ನವದೆಹಲಿ: ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಫೆಬ್ರವರಿ 1 ರಂದು 11 ಗಂಟೆಗೆ ಬಜೆಟ್ ಮಂಡನೆ ಆಗಲಿದೆ. ಜನವರಿ 31ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-2023ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ.
ಕೊರೊನಾ ವೈರಸ್ ಮಾರ್ಗಸೂಚಿ ಹಾಗೂ ನಿಯಮದಂತೆ ಸಂಸತ್ ಅನ್ನು ಎರಡು ಪ್ರತ್ಯೇಕ ಪಾಳೆಗಳಲ್ಲಿ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಮೊದಲಾರ್ಧದ 5 ಗಂಟೆಗಳಲ್ಲಿ ರಾಜ್ಯಸಭೆ ಮತ್ತು ದ್ವಿತೀಯಾರ್ಧದ 5 ಗಂಟೆಗಳಲ್ಲಿ ಲೋಕಸಭೆ ಕಲಾಪಗಳು ನಡೆಸಲಿವೆ.
ಲೋಕಸಭೆ ಸದಸ್ಯರು ಬೆಳಗ್ಗೆ 11 ಗಂಟೆಯಿಂದ ಸದನ ಕಲಾಪದಲ್ಲಿ ಭಾಗಿಯಾದರೆ ಫೆಬ್ರವರಿ 2ರಿಂದ 11ರವರೆಗೆ ಸಾಯಂಕಾಲ 4ರಿಂದ ರಾತ್ರಿ 9 ಗಂಟೆಯವರೆಗೆ ಕಲಾಪದಲ್ಲಿ ಹಾಜರಿರಲಿದ್ದಾರೆ. ರಾಜ್ಯಸಭೆಯ ಕಲಾಪದ ನಿಖರವಾದ ಸಮಯವನ್ನು ಇನ್ನೂ ಔಪಚಾರಿಕವಾಗಿ ತಿಳಿಸದಿದ್ದರೂ ಮೇಲ್ಮನೆ ಅಧಿವೇಶನ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭಾ ಅಧ್ಯಕ್ಷ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಹೈದರಾಬಾದ್‌ನಲ್ಲಿ ಆರೈಕೆಯಲ್ಲಿದ್ದಾರೆ. ರಾಜ್ಯಸಭಾ ಸದಸ್ಯರ ಸಮಯದ ಕುರಿತು ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.
ರಾಷ್ಟ್ರಪತಿ ಭಾಷಣದಿಂದ ಆರಂಭ
ಜನವರಿ 31 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡುವ ಮೂಲಕ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 2 ರಿಂದ ಫೆಬ್ರವರಿ 11 ರವರೆಗೆ ಸಂಸತ್ ಅಧಿವೇಶನ ನಡೆಯಲಿದ್ದು, ಅಧಿವೇಶನದ ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ಆದರೆ, ಎರಡನೇ ಅವಧಿಯ ಅಧಿವೇಶನಕ್ಕೆ ಸಮಯ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿದು ಬಂದಿದೆ.
ಸಂಸತ್ತಿನ ಕೆಳಮನೆಯ ಅಧಿವೇಶನದ ಸಮಯದಲ್ಲಿ, ಲೋಕಸಭೆ ಮತ್ತು ರಾಜ್ಯಸಭಾ ಚೇಂಬರ್‌ಗಳು ಮತ್ತು ಅವುಗಳ ಗ್ಯಾಲರಿಗಳನ್ನು ಕೋವಿಡ್-19 ಸಾಂಕ್ರಾಮಿಕ ನಿರ್ಬಂಧಗಳ ದೃಷ್ಟಿಯಿಂದ ಸದಸ್ಯರ ಆಸನಕ್ಕಾಗಿ ಬಳಸಲಾಗುವುದು ಎಂದು ಲೋಕಸಭೆಯ ಪ್ರಕಟಣೆ ತಿಳಿಸಿದೆ.
2020ರ ಅಧಿವೇಶನ ಮಾದರಿ
ಕಳೆದ ವರ್ಷದ ಬಜೆಟ್ ಅಧಿವೇಶನ ಮತ್ತು ಮುಂಗಾರು ಹಾಗೂ ಚಳಿಗಾಲದ ಅಧಿವೇಶನಗಳನ್ನು ಸಾಮಾನ್ಯವಾಗಿ ಎಂದಿನಂತೆ ನಡೆಸಲಾಗಿತ್ತು. ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನಗಳ ಸಮಯದಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಅದರ ಬದಲಿಗೆ ಸದಸ್ಯರು ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು ಆಯಾ ಸದನಗಳ ಚೇಂಬರ್ ಮತ್ತು ಗ್ಯಾಲರಿಗಳಲ್ಲಿ ಕುಳಿತಿದ್ದರು.
ಕಳೆದ 2020 ರ ಮುಂಗಾರು ಅಧಿವೇಶನವನ್ನು ಕೋವಿಡ್ ನಿಯಮವಳಿಯಂತೆ ಮೊದಲ ಬಾರಿ ಪೂರ್ಣ ಅಧಿವೇಶನ ನಡೆಸಲಾಗಿತ್ತು. ಆ ದಿನದ ಮೊದಲಾರ್ಧದಲ್ಲಿ ರಾಜ್ಯಸಭೆ ಮತ್ತು ದ್ವಿತೀಯಾರ್ಧದಲ್ಲಿ ಲೋಕಸಭೆ ಅಧಿವೇಶನ ನಡೆಸಲಾಗಿತ್ತು. ಈ ಬಾರಿ ಬಜೆಟ್ ಅಧಿವೇಶನಕ್ಕೂ ಅದೇ ಮಾದರಿ ಅಳವಡಿಸಿಕೊಳ್ಳಲಾಗಿದೆ.