ಬೆಂಗಳೂರು : ಕೇಂದ್ರ ಸರ್ಕಾರ ಪ್ರತಿ ಬಾರಿಯೂ ತನ್ನ ಬಜೆಟ್ ಅಲ್ಲಿ ಯಾವುದೋ ಒಂದು ವಿಚಾರ ತೆಗೆದುಕೊಂಡು ಅದನ್ನು ವಿಜೃಂಭಿಸುತ್ತದೆ. ಪ್ರಮುಖ ವಿಷಯಗಳನ್ನು ಜನಸಾಮಾನ್ಯರ ಮುಂದಕ್ಕೆ ತರುವುದಿಲ್ಲ ಹಾಗೂ ಅವು ಸಿಗದಂತೆ ಮಾಡಲಾಗುತ್ತದೆ ಎಂದು ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷರು, ರಾಷ್ಟೀಯ ವಕ್ತಾರರಾದ ರಾಜೀವ್ ಗೌಡ ತಿಳಿಸಿದರು.
ಈ ವರ್ಷ ಮಧ್ಯಮ ವರ್ಗದ ಆದಾಯ ತೆರಿಗೆ ಕಡಿಮೆ ಮಾಡಲಾಗಿದೆ ಎನ್ನುವ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಇದರ ಮೂಲಕ ಇತರೇ ವಿಚಾರಗಳ ಹಾದಿ ತಪ್ಪಿಸಲಾಗುತ್ತಿದೆ. ಕೇಂದ್ರ ಬಜೆಟ್ ಮಂಡನೆಗೆ ಎರಡು ದಿನಗಳ ಮುನ್ನ “ರಿಯಲ್ ಸ್ಟೇಟ್ ಆಪ್ ದಿ ಇಕಾನಮಿ” ಎನ್ನುವ ಪುಸ್ತಕವನ್ನು ಮಾಜಿ ಅರ್ಥ ಸಚಿವರಾದ ಪಿ.ಚಿದಂಬರ ಅವರು ಬಿಡುಗಡೆ ಮಾಡಿದರು.
ಮನಮೋಹನ್ ಸಿಂಗ್ ಅವರ ಆಡಳಿತ ಕಾಲದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಸುಮಾರು ಶೇ.8 ರಷ್ಟು ಇರುತ್ತಿತ್ತು. ಅದನ್ನು ಬಿಜೆಪಿಯವರು 7.6 ಎಂದು ಹೇಳುತ್ತಾರೆ. ಮೋದಿಯವರ 11 ವರ್ಷಗಳ ಆಡಳಿತ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಇರುವುದು ಕೇವಲ ಶೇ 11 ರಷ್ಟು ಮಾತ್ರ. ಇದರಿಂದ ದೇಶದ ಬೆಳವಣಿಗೆ ಶೇ.2 ರಷ್ಟು ಕಡಿಮೆಯಾಗಿದೆ. ಸರಳವಾಗಿ ಹೇಳುವುದಾದರೆ ನೀವು ಬ್ಯಾಂಕ್ ಅಲ್ಲಿ ಇಟ್ಟ ಹಣದ ಬಡ್ಡಿ ದರ 2 ರಷ್ಟು ಕಡಿಮೆಯಾದರೆ ಹಣ ಇಟ್ಟವನ ಪರಿಸ್ಥಿತಿ ಏನಾಗಬಹುದು.
ಈ ಒಂದು ಸಣ್ಣ ಕುಸಿತದಿಂದ ದೇಶದಲ್ಲಿ ಕೋಟ್ಯಂತರ ಜನಕ್ಕೆ ಕೆಲಸ ಸಿಗುವುದಿಲ್ಲ. ಆದಾಯ ಬಿದ್ದು ಹೋಗುತ್ತದೆ. ಜಿಡಿಪಿ ಎನ್ನುವುದು ಕೇವಲ ಅಂಕಿ-ಸಂಖ್ಯೆಗಳಲ್ಲ ಇದು ಜೀವನ ಮಟ್ಟ ತೋರಿಸುವ ದಾರಿ.
ಆದಾಯ ತೆರಿಗೆ ಕಡಿಮೆ ಮಾಡುವುದರಿಂದ ಅನುಭೋಗ ಹೆಚ್ಚಾಗುತ್ತದೆ ಎಂದು ವಿತ್ತ ಸಚಿವರು, ಪ್ರಧಾನಿಗಳು ಹೇಳುತ್ತಿದ್ದಾರೆ. ಈ ಆದಾಯ ತೆರಿಗೆ ಕಡಿತ ಮಧ್ಯಮ ವರ್ಗಕ್ಕೆ ಬಹಳ ವರ್ಷಗಳ ಹಿಂದೆಯೇ ಆಗಬೇಕಾಗಿತ್ತು. ಆದರೆ ಇದು ಉಪಯೋಗವಾಗುವುದು ಕೇವಲ 3 ಕೋಟಿ ಜನರಿಗೆ ಮಾತ್ರ. ದೇಶದ ಜನಸಂಖ್ಯೆ 143 ಕೋಟಿ ಎಂದುಕೊಂಡರೂ 140 ಕೋಟಿ ಜನರಿಗೆ ಇದರಿಂದ ಏನು ಉಪಯೋಗವಾಯಿತು? ಏನೂ ಇಲ್ಲ.
ಇಂಧನ ಬೆಲೆ ಇಳಿಕೆ ಮಾಡಿದ್ದರೆ ಇಡೀ ದೇಶದ ಜನರಿಗೆ, ಕೂಲಿ ಕಾರ್ಮಿಕರಿಗೆ, ಮನೆ ಕೆಲಸದವರಿಗೆ, ಬಡವರಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುತ್ತಿತ್ತು. ಜಿಎಸ್ ಟಿ ಕಡಿಮೆ ಮಾಡಿದ್ದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತಿತ್ತು. ಪ್ರಮುಖ ವಿಚಾರ ಎಂದರೆ ದೇಶದ ಜನರ ಉಳಿತಾಯ ಪ್ರಮಾಣ ಬಿದ್ದು ಹೋಗಿದೆ. ಆದಾಯ ಕಡಿತ ಎನ್ನುವುದರಿಂದ ರಾವಣಾಸುರನಿಗೆ ಅರೆಕಾಸಿನ ಮಜ್ಜಿಗೆಯಂತೆ ಆಗಿದೆ ಹೊರತು ಉಪಯೋಗ ಕಡಿಮೆ.
ಖಾಸಗಿ ವಲಯದ ಹೂಡಿಕೆ ಗಮನಿಸಿದರೆ 2019 ರಿಂದಲೂ ಖಾಸಗಿಯವರು ಹೂಡಿಕೆ ಮಾಡುವುದು ನಿಲ್ಲಿಸಿದ್ದಾರೆ. ಕಳೆದ ವರ್ಷ ಶೇ.30 ರಿಂದ 22 ಕ್ಕೆ ಕಾರ್ಪೋರೇಟ್ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಯಿತು. ಇಷ್ಟು ಅನುಕೂಲ ತೆಗೆದುಕೊಂಡರೂ ಹೂಡಿಕೆದಾರರಿಗೆ ಹಣ ಹೂಡಿಕೆ ಮಾಡಲು ಇಷ್ಟವಿಲ್ಲ. ಏಕೆಂದರೆ ಮೋದಿ ಸರ್ಕಾರ ಕ್ರೋನಿ ಬಂಡವಾಳಶಾಹಿಗಳ ಪರ. ಅವರಿಗೆ ಬೇಕಾದ ಅದಾನಿ, ಅಂಬಾನಿ ಅವರ ಪರವಾಗಿ ಮಾತ್ರ ನಿಲ್ಲುತ್ತಾರೆ.
ಆರ್ ಬಿಐ ಉಪ ಗವರ್ನರ್ ವಿರಾಲ್ ವಿ ಆಚಾರ್ಯ ಅವರು ಹೇಳುವಂತೆ ಸುಮಾರು 40 ವಿಭಾಗಗಳಲ್ಲಿ ಕೇವಲ ಐದು ಮಂದಿ ಮಾತ್ರ ಮೆರೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಏಕಸ್ವಾಮ್ಯತೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ಬೇರೆ, ಬೇರೆಯವರು ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡುತ್ತಿಲ್ಲ. ವಿದೇಶಿ ಹೂಡಿಕೆಗಳನ್ನು ಸಹ ಇವರೇ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅನುಭೋಗ ಮತ್ತು ಬಂಡವಾಳ ಯಾವುದೂ ಸಹ ಹೆಚ್ಚಾಗುವುದಿಲ್ಲ. ವಿದೇಶಿ ರಫ್ತು ಸಹ ಕಡಿಮೆಯಾಗಿದೆ. ಆದರೆ ಆಮದು ಕಡಿಮೆಯಾಗಿದೆ. ಇದರಿಂದ ದೇಶದ ವಿದೇಶಿ ವಿನಿಮಯ ಕುಸಿಯುತ್ತಿದೆ.
ಸಾಮಾನ್ಯ ಬೆಳವಣಿಗೆ ದರ ಶೇ. 10.1 ರಷ್ಟು ಆಗುತ್ತದೆ ಎಂದು ವಿತ್ತ ಸಚಿವರು ಹೇಳುತ್ತಾರೆ. ಹಣದುಬ್ಬರ ಕಡಿಮೆ ಮಾಡಿರುವ ಕಾರಣಕ್ಕೆ ಶೇ.6.3 ರಷ್ಟು ಅಗುತ್ತದೆ ಎನ್ನುತ್ತಿದ್ದಾರೆ. ಎರಡು ವರ್ಷಗಳ ಹಿಂದೆ 8.2 ರಷ್ಟಿತ್ತು. ಮುಂದಿನ ವರ್ಷ 6.3 ಆಗುತ್ತೆ ಎಂದು ಸಚಿವರು ಆಶ್ವಾಸನೆ ಕೊಡುತ್ತಿದ್ದಾರೆ. ಆದರೆ ನಮ್ಮ ಜನಸಂಖ್ಯೆಗೆ ಇದು ಏನೇನೂ ಸಾಕಾಗುವುದಿಲ್ಲ. ಟ್ರಂಪ್ ಅವರು ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಬ್ರಿಕ್ಸ್ ದೇಶಗಳು ಸೇರಿ ಹೊಸ ಕರೆನ್ಸಿ ತರುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ.
ಕಳೆದ ಬಾರಿ ಘೋಷಣೆ ಮಾಡಿದ್ದಕ್ಕಿಂತ ಕಡಿಮೆ ಅನುದಾನವನ್ನು ಅನೇಕ ವಿಚಾರಗಳಿಗೆ ಕಡಿತ ಮಾಡಲಾಗಿದೆ. ಶಿಕ್ಷಣಕ್ಕೆ 11 ಸಾವಿರ ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 5 ಸಾವಿರ ಕೋಟಿ ಕಡಿತ ಮಾಡಲಾಗಿದೆ. ಕೃಷಿಗೆ 11 ಸಾವಿರ ಕೋಟಿ ಅನುದಾನ ಕಡಿಮೆ ಮಾಡಲಾಗಿದೆ. ಗ್ರಾಮೀಣ ಅಭಿವೃದ್ದಿಗೆ 75 ಸಾವಿರ ಕೋಟಿ ಖರ್ಚು ಮಾಡಲಾಗಿದೆ.
ಅನುಸೂಚಿತ ಜಾತಿಗಳ ಅಭಿವೃದ್ದಿಗೆ ಕಳೆದ ಬಾರಿ 2 ಸಾವಿರ ಕೋಟಿ ಘೋಷಣೆ ಮಾಡಿ ಖರ್ಚು ಮಾಡಿದ್ದು ಕೇವಲ 800 ಕೋಟಿ. ಓಬಿಸಿ ವಿದ್ಯಾರ್ಥಿಗಳಿಗೆ ಯಂಗ್ ಅಚೀವರ್ಸ್ ವಿದ್ಯಾರ್ಥಿ ವೇತನಕ್ಕೆ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಸುಮಾರು 500 ಕೋಟಿ ವಿದ್ಯಾರ್ಥಿ ವೇತನ ಕಡಿಮೆ ಮಾಡಲಾಗಿದೆ. ದಲಿತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಒಂದು ಸಾವಿರ ಕೋಟಿ ಕಡಿಮೆ ಮಾಡಲಾಗಿದೆ.
ಬಜೆಟ್ ಅನ್ನುವುದು ಕರಪತ್ರದಲ್ಲಿ ಭರವಸೆಗಳನ್ನು ಘೋಷನೆ ಮಾಡಿದಂತೆ ಅಲ್ಲ. 10 ವರ್ಷಗಳ ಹಿಂದೆ ಬಿಹಾರಕ್ಕೆ ಪ್ರಧಾನಿ ಮೋದಿ ಅವರು 1.25 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡುತ್ತಾರೆ. ಅದಕ್ಕೆ ಹೋಲಿಸಿದರೆ ಬಿಹಾರಕ್ಕೆ ಈ ಬಾರಿ ನೀಡುತ್ತಿರುವುದು ಸಹ ಚಿಲ್ಲರೆ ಅನುದಾನ. ಬಿಹಾರಿಗಳು ಬಹಳ ಬುದ್ದಿವಂತ ಜನ ಬಿಜೆಪಿ ಪೊಳ್ಳು ಭರವಸೆಗಳಿಗೆ ಅವರು ಪಾಠ ಕಲಿಸುತ್ತಾರೆ.
ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ. ಏಮ್ಸ್, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಕೇವಲ 40 ತಿಂಗಳಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೇ ಮಾಡುವುದಾಗಿ ಹೇಳಿದ್ದರು. ಅದಕ್ಕೂ ಅನುದಾನ ಸರಿಯಾಗಿ ನೀಡದೆ ಮೋಸ ಮಾಡಲಾಗಿದೆ. ದೇಶದ ಬಗ್ಗೆ ಬಿಜೆಪಿಗೆ ಮುಂದಾಲೋಚನೆಯಿಲ್ಲ. ಏಕೆಂದರೆ ಪ್ರತಿ ಬಾರಿಯೂ 2 ಗಂಟೆಗೂ ಹೆಚ್ಚು ಕಾಲ ಒಣ ಭಾಷಣ ಮಾಡುತ್ತಿದ್ದ ಅವರು ಈ ಬಾರಿ ಕೇವಲ ಒಂದುವರೆಗಂಟೆಗೆ ಮುಗಿಸಿದ್ದಾರೆ.
ಕೆಪಿಸಿಸಿ ಪಧವೀದರರ ವಿಭಾಗದ ಅಧ್ಯಕ್ಷರಾದ ನಟರಾಜ ಗೌಡ ಅವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.