“ಹೆಚ್ಚುತ್ತಿರುವ ಅಸಮಾನತೆಯನ್ನು ಮತ್ತು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ”
ಇಂದು ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸಿದ ಒಂಬತ್ತನೇ ಕೇಂದ್ರ ಬಜೆಟ್ ದುಡಿಯುವ ಜನರ, ಸಾಮಾಜಿಕವಾಗಿ ದಮನಕ್ಕೊಳಗಾದ ಜನವಿಭಾಗಗಳ ಹಾಗೂ ಒಟ್ಟಾರೆ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳನ್ನು ಬಲಿಗೊಟ್ಟು, ಕೆಲವೇ ದೊಡ್ಡ ವ್ಯವಹಾರ ಸಮೂಹಗಳು ಮತ್ತು ಶ್ರೀಮಂತರು ಮತ್ತು ಧನಾಢ್ಯರ ಸಂಕುಚಿತ ಹಿತಾಸಕ್ತಿಗಳನ್ನು ಉತ್ತೇಜಿಸಲು ಮೋದಿ ಸರ್ಕಾರದ ಏನೇನೂ ವಿಮರ್ಶೆಯಿಲ್ಲದೆ ಬದ್ಧವಾಗಿದೆ ಎಂಬುದಕ್ಕೆ ಕಣ್ಣಿಗೆ ಕಟ್ಟುವಂತಿರುವ ಒಂದು ಸಾಕ್ಷಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀಕ್ಷ್ಣವಾಗಿ ಟೀಕಿಸಿದೆ,.
ನಿರ್ಮಲಾ ಸೀತಾರಾಮನ್ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳುವ ‘ವಿತ್ತೀಯ ಶಿಸ್ತು’ ಎಂದರೆ ಸದಾ ಕಾರ್ಪೊರೇಟ್ ಕ್ಷೇತ್ರ ಹಾಗೂ ಶ್ರೀಮಂತರಿಗೆ ತೆರಿಗೆ ಸವಲತ್ತುಗಳನ್ನು ನೀಡುವುದು, ಅದೇ ವೇಳೆ ದುಡಿಯುವ ಜನರ ಪರಿಸ್ಥಿತಿಗಳ ಸುಧಾರಣೆಗೆ ಅಗತ್ಯವಿರುವ ವೆಚ್ಚಗಳನ್ನು ಹಿಂಡುವುದನ್ನು ವರ್ಣಿಸುವ ಇನ್ನೊಂದು ವಿಧಾನವೇ ಆಗಿದೆ. ಇದು, ಪ್ರಸ್ತುತ ವರ್ಷದಲ್ಲಿಯೂ ಮುಂದಿನ ವರ್ಷದ ಬಜೆಟ್‌ನಲ್ಲಿಯೂ ಆದಾಯಗಳಲ್ಲಿ ಭಾರೀ ಕುಸಿತ ಹಾಗೂ ತೀವ್ರ ವೆಚ್ಚಕಡಿತದಲ್ಲಿ ವ್ಯಕ್ತಗೊಂಡಿದೆ ಎಂದು ಸಿಪಿಐ(ಎಂ) ಹೇಳಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಮಾಡಿದ ತೆರಿಗೆ ಆದಾಯಗಳ ಅಂದಾಜು ಬಃಹಳೇನೂ ಇರಲಿಲ್ಲ. ಅವು ಕೂಡ ಈಗ ಅಂತ್ಯಗೊಳ್ಳುತ್ತಿರುವ 2025–26 ರ ಹಣಕಾಸು ವರ್ಷದಲ್ಲಿ ಈಡೇರುವಲ್ಲಿ ಬಹಳ ಹಿಂದೆ ಉಳಿದಿವೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಆದಾಯಗಳಲ್ಲಿ ಉಂಟಾದ ಕೊರತೆಯ ಒಂದು ಭಾಗವನ್ನು ಅಬಕಾರಿ ಸುಂಕಗಳ – ಮುಖ್ಯವಾಗಿ ತೈಲದ ಮೇಲೆಯೇ ಬೀಳುವ ಸುಂಕದ-ವೃದ್ಧಿಯ ಮೂಲಕ ಸದ್ದಿಲ್ಲದೆ ತುಂಬಿಕೊಳ್ಳಲಾಗಿದೆ. ಹಣಕಾಸು ಮಂತ್ರಿಗಳು ಈ ಆದಾಯ ಬಿಕ್ಕಟ್ಟಿನ ಬಗ್ಗೆ, ಹಾಗೂ ಅದು ಆಂತರಿಕ ಆರ್ಥಿಕ ಸ್ಥಿತಿಯ ಬಗ್ಗೆ ಏನನ್ನು ಬಿಂಬಿಸುತ್ತದೆ ಎಂಬುದನ್ನು ಗಮನಕ್ಕೆ ತಗೊಂಡಿಲ್ಲ, ಜೊತೆಗೆ ಅವರು ಪ್ರಕಟಿಸಿರುವ ತೆರಿಗೆ ಪ್ರಸ್ತಾವನೆಗಳು ಆದಾಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಯಾವ ಉಲ್ಲೇಖವನ್ನೂ ಮಾಡದೇ ಬಿಟ್ಟಿದ್ದಾರೆ. ಆದರೆ 2026–27ರ ನಿರೀಕ್ಷಿತ ಆದಾಯಗಳು 2025–26ರ ಬಜೆಟ್ ಅಂದಾಜುಗಳಷ್ಟೇ ಇರುತ್ತವೆ ಎಂಬುದು ಸ್ವಯಂವೇದ್ಯ. ರಾಷ್ಟ್ರೀಯ ಆದಾಯದಲ್ಲಿ ಸರ್ಕಾರಕ್ಕೆ ಆದಾಯದ ಪಾಲಾಗಿ ಸಿಗುವ ಪ್ರಮಾಣದಲ್ಲಿ ಒಂದು ತೀವ್ರ ಇಳಿಕೆಯಾಗುತ್ತದೆ ಎಂಬುದು ಇದರ ವಾಸ್ತವ ಅರ್ಥ.
ಈ ಪರಿಸ್ಥಿತಿಯಲ್ಲಿ 2025–26 ಮತ್ತು 2026–27ರಲ್ಲಿ ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸುವುದು ಸ್ಪಷ್ಟವಾಗಿ ವೆಚ್ಚ ಕಡಿತದ ಮೇಲೆ ಅವಲಂಬಿತವಾಗಿದೆ—ಮತ್ತು ಇದನ್ನು ಸಾಮಾನ್ಯವಾಗಿ ರೈತರು ಹಾಗೂ ಕಾರ್ಮಿಕರ ಮೇಲೆ ನಗ್ನದಾಳಿಯ ಮೂಲಕ ಸಾಧಿಸಲಾಗುತ್ತಿದೆ. 2025–26ರ ಬಜೆಟ್ ಅಂದಾಜುಗಳೊಂದಿಗೆ ಹೋಲಿಸಿದರೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪಿಎಂ–ಪೋಷಣ್, ಪಿಎಂ–ಶ್ರೀ, ಪಿಎಂ–ಜಯ್, ಪಿಎಂ–ಎಂಎಸ್‌ವೈ, ಪಿಎಂಎವೈ (ಗ್ರಾಮೀಣ ಹಾಗೂ ನಗರ), ಬೆಳೆ ವಿಮಾ ಯೋಜನೆ ಇತ್ಯಾದಿ ಹಲವು ಕೇಂದ್ರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ವೆಚ್ಚಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಹಾಗೂ ಈಶಾನ್ಯ ಪ್ರದೇಶಗಳ ಕಲ್ಯಾಣಕ್ಕೆ ನೀಡಿಕೆಗಳಲ್ಲಿಯೂ ಕಡಿತಗಳಾಗಿವೆ. ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳು, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳ ವೆಚ್ಚಗಳಿಗೂ ಕತ್ತರಿ ಹಾಕಲಾಗಿದೆ. ಲಿಂಗಾಧಾರಿತ ಬಜೆಟ್‌ನಲ್ಲಿ ರೂ. 51,144 ಕೋಟಿ ಕಡಿತ ಮಾಡಲಾಗಿದೆ. ಮುಂದಿನ 2026–27ರ ವರ್ಷದಲ್ಲಿ ರಸಗೊಬ್ಬರ, ಆಹಾರ ಮತ್ತು ಪೆಟ್ರೋಲಿಯಂ ಸಬ್ಸಿಡಿಗಳಲ್ಲಿ ಮತ್ತಷ್ಟು ಕಡಿತಗಳನ್ನು ಪ್ರಸ್ತಾಪಿಸಲಾಗಿದೆ. ಸರ್ಕಾರದ ಅಂಕಿಅಂಶಗಳೇ ಕೃಷಿ ಕ್ಷೇತ್ರವು ಹಣ ಕುಸಿತದ ಸನ್ನಿವೇಶವನ್ನು ಅಥವಾ ಹುಟ್ಟುವಳಿಗಳಿಗೆ ಬೆಲೆ ಪಡೆಯುವಲ್ಲಿ ಕುಸಿತವನ್ನು ತೋರಿಸುತ್ತಿರುವ ಸಮಯದಲ್ಲಿ, ಇದು ವಿಶೇಷವಾಗಿ ಕೃಷಿಯ ಮೇಲಿನ ದಾಳಿಯನ್ನು ಸೂಚಿಸುತ್ತದೆ.
ಬಹಳವಾಗಿ ಡಂಗುರ ಸಾರಿದ ಬಂಡವಾಳ ವೆಚ್ಚಗಳ ಹೆಚ್ಚಳವೂ ವೆಚ್ಚ ಕಡಿತಗಳಿಗೆ ಬಲಿಯಾಗಿದ್ದು, 2025–26ರ ಪರಿಷ್ಕೃತ ಅಂದಾಜುಗಳು ಬಜೆಟ್ ಅಂದಾಜುಗಳ ಮಟ್ಟಕ್ಕಿಂತ ಕಡಿಮೆಯಾಗಿದೆ. ಮತ್ತೊಂದೆಡೆ, ಸಾರ್ವಜನಿಕ ಉದ್ಯಮಗಳ ಸಂಪನ್ಮೂಲಗಳ ಮೂಲಕ ನಡೆಯುವ ಬಂಡವಾಳ ವೆಚ್ಚಗಳು 2025–26ರಲ್ಲಿ 2024–25ಕ್ಕಿಂತ ಕಡಿಮೆಯಾಗಿದ್ದು, 2026–27ರಲ್ಲಿಯೂ ಕಡಿಮೆಯೇ ಇರಲಿದೆ ಎಂದು ಬಜೆಟ್ ಸೂಚಿಸುತ್ತದೆ.
ರಾಜ್ಯ ಸರ್ಕಾರಗಳನ್ನು ಹಾಗೂ ತಮ್ಮ ಜನರ ಆಶಯಗಳನ್ನು ಪೂರೈಸುವ ಅವರ ಸಾಮರ್ಥ್ಯವನ್ನೂ ಮೋದಿ ಸರ್ಕಾರದ ಈ ನಿಲುವು ಉಸಿರುಗಟ್ಟಿಸುತ್ತಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳು, ಹಣಕಾಸು ಆಯೋಗದ ಅನುದಾನಗಳು ಹಾಗೂ ಇತರೆ ವರ್ಗಾವಣೆಗಳ ಮೂಲಕ 2025–26ರಲ್ಲಿ ರಾಜ್ಯಗಳಿಗೆ ನೀಡಲಾಗುವ ಮೊತ್ತದಲ್ಲಿ ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ ರೂ. 2,03,801 ಕೋಟಿ ಕಡಿತವಾಗಿದೆ. 2026–27ರ ಬಜೆಟ್ ಅಂದಾಜುಗಳು 2025–26ರ ಬಜೆಟ್ ಅಂದಾಜಿಗಿಂತಲೂ ಇನ್ನೂ ರೂ. 59,456 ಕೋಟಿ ಇಳಿಕೆಯನ್ನು ತೋರಿಸುತ್ತವೆ. ಜಿಎಸ್‌ಟಿ ಆದಾಯಗಳ ಈಡೇರಿಕೆ ಚೆನ್ನಾಗಿಲ್ಲದಿರುವುದರಿಂದಾಗಿ ರಾಜ್ಯಗಳು ಈಗಾಗಲೇ ತೀವ್ರ ಹಣಕಾಸು ಕುಗ್ಗಿಕೆಯನ್ನು ಎದುರಿಸುತ್ತಿರುವ ಮತ್ತು ವಿ.ಬಿ–ಜಿ ರಾಮ್ ಜಿ (VB-G RAM G) ಮೂಲಕ ವೆಚ್ಚದ ಹೊರೆಯ ಒಂದು ಭಾಗವನ್ನು ರಾಜ್ಯಗಳ ಮೇಲೇ ದಾಟಿಸಿ ಅವರ ಸಂಪನ್ಮೂಲಗಳ ಮೇಲೆ ಬಹಳಷ್ಟು ಕಡಿತಗಳನ್ನು ಹೇರಿರುವ ಸಮಯದಲ್ಲಿ ಇದು ಸಂಭವಿಸುತ್ತಿದೆ..
ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಮಂತ್ರಿಗಳು, “ಸ್ಥಿರತೆ, ವಿತ್ತೀಯ ಶಿಸ್ತು, ನಿರಂತರ ವೃದ್ಧಿ ಮತ್ತು ಹಗುರ ಹಣದುಬ್ಬರ” ಮೋದಿ ಸರ್ಕಾರದ ಅಧಿಕಾರಾವಧಿಯ ಹೆಗ್ಗುರುತಗಳು ಎಂದು ಹೇಳಿದರು. ಆದರೆ ಅವರು ಹೇಳದೇ ಬಿಟ್ಟಿರುವ ಸಂಗತಿ ಎಂದರೆ, ಈ ಅವಧಿಯಲ್ಲಿ ಕಂಡಿರುವ ಏಕೈಕ ‘ಸ್ಥಿರತೆ’ಯೆಂದರೆ ದುಡಿಯುವ ಜನರಿಗೆ ವ್ಯಾಪಕ ನಿರುದ್ಯೋಗ ಮತ್ತು ಕೆಲಸದಿಂದ ಸಿಗುವ ಸೀಮಿತ ಆದಾಯಗಳ ರೂಪದಲ್ಲಿನ ಸಂಕಷ್ಠಗಳು ಮತ್ತು ‘ನಿರಂತರ ವೃದ್ಧಿ’ ಎಂದರೆ ಶ್ರೀಮಂತರು ಮತ್ತು ಕಾರ್ಪೊರೇಟ್ ಕ್ಷೇತ್ರದ ಆದಾಯ ಹಾಗೂ ಸಂಪತ್ತಿನಲ್ಲಿ ಮಾತ್ರ. ಬಜೆಟ್ 2026–27 ಇನ್ನಷ್ಟು ಉತ್ತೇಜಿಸಲಿರುವುದು ಹೆಚ್ಚುತ್ತಿರುವ ಈ ಅಸಮಾನತೆಯನ್ನೇ ಮತ್ತು ಅದು ಭಾರತೀಯ ಅರ್ಥವ್ಯವಸ್ಥೆಯನ್ನು ಕಾಡುತ್ತಿರುವ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳಿಗೆ ಇದೊಂದು ಅತ್ಯಂತ ಅಸಮರ್ಪಕ ಸ್ಪಂದನೆಯೂ ಆಗಿದೆ ಎಂದು ಖೇದ ವ್ಯಕ್ತಪಡಿಸಿದೆ.
