್ಕೆ ಸಿಲುಕುವಂತೆ ಮಾಡಿದ್ದು, ಈ ಬೆಳವಣಿಗೆಯಿಂದ ಆಗಿರುವ ಹಿನ್ನಡೆಯಿಂದ ಹೊರ ಬರುವ ಕುರಿತು ರಾಜ್ಯದ ನಾಯಕರಿಗೆ ಅಮಿತ್‌ ಶಾ ಸಲಹೆ ನೀಡುವ ಸಾಧ್ಯತೆ ಇದೆ.

ಅಲ್ಲದೇ, ಗುರುವಾರ ಬೆಳಗ್ಗೆ ಸಿಐಐ ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಮಿತ್‌ ಶಾ ಹೊಟೆಲ್‌ನಲ್ಲಿಯೇ ಇರುವುದರಿಂದ ರಾಜ್ಯದ ನಾಯಕರು ಪ್ರತ್ಯೇಕವಾಗಿ ಭೇಟಿ ಮಾಡುವ ಸಾಧ್ಯತೆ ಇದೆ. ಆದರೆ, ಯಾವುದೇ ನಾಯಕರಿಗೂ ಅಧಿಕೃತ ಭೇಟಿಗೆ ಅಮಿತ್‌ ಶಾ ಸಮಯ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಕೆಲವು ನಾಯಕರು ಶುಭ ಕೋರುವ ನೆಪದಲ್ಲಿ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ.

ಗುರುವಾರ ಮಧ್ಯಾಹ್ನ ಸಿಐಐ ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಅಮಿತ್‌ ಶಾ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *