ರೈತರಿಗೆ, ಮಹಿಳೆಯರಿಗೆ ತೀವ್ರ ನಿರಾಸೆ ತಂದ ‘ಚುನಾವಣಾ ಬಜೆಟ್’

ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಾಧ್ಯಕ್ಷರು ಮಾಡಿದ ಭಾಷಣದಲ್ಲಿ ರೈತರು, ನಾರೀ ಶಕ್ತಿ, ಬಡಜನರು ಮತ್ತು ಯುವಜನರು ಸರಕಾರದ ಆದ್ಯತೆಗಳು ಎಂದಿದ್ದರು. ಆದರೆ ಅವರ ಸರಕಾರದ ಹಣಕಾಸು ಮಂತ್ರಿಗಳು ಫೆಬ್ರುವರಿ 1ರಂದು ಮಂಡಿಸಿದ ಮಧ್ಯಂತರ ಬಜೆಟ್‍ ಅಥವ ಲೇಖಾನುದಾನದಲ್ಲಿ ಪ್ರಕಟಗೊಂಡಿರುವುದು ಈ ಸರಕಾರದ ತದ್ವಿರುದ್ಧ ಸ್ವರೂಪವೇ ಎಂದು ರೈತ, ಕಾರ್ಮಿಕ, ಮಹಿಳಾ ಮತ್ತು ಯುವಜನ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರೈತರಿಗೆ

ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್‍) ಈ ಬಜೆಟ್‍ ಸತತ 10ನೇ ರೈತ-ವಿರೋಧಿ ಬಜೆಟ್‍ ಎಂಬ ದಾಖಲೆ ನಿರ್ಮಿಸಿದೆ. ಅದು ಜಪಿಸುವ ‘ಅಭಿವೃದ್ಧಿ’  ರೈತರಿಗಲ್ಲ, ಅಂಬಾನಿ-ಅದಾನಿಗಳಿಗೆ ಎಂದು   ಎಂದು ಹೇಳಿದರೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯುಎ) ಮಹಿಳಾ ಸಬಲೀಕರಣವು ‘ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆಯೇ ಹೊರತು ವೆಚ್ಚಗಳ ಮೇಲೆ ಅಲ್ಲ’ ಎಂಬ ಹಣಕಾಸು ಮಂತ್ರಿಗಳ ದಾವೆಯು ಮಹಿಳಾ ಅಭಿವೃದ್ಧಿಗೆ ಬಜೆಟ್ ಹಂಚಿಕೆಗಳು ಮುಖ್ಯವಲ್ಲ ಎಂದು ಸೂಚಿಸುತ್ತದೆಯಾದ್ದರಿಂದ  ಜನರಿಗೆ ತಕ್ಷಣದ ಪರಿಹಾರದ ಬಗ್ಗೆ ಯಾವುದೇ ಪ್ರಕಟಣೆಗಳು ಬಜೆಟ್ ಭಾಷಣದಲ್ಲಿ ಇಲ್ಲದಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದೆ.

ಈ ಸರ್ಕಾರದ ಕಳೆದ 10 ವರ್ಷಗಳ ಆಳ್ವಿಕೆಯ ದಾಖಲೆಯು ಅದರ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ ಸ್ವರೂಪವನ್ನು ಸ್ಪಷ್ಟವಾಗಿ ಪ್ರದರ್ಶಿಸಿರುವಾಗ,  ಅದಕ್ಕನುಗುಣವಾಗಿಯೇ, ಈ ಮಧ್ಯಂತರ ಬಜೆಟ್ ಕಾರ್ಮಿಕರು, ರೈತರು ಮತ್ತು ಜನರಿಗೆ ಯಾವುದೇ ಸಕಾರಾತ್ಮಕ ಹೆಜ್ಜೆಗಳ ಬಗ್ಗೆ ಏನೂ ಹೇಳಿಲ್ಲ, ಬದಲಿಗೆ, ಜೂನ್‍ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಂದು ತನ್ನ ‘ವಿಕಸಿತ್‍ ಭಾರತ್’ ನ ನೀಲನಕ್ಷೆಯನ್ನು ಕೊಟ್ಟಿರುವುದಾಗಿ ಹೇಳಿಕೊಂಡಿದೆ. ಅದರ ನವ ಉದಾರವಾದಿ ನೀತಿಗಳಿಗೆ ಅನುಗುಣವಾಗಿ ಅದು 2047 ರ ವೇಳೆಗೆ ನಿರ್ಮಿಸ ಬಯಸುತ್ತಿರುವುದು ಕಾರ್ಪೊರೇಟ್-ಪರ  ಮತ್ತು ಶ್ರೀಮಂತ ಪರವಾದ ‘ವಿಕಸಿತ್‍ ಭಾರತ’ವನ್ನೇ ಎಂದು ಸಿಐಟಿಯು ಹೇಳಿದೆ. ರೈತರಿಗೆ

ನಿರೀಕ್ಷಿಸಿದಂತೆ ಯುವಜನ, ನಾರೀಶಕ್ತಿ, ರೈತರು ಮತ್ತು ಬಡಜನರು ಸರಕಾರದ ಆದ್ಯತೆಗಳು ಎಂಬ ಹೇಳಿಕೆ ಈ ಜನವಿಭಾಗಗಳಲ್ಲಿ ತಂದಿರುವುದು ಆಳಿಕೆ, ದೀರ್ಘ ನಿಟ್ಟುಸಿರಷ್ಟೇ. ( ವ್ಯಂಗ್ಯಚಿತ್ರ ಕೃಪೆ: ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

“ರೈತರಿಗೆ ದುಪ್ಪಟ್ಟು ಆದಾಯದ ಭರವಸೆ  ಒಂದು ಪ್ರಹಸನ”

ಸಿ2+50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ಬೇಕೆಂಬ ರೈತರ ಬಹುಕಾಲದ ಆಗ್ರಹದ ಬಗ್ಗೆ ಚಕಾರವಿಲ್ಲ, ರೈತರ ಆದಾಯವನ್ನು ದುಪ್ಪಟ್ಟಾಗುತ್ತದೆ ಎಂಬ ಭರವಸೆಯಂತೂ ಪ್ರಹಸನವಾಗಿ ಬಿಟ್ಟಿದೆ ಎಂದು ಎಐಕೆಎಸ್‍ ಈ ಬಜೆಟನ್ನು ವಿಶ್ಲೇಷಿಸುತ್ತ ಹೇಳಿದೆ.

“ನಾವೀನ್ಯತೆ  ಮತ್ತು ಒಳಗೊಳ್ಳುವ” ಬಜೆಟ್ ಎಂದು ನಕಲಿ ಕಥನವನ್ನು ಸೃಷ್ಟಿಸಲಾಗಿದೆ. ಆದರೆ ಕಟುವಾಸ್ತವವೆಂದರೆ 2023-24 ಮತ್ತು 2024-25 ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಕಳೆದ ಐದು ವರ್ಷಗಳಲ್ಲೇ ಅತ್ಯಂತ  ಕಡಿಮೆ ವೆಚ್ಚದ ವರ್ಷಗಳು.  ಚುನಾವಣಾ ವರ್ಷದಲ್ಲಿಯೂ, ಕೇಂದ್ರ ಬಜೆಟ್ 2024-25 (ಮಧ್ಯಂತರ) ಗ್ರಾಮೀಣ ಅರ್ಥವ್ಯವಸ್ಥೆ ಮತ್ತು ಕೃಷಿ ಕ್ಷೇತ್ರಕ್ಕೆ ಗಣನೀಯವಾಗಿ ಏನನ್ನೂ ನೀಡುವುದಿಲ್ಲ ಎಂದು ಎಐಕೆಎಸ್‍ ಬಲವಾಗಿ ಟೀಕಿಸಿದೆ.

2022-23ಕ್ಕೆ ಹೋಲಿಸಿದರೆ, 2024-25ರ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ 81 ಸಾವಿರ ಕೋಟಿ ರೂ.ಗಳಷ್ಟು ನೀಡಿಕೆಗಳನ್ನು ಕಡಿತಗೊಳಿಸಲಾಗಿದೆ. 2022-23ರಲ್ಲಿನ ವಾಸ್ತವಿಕ ವೆಚ್ಚಕ್ಕೆ ಹೋಲಿಸಿದರೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಒಟ್ಟಾರೆ ಹಂಚಿಕೆಗಳಲ್ಲಿ 22.3% ಇಳಿಕೆಯಾಗಿದೆ ಮತ್ತು 2023-24ರ ಪರಿಷ್ಕೃತ ಬಜೆಟ್‌ಗೆ ಹೋಲಿಸಿದರೆ 6% ಇಳಿಕೆಯಾಗಿದೆ. ಇದು ತನ್ನ ಕಾರ್ಪೊರೇಟ್ ಬಂಟರ ಆದೇಶದಂತೆ ಸಣ್ಣ ಪ್ರಮಾಣದ ಕೃಷಿಯನ್ನು ಮತ್ತು ಕೋಟ್ಯಂತರ ರೈತರು ಮತ್ತು ಕೃಷಿ ಕಾರ್ಮಿಕರ ಜೀವನೋಪಾಯವನ್ನು ವ್ಯವಸ್ಥಿತವಾಗಿ ಕಳಚಿ ಹಾಕಲು ಪ್ರಯತ್ನಿಸುತ್ತಿರುವ ಮೋದಿ ಆಳ್ವಿಕೆಯ “ಎಲ್ಲರನ್ನೂ ಒಳಗೊಳ್ಳುವ”” ಕ್ರಮದ ವರ್ಗ ಸ್ವರೂಪದ ಒಂದು ಸ್ಪಷ್ಟ ಸೂಚನೆಯಾಗಿದೆ ಎಂದಿರುವ ಎಐಕೆಎಸ್,  ಮೋದಿ ಆಡಳಿತವು ಕಂಡುಹಿಡಿದಿರುವ  ರೈತಾಪಿಗಳನ್ನು ನಾಶಮಾಡುವ “ನವೀನ” ವಿಧಾನಗಳನ್ನು ರಾಷ್ಟ್ರವಾದದ ಕಥನದ  ಒಟ್ಟಾರೆ ಚೌಕಟ್ಟಿನಲ್ಲಿ ಮರೆಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿಮಧ್ಯಂತರ ಬಜೆಟ್ | ಸುಳ್ಳಿನ ಕಂತೆ ಮತ್ತು ಖಾಸಗೀಕರಣದ ಹತಾಶ ಪ್ರಯತ್ನ – ಸಿಐಟಿಯು ಆರೋಪ

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ, ಮನರೇಗ, ಗ್ರಾಮೀಣ ಉದ್ಯೋಗ, ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆ, ಸಹಕಾರ, ಆಹಾರ ಸಂಗ್ರಹಣೆ ಮತ್ತು ಉಗ್ರಾಣ, ತೋಟಗಳು, ಬೆಳೆ ಪಾಲನೆ, ಪ್ರವಾಹ ನಿಯಂತ್ರಣ ಮತ್ತು ಒಳಚರಂಡಿ, ಭೂಸುಧಾರಣೆ, ರಸಗೊಬ್ಬರ ಸಬ್ಸಿಡಿ, ಆಹಾರ ಸಬ್ಸಿಡಿ, ಡೈರಿ ಅಭಿವೃದ್ಧಿ, ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರಾವರಿ, ಪೋಷಣೆ, ಗ್ರಾಮೀಣ ರಸ್ತೆಗಳು, ವಸತಿ, ಶಿಕ್ಷಣ ಮತ್ತು ಆರೋಗ್ಯ ಇತ್ಯಾದಿಗಳಲ್ಲಿ ಭಾರಿ ಕಡಿತವನ್ನು ತೋರಿಸಲಾಗಿದೆ.. ಮಹಿಳೆಯರು ಮತ್ತು ಮಕ್ಕಳಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಂಪನ್ಮೂಲಗಳ ಹಂಚಿಕೆಯನ್ನು ಸಹ ತೀವ್ರವಾಗಿ ಕಡಿತಗೊಳಿಸಲಾಗಿದೆ. ಸಿ2+50% ಸೂತ್ರದಂತೆ ಕನಿಷ್ಠ ಬೆಂಬಲ ಬೆಲೆಗಳನ್ನು ಖಾತ್ರಿಪಡಿಸಬೇಕೆಂಬ ರೈತರ ದೀರ್ಘಕಾಲದ ಬೇಡಿಕೆಯನ್ನು ಖಾತ್ರಿಪಡಿಸಲು ಯಾವುದೇ ಹಂಚಿಕೆಯಾಗಿಲ್ಲ.

2024-25ರಲ್ಲಿ ರಸಗೊಬ್ಬರ ಸಬ್ಸಿಡಿಗೆ ರೂ. 2022-23ರಲ್ಲಿ ವಾಸ್ತವಿಕ ವೆಚ್ಚಕ್ಕಿಂತ 87339 ಕೋಟಿ ರೂ. ಕಡಿಮೆಯಾಗಿದೆ, ಆಹಾರ ಸಬ್ಸಿಡಿಗೆ 2022-23 ರಲ್ಲಿನ ವಾಸ್ತವಿಕ ವೆಚ್ಚಕ್ಕಿಂತ 67552 ಕೋಟಿ ರೂ.ಕಡಿಮೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ, ಪ್ರಮುಖ ಕ್ಷೇತ್ರಗಳಾದ ರಸಗೊಬ್ಬರ ಮತ್ತು ಆಹಾರ ಸಬ್ಸಿಡಿಗಳು ಮತ್ತು ಮನರೇಗ ದಂತಹ ಪ್ರಮುಖ ಯೋಜನೆಗಳಿಗೆ, ನಿರ್ಣಾಯಕ ಕ್ಷೇತ್ರಗಳಿಗೆ ಹಂಚಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುವ ಸರ್ಕಾರದ ಉದ್ದೇಶವನ್ನು ಬಿಂಬಿಸುತ್ತಿದ್ದು, ಇದರಲ್ಲಿ ಮೋದಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಕಾಣಬಹುದಾಗಿದೆ.   ವ್ಯಾಪಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಸಂವೇದನಾಶೂನ್ಯತೆ ಬಡವರ ದುಃಸ್ಥಿತಿಯ ಬಗ್ಗೆ ಈ ಸರಕಾರದ  ನಿರಾಸಕ್ತಿಯನ್ನು ಬಹಿರಂಗಪಡಿಸುತ್ತದೆ. ಈ ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರತಿ ವರ್ಷವೂ ತೀವ್ರ ಸಂಕಷ್ಟದ ವಾಸ್ತವಿಕತೆಯಿಂದಾಗಿ ಹಂಚಿಕೆಯನ್ನು ಹೆಚ್ಚಿಸಬೇಕಾಗಿ ಬಂದಿತ್ತು. ಬಜೆಟ್‌ನಲ್ಲಿ ಈ ಅಂಶವನ್ನು ಒಳಗೊಳ್ಳದಿರುವುದು ಅದರ ಬಡಜನ-ವಿರೋಧಿ ಸ್ವಭಾವವನ್ನು  ಸೂಚಿಸುತ್ತದೆ ಎಂದು ಎಐಕೆಎಸ್‍ ಹೇಳಿದೆ. ರೈತರಿಗೆ

ಸಾಂವಿಧಾನಿಕ ಒಕ್ಕೂಟತತ್ವದ ವಿರುದ್ಧ ಸುದೀರ್ಘ ಯುದ್ಧದ ಭಾಗವಾಗಿ ನಿಜಬೆಲೆಗಳಲ್ಲಿ ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲಗಳ ವರ್ಗಾವಣೆಯಲ್ಲಿ ಇಳಿಕೆ ಮಾಡುತ್ತಿರುವುದು ಮತ್ತು ಅವುಗಳು ಸಾಲ ತರುವ ಮಿತಿಗಳಲ್ಲಿ ಕಡಿತಗಳು ದುಡಿಯುವ ಜನಗಳಿಗೆ ಪ್ರಯೋಜನಕಾರಿಯಾದ ಧೋರಣೆಗಳನ್ನು ಜಾರಿಗೊಳಿಸುವ  ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ರಾಜ್ಯ ಸರ್ಕಾರಗಳ ಸಾಮರ್ಥ್ಯವನ್ನು ಗಮನಾರ್ಹವಾಗಿ ಕುಂಠಿತಗೊಳಿಸುತ್ತದೆ. ಇದನ್ನು ದೊಡ್ಡ ಉದ್ಯಮ ಸಮೂಹಗಳಿಗೆ  ‘ಸುಗಮ ವ್ಯಾಪಾರ”ದ ಹೆಸರಿನಲ್ಲಿ ದುಡಿಯುವ ಜನರನ್ನು ಲೂಟಿ ಮಾಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ಮತ್ತು ಗುತ್ತೇದಾರಿಗಳು  ಮತ್ತು ಸೂಪರ್‍ ಶ್ರೀಮಂತರಿಗೆ ಅವರ ಸಂಪತ್ತಿಗೆ ಅನುಸಾರವಾಗಿ  ತೆರಿಗೆ ವಿಧಿಸಲು ನಿರಾಕರಿಸುವ ಮೂಲಕ ನೀಡಲಾಗುತ್ತಿರುವ ಉದಾರ ಬಕ್ಷೀಸುಗಳೊಂದಿಗೆ ಹೋಲಿಸಿ ನೋಡಬಹುದು.

ಹಣಕಾಸು ಸಚಿವರು ಎಫ್‌ಡಿಐ ಇತ್ಯಾದಿ ರೂಪದಲ್ಲಿ ಹಣಕಾಸಿನ ಅಡೆತಡೆಯಿಲ್ಲದ ಮಾರ್ಗದ ಭರವಸೆ ನೀಡುವ ಮೂಲಕ ಅಂತರರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಎನ್‌ಡಿಎ ಆಡಳಿತದ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ರಾಷ್ಟ್ರವಾದದ ಬಣ್ಣವನ್ನು ನೀಡಲು ಮತ್ತು ಜನರನ್ನು ಮರುಳು ಮಾಡಲು ಅವರು ಎಫ್‌ಡಿಐ ಅಂದರೆ ‘ಫಾರಿನ್‍ ಡೈರೆಕ್ಟ್ ಇನ್ವೆಸ್ಟ್‍ಮೆಂಟ್’                (ವಿದೇಶಿ ನೇರ ಹೂಡಿಕೆ) ಎಂಬುದರ ಬದಲು  “ಫಸ್ಟ್ ಡೆವಲಪ್‍ ಇಂಡಿಯ’(ಮೊದಲು ಭಾರತದ ಅಭಿವೃದ್ಧಿ) ಎಂದು ನಿರ್ವಚಿಸಿದ್ದಾರೆ. ನಿಜ ಹೇಳಬೇಕೆಂದರೆ, ಇದು ‘ಫಾಸ್ಟ್ ಡ್ರೈನ್ ಇಂಡಿಯಾ’ ಅಂದರೆ ಬೇಗನೇ ಭಾರತವನ್ನು ಬರಿದಾಗಿಸುವ  ಯೋಜನೆಯಾಗಿದೆ ಎಂದು  ಎಐಕೆಎಸ್‍ ಮೂದಲಿಸಿದೆ.

ಸಂಗ್ರಹಣೆ, ಸಂಸ್ಕರಣೆ, ಮಾರುಕಟ್ಟೆ ಸೇರಿದಂತೆ ಕಟಾವಿನ ನಂತರದ ಚಟುವಟಿಕೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸುವ ಪ್ರಸ್ತಾಪವು ಐತಿಹಾಸಿಕ ರೈತರ ಹೋರಾಟದ ನಂತರ ಹಿಂತೆಗೆದುಕೊಳ್ಳಲೇ ಬೇಕಾಗಿ ಬಂದ ಕರಾಳ ಕೃಷಿ ಕಾಯಿದೆಗಳನ್ನು ಮತ್ತು ದುರಾಸೆಯ ಕಾರ್ಪೊರೇಟ್‌ಗಳನ್ನು ಹಿಂಬಾಗಿಲಿನ ಮೂಲಕ ಮರಳಿ ತರುವ ಒಂದು ಲಜ್ಜೆಗೆಟ್ಟ ಪ್ರಯತ್ನವಾಗಿದೆ ಎಂದು ಎಐಕೆಎಸ್‍ ಬಲವಾಗಿ ಖಂಡಿಸಿದೆ.

ಮೋದಿ ಆಡಳಿತದ ದಿಕ್ಪಥ ‘ಅಭಿವೃದ್ಧಿ’ ಹೊಂದುವುದು ರೈತರಲ್ಲ, ಅದಾನಿ ಮತ್ತು ಅಂಬಾನಿಯಂತಹ ಅಂತರರಾಷ್ಟ್ರೀಯ ಹಣಕಾಸಿನ ನಿಷ್ಠಾವಂತ ಪಾಲುದಾರರು ಎಂಬುದನ್ನೇ ಸ್ಪಷ್ಟವಾಗಿ ಸೂಚಿಸುತ್ತದೆ ಎಂದಿರುವ ಅಖಿಲ ಭಾರತ ಕಿಸಾನ್‍ ಸಭಾ ರೈತ ವಿರೋಧಿ, ಜನವಿರೋಧಿ ಬಜೆಟ್ ವಿರುದ್ಧ ಎದ್ದು ನಿಲಲ್ಬೇಕು, ಮತ್ತು ಫೆಬ್ರವರಿ 16 ರ ಗ್ರಾಮೀಣ ಭಾರತ್ ಬಂದ್ ಅನ್ನು ಬೃಹತ್ ಪ್ರಮಾಣದಲ್ಲಿ ಯಶಸ್ವಿಗೊಳಿಸಬೇಕು ಎಂದು  ಕರೆ ನೀಡಿದೆ.

ಇದನ್ನೂ ಓದಿಚುನಾವಣಾ ಪೂರ್ವದ ಪ್ರಚಾರ ತಂತ್ರದ ಬಜೆಟ್ ಮಹಿಳೆ ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಸೂಚಿಸಿಲ್ಲ – AIDWA

‘ನಾರಿ ಶಕ್ತಿಯನ್ನು ಪೋಷಿಸಲಾಗುತ್ತಿದೆ ಎಂಬ ದಾವೆಯ ಅಣಕ’

ಸರಕಾರದ ಯೋಜಿತ ಒಟ್ಟು ವೆಚ್ಚವು ಜಿಡಿಪಿಯ 14.54%ಕ್ಕೆ ಇಳಿದಿದೆ, ಅದರಲ್ಲಿ ಸುಮಾರು 24% ಬಡ್ಡಿ ಪಾವತಿಗಳೇ.. ಲಿಂಗ ಬಜೆಟ್‌ನ ಅಡಿಯಲ್ಲಿರುವ ಹಂಚಿಕೆಗಳನ್ನು ಒಟ್ಟು ವೆಚ್ಚದ ಸುಮಾರು 5-6 ಶೇ.  ಎಂದು ತೋರಿಸಲಾಗಿದೆ, ಇದು ಸುಮಾರಾಗಿ ಕಳೆದ ವರ್ಷದಷ್ಟಕ್ಕೇ ನಿಂತಿದೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಹಂಚಿಕೆಗಳು ಒಟ್ಟು ವೆಚ್ಚದ ಶೇಕಡಾ 0.5 ಷ್ಟೇ ಇದೆ. ಈ ಹಂಚಿಕೆಗಳು ‘ನಾರಿ ಶಕ್ತಿ’ಯನ್ನು ಪೋಷಿಸಲಾಗುತ್ತಿದೆ ಎಂಬ ಸರ್ಕಾರದ ದಾವೆಯನ್ನು ಅಪಹಾಸ್ಯ ಮಾಡುತ್ತವೆ ಎಂದು ಎಐಡಿಡಬ್ಲ್ಯುಎ ಟೀಕಿಸಿದೆ.

ಗಮನಾರ್ಹ ಸಂಖ್ಯೆಯಲ್ಲಿ ಮಹಿಳಾ ಫಲಾನುಭವಿಗಳನ್ನು ಹೊಂದಿರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಮನರೇಗ) ಬಗ್ಗೆ ಭಾಷಣದಲ್ಲಿ ಯಾವುದೇ ಉಲ್ಲೇಖವಿಲ್ಲ. ಇದು ಯೋಜನೆಯನ್ನು ಕೊಲ್ಲಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಬಿಂಬಿಸುತ್ತದೆ. 2024-25 ರ ಬಜೆಟ್ ಅಂದಾಜು 2023-24 ರ ಪರಿಷ್ಕೃತ ಅಂದಾಜಿನಂತೆಯೇ ಇದೆ, ಇದು 2022-23 ರ ವಾಸ್ತವಿಕ ವೆಚ್ಚಕ್ಕಿಂತ ಸುಮಾರು 5% ದಷ್ಟು ಇಳಿಕೆಯನ್ನು ತೋರಿಸುತ್ತದೆ. ಇದರಲ್ಲಿ ಸರ್ಕಾರ ಪಾವತಿಸದ ಕಾರ್ಮಿಕರ ಬಾಕಿ ವೇತನವೂ ಸೇರಿದೆ. 2022-2023ರಲ್ಲಿ 5.48 ಕೋಟಿಗೂ ಹೆಚ್ಚು ಮನರೇಗ  ಕೆಲಸಗಾರರ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದ್ದು, ಕೆಲಸಕ್ಕೆ ಅರ್ಜಿ ಸಲ್ಲಿಸುವ 5.6 ಕೋಟಿ ಕುಟುಂಬಗಳಲ್ಲಿ 1%ಕ್ಕಿಂತ ಕಡಿಮೆ ಜನರು 100 ದಿನಗಳ ಕೆಲಸವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಎತ್ತಿ ತೋರಿಸಬೇಕಾಗಿದೆ ಎಂದು ಅದು ಹೇಳಿದೆ.

ಹಾಗೆಯೇ , ಸರ್ಕಾರವು 80 ಕೋಟಿ ಜನರಿಗೆ ಉಚಿತ ಆಹಾರವನ್ನು ಒಂದು ಸಾಧನೆ ಎಂದು ಉಲ್ಲೇಖಿಸುತ್ತದೆ; ಆದರೆ ಮೋದಿ ಸರಕಾರ ಹಸಿದವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದನ್ನು ಬಜೆಟ್ ದಾಖಲೆ ತೋರಿಸುತ್ತದೆ. ಆಹಾರ ಸಬ್ಸಿಡಿಗೆ 2022-23 ರಲ್ಲಿ ಮಾಡಿದ ನಿಜವಾದ ವೆಚ್ಚಕ್ಕಿಂತ ಸುಮಾರು 25% ಕಡಿಮೆ ಮತ್ತು 2023-24 ರ ಪರಿಷ್ಕೃತ ಅಂದಾಜಿಗಿಂತ 5% ಕಡಿಮೆಯಾಗಿದೆ. ಅಪೌಷ್ಟಿಕತೆ ನಿವಾರಣೆಗೆ ನಿರ್ಣಾಯಕವಾಗಿರುವ ಮಿಷನ್ ಅಂಗನವಾಡಿ ಸಕ್ಷಮ್ ಮತ್ತು ಪೋಷಣ್ ಕೆಲವು ವರ್ಷಗಳಿಂದ ಕಡಿತವನ್ನು ಎದುರಿಸುತ್ತಿದೆ. ಈ ಬಜೆಟ್‌ನಲ್ಲಿ, 2023-2024ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಸರ್ಕಾರವು ಹಂಚಿಕೆಯನ್ನು ಶೇಕಡಾ 1.5 ರಷ್ಟು ಕಡಿತ ಮಾಡಿದೆ. ಸರ್ಕಾರವು ಈ ವಲಯವನ್ನು ಖಾಸಗಿ ಕಂಪನಿಗಳಿಗೆ ಮತ್ತು ಕಾರ್ಪೊರೇಟ್ ಎನ್‌ಜಿಒಗಳಿಗೆ ತೆರೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ, ಏಕೆಂದರೆ ಈ ಬಾಬ್ತಿನಲ್ಲಿ ಖರ್ಚು ಕಡಿಮೆಯಾಗುತ್ತ ಬರುತ್ತಿದೆ.

70 ಪ್ರತಿಶತ ಫಲಾನುಭವಿಗಳು ಮಹಿಳೆಯರೇ ಆಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಮಹಿಳೆಯರಿಗೆ ಬಹಳ ಲಾಭವಾಗುತ್ತಿದೆ ಎಂಬುದು ಈ ಸರಕಾರದ ಮತ್ತೊಂದು ದಾವೆ. ಇದರ ಪರಿಷ್ಕೃತ ಅಂದಾಜು 2022-23ರ ವಾಸ್ತವಿಕ ವೆಚ್ಚಕ್ಕಿಂತ ಶೇಕಡ 26.5ರಷ್ಟು ಕಡಿಮೆಯಾಗಿದೆ ಎಂಬ ಅಂಶ ಇದರ ನಿಜಚಿತ್ರವನ್ನು ಬಯಲು ಮಾಡುತ್ತದೆ ಎಂದು ಎಐಡಿಡಬ್ಲ್ಯುಎ ಹೇಳಿದೆ. 53 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದರೂ 13 ಲಕ್ಷ ಮಾತ್ರ ಪೂರ್ಣಗೊಂಡಿದೆ ಎಂದು ಸರ್ಕಾರವೇ ಅನುಷ್ಠಾನ ದಾಖಲೆಯಲ್ಲಿ ಹೇಳುತ್ತದೆ. ಇದಲ್ಲದೆ, ಸರ್ಕಾರವು ಎನ್‍ಆರ್‍ಎಲ್‍ಎಂ ಮೂಲಕ ‘ಲಖ್‍ಪತಿ ದೀದಿ’ ಬಗ್ಗೆ ದೊಡ್ಡ-ದೊಡ್ಡ ಮಾತುಗಳನ್ನಾಡಿದೆ, ಆದೆ ಅದಕ್ಕೆ ಹಂಚಿಕೆಯು ತೀರಾ ಕಳಪೆಯಾಗಿದೆ, ಅದು ಯಾವುದೇ ಗಮನಾರ್ಹ ಹೆಚ್ಚಳವನ್ನು ಕಂಡಿಲ್ಲ. ವಾಸ್ತವವಾಗಿ, ಪ್ರಧಾನ ಮಂತ್ರಿಯವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿರುವಂತೆ 1261 ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ಕೃಷಿಗಾಗಿ ಡ್ರೋನ್‌ಗಳ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ಮಹಿಳೆಯರನ್ನು ಪ್ರಲೋಭಿಸಲು ಈ ಯೋಜನೆಯನ್ನು ಬಳಸಲಾಗುತ್ತಿದೆ. ಎನ್‍ಆರ್‍ಎಲ್‍ಎಂ ನ್ನು ಗ್ರಾಮೀಣ ಮಹಿಳೆಯರು ಮತ್ತು ಕೃಷಿ-ಉದ್ಯಮಗಳ (ನಾಮೊ ಡ್ರೋನ್ ದೀದಿ ಸ್ಕಿಮಿನಂತಹದ್ದು) ನಡುವೆ ಸಂಪರ್ಕವನ್ನು ಸೃಷ್ಟಿಸಲು ಸಾಧನವಾಗಿ ಬಳಸಲಾಗುತ್ತಿದೆ ಎಂದು ಇದು ತೋರಿಸುತ್ತದೆ ಎಂದಿದೆ ಎಐಡಿಡಬ್ಲ್ಯುಎ.

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್, ಫೇಸ್‍ಬುಕ್

ಕಳೆದ ಬಜೆಟ್‌ನಲ್ಲಿ ಘೋಷಿಸಿದ ಹೆಣ್ಣು ಮಕ್ಕಳ ಉಳಿತಾಯ ಯೋಜನೆ ಪ್ರಾರಂಭವಾಗಿಯೇ ಇಲ್ಲ. ಮತ್ತು ಜನ್ ಧನ್ ಯೋಜನೆಯಲ್ಲಿನ ವಂಚನೆಗಳನ್ನು ಸಿಎಜಿ ಬಹಿರಂಗಪಡಿಸಿದೆ. ಹಾಗಾಗಿ, ಇವು ‘ಮಹಿಳಾ ಸಬಲೀಕರಣ’ದ ಯೋಜನೆಗಳು ಎಂಬ ಸರಕಾರದ ಪ್ರಚಾರ ಅಸಮರ್ಥನೀಯವಾಗಿದೆ.

ಸಾಮಾಜಿಕ ವಲಯದ ವೆಚ್ಚಗಳು ಸ್ಥಗಿತಸ್ಥಿತಿಯಲ್ಲಿವೆ ಅಥವ ಇಳಿಮುಖ ಪ್ರವೃತ್ತಿಯನ್ನು ಕಂಡಿವೆ. ಡಿಸೆಂಬರ್ 2023 ರ ವೇಳೆಗೆ ನಿರ್ಭಯಾ ನಿಧಿಯ 70 ಪ್ರತಿಶತದಷ್ಟು ಖರ್ಚು ಮಾಡಲಾಗಿಲ್ಲ ಮತ್ತು ಮಿಷನ್ ಶಕ್ತಿ ಯೋಜನೆಗಳ ವೆಚ್ಚದ ಮಟ್ಟವು ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಾಯಮಾತಿ ಮತ್ತು ವೇತನ ಹೆಚ್ಚಳದ ಬೇಡಿಕೆಗಳನ್ನು ಕಡೆಗಣಿಸಲಾಗಿದೆ; ಬದಲಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅವುಗಳನ್ನು ಲಿಂಕ್ ಮಾಡುವ ಭರವಸೆ ನೀಡಲಾಗಿದೆಯಷ್ಟೇ. ದುರ್ಬಲ ಗುಂಪುಗಳ ಹುಡುಗಿಯರು ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ವೆಚ್ಚದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಅಲ್ಪಸಂಖ್ಯಾತರಿಗೆ ಹಂಚಿಕೆಯಲ್ಲಿ ಇಳಿಮುಖ ಪ್ರವೃತ್ತಿ ಮುಂದುವರಿದಿದೆ ಮತ್ತು ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗೆ ಹಂಚಿಕೆ ಸ್ಥಗಿತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರ ದುರ್ಬಲ ಗುಂಪುಗಳ ಅಭಿವೃದ್ಧಿಯ ಸಂದರ್ಭದಲ್ಲಿ, 2023-24ರ ಪರಿಷ್ಕೃತ ಅಂದಾಜುಗಳು ಬಜೆಟ್ ಅಂದಾಜುಗಳ ಶೇಕಡಾ 30-40 ರಷ್ಟಿದ್ದು, ಕಾರ್ಯಕ್ರಮಗಳ ಅನುಷ್ಠಾನವು ನಡೆಯುತ್ತಿಲ್ಲ ಎಂದು ಸೂಚಿಸುತ್ತದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ’ ಎಂಬ ಅದರ ಪ್ರಚಾರವು ಕೇವಲ ಭ್ರಮೆ ಎಂದು ಇದು ತೋರಿಸುತ್ತದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

 

ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್‌ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್‌ Janashakthi Media

 

Donate Janashakthi Media

Leave a Reply

Your email address will not be published. Required fields are marked *