ಬೆಂಗಳೂರು | ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ : ಸಹಾಯಕ್ಕೆ ಕೈಚಾಚಿದರು ಮಾನವೀಯತೆ ತೋರದ ಜನ

ಬೆಂಗಳೂರು: ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಎದೆನೋವಿನಿಂದ ಬಳಲುತ್ತಿದ್ದ ಬಿದ್ದು ಒದ್ದಾಡುತ್ತಿದ್ದರೂ ಆತನನ್ನು ತುರ್ತು ಆಸ್ಪತ್ರೆಗೆ ದಾಖಲಿಸಲು ಸಕಾಲದಲ್ಲಿ ಅಂಬ್ಯುಲೆನ್ಸ್​ ಲಭ್ಯವಾಗಲಿಲ್ಲ.. ರಸ್ತೆಯಲ್ಲಿ ಜನರ ಸಹಾಯಕ್ಕಾಗಿ ಅವರ ಹೆಂಡತಿ ಅಂಗಲಾಚಿದರೂ ಯಾರೊಬ್ಬರು ಅವರ ನೋವಿಗೆ ಸ್ಪಂದಿಸದೆ ಮಾನವೀಯತೆ ತೋರದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ವರದಿಯಾಗಿದೆ.

ಘಟನೆಯ ವಿವರ: ನಗರದ ಬಾಲಾಜಿ ನಗರದ ಮೋಟಾರ್ ವಾಹನ ಮೆಕ್ಯಾನಿಕ್ ಆಗಿದ್ದ 34ವರ್ಷದ ವೆಂಕಟರಮಣನ್ ಡಿಸೆಂಬರ್ 13ರ ಮುಂಜಾನೆ ಎದೆ ನೋವಿನಿಂದ ಅಸ್ವಸ್ಥರಾಗಿದ್ದರು. ಈ ವೇಳೆ ಅಂಬ್ಯುಲೆನ್ಸ್​ ಸಿಗದ ಕಾರಣ ಅವರ ಪತ್ನಿ ರೂಪಾ ಪತಿಯನ್ನು ದ್ವಿಚಕ್ರ ವಾಹನದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ದುರ್ದೈವ ಎಂಬಂತೆ ಅಲ್ಲಿ ವೈದ್ಯರು ಇಲ್ಲದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಿಲ್ಲ ಎಂದು ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದರು.

ಇದನ್ನೂ ಓದಿ : ದಾವಣಗೇರಿ | ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಲು ಎಫ್.ಎಂ.ಆರ್.ಎ.ಐ.ಪ್ರತಿಭಟನೆ

ಚಿಕಿತ್ಸೆಗೆ ನಿರಾಕರಣೆ: ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿಲ್ಲ. ಈ ವೇಳೆ ರೂಪಾ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಇಸಿಜಿ ಮಾಡಿ ಲಘು ಹೃದಯಾಘಾತವಾಗಿದೆ ಎಂದು ತಿಳಿಸಿದರು. ಆದಾಗ್ಯೂ, ಯಾವುದೇ ತುರ್ತು ಚಿಕಿತ್ಸೆ ನೀಡಲಾಗಿಲ್ಲ. ಬಳಿಕ ಆ ದಂಪತಿಗೆ ಜಯದೇವ ಆಸ್ಪತ್ರೆಗೆ ಹೋಗಲು ತಿಳಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದರು.

ಸೂಕ್ತ ಚಿಕಿತ್ಸೆ, ಅಂಬ್ಯುಲೆನ್ಸ್​ ಸಿಗದ ಕಾರಣ, ಬೇರೆ ದಾರಿಯಿಲ್ಲದೆ, ರೂಪಾ ತನ್ನ ಪತಿಯನ್ನು ಮತ್ತೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೊರಟರು. ಈ ವೇಳೆ ಮಾರ್ಗ ಮಧ್ಯೆದಲ್ಲಿಯೇ ವೆಂಕಟರಮಣನ್ ಕುಸಿದು ಬಿದ್ದು, ಅವರ ವಾಹನ ಅಪಘಾತಕ್ಕೀಡಾಯಿತು. ಪರಿಣಾಮ ಇಬ್ಬರೂ ಗಾಯಗೊಂಡು ರಸ್ತೆಗೆ ಬಿದ್ದರು.

ಮಾನವೀಯತೆ ಮರೆತ ಜನರು: ಆಸ್ಪತ್ರೆಗೆ ದಾಖಲಿಸಲು ನೆರವಾಗುವಂತೆ ಅಂಗಲಾಚಿದರು ದ್ವಿಚಕ್ರ ವಾಹನ ಮತ್ತು ಕಾರುಗಳ ವಾಹನ ಚಾಲಕರು ಮಾತ್ರ ನಿರ್ದಯೆಯಿಂದ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡಿದೆ. ಘಟನೆ ಬಳಿಕ ರೂಪಾ ಸಹೋದರಿ ಸ್ಥಳಕ್ಕೆ ತಲುಪಿದ್ದರು. ಆದರೆ, ಅಷ್ಟೊತ್ತಿಗಾಗಲೇ ವೆಂಕಟರಮಣನ್​ ಪ್ರಾಣ ಹೋಗಿತ್ತು.

ಬಳಿಕ ಒಬ್ಬ ಕ್ಯಾಬ್ ಚಾಲಕ ಕೊನೆಗೂ ವಾಹನ ನಿಲ್ಲಿಸಿ ವೆಂಕಟರಮಣನ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಅಪಘಾತದ ಬಳಿಕ ರಕ್ತದಲ್ಲಿ ಮಡುವಿನಲ್ಲಿ ಬಿದ್ದು, ಸಹಾಯಕ್ಕಾಗಿ ಬೇಡಿಕೊಂಡರೂ ಸಹ ಯಾರೂ ಕೂಡ ನಮ್ಮ ಸಹಾಯಕ್ಕೆ ಬರಲಿಲ್ಲ. ಅಲ್ಲಿನ ವೈದ್ಯರು ಅವರು ಬರುವಷ್ಟರಲ್ಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದರು.

ಕುಟುಂಬದ ಪೋಷಣೆ ಹೊಣೆ ಹೊತ್ತಿದ್ದ ವೆಂಕಟರಮಣನ್​ ಅವರ ಸಾವಿನಿಂದ ಕುಟುಂಬಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.  ವೆಂಕಟರಮಣನ್ ಇದೀಗ ತಮ್ಮ ಪತ್ನಿ, ಐದು ವರ್ಷದ ಮಗ, 18 ತಿಂಗಳ ಮಗಳು ಮತ್ತು ಅವರ ತಾಯಿಯನ್ನು ಅಗಲಿದ್ದಾರೆ. ಮುಂದಿನ ಭವಿಷ್ಯ ಏನು ಎಂಬ ಚಿಂತೆ ಕುಟುಂಬವನ್ನು ಕಾಡುತ್ತಿದೆ.

ಗಂಡನ ಕಣ್ಣು ದಾನ ಮಾಡಿ ಮಾದರಿಯಾದ ಪತ್ನಿ: ಪತಿ ಅಗಲಿಕೆಯ ನೋವಿನ ಜೊತೆಗೆ ಜನರು ಮಾನವೀಯತೆ ಮರೆತಿರುವುದು ಕಂಡು ಮತ್ತಷ್ಟು ಬೇಸರವಾಯಿತು. ಆದರೆ, ನಾವು ಅವರ ಕಣ್ಣನ್ನು ದಾನ ಮಾಡಿದ್ದೇವೆ. ಅವರ ಕಣ್ಣು ಮತ್ತೊಬ್ಬರ ಜೀವಕ್ಕೆ ಬೆಳಕಾಗಬಹುದು ಎಂಬ ಭರವಸೆ ಇದೆ ಎಂದು ಮೃತನ ಪತ್ನಿ ರೂಪಾ ದುಃಖದಲ್ಲೂ ಔದಾರ್ಯತೆ ಮೆರೆದಿದ್ದಾರೆ.

ಮಗನ ಅಗಲಿಕೆಯಿಂದ ದುಃಖತಪ್ತರಾಗಿರುವ ಅವರ ತಾಯಿ ಮಾತನಾಡಿ, ಎರಡು ಚಿಕ್ಕಮಕ್ಕಳನ್ನು ಅಗಲಿ ಮಗ ಹೊರಟುಹೋದ. ಇನ್ನು ನಮಗೆ ಯಾರು ದಿಕ್ಕು ಎಂದು ಕಣ್ಣೀರಿಟ್ಟರು.

ಈ ಘಟನೆ ಕೇವಲ ವೈದ್ಯಕೀಯ ತುರ್ತು, ಆಸ್ಪತ್ರೆಗಳ ಜವಾಬ್ದಾರಿ ಕುರಿತು ಮಾತ್ರವಲ್ಲ, ಜನರ ನಿರ್ದಯತೆ ಕೂಡ ಗಂಭೀರ ಪ್ರಶ್ನೆ ಮೂಡಿಸಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪುತ್ತಿದ್ದರು ಜನರು ಅವರ ನೆರವಿಗೆ ಧಾವಿಸದೆ ಮಾನವೀಯತೆ ಮರೆತಿರುವುದು ಮನುಕುಲಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.

ಇದನ್ನೂ ನೋಡಿ : ’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’ Janashakthi Media

 

 

Donate Janashakthi Media

Leave a Reply

Your email address will not be published. Required fields are marked *